ಮತ್ತೆ ಕೊಪ್ಪಳದಲ್ಲಿ ೦೭ ಬಾಲಕಾರ್ಮಿಕರ ಪತ್ತೆ

ಶಾಲೆಗೆ ದಾಖಲು
 ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಇವರು ಕೊಪ್ಪಳ ನಗರದಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಟ್ಟು ೦೭ ಬಾಲಕಾರ್ಮಿಕರನ್ನು ಪತ್ತೆ ಮಾಡಲಾಗಿದ್ದು, ಮಕ್ಕಳನ್ನು ಶಾಲೆಗೆ ದಾಖಲಿಸಲಾಗಿದೆ.
  ಕಳೆದ ಡಿ. ೦೭ ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಬಾಲಕಾರ್ಮಿಕರನ್ನು ಪತ್ತೆ ಮಾಡಲಾಗಿದ್ದು, ನಗರದ ರೈಲ್ವೆ ನಿಲ್ದಾಣದ ಬಳಿ ಚಿಂದಿ ಆಯುತ್ತಿದ್ದ ಲಕ್ಷ್ಮಣ ತಂದೆ ಗಂಗಪ್ಪ ಜವಳಿ (೧೩), ಮಲ್ಲಪ್ಪ ತಂದೆ ಯಲ್ಲಪ್ಪ ಕಲ್ಯಾಣಿ (೧೩) ಹಾಗೂ ಕಸಬರಿಗೆ ಬುಟ್ಟಿ ವ್ಯಾಪಾರ ಮಾಡುತ್ತಿದ್ದ ವೈಶಾಲಿ ತಂದೆ ಯಲ್ಲಪ್ಪ ಕಲ್ಯಾಣಿ (೧೩), ಸುನೀಲ್ ತಂದೆ ಹನುಮಂತ (೧೨), ದುಗುಗಪ್ಪ ತಂದೆ ಸುಂಕಪ್ಪ (೦೮) ಮಕ್ಕಳನ್ನು ಪತ್ತೆ ಮಾಡಿ, ವಶಕ್ಕೆ ತೆಗೆದುಕೊಂಡು, ಮಕ್ಕಳು ಈ ಮೊದಲು ಅಭ್ಯಾಸ ಮಾಡುತ್ತಿದ್ದ ಗಾಂಧೀನಗರ ಸರ್ಕಾರಿ ಹಿ.ಪ್ರಾ.ಶಾಲೆಗೆ ಮರಳಿ ದಾಖಲಿಸಲಾಗಿದೆ.  ಅಲ್ಲದೆ ಪಾಲಕರಿಗೆ ಮಕ್ಕಳನ್ನು ಕೆಲಸಕ್ಕೆ ಕಳುಹಿಸದಂತೆ ಅರಿವು ಮೂಡಿಸಲಾಗಿದ್ದು, ಮಕ್ಕಳು ತರುವ ಯಾವುದೇ ವಸ್ತುಗಳನ್ನು ತೆಗೆದುಕೊಂಡರೆ, ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಗುಜರಿ ಅಂಗಡಿ ಮಾಲೀಕರುಗಳಿಗೆ ಎಚ್ಚರಿಕೆ ನೀಡಲಾಗಿದೆ.
  ಡಿ. ೧೦ ರಂದು ನಗರದ ಜಿಲ್ಲಾ ನ್ಯಾಯಾಲಯದ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಬಾಲಕಾರ್ಮಿಕರನ್ನು ಪತ್ತೆ ಹಚ್ಚಲಾಗಿದ್ದು, ಪಂಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೊಪ್ಪಳದ ದಾದಾ ಖಲಂದರ್ ತಂದೆ ಅಬ್ದುಲ್ ಗಫರ್ ಸೈಕಲ್‌ವಾಲೆ (೧೩) ಹಾಗೂ ಕಿನ್ನಾಳದ ವೀರೇಶ ತಂದೆ ಈಶಪ್ಪ ಬಿಸರಳ್ಳಿ (೧೪) ಇವರನ್ನು ವಶಕ್ಕೆ ತೆಗೆದುಕೊಂಡು, ಮಕ್ಕಳು ಅಭ್ಯಾಸ ಮಾಡುತ್ತಿದ್ದ ಶಾಲೆಗಳಿಗೆ ಮರಳಿ ದಾಖಲು ಮಾಡಲಾಗಿದೆ.  
  ಕಾರ್ಮಿಕ ನಿರೀಕ್ಷಕ ಬಸಯ್ಯ ಅಂಗಡಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ್, ಕ್ಷೇತ್ರಾಧಿಕಾರಿಗಳಾದ ವೀರಣ್ಣ ವಿ ಕುಂಬಾರ, ಮಾರುತಿ ನಾಯ್ಕರ್ ದಾಳಿಯಲ್ಲಿ ಭಾಗವಹಿಸಿದ್ದರು.

Leave a Reply