ಚಿತ್ರವಿಮರ್ಶೆ – ಪೃಥ್ವಿ-ಪವರ್ ಪುಲ್ ಪೃಥ್ವಿ


ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೃಥ್ವಿಯಾಗಿ ಈ ವಾರ ಕನ್ನಡ ತೆರೆಗೆ ಬಂದಿದ್ದಾರೆ. ಚಿತ್ರದ ಅಡಿಬರಹವೇ ಹೇಳುವಂತೆ ಅಲ್ಟಿಮೇಟ್ ಪವರ್ ಚಿತ್ರ ಪೃಥ್ವಿ. ಫ್ಲಾಶ್ ಬ್ಯಾಕ್ ಹೇಳಲು ಸೂಕ್ತ ದೃಶ್ಯ ಸಂಯೋಜಿಸಬೇಕಿತ್ತು ಎಂಬ ಕೊರತೆ ಬಿಟ್ಟರೆ ನಿರ್ದೇಶಕ ಜೇಕಬ್ ಪ್ರೇಕ್ಷಕರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಿಲ್ಲ ಎಂದು ಹೇಳಬಹುದು. ಪ್ರಾಮಾಣಿಕ ಅಧಿಕಾರಿಗಳು ಇವತ್ತಿನ ಕೊಳಕು ರಾಜಕೀಯದ ಮಧ್ಯೆ, ಅದರಲ್ಲೂ ಇತ್ತೀಚಿನ ಗಣಿಧಣಿಗಳ ಕಪಿಮುಷ್ಠಿಯಲ್ಲಿ ಹೇಗೆ ಬದುಕುತ್ತಾರೆ ಎಂಬ ಕಥಾ ಹಂದರ ಹೆಣೆದಿರುವ ನಿರ್ದೇಶಕ ಜಾಕಬ್ ಅವರ ಕಥಾಪ್ರೀತಿಯನ್ನು ಮೆಚ್ಚಬೇಕು. ತೀರಾ ಈಚೆಗೆ ಸ್ಯಾಂಡಲ್ ವುಡ್ ಕಣ್ಣು ಬಳ್ಳಾರಿ ಮೇಲೆ ಬಿದ್ದಿದೆ. ಬಳ್ಳಾರಿಯನ್ನೇ ಕೇಂದ್ರಕೃತ ಮಾಡಿಕೊಂಡು ಕೆಲವು ಕನ್ನಡ ಚಿತ್ರಗಳು ತೆರೆಕಂಡು ತೋಪಾಗಿವೆ. ಆದರೆ ಬಳ್ಳಾರಿಯ ಗಣಿ ವ್ಯವಹಾರಕ್ಕೆ ಗ್ರಹಣ ಬಿಡಿಸುವ ಅಧಿಕಾರಿ ಸುತ್ತ ಹೆಣೆದಿರುವ ಕತೆಯ ಪೃಥ್ವಿ ಸುಲಭವಾಗಿ ಸೋಲು ಒಪ್ಪಿಕೊಳ್ಳುವುದಿಲ್ಲ. ಈ ಮಾತು ಚಿತ್ರಕ್ಕೂ, ಚಿತ್ರದ ನಾಯಕನಿಗೂ ಅನ್ವಯಿಸುತ್ತದೆ. ಮಧ್ಯಮ ವರ್ಗದ ಸಾಮಾನ್ಯ ಹುಡುಗ, ಶಾಲಾ ದಿನಗಳಲ್ಲಿ 25ಕ್ಕೆ 1 ಅಂಕ ಪಡೆಯಲಷ್ಟೇ ಶಕ್ತನಾಗಿರುವವ ಮುಂದೆ ಸಿವಿಲ್ ಸರ್ವಂಟ್ ಆಗಿ ಜನಸೇವೆ ಮಾಡಲು ಬಳ್ಳಾರಿ ಬರುತ್ತಾನೆ. ಇಷ್ಟು ದಡ್ಡ ಹುಡುಗನೊಬ್ಬ ಹೇಗಪ್ಪಾ ಐಎಎಸ್ ಪಾಸು ಮಾಡಿದೆ ಎಂದು ಸ್ವತಃ ತಂಗಿಯೇ ಕೇಳಿದಾಗ ಕೆಲವರು ದೊಡ್ಡವರಾಗುತ್ತಾ ಜಾಣರಾಗುತ್ತಾರೆ. ಹಾಗೆಂದ ಮಾತ್ರಕ್ಕೆ ಮಣ್ಣಿನ ಮಕ್ಕಳೆಲ್ಲ ಪ್ರೈಮ್ ಮಿನಿಸ್ಟರ್ ಆಗೋಕಾಗಲ್ಲ ಎಂಬ ಉತ್ತರ ಅಣ್ಣನದ್ದು. ಬಳ್ಳಾರಿಗೆ ಜಿಲ್ಲಾಧಿಕಾರಿಯಾಗಿ ಬರುವ ನಾಯಕ ಅಲ್ಲಿನ ಧೂಳು, ದುಡ್ಡು, ಗಣಿಧಣಿಗಳ ದರ್ಪ ಎಲ್ಲವನ್ನೂ ನೋಡುತ್ತಾನೆ. ಸರ್ಕಾರವನ್ನೇ ಕೊಳ್ಳಬಲ್ಲ ಶಕ್ತಿ ಇರುವ ಗಣಿಧಣಿಗಳಿಗೆ ಪ್ರಾಮಾಣಿಕ ಅಧಿಕಾರಿಯನ್ನು ಕೊಳ್ಳಲು ಆಗುವುದಿಲ್ಲ. ಹಾಗಾಗಿ ಹಿಂಸೆಯೊಂದೇ ಅವರಿಗಿರುವ ಮಾರ್ಗ. ಪೃಥ್ವಿಗಿಂತ ಹಿಂದೆ ಬಂದಿದ್ದ ಎಲ್ಲ ಅಧಿಕಾರಿಗಳು ದುಡ್ಡು ಮಾಡಿಕೊಂಡು ಜೀವನ ನೋಡಿಕೊಂಡವರು. ಪೃಥ್ವಿಯಂತೆ ಪ್ರಾಮಾಣಿಕರಾಗಿದ್ದವರು ಗಣಿಧಣಿಗಳ ದರ್ಪ ಎದುರಿಸಲಾಗದೇ ತಲೆ ಮರೆಸಿಕೊಂಡವರು. ಗಣಿ ವ್ಯವಹಾರಕ್ಕೆ ಗಡಿಯನ್ನೇ ಬದಲಾಯಿಸಿರುವ ಗಣಿ ಮಾಲೀಕರ ಅಕ್ರಮ ಕುರಿತ ಸರ್ವೇ ಫೈಲ್ ಸುತ್ತ ಕಥೆ ಇದ್ದರೂ ಜಿಲ್ಲಾಧಿಕಾರಿ ಮಾಡಬೇಕಾದ ಕೆಲಸಗಳನ್ನು ಚಿತ್ರದಲ್ಲಿ ಯಥೇಚ್ಛವಾಗಿ ತೋರಿಸಲಾಗಿದೆ. ಅನುಭವಿಸಬೇಕಾದ ಯಾತನೆಗಳನ್ನೂ ಕೂಡಾ. ಜೊತೆಗೆ ಮಾಧ್ಯಮಗಳ ಅವಕಾಶವಾದಿತನ. ಪ್ರಾಮಾಣಿಕ ಪತ್ರಕರ್ತನಿಗೆ ದುಷ್ಟ ಸಮಾಜ ನೀಡುವ ಶಿಕ್ಷೆ ಹೀಗೆ ಎಲ್ಲ ವಿಷಯಗಳತ್ತ ಸಿನಿಮಾ ಹೊರಳಾಡುತ್ತದೆ. ಬಳ್ಳಾರಿಗೆ ಬಂದ್ರೆ ಭಗವಂತಾನೂ ಬದಲಾಗ್ತಾನೆ ಎನ್ನುವ ಭಂಡ ಗಣಿ ಮಾಲಕರು ಎಲ್ಲವನ್ನೂ ದುಡ್ಡಿನಿಂದ ಕೊಳ್ಳಬಲ್ಲೇವು ಎನ್ನುವ ದೌಲತ್ತು ಕೊನೆಗೆ ಹೇಗೆ ಅವಸಾನವಾಗುತ್ತದೆ ಎಂಬುದನ್ನು ಮನರಂಜನಾತ್ಮಕವಾಗಿ ನಿರೂಪಿಸಿದ್ದಾರೆ. ಕ್ಲೈಮ್ಯಾಕ್ಸನಲ್ಲಿ ಸಂಯೋಜಿಸಿರುವ ಸಾಹಸ ನಿಜಕ್ಕೂ ಮೈನವಿರೇಳಿಸುತ್ತದೆ. ಸಾಹಸ ನಿರ್ದೇಶಕ ರಾಜಶೇಖರ ಶ್ರಮ ಕ್ಲೈಮಾಕ್ಸ್ ನಲ್ಲಿ ಎದ್ದು ಕಾಣುತ್ತದೆ ಎಂಬುದನ್ನು ಬಿಟ್ಟರೆ ಇನ್ನೊಂದೆರಡು ಫೈಟ್ ಗಳು ಇದ್ದಿದ್ದರೆ ಪುನೀತ್ ಅಭಿಮಾನಿಗಳು ಇನ್ನಷ್ಟು ಪುನೀತರಾಗುತ್ತಿದ್ದರು. ಸಂಭಾಷಣೆಯ ವಿಷಯದಲ್ಲಿಯೂ ನಿರ್ದೇಶಕ ಜೇಕಬ್ ಎದೆಗಾರಿಕೆ ಮೆರೆದಿದ್ದಾರೆ. 40 ವರ್ಷಗಳಿಂದ ಚೆಡ್ಡಿ ಹಾಕ್ಕೊಂಡು ರಾಜಕೀಯ ಮಾಡಿ ಕೊನೆಗೆ ನಿನ್ನೆ ಮೊನ್ನೆ ಬಂದೋರು ಮಾತು ಕೇಳೋಂಗಾಯ್ತು ಎಂಬ ಮಾತುಗಳು ಯಡಿಯೂರಪ್ಪನವರನ್ನು ನೆನಪಿಸುತ್ತವೆ. ನಾನಿರೋವರ್ಗೂ ಕರ್ನಾಟಕದ ಒಂದಿಂಚು ಜಾಗ ಕದಲೋಕ ಬಿಡಲ್ಲ ಎಂಬ ಡೈಲಾಗ್ ಗಳಿಗೆ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ. ಕೊನೆಗೂ ಗೆಲ್ಲೋದು ಪ್ರಾಮಾಣಿಕತೆ ಎಂಬುದರೊಂದಿಗೆ ಚಿತ್ರಕ್ಕೆ ಅಂತ್ಯ ಹೇಳಲಾಗಿದೆಯಾದರೂ ನಿರ್ದೇಶಕರಿಗೆ ಅದನ್ನು ಒಪ್ಪಿಕೊಳ್ಳಲಾಗದೇ ಅವಸರವಸರವಾಗಿ ಚಿತ್ರ ಮುಗಿಸಿದಂತೆ ಭಾಸವಾಗುತ್ತದೆ. ನಾಗೇಂದ್ರನ ಪಾತ್ರಕ್ಕೆ ಸಾಕಷ್ಟು ಸ್ಕೋಪ್ ಇರುವುದರಿಂದ ಪಾತ್ರಧಾರಿ ಆಯ್ಕೆ ಸರಿಯಾಗಿದೆ. ನಾಯಕನಷ್ಟೇ ಪ್ರಧಾನ ಪಾತ್ರವಾದ್ದರಿಂದ ಕಲಾವಿದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶ್ರೀನಿವಾಸಮೂರ್ತಿ, ಸಿ.ಆರ್.ಸಿಂಹ, ಅವಿನಾಶ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪಾರ್ವತಿ ಮೆನನ್ ಅಭಿನಯ, ನಗು ಇಷ್ಟವಾಗುತ್ತದೆ. ಸತ್ಯ ಅವರ ಛಾಯಾಗ್ರಹಣ ಚೆನ್ನಾಗಿದೆ. ಮಣಿಕಾಂತ ಕದ್ರಿಯವರ ಸಂಗೀತದಲ್ಲಿ ಮೂಡಿ ಬಂದಿರುವ 6 ಹಾಡುಗಳು ತಕ್ಷಣಕ್ಕೆ ಸೆಳೆಯದಿದ್ದರೂ ಹಿಂಸೆ ನೀಡುವುದಿಲ್ಲ. ನಿರ್ಮಾಪಕ ಎಂ.ಬಿ.ಬಾಬು ಗಣಿ ಚಿತ್ರಕ್ಕೆ ಹಣ ಸುರಿದಿದ್ದಾರೆ. ಪೃಥ್ವಿ ಅದನ್ನು ಮರಳಿಸುವ ಭರವಸೆ ನೀಡಬಲ್ಲ. ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಪುನೀತ್ ಚಿತ್ರದ ಏಕೈಕ ಜೀವಾಳ. ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಮರ ಸಾರುವ ಪೃಥ್ವಿಯನ್ನು ನೋಡಲು ನಿರಾಂತಕವಾಗಿ ಥೇಟರ್ ನತ್ತ ಹೆಜ್ಜೆ ಹಾಕಿ. -ಬಸವರಾಜ ಕರುಗಲ್, ಕೊಪ್ಪಳ

Leave a Reply