ಕೊಪ್ಪಳ ಜಿಲ್ಲಾ ಪಂಚಾಯತ್ ವ್ಯಾಪ್ತಿ – ಮತ್ತು ಒಟ್ಟು ಮತದಾರರು

ಕೊಪ್ಪಳ ಡಿ. : ಕೊಪ್ಪಳ ತಾಲೂಕಾ ಪಂಚಾಯತ್ ಚುನಾವಣೆಯ ಜೊತೆಗೆ ಜಿಲ್ಲಾ ಪಂಚಾಯತ್‌ಗೂ ಚುನಾವಣೆ ನಡೆಸಲು ಅನುಕೂಲವಾಗುವಂತೆ ಧಾರವಾಡ ಹೈಕೋರ್ಟ್ ಪೀಠ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದಾಗಿ ಜಿ.ಪಂ. ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದವರಿಗೆ ಆಕಾಂಕ್ಷೆ ಗರಿಗೆದರಿದೆ. ತಾಲೂಕಾ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್‌ಗೆ ಎರಡೆರಡು ಬಾರಿ ಚುನಾವಣೆ ನಡೆಸಬೇಕಾಗಬಹುದು ಅಂದುಕೊಂಡಿದ್ದ ಜಿಲ್ಲಾಡಳಿತವೂ ಸಹ ತಡೆಯಾಜ್ಞೆಯ ತೆರವಿನಿಂದ ನಿರಾಳಗೊಂಡಿದೆ. ಸದ್ಯ ಜಿಲ್ಲಾ ಚುನಾವಣಾ ಅಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ತಾ.ಪಂ. ಚುನಾವಣೆಗೆ ಹೊರಡಿಸಿದ್ದ ಅಧಿಸೂಚನೆಗೆ ತಿದ್ದುಪಡಿಗೊಳಿಸಿ, ಡಿ. ೨೬ ರಂದು ತಾ.ಪಂ.ಗೆ ನಡೆಯಬೇಕಾಗಿದ್ದ ಮತದಾನ ಪ್ರಕ್ರಿಯೆಯನ್ನು ಮುಂದೂಡಿ, ಡಿ. ೩೧ ರಂದು ಜಿ.ಪಂ. ಚುನಾವಣೆಗೆ ನಡೆಯುವ ಮತದಾನ ಪ್ರಕ್ರಿಯೆಯ ಜೊತೆಗೆ ತಾ.ಪಂ. ಚುನಾವಣೆಗೂ ಮತದಾನ ನಡೆಸಲು ಆದೇಶಿಸಿದ್ದಾರೆ. ಇದರಿಂದಾಗಿ ಉಂಟಾಗಬಹುದಾಗಿದ್ದ ಹೆಚ್ಚುವರಿ ಆರ್ಥಿಕ ನಷ್ಟವನ್ನು ತಪ್ಪಿಸಿದಂತಾಗಿದೆ.
ಕೊಪ್ಪಳ ಜಿಲ್ಲಾ ಪಂಚಾಯತ್ ಒಟ್ಟು ೨೭ ಸ್ಥಾನಗಳನ್ನು ಒಳಗೊಂಡಿದ್ದು, ಆ ಪೈಕಿ ಕೊಪ್ಪಳ ತಾಲೂಕಿನಲ್ಲಿ ಅಳವಂಡಿ, ಹಿರೇಸಿಂದೋಗಿ, ಲೇಬಗೇರಿ, ಇರಕಲ್ಲಗಡ, ಬಂಡಿಹರ್ಲಾಪುರ, ಹಿಟ್ನಾಳ್ ಮತ್ತು ಗಿಣಿಗೇರಾ ಸೇರಿದಂತೆ ೦೭ ಕ್ಷೇತ್ರಗಳು, ಕುಷ್ಟಗಿ ತಾಲೂಕಿನಲ್ಲಿ ಹನುಮನಾಳ, ಹನುಮಸಾಗರ, ಚಳಗೇರಾ, ಕೊರಡಕೇರಾ, ಹಿರೇಮನ್ನಾಪುರ ಮತ್ತು ತಾವರಗೇರಾ ಸೇರಿದಂತೆ ೦೬ ಕ್ಷೇತ್ರಗಳು, ಗಂಗಾವತಿ ತಾಲೂಕಿನಲ್ಲಿ ಆನೆಗುಂದಿ, ಮರಳಿ, ಸಿದ್ದಾಪುರ, ಕಾರಟಗಿ, ಹೇರೂರು, ಕನಕಗಿರಿ, ಹುಲಿಹೈದರ ಮತ್ತು ನವಲಿ ಸೇರಿದಂತೆ ೦೮ ಕ್ಷೇತ್ರಗಳು ಹಾಗೂ ಯಲಬುರ್ಗಾ ತಾಲೂಕು ವ್ಯಾಪ್ತಿಯಲ್ಲಿ ಹಿರೇವಂಕಲಕುಂಟಾ, ಚಿಕ್ಕಮ್ಯಾಗೇರಿ, ಮಂಗಳೂರು, ತಳಕಲ್, ಕುಕನೂರು ಮತ್ತು ಮುಧೋಳ ಸೇರಿದಂತೆ ೦೬ ಕ್ಷೇತ್ರಗಳನ್ನು ಒಳಗೊಂಡಿದೆ.
ಕೊಪ್ಪಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು ೭೩೨೪೩೭ ಮತದಾರರಿದ್ದು, ಆ ಪೈಕಿ ಪುರುಷ- ೩೬೮೩೦೪, ಮಹಿಳೆ- ೩೬೪೧೩೩ ಮತದಾರರಿದ್ದಾರೆ.
Please follow and like us:
error

Related posts

Leave a Comment