ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗೆ ಸುವರ್ಣಾವಕಾಶ

  ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು, ಜಮೀನಿನಲ್ಲಿ ತೋಟಗಾರಿಕೆ ಮತ್ತು ಅರಣ್ಯೀಕರಣ ಮಾಡಿಕೊಳ್ಳಲು ಸರ್ಕಾರ ರೈತರಿಗೆ ಸುವರ್ಣ ಅವಕಾಶವನ್ನು ಒದಗಿಸಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ತಿಳಿಸಿದ್ದಾರೆ.
  ಜಿಲ್ಲೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತೀ ಸಣ್ಣ ರೈತರು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.  ಜಿಲ್ಲಾ ಪಂಚಾಯತಿಯಿಂದ  ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಂದು ಕುಟುಂಬದ ವಯಸ್ಕ ಸದಸ್ಯರುಗಳು ಸ್ವಯಂ ಪ್ರೇರಿತರಾಗಿ ಅಕುಶಲ ಕೆಲಸ ಕೇಳಿ ಅರ್ಜಿ ಸಲ್ಲಿಸಿದರೆ, ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ಕನಿಷ್ಠ ೧೦೦ ದಿನಗಳ ಕೂಲಿ ಸಹಿತ ಉದ್ಯೋಗವನ್ನು ಒದಗಿಸುವುದು ಈ ಕಾಯ್ದೆಯ ಮಹತ್ವವಾಗಿದೆ. ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಅಂಗವಾಗಿ ಆಂದೋಲನೋಪಾದಿಯಲ್ಲಿ  ಈ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.  ಜಾಬ್ ಕಾರ್ಡ ಹೊಂದಿದ ಅರ್ಹ ಫಲಾನುಭವಿಗಳು ೧೦೦ ಮಾನವ ದಿನಗಳನ್ನು ಸೃಜಿಸಿಕೊಂಡು ಮಳೆಗಾಲದಲ್ಲಿ ನೀರಾವರಿ ಸೌಲಭ್ಯವಿರುವ ಹೊಲದಲ್ಲಿ ತೋಟಗಾರಿಕೆ ಬೆಳೆಗಳು ಹಾಗೂ ಬದು ನಿರ್ಮಾಣ ಕಾಮಗಾರಿ ಹಾಗೂ ಅರಣ್ಯಿಕರಣ ಮಾಡಿಕೊಳ್ಳಬಹುದಾಗಿದೆ.  ಈ ಯೋಜನೆಯ ಸೌಲಭ್ಯವನ್ನು ಪಡೆದು ವೈಯಕ್ತಿಕವಾಗಿ ಲಾಭ ಹೊಂದುವುದಲ್ಲದೇ ಪರಿಸರಕ್ಕೆ ಪೂರಕ ವಾತಾವರಣವನ್ನು ಸೃಷ್ಠಿಸಿ ಬರಗಾಲ ರಹಿತ ಜಿಲ್ಲೆಯನ್ನಾಗಿಸಿ ವಿಶ್ವ ಪರಿಸರ ದಿನಾಚರಣೆಯನ್ನು ಸಾಕಾರಗೊಳಿಸಲು ಉತ್ತಮ ಅವಕಾಶವಿದೆ.
ನೀರಿನ ವ್ಯವಸ್ಥೆಯಿರುವ ಜಮೀನುಗಳಲ್ಲಿ ತೋಟಗಾರಿಕೆ ಮತ್ತು ಅರಣ್ಯೀಕರಣಕ್ಕಾಗಿ ಮಾವು, ಸಪೋಟಾ, ದಾಳಿಂಬೆ, ಲಿಂಬೆ, ಕರಿಬೇವು, ಪೇರಲ, ನುಗ್ಗೇಕಾಯಿ, ಅರಳಿ ಮರ, ಅಂಜೂರ ಗಿಡಗಳನ್ನು ನೆಡಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಒಣ ಬೇಸಾಯ ಇರುವ ಜಮೀನುಗಳಲ್ಲಿ ನೇರಳೆ, ನೆಲ್ಲಿಕಾಯಿ, ಸೀತಾಫಲ, ಹೊಳೆ ಮತ್ತಿ, ಹುಣಸೆ, ಬೇವು, ಹೊಂಗೆ, ಕಮರಾ, ಸಾಗವಾನಿ, ಶಿವನಿ, ಸಿಲ್ವರ್ ಓಕ್ ಮತ್ತು ಇತರೆ ಜಾತಿಯ ಸಸಿಗಳನ್ನು ನೆಡಬಹುದಾಗಿದೆ. 
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಭಿಯಾನದ ರೀತಿಯಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಣ್ಣ ಮತ್ತು ಅತೀ ಸಣ್ಣ ರೈತರು ಅರ್ಹ ಫಲಾನುಭವಿಗಳು ತಮ್ಮ ಜಮೀನುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕ ಲಾಭ ಹೊಂದಲು ಸುವರ್ಣಾವಕಾಶ ಇದಾಗಿದೆ. ಜಿಲ್ಲಾ ಪಂಚಾಯತಿಯಿಂದ ಅನುಷ್ಠಾನಗೊಳಿಸುತ್ತಿರುವ ಈ ಮಹತ್ವಕಾಂಕ್ಷೆ ಯೋಜನೆಗೆ ಸಂಸದರು, ಶಾಸಕರು, ಆಯಾ ಕ್ಷೇತ್ರದ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಮತ್ತು ವಿಚಾರವಾದಿಗಳು ಈ ಮಹತ್ವದ   ಯೋಜನೆಯನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ  ಮನವಿ ಮಾಡಿಕೊಂಡಿದ್ದಾರೆ. 
Please follow and like us:
error

Related posts

Leave a Comment