You are here
Home > Koppal News > ಆನೆಗೊಂದಿ ಉತ್ಸವ : ಮಾ. ೨೩ ರಿಂದ ವಿವಿಧ ಕ್ರೀಡಾ ಸ್ಪರ್ಧೆ

ಆನೆಗೊಂದಿ ಉತ್ಸವ : ಮಾ. ೨೩ ರಿಂದ ವಿವಿಧ ಕ್ರೀಡಾ ಸ್ಪರ್ಧೆ

ಕೊಪ್ಪಳ ಮಾ. : ಜಿಲ್ಲಾ ಆಡಳಿತ ವತಿಯಿಂದ ಇದೇ ೨೩ ಮತ್ತು ೨೪ ರಂದು ಐತಿಹಾಸಿಕ ಆನೆಗೊಂದಿ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದ್ದು, ಈ ಉತ್ಸವದ ಅಂಗವಾಗಿ ಜಾನಪದ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಆನೆಗೊಂದಿ ಉತ್ಸವದ ಅಂಗವಾಗಿ ಪ್ರಮುಖ ಆಕರ್ಷಣೆಯಾಗಿರುವ ಕುಸ್ತಿ ಪಂದ್ಯಾವಳಿಯಲ್ಲಿ ರೋಮಾಂಚಕಾರಿ ಆನೆಗುಂದಿ ಕೇಸರಿ ಕುಸ್ತಿ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ಮಾ. ೨೩ ಮತ್ತು ೨೪ ರಂದು ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ.
ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ವಿವಿಧ ಕ್ರೀಡೆಗಳನ್ನು ಏರ್ಪಡಿಸಿದ್ದು, ಇದರಲ್ಲಿ ಪುರುಷರಿಗಾಗಿ ೧೨ ಕಿ.ಮೀ ಮ್ಯಾರಾಥಾನ್ ಓಟ, ಭಾರ ಎತ್ತಿ ಬಸ್ಕಿ ಒಡೆಯುವ ಸ್ಪರ್ಧೆ, ಕಬ್ಬಡ್ಡಿ ಪಂದ್ಯಾವಳಿಗಳು ಸೇರಿದಂತೆ ೫೫ ಕೆ.ಜಿ. ೭೫ ಕೆ.ಜಿ.ಯ ವಿವಿಧ ವಿಭಾಗಗಳಲ್ಲಿ ಕುಸ್ತಿ ಪಂದ್ಯಾವಳಿಗಳು ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಹೊನಲು ಬೆಳಕಿನ ವ್ಹಾಲಿಬಾಲ್ ಮತ್ತು ೬ ಕಿ.ಮೀ. ಮ್ಯಾರಾಥಾನ್ ಮುಂತಾದ ಆಕರ್ಷಕ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.
ವಿವಿಧ ಸ್ಪರ್ಧೆಗಳಿಗೆ ಮಾ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಚಾಲನೆ ದೊರೆಯಲಿದ್ದು, ಪುರುಷರಿಗಾಗಿ ಗ್ರಾಮೀಣ ಕ್ರೀಡೆಯಾಗಿರುವ ಭಾರ ಎತ್ತಿ ಬಸ್ಕಿ ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. ೯ ಸಾವಿರ, ದ್ವಿತೀಯ ೪ ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ ೪ ಸಾವಿರ ರೂ.ಗಳ ಬಹುಮಾನ ನೀಡಲಾಗುವುದು. ಇದೇ ಸಂದರ್ಭದಲ್ಲಿ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕಬಡ್ಡಿ ಪಂದ್ಯದಲ್ಲಿ ವಿಜೇತರಾದವರಿಗೆ ಪ್ರಥಮ ಸ್ಥಾನ ಪಡೆದ ತಂಢಕ್ಕೆ ೨೦ ಸಾವಿರ, ದ್ವಿತೀಯ ೧೫ ಸಾವಿರ ಮತ್ತು ತೃತೀಯ ಸ್ಥಾನ ಪಡೆದವರಿಗೆ ೧೦ ಸಾವಿರ ರೂ.ಗಳ ನಗದು ಪುರಸ್ಕಾರ ನೀಡಲಾಗುವುದು. ಉತ್ಸವದ ಅಂಗವಾಗಿ ಆಕರ್ಷಕ ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದ್ದು ಇದರಲ್ಲಿ ೫೫ ಕೆ.ಜಿ., ೬೨, ೬೮, ೭೫ ಹಾಗೂ ಅದಕ್ಕೂ ಮೇಲ್ಪಟ್ಟ ತೂಕ ಹೊಂದಿರುವವರ ಕುಸ್ತಿ ಪಂದ್ಯ ನಡೆಯಲಿವೆ. ಕುಸ್ತಿ ಪಂದ್ಯದ ೫೫ ಕೆ.ಜಿ. ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ ೫ ಸಾವಿರ, ದ್ವಿತೀಯ ೩ ಸಾವಿರ ಹಾಗೂ ತೃತೀಯ ೨ ಸಾವಿರ ರೂ.ಗಳನ್ನು ನೀಡಲಾಗುವುದು. ಅದೇ ರೀತಿಯಾಗಿ ೬೨ ಕೆ.ಜಿ. ವಿಭಾಗದಲ್ಲಿ ಕ್ರಮವಾಗಿ ೬ ಸಾವಿರ, ೪ ಸಾವಿರ, ಹಾಗೂ ೩ ಸಾವಿರ. ೬೮ ಕೆ.ಜಿ. ವಿಭಾಗದಲ್ಲಿ ಪ್ರಥಮ ೭ ಸಾವಿರ, ದ್ವಿತೀಯ ೫ ಸಾವಿರ, ತೃತೀಯ ೪ ಸಾವಿರ ರೂ.ಗಳು. ೭೫ ಕೆ.ಜಿ. ವಿಭಾಗದಲ್ಲಿ ಪ್ರಥಮ ೧೦ ಸಾವಿರ, ದ್ವಿತೀಯ ೮ ಸಾವಿರ, ತೃತೀಯ ೫ ಸಾವಿರ ರೂ.ಗಳನ್ನು ನೀಡಲಾಗುವುದು ಅಲ್ಲದೆ ೭೫ ಕೆ.ಜಿ.ಗೆ ಮೇಲ್ಪಟ್ಟ ವಿಭಾಗದ ಆನೆಗೊಂದಿ ಕೇಸರಿ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ೨೦ ಸಾವಿರ, ದ್ವಿತೀಯ ೧೫ ಸಾವಿರ ಹಾಗೂ ತೃತೀಯ ೧೦ ಸಾವಿರ ರೂ.ಗಳ ನಗದು ಪುರಸ್ಕಾರ ಹಾಗೂ ವಿಜೇತ ಎಲ್ಲಾ ಕ್ರೀಡಾ ಪಟುಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು.
ಪುರುಷರಿಗಾಗಿ ೧೨ ಕಿ.ಮೀ. ಗಳ ಮ್ಯಾರಾಥಾನ್ ಸ್ಪರ್ಧೆಯು ಮಾ. ೨೪ ರಂದು ಗಂಗಾವತಿ ಬಸ್ ನಿಲ್ದಾಣ ಬಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಬೆಳಿಗ್ಗೆ ೭.೩೦ ಗಂಟೆಗೆ ಪ್ರಾರಂಭಗೊಂಡು ಆನೆಗೊಂದಿಯ ಉತ್ಸವದ ವೇದಿಕೆಯಲ್ಲಿ ಈ ಓಟ ಕೊನೆಗೊಳ್ಳುವುದು ಇದರಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. ೮,೦೦೦, ದ್ವಿತೀಯ ೬,೦೦೦ ಮತ್ತು ತೃತೀಯ ಬಹುಮಾನವಾಗಿ ೪,೦೦೦ ರೂ. ಗಳನ್ನು ನೀಡಲಾಗುವುದು.
ಉತ್ಸವದ ನಿಮಿತ್ಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸುವ ನಿಟ್ಟಿನಲ್ಲಿ ಮಹಿಳೆಯರಿಗೂ ಸಹ ರಂಗೋಲಿ ಸ್ಪರ್ಧೆ, ವ್ಹಾಲಿಬಾಲ್ ಸ್ಪರ್ಧೆ ಹಾಗೂ ಮ್ಯಾರಾಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಹಿಳೆಯರ ೬ ಕಿ.ಮೀ. ಮ್ಯಾರಾಥಾನ್ ಓಟವು ಹನುಮನಹಳ್ಳಿಯ ದೇವಸ್ಥಾನದಿಂದ ಪ್ರಾರಂಭಗೊಂಡು ಉತ್ಸವದ ವೇದಿಕೆಯಲ್ಲಿ ಓಟ ಕೊನೆಗೊಳ್ಳುವುದು. ಇದರಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ ರೂ. ೮,೦೦೦, ದ್ವಿತೀಯ ೬,೦೦೦ ಮತ್ತು ತೃತೀಯ ಬಹುಮಾನವಾಗಿ ೪,೦೦೦ ರೂ. ಗಳನ್ನು ನೀಡಲಾಗುವುದು. ಮಹಿಳೆಯರಿಗಾಗಿ ಮಾ. ೨೪ ರಂದು ಬೆಳಿಗ್ಗೆ ೦೯ ಗಂಟೆಗೆ ಆನೆಗೊಂದಿಯ ಶ್ರೀ ರಂಗನಾಥ ದೇವಸ್ಥಾನದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. ೫೦೦೦, ದ್ವಿತೀಯ ೪೦೦೦ ಹಾಗೂ ತೃತೀಯ ೩,೦೦೦ ರೂ.ಗಳ ಬಹುಮಾನ ಸೇರಿದಂತೆ ಮಹಿಳೆಯರ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತ ಪ್ರಥಮ ಸ್ಥಾನಕ್ಕೆ ೧೫,೦೦೦, ದ್ವಿತೀಯ ೧೦,೦೦೦ ಮತ್ತು ತೃತೀಯ ೭,೦೦೦ಗಳನ್ನು ನೀಡಲಾಗುವುದು.
ಕುಸ್ತಿಯಲ್ಲಿ ಪಾಲ್ಗೊಳ್ಳಬಯಸುವ ಕ್ರೀಡಾಪಟುಗಳು ಮಾ. ೨೩ ರಂದು ಬೆಳಿಗ್ಗೆ ೯ ಗಂಟೆಯಿಂದ ೧೧ ಗಂಟೆಯೊಳಗಾಗಿ ತಮ್ಮ ತೂಕವನ್ನು ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿನ ಕ್ರೀಡಾ ಸಮಿತಿಯಲ್ಲಿ ನೊಂದಾಯಿಕೊಳ್ಳಬಹುದು. ನಂತರ ಬಂದಂತಹ ಕುಸ್ತಿ ಪಟುಗಳಿಗೆ ಸ್ಪರ್ಧೆಯಲ್ಲಿ ಅವಕಾಶ ನೀಡಲಾಗುವುದಿಲ್ಲ. ಹಾಗೂ ಕ್ರೀಡಾಕೂಟದಲ್ಲಿ ಗಂಗಾವತಿ ತಾಲೂಕು ಹೊರತುಪಡಿಸಿ ಬೇರೆ ಭಾಗಗಳಿಂದ ಭಾಗವಹಿಸುವ ಕ್ರೀಡಾಪಟುಗಳಿಗೆ ಸಾಮಾನ್ಯ ಬಸ್ ದರದ ಪ್ರಯಾಣ ಭತ್ಯೆಯನ್ನು ನೀಡಲಾಗುವುದು. ಅಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ವಾಸಸ್ಥಳ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ವಾಸಸ್ಥಳ ಪ್ರಮಾಣ ನೀಡಿದವರಿಗೆ ಮಾತ್ರ ಪ್ರಯಾಣ ಭತ್ಯೆಯನ್ನು ನೀಡಲಾಗುವುದು.
ಆನೆಗೊಂದಿ ಉತ್ಸವದ ಅಂಗವಾಗಿ ಏರ್ಪಡಿಸಲಾಗುತ್ತಿರುವ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ತಿಪ್ಪೇಸ್ವಾಮಿ, ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳು ತಾಲೂಕು ಕ್ರೀಡಾಂಗಣ ಹಾಗೂ ಕಾರ್ಯದರ್ಶಿಗಳು ಕ್ರೀಡಾ ಸಮಿತಿ, ಆನೆಗುಂದಿ- ೯೦೦೮೩ ೬೩೬೭೦, ಅಥವಾ ಸಿ.ಎ. ಪಾಟೀಲ್ ತರಬೇತುದಾರರು- ೯೩೪೨೩೮೭೯೩೫ ಇವರನ್ನು ಸಂಪರ್ಕಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Top