ಶ್ರೀ ಗವಿಮಠ ಭಕ್ತರ ಕಾಮಧೇನು – ರಮೇಶಕುಮಾರ ಪಟ್ಟೇದ ಪೌರಾಯುಕ್ತರು

ಕೊಪ್ಪಳ: ನಗರದ ಶ್ರೀಗವಿಮಠದಲ್ಲಿ ದಿನಾಂಕ ೨೦-೦೧-೨೦೧೫ ರಂದು ಅಮವಾಸ್ಯೆಯ ದಿನ ಮಂಗಳವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೬೫ ನೇ  ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ  ರಮೇಶಕುಮಾರ ಪಟ್ಟೇದ ಪೌರಾಯುಕ್ತರು ನಗರ ಸಭೆ ಕೊಪ್ಪಳ ಇವರು ಮಾತನಾಡಿ ಇಂದಿನ ಯಾಂತ್ರಿಕ ಬದುಕಿನಲ್ಲಿ ಮನಸ್ಸುಗಳು ಕಲ್ಮಶವಾಗಿವೆ, ಹೃದಯಗಳು ಮಿಡಿಯುತ್ತಲೇ ಇಲ್ಲ. ಮನಶ್ಯಾಂತಿಯಂತೂ ದೂರದ ಮಾತು. ಇಂತಹ ಕಾಲಘಟ್ಟದಲ್ಲಿ ಈ ಪುಣ್ಯನೆಲದ ’ಬೆಳಕಿನೆಡೆಗೆ’ ಕಾರ್ಯಕ್ರಮವು ಮನದ ಮನೆಯ ಕದ ತಟ್ಟಿ, ಧನಾತ್ಮಕ ವಿಚಾರಗಳನ್ನು ಬಿತ್ತಿ, ಬೆಳೆದು ಅದರ ಪುಣ್ಯದ ಫಲವನ್ನು ಪಡೆದು ಮಾನಸಿಕ ನೆಮ್ಮದಿ ಮತ್ತು ಸಂತೃಪ್ತಿಯ ಜೀವನ ಪಡೆಯುವಂತೆ ಇಲ್ಲಿನ ವಿಚಾರಧಾರೆ ಖಂಡಿತವಾಗಿಯೂ ನೆರವು ಕೊಡುತ್ತದೆ.ಮತ್ತು ಶ್ರೀ ಗವಿಮಠ ಭಕ್ತರ ಕಾಮಧೇನು, ಬಯಸಿ ಬಂದವರಿಗೆ ಅಕ್ಷಯ ಪಾತ್ರೆ. ಜ್ಞಾನ ದಾಸೋಹ, ಅನ್ನ ದಾಸೋಹದ ಕಣಜವಿದು. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯೆಯ ಬೆಳಕನ್ನು ಕೊಡುತ್ತಿರುವ ಮಹಾಸ್ಥಳವಿದು.ಶ್ರೀಮಠದ ಪ್ರಾಕೃತಿಕ ಸೌಂದರ್ಯ ಮನಸೂರೆಗೊಳಿಸುತ್ತದೆ. ಒಂದು ಕಡೆ ಶಾಂತ ಕೆರೆ, ತಂಪಾದ ಬೆಟ್ಟ-ಗುಡ್ಡಗಳು, ಬೀಸುತ್ತಿರುವ ಇಂಪಾದ ಗಾಳಿ. ಇಲ್ಲಿ ನೆರೆದಿರುವ ಭಕ್ತನೇ ಭಾಗ್ಯಶಾಲಿ. ಆಧ್ಯಾತ್ಮಿಕ ಕಾರ್ಯಕ್ರಮ, ವೈಚಾರಿಕ ಹಿನ್ನೆಲೆ, ಪ್ರಗತಿಪರ ನಡೆಗಳು, ಸದ್ ನುಡಿಗಳು ಹೀಗೆ ಉನ್ನತ ಪರಿಕಲ್ಪನೆಗಳ ಈ ಶ್ರೀಮಠದ ಸ್ಫೂರ್ತಿಯಾಗಿರುವ ನಮ್ಮ ಶ್ರೀಗಳು ನಿಜಕ್ಕೂ ಅಭಿನಂದನಾರ್ಹರು.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ
ಎನ್ನುವ ನುಡಿಗಳಂತೆ ಶ್ರೀಗಳ ಆಶೀರ್ವಾದದ ಫಲದಿಂದ ನಮ್ಮ ಮಲಿನತೆ ತೊರೆದು, ಮನಶುದ್ಧವಾಗಿ ನಾವೆಲ್ಲ ಮಾನವತೆಯ ಕಡೆ ನಡೆಯುವಂತಹ ಸನ್ಮಾರ್ಗದ ಪುಣ್ಯದ ಸ್ಥಳವಿದು ಎಂದರು. ಸಾನಿಧ್ಯ ಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನೀಶ್ವರ  ಹಿರೇಮಠ ಕುಷ್ಟಗಿ ವಹಿಸಿ ಮಾತನಾಡಿದರು. ಗಂಗಾವತಿಯ ಸದಾನಂದ ಶೇಟ್ ಇವರಿಂದ ಸಂಗೀತ ಸೇವೆ ಜರುಗಿತು. ಕಾರ್ಯಕ್ರಮದ ಭಕ್ತಿ ಸೇವೆಯನ್ನು ಕೊಪ್ಪಳದ ಕೆ.ಮರಿಸ್ವಾಮಿ ಹಿರೇಮಠ ಇವರು ವಹಿಸಿದ್ದರು. ಶ್ರೀಗವಿಸಿದ್ಧೇಶ್ವರ ಸ್ವಾಮಿಗಳು ಉಪಸ್ಥಿತರಿದ್ದರು.

Leave a Reply