ಅ.೨೨ ರಂದು ಗುಡ್ಲಾನೂರಿನಲ್ಲಿ ಜಾನಪದ ಸಂಗೀತ ಕಾರ್ಯಕ್ರಮ.

ಕೊಪ್ಪಳ, ಅ.೧೭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಮತ್ತು ಡಾ||ಅಬ್ದುಲ್ ಕಲಾಂ ಯುವ ಒಕ್ಕೂಟದ ಹಾಗೂ ಯುವಕ ಕ್ರೀಡಾ ಸಮಿತಿ (ರಿ), ಕಾತರಕಿ ಗುಡ್ಲಾನೂರ ಇವರುಗಳ ಸಂಯುಕ್ತಾಶ್ರಯದಲ್ಲಿ ಜಾನಪದ ಸಂಗೀತ ಕಾರ್ಯಕ್ರಮವನ್ನು ಅ.೨೨ ರಂದು ರಾತ್ರಿ ೯.೩೦ ಗಂಟೆಗೆ ಗುಡ್ಲಾನೂರಿನ ಮೆಹಬೂಬ ಸುಬಾನಿ ದರ್ಗಾ ಆವರಣದಲ್ಲಿ ನಡೆಯಲಿದೆ.
     ಜನಾಬ ದಸ್ತಗೀರಸಾಬ ಹಿರೇಹೋಳಿ ಕಾರ್ಯಕ್ರಮದ ಸಾನಿಧ್ಯ ವಹಿಸುವರು. ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಕೆ.ಎಂ.ಎಫ್ ನ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ ಕಾರ್ಯಕ್ರಮ ಉದ್ಘಾಟಿಸುವರು, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಮ್ಮ ಮಹಾಂತಪ್ಪನವರ ಅಧ್ಯಕ್ಷತೆ ವಹಿಸುವರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯಲ್ಲನಗೌಡ ಮಾಲಿಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೊಟ್ರಪ್ಪ ಚೋರನೂರು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಸವರಾಜ ಅಂಗಡಿ, ನಿವೃತ್ತ ಶಿಕ್ಷಕ ಚಂದ್ರಾಮಪ್ಪ ಕಣಗಾಲ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಕೊಟ್ರಪ್ಪ ಕೊರ್ಲಳ್ಳಿ, ಮಹೇಶ ಎಲ್.ತಳವಾರ ಹಾಗೂ ಶರಣಪ್ಪ ನೆಲೂಗಿಪುರ ಇವರಿಂದ ಜನಪದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೊಟ್ರಪ್ಪ ಚೋರನೂರು ತಿಳಿಸಿದ್ದಾರೆ. 
ಕಂಪ್ಯೂಟರ್ ತರಬೇತಿ ಅರ್ಜಿ ಆಹ್ವಾನ.
ಕೊಪ್ಪಳ, ಅ.೧೭ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಮಂಗಳೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಐ.ಎಂ.ಸಿ (ಪಿಪಿಪಿ) ಯೋಜನೆಯಡಿ ಕಂಪ್ಯೂಟರ್ ಆಧಾರಿತ ವಿವಿಧ ಕೋರ್ಸುಗಳಿಗೆ ತರಬೇತಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಸಂಸ್ಥೆಯ ಐ.ಎಂ.ಸಿ ಯೋಜನೆಯಡಿ ಬೇಸಿಕ್ ಕಂಪ್ಯೂಟರ್ ಮತ್ತು ಡಿ.ಟಿ.ಪಿ(ಡೆಸ್ಕ್‌ಟಾಪ್ ಪಬ್ಲಿಷಿಂಗ್) ಕೋರ್ಸುಗಳನ್ನು ನೀಡಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೫೩೪-೨೫೯೨೩೯ ಅಥವಾ ಶಿವನಗೌಡ ತೊಂಡಿಹಾಳ, ಮೊಬೈಲ್ ಸಂಖ್ಯೆ : ೯೫೯೧೬೪೫೮೯೩ ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಟ್ರೇನಿಂಗ್ ಆಫಿಸರ್ ತಿಳಿಸಿದ್ದಾರೆ.
ಬೆಳೆ ಧೃಢೀಕರಣ ಪತ್ರ ಪಡೆಯಲು ಮನವಿ.
ಕೊಪ್ಪಳ, ಅ.೧೭ (ಕ ವಾ) ತೋಟಗಾರಿಕೆ ಇಲಾಖೆ, ಕೊಪ್ಪಳ ಇವರಿಂದ ಫಲಾನುಭವಿ ಆಧಾರಿತ ಇಲಾಖಾ ಯೋಜನೆಗಳ ಅನುಷ್ಠಾನಗಳಡಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ರೈತರು ಕಡ್ಡಾಯವಾಗಿ ಗಣಕೀಕೃತ ಬೆಳೆ ಧೃಢೀಕರಣ ಪತ್ರವನ್ನು ಪಡೆಯುವಂತೆ ತೋಟಗಾರಿಕೆ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.
     ತೋಟಗಾರಿಕೆ ಇಲಾಖೆಯು ತೋಟಗಾರಿಕೆ ಬೆಳೆ ಬೆಳೆಯಲು ರೈತರನ್ನು ಪ್ರೋತ್ಸಾಹಿಸುವುದಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ರೈತರು ಫಲಾನುಭವಿ ಆಧಾರಿತ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕಾದರೆ ಅರ್ಜಿದಾರರ ಹೆಸರಿನಲ್ಲಿರುವ ಆರ್.ಟಿ.ಸಿ  ಬೆಳೆಗಳ ಹೆಸರುಗಳನ್ನು ಹೊಂದಿರಬೇಕಾಗುತ್ತದೆ. ಹೀಗಾಗಿ ಇಲಾಖೆಯು ಹಮ್ಮಿಕೊಂಡಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದರೆ ಆಯಾ ಸಾಲಿನಲ್ಲಿ ಋತುಮಾನಕ್ಕನುಗುಣವಾಗಿ ಬೆಳೆದ ತೋಟಗಾರಿಕೆ ಬೆಳೆಗಳ ಮಾಹಿತಿಯನ್ನು ಆರ್.ಟಿ.ಸಿ ಯಲ್ಲಿ ನಮೂದಿಸುವುದು ಅತ್ಯಗತ್ಯವಾಗಿದೆ. ಇದರಿಂದ ತೋಟಗಾರಿಕೆ ಬೆಳೆಗಳ ನಿಖರ ಅಂಕಿ ಅಂಶಗಳು ಇಲಾಖೆಗೆ ದೊರೆಯಲಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಪಡೆಯಲು ಸಹಾಯವಾಗಲಿದೆ. ಅಲ್ಲದೆ ರೈತರು ಇಲಾಖೆ ಯೋಜನೆಗಳ ಅನುಕೂಲ ಪಡೆಯಲು ಹಾಗೂ ಬೆಳೆ ವಿಮಾ ಯೋಜನೆ ಮತ್ತು ಸರ್ಕಾರದ ಮಟ್ಟದಲ್ಲಿ ಹೆಚ್ಚಾದ ತೋಟಗಾರಿಕೆ ಪ್ರದೇಶ ಮತ್ತು ಉತ್ಪಾದನೆಯನ್ನು ದಾಖಲಿಸುವುದರ ಮೂಲಕ ಮಾರುಕಟ್ಟೆ ಬೆಳೆ ನಿಯಂತ್ರಣದ ಬಗ್ಗೆ ಕ್ರಮವಹಿಸಲು ಅನುಕೂಲವಾಗಲಿದೆ.
     ಈ ಹಿನ್ನೆಲೆಯಲ್ಲಿ ರೈತರಿಗೆ ಗಣಕೀಕೃತ ಬೆಳೆ ಧೃಢೀಕರಣ ಪತ್ರ ನೀಡಿ, ಬಳಿಕ ಆರ್.ಟಿ.ಸಿ ಯಲ್ಲಿ ದಾಖಲಾಗುವಂತೆ ವೆಬ್ ಆಧಾರಿತ ತಂತ್ರಾಂಶವನ್ನು ಭೂಮಿ ಉಸ್ತುವಾರಿ ಕೋಶದಿಂದ ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಾಂಶವು ಜಿಲ್ಲೆಯ ಎಲ್ಲಾ ನಾಡ ಕಛೇರಿಗಳ ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಕಾರ್ಯಾಚರಣೆಯಲ್ಲಿದ್ದು, ತೋಟಗಾರಿಕೆ ಬೆಳೆಯನ್ನು ಬೆಳೆಯುವ ರೈತರು  ಅರ್ಜಿಯನ್ನು ತಂತ್ರಾಂಶದ ಮೂಲಕ ಸಲ್ಲಿಸಿ, ಬೆಳೆ ಧೃಢೀಕರಣ ಪತ್ರವನ್ನು ಪಡೆಯಬಹುದಾಗಿದೆ. ಪ್ರಸಕ್ತ ಸಾಲಿನಿಂದ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಎಲ್ಲಾ ಫಲನುಭವಿ ಆಧಾರಿತ ಯೋಜನೆಗಳಡಿ ಫಲಾನುಭವಿಗಳು ಕಡ್ಡಾಯವಾಗಿ ಗಣಕೀಕೃತ ಬೆಳೆ ಧೃಢೀಕರಣ ಪತ್ರವನ್ನು ಪಡೆಯುವಂತೆ ಮಾಡಲು ಎಲ್ಲಾ ತೋಟಗಾರಿಕೆ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ರೈತ ಬಾಂಧವರು ಗಣಕೀಕೃತ ಬೆಳೆ ದೃಢೀಕರಣ ಪತ್ರವನ್ನು ಪಡೆಯಲು ನಾಡ ಕಛೇರಿಗಳ ಮೂಲಕ ಅರ್ಜಿ ಸಲ್ಲಿಸುವಂತೆ ಹಾಗೂ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರು ಅಥವಾ ಸಂಬಂಧಪಟ್ಟ ತಾಲೂಕಾಧಿಕಾರಿಗಳನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಕೋರಿದ್ದಾರೆ.
ಪೇಶ್ ಇಮಾಮ್ ಮತ್ತು ಮೌಜ್ಜನರ ಗೌರವಧನ ಮಾಹಿತಿ ಸಲ್ಲಿಸಲು ಸೂಚನೆ.
ಕೊಪ್ಪಳ, ಅ.೧೭ (ಕ ವಾ) ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯ, ಕೊಪ್ಪಳ ಇವರಿಂದ, ಪೇಶ್ ಇಮಾಮ್ ಮತ್ತು ಮೌಜ್ಜನರ ಗೌರವಧನಕ್ಕೆ ಸಂಬಂಧಪಟ್ಟಂತೆ ಕೊಪ್ಪಳ ಜಿಲ್ಲೆಯ ಎಲ್ಲಾ ಮಸ್ಜೀದ್‌ಗಳ ಅಧ್ಯಕ್ಷರು ಹಾಗೂ ಮುತುವಲ್ಲಿಗಳು ತಮ್ಮ ಮಸ್ಜೀದ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇಶ್ ಇಮಾಮ್ ಮತ್ತು ಮೌಜ್ಜನರ ಮಾಹಿತಿಯನ್ನು ಅ.೨೬ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿರುವ ಸಭೆಗೆ ಹಾಜರಾಗಿ ಸಲ್ಲಿಸುವಂತೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.
     ಈಗಾಗಲೇ ಪೇಶ್ ಇಮಾಮ್ ಮತ್ತು ಮೌಜ್ಜನರು ಪಡೆಯುತ್ತಿರುವ ಗೌರವಧನನ್ನು ಬೇರೆ ಯಾರಾದರೂ ದುರುಪಯೋಗಪಡಿಸಿಕೊಂಡಿದ್ದಲ್ಲಿ ಅವರ ಮೇಲೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಮಸ್ಜೀದ್‌ಗಳ ಅಧ್ಯಕ್ಷರು ಹಾಗೂ ಮುತುವಲ್ಲಿಗಳು ತಮ್ಮ ಮಸ್ಜೀದ್‌ಗಳಲ್ಲಿ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿರುವವರ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಹಾಗೂ ಅವರ ಸ್ಥಾನಕ್ಕೆ ಹೊಸದಾಗಿ ನೇಮಕಗೊಂಡಿರುವ ಪೇಶ್ ಇಮಾಮ್ ಮತ್ತು ಮೌಜ್ಜನರ ಹೆಸರು, ರಾಜೀನಾಮೆ ಪತ್ರ, ಬ್ಯಾಂಕ್ ವಿವರ ಮತ್ತು ಇತರೆ ಮಾಹಿತಿಯನ್ನು ದಾಖಲಾತಿಗಳೊಂದಿಗೆ, ಮಸೀದಿಯ ಪತ್ರ ಪುಸ್ತಕದಲ್ಲಿ ನಮೂದಿಸಿ, ಅಧ್ಯಕ್ಷರು ಮತ್ತು ಮುತುವಲ್ಲಿಗಳ ಸಹಿಯೊಂದಿಗೆ ದೃಢೀಕರಿಸಿ, ಅ.೨೬ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿರುವ ಸಭೆಗೆ ಹಾಜರಾಗಿ ಸಲ್ಲಿಸಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

Please follow and like us:
error

Related posts

Leave a Comment