ಪರಿಹಾರವೆಂಬುದು ಕನ್ನಡಿಯೊಳಗಿನ ಗಂಟಾಗಬಾರದು- ನ್ಯಾ. ಸತ್ಯನಾರಾಯಣ

 ಶೋಷಣೆಗೆ ಒಳಗಾಗಿ ನ್ಯಾಯ ಬೇಡಿಕೊಂಡು ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ಪರಿಹಾರ ಎಂಬುದು ಕನ್ನಡಿಯೊಳಗಿನ ಗಂಟಾಗಬಾರದು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಎಸ್.ಎನ್. ಸತ್ಯನಾರಾಯಣ ಅವರು ಹೇಳಿದರು.
  ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕೊಪ್ಪಳ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಲೋಕಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳ ಪೈಕಿ ಮೋಟಾರು ವಾಹನ ಅಪಘಾತಗಳ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ.  ಇತ್ತೀಚಿನ ದಿನಗಳಲ್ಲಿ ರಾಜಿ ಸಂಧಾನಗಳ ಮೂಲಕ ಮಧ್ಯಸ್ಥಿಕೆ ವ್ಯವಸ್ಥೆಯ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.  ಸಾಮಾನ್ಯವಾಗಿ ಮೋಟಾರು ಅಪಘಾತಗಳ ಹೆಚ್ಚಿನ ಪ್ರಕರಣಗಳು ನ್ಯಾಯಾಲಯಕ್ಕೆ ಬರುವುದೇ ಕಡಿಮೆ, ಪ್ರಭಾವಿಗಳು, ಹಣವಂತರು, ರಾಜಕೀಯ ಮುಖಂಡರುಗಳ ಮಧ್ಯಸ್ಥಿಕೆಯಲ್ಲಿ ಹೊರಗಡೆಯೇ ಪ್ರಕರಣಗಳು ಇತ್ಯರ್ಥವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಇಂತಹ ಇತ್ಯರ್ಥಗಳಲ್ಲಿ ಅತ್ಯಲ್ಪ ಪರಿಹಾರ ಪಡೆಯುವ ಮೂಲಕ, ಶೋಷಿತರೇ ಹೆಚ್ಚಾಗಿ ಅನ್ಯಾಯಕ್ಕೆ ಒಳಗಾಗುತ್ತಾರೆ.   ಇದರಿಂದಾಗಿ ತೊಂದರೆಗೆ ಒಳಗಾದವರಿಗೆ ಸೂಕ್ತ ನ್ಯಾಯ ದೊರಕುತ್ತಿಲ್ಲ.  ಇದಕ್ಕೆ ಕಾರಣ ಅಪಘಾತ ಪ್ರಕರಣಗಳ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬವೇ ಪ್ರಮುಖವಾಗಿದೆ.  ಸಿವಿಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆ-ತಲೆಮಾರುಗಳೇ ಕಳೆದರೂ, ಪ್ರಕರಣಗಳು ಇತ್ಯರ್ಥವಾಗದೇ ಇರುವುದನ್ನು ಕಂಡಿದ್ದೇವೆ.  ಸಂಸಾರ ನಡೆಸುವ ಪ್ರಮುಖ ವ್ಯಕ್ತಿಯೇ ಅಪಘಾತದಲ್ಲಿ ಮೃತಪಟ್ಟರೆ, ಅಂತಹ ಸಂಸಾರ ಕಷ್ಟಕ್ಕೆ ಸಿಲುಕುತ್ತದೆ.  ಇಂತಹ ಕುಟುಂಬಗಳಿಗೆ ತ್ವರಿತವಾಗಿ ಪರಿಹಾರ ದೊರಕಿಸಲು ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಳಂಬವಾಗುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ವಕೀಲರು, ನ್ಯಾಯಾಧೀಶರು ಚಿಂತನೆ ನಡೆಸುವ ಅಗತ್ಯವಿದೆ.  ಶೋಷಿತರಿಗೆ ಪರಿಹಾರವೆಂಬುದು ಕನ್ನಡಿಯೊಳಗಿನ ಗಂಟು ಆಗಬಾರದು.  ವಾಹನಗಳಿಗೆ ಸಂಬಂಧಿಸಿದ ವಿಮಾ ಪಾಲಿಸಿ ಮಾಡಿಕೊಳ್ಳುವ ಇನ್ಸೂರೆನ್ಸ್ ಕಂಪನಿಗಳಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಇಂತಹ ಕಂಪನಿಗಳು ವಿಮಾ ಯೋಜನೆಗಳ ಬಗೆಗಿನ ಸಮಗ್ರ ಮಾಹಿತಿಯನ್ನು ಪಾಲಿಸಿದಾರರಿಗೆ ಸಮರ್ಪಕವಾಗಿ ತಿಳಿಸುವಂತಹ ವ್ಯವಸ್ಥೆ ಆಗಬೇಕು.  ಇಲ್ಲದಿದ್ದಲ್ಲಿ ಅಂತಹ ಗ್ರಾಹಕ ವಂಚನೆಗೆ ಒಳಗಾಗಬೇಕಾಗುತ್ತದೆ.  ಇಂತಹ ತೊಂದರೆಗಳನ್ನು ಗಮನಿಸಿಯೇ, ನ್ಯಾಯಾಂಗ ವ್ಯವಸ್ಥೆಯಲ್ಲಿ ಲೋಕಅದಾಲತ್ ನಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದ್ದು, ಇದು ಒಂದು ಬಗೆಯ ಪಂಚಾಯತಿ ಕಟ್ಟೆಯಲ್ಲಿ ಇತ್ಯರ್ಥಗೊಳಿಸಿದಂತೆ,  ಲೋಕ ಅದಾಲತ್‌ನಲ್ಲಿ ಮೋಟಾರು ಅಪಘಾತ ಪ್ರಕರಣಗಳನ್ನು ಹಲವಾರು ವರ್ಷಗಳ ಕಾಲ ನ್ಯಾಯಾಲಯದಲ್ಲಿ ಎಳೆದಾಡುವ ಬದಲು, ಕೇವಲ ಕೆಲವೇ ದಿನ ಅಥವಾ ವಾರಗಳಲ್ಲಿ ತ್ವರಿತವಾಗಿ ಇತ್ಯರ್ಥಪಡಿಸಲು ಅವಕಾಶವಿದೆ.  ವಕೀಲರು, ಕಕ್ಷಿದಾರರು ಲೋಕಅದಾಲತ್ ನಂತಯ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಎಸ್.ಎನ್. ಸತ್ಯನಾರಾಯಣ ಅವರು ಕರೆ ನೀಡಿದರು.
  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ದಾ. ಬಬಲಾದಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮತ್ತು ಲಾ ಅಕಾಡೆಮಿ ಅಧ್ಯಕ್ಷೆ ಸಂಧ್ಯಾ ಬಿ. ಮಾದಿನೂರು ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.  ವಕೀಲರ ಸಂಘದ ಕಾರ್ಯದರ್ಶಿ ರವಿ ಬೆಟಗೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಎನ್. ಮುತ್ತಗಿ ಪ್ರಾರಂಭದಲ್ಲಿ ಸ್ವಾಗತಿಸಿದರು,  ಸೀನಿಯರ್ ಸಿವಿಲ್ ಜಡ್ಜ್ ಕೆ. ಶಿವರಾಮ್, ಜೆ.ಎಂ.ಎಫ್.ಸಿ. ಕಾವೇರಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಮೋಟಾರು ವಾಹನಗಳ ಅಪಘಾತಗಳಿಗೆ ಸಂಬಂಧಿತ ಅನೇಕ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
Please follow and like us:
error