ಲೋಕಾಯುಕ್ತ ಸಂಸ್ಥೆಯ ವಿರುದ್ಧ ಸಂಚು: ಹೆಗ್ಡೆ

ಬೆಂಗಳೂರು, ನ.: ಲೋಕಾಯುಕ್ತ ಮಾಜಿ ಎಸ್ಪಿ ಮಧುಕರ ಶೆಟ್ಟಿಯವರ ಹೇಳಿಕೆಯ ಹಿಂದೆ ಸಂಚಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಆರೋಪಿಸಿದ್ದಾರೆ. ‘ಸಾವಿಲ್ಲದ ಮನೆಯೇ ಇಲ್ಲ’ ಎಂಬಂತೆ ಭ್ರಷ್ಟರಿಲ್ಲದ ಯಾವುದೇ ಸಂಸ್ಥೆ ಇಲ್ಲ. ಲೋಕಾಯುಕ್ತ ಸಂಸ್ಥೆಯಲ್ಲಿಯೂ ಭ್ರಷ್ಟರಿದ್ದಾರೆ ಎಂದಿರುವ ಅವರು, ಮಧುಕರ ಶೆಟ್ಟಿಯವರ ಹೇಳಿಕೆಯಿಂದ ಆಶ್ಚರ್ಯವಾಗಿದೆ ಎಂದರು.
ಮಧುಕರ ಶೆಟ್ಟಿಯವರ ಹೇಳಿಕೆಯಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ತನಗೆ ಅತೀವ ನೋವಾಗಿದೆ ಎಂದ ಹೆಗ್ಡೆ, ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟರಿರುವುದು ನಿಜ. ಕಡಿಮೆ ಭ್ರಷ್ಟರಿದ್ದಾರೆ. ಆದರೆ, ಭ್ರಷ್ಟರಿದ್ದಾರೆಂಬ ಕಾರಣಕ್ಕೆ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬುಧವಾರ ಸದಾಶಿವನಗರದ ತನ್ನ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಸ್ಪಿ ಮಧುಕರ ಶೆಟ್ಟಿ ಮತ್ತು ಆರ್.ಕೆ.ದತ್ತಾರ ಮಧ್ಯೆ ಭಿನ್ನಾಭಿಪ್ರಾಯವಿತ್ತು. ತಾನು ಶೆಟ್ಟಿಯವರನ್ನು ಬೆಂಬಲಿಸಿಲ್ಲ ಎಂದು ತನ್ನ ಮೇಲೆ ಅವರಿಗೆ ಕೋಪ. ಅವರು ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಿದ್ದೆ. ಹೀಗಿದ್ದೂ ಅವರಿಗೆ ಬೇಸರವಾಗಿದ್ದರೆ ಅಂದೇ ಲೋಕಾಯುಕ್ತ ಸಂಸ್ಥೆ ತ್ಯಜಿಸಬೇಕಿತ್ತು ಎಂದರು. ಲೋಕಾಯುಕ್ತ ಸಂಸ್ಥೆ 5 ವರ್ಷಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಧಿಕಾರಿಗಳನ್ನು ಬಂಧಿಸಿದೆ. ಭ್ರಷ್ಟಾಚಾರದ ವಿರುದ್ಧ ಜನ ಮೆಚ್ಚುವಂತಹ ಕೆಲಸ ಮಾಡಿದ್ದೇವೆ
ಎಸ್ಪಿ ಮಧುಕರ ಶೆಟ್ಟಿ ಮತ್ತು ಆರ್.ಕೆ. ದತ್ತಾರ ಮಧ್ಯೆ ಭಿನ್ನಾಭಿಪ್ರಾಯವಿತ್ತು. ತಾನು ಶೆಟ್ಟಿಯವರನ್ನು ಬೆಂಬಲಿಸಿಲ್ಲ ಎಂದು ತನ್ನ ಮೇಲೆ ಅವರಿಗೆ ಕೋಪ. ಅವರು ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಿದ್ದೆ. ಹೀಗಿದ್ದೂ ಅವರಿಗೆ ಬೇಸರವಾಗಿದ್ದರೆ ಅಂದೇ ಲೋಕಾಯುಕ್ತ ಸಂಸ್ಥೆ ತ್ಯಜಿಸಬೇಕಿತ್ತು.
ಎಂದ ಹೆಗ್ಡೆ, ಅಕ್ರಮ ಗಣಿಗಾರಿಕೆಯ ಕುರಿತ ತನಿಖಾ ವರದಿ ಪಕ್ಷಪಾತದಿಂದ ಕೂಡಿದೆ ಎಂದು ಬಿಜೆಪಿ ಸರಕಾರ ತನ್ನ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿದೆ ಎಂದು ದೂರಿದರು.
ಆದರೆ, ಆಂಧ್ರ ಸರಕಾರ ಹಾಗೂ ಸುಪ್ರೀಂ ಕೋರ್ಟ್ ತನ್ನ ವರದಿಯನ್ನಾಧರಿಸಿ ಅಕ್ರಮ ಗಣಿಗಾರಿಕೆಯ ಬಗ್ಗೆ ಸಿಬಿಐ ತನಿಖೆಗೆ ಆದೇಶ ಮಾಡಿದೆ. ರಾಜ್ಯ ಬಿಜೆಪಿ ಸರಕಾರ ಲೋಕಾಯುಕ್ತ ವರದಿಯ ಬಗ್ಗೆ ಇಲ್ಲಸಲ್ಲದ ಕಾರಣಗಳನ್ನು ಕೇಳಿ ವರದಿ ಜಾರಿಗೆ ವಿಳಂಬ ಮಾಡುತ್ತಿದೆ. ತಾನು ಶಿಫಾರಸು ಮಾಡಿದ ಯಾವೊಬ್ಬ ವ್ಯಕ್ತಿಯ ವಿರುದ್ಧವೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತನಿಖಾ ವರದಿಯಲ್ಲಿ ರಾಜ್ಯದ ಮೂರೂ ಪಕ್ಷಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡಿದ್ದು, ಮೂರೂ ಪಕ್ಷಗಳ ಮುಖ್ಯಮಂತ್ರಿಗಳು ಭಾಗಿಯಾಗಿರುವ ಬಗ್ಗೆ ಸರಕಾರದ ಮುಂದಿಟ್ಟಿದ್ದೇನೆ. ತನಗೆ ಯಾರ ಭಯವೂ ಇಲ್ಲ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ಮಾಜಿ ಸಚಿವ ವಿ. ಮುನಿಯಪ್ಪನವರ ಬಗ್ಗೆ 2008ರಲ್ಲಿ ತಾನು ನೀಡಿದ ಮಧ್ಯಾಂತರ ವರದಿಯಲ್ಲಿ ತಿಳಿಸಿದ್ದು, ಸರಕಾರ ಈ ಕುರಿತು ಕ್ರಮ ಕೈಗೊಂಡಿಲ್ಲ ಎಂದು ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ತಾನು ಟೀಕಿಸಿದ್ದು, ಮೂರು ಪಕ್ಷಗಳು ತನ್ನ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ನ್ಯಾ.ಸಂತೋಷ್ ಹೆಗ್ಡೆ ರಾಜ್ಯಪಾಲರ ಹುದ್ದೆಗಾಗಿ ತನ್ನ ವಿರುದ್ಧ ಷಡ್ಯಂತರ ಮಾಡಿದ್ದಾರೆಂದು ಆರೋಪಿಸಿದ್ದಾರೆ. ನಾನು ರಾಜ್ಯಪಾಲರ ಹುದ್ದೆಗಾಗಿ ಕೇಂದ್ರ ಸರಕಾರದ ಯಾವ ಪ್ರತಿನಿಧಿಯನ್ನು ಮಾಡಿದ್ದೆ ಎಂಬುದರ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.
ಸಚಿವರೊಬ್ಬರು ನನ್ನ ನಡತೆ ಮತ್ತು ನೈತಿಕತೆಯ ಬಗ್ಗೆ ಮಾತನಾಡಿದ್ದಾರೆ. ಅವರು ತಮ್ಮ ನೈತಿಕತೆ ಬಗ್ಗೆ ಮೊದಲು ತಿಳಿದು ಕೊಳ್ಳಲಿ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಹೆಸರು ಹೇಳದೆ ಟೀಕಿಸಿದ ಹೆಗ್ಡೆ, ಕೇಂದ್ರ ಸಚಿವ ಸ್ಥಾನಕ್ಕಾಗಿ ತಾನು ರಾಜಕೀಯ ಮಾಡುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ರಾಜಕೀಯದಲ್ಲಿ ನಂಬಿಕೆ ಇಲ್ಲ. ತಾನೊಮ್ಮೆ ಚುನಾವಣೆಗೆ ನಿಂತರೆ ಓಟು ಕೊಡಬೇಡಿ, ಏಟು ಕೊಡಿ ಎಂದು ಸ್ಪಷ್ಟಪಡಿಸಿದ್ದೆ ಎಂದು ಸ್ಮರಿಸಿದರು.
ಕೆಲ ‘ಚಮಚಾ’ ರಾಜಕಾರಣಿಗಳು ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಲೆಕ್ಕ ಕೊಡಿ ಎಂದು ಕೇಳುತ್ತಿದ್ದಾರೆ. ನಾನು ರೆಡ್ಡಿ ಸಹೋದರರನ್ನೇ ಹಣ ಕೇಳಬಹುದಿತ್ತು. ಪಾಲು ಪಡೆದುಕೊಂಡಿದ್ದರೆ ತೋರಿಸಲಿ. ಸಾರ್ವಜನಿಕರ ಕೋಟ್ಯಂತರ ರೂ.ಹಣವನ್ನು ಮಠಗಳಿಗೆ ನೀಡಿದ್ದು, ಅದರಲ್ಲಿ ನಿಮಗೆಷ್ಟು ಹೇಳಿ ಎಂದ ಅವರು, ನಮ್ಮನ್ನು ಖರೀದಿ ಮಾಡುವ ಶಕ್ತಿ ಯಾರಿಗೂ ಇಲ್ಲ ಎಂದರು. ಲೋಕಾಯುಕ್ತ ಸ್ಥಾನಕ್ಕೆ ಪ್ರಾಮಾಣಿಕರು ಸಿಗುತ್ತಿಲ್ಲ ಎಂಬ ಮುಖ್ಯಮಂತ್ರಿ ಸದಾನಂದಗೌಡ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಂತೋಷ್ ಹೆಗ್ಡೆ, ರಾಜ್ಯದಲ್ಲಿ ಪ್ರಾಮಾಣಿಕ ನ್ಯಾಯಮೂರ್ತಿಗಳಿಲ್ಲ ಎಂಬುದು ಸರಿಯಲ್ಲ ಎಂದು ಹೇಳಿದರು.

Leave a Reply