ಗ್ರಾಮೀಣರ ಪ್ರೋತ್ಸಾಹದಿಂದ ನಾಟಕ ಕಲೆ ಇನ್ನೂ ಜೀವಂತ- ಎ.ಡಿ.ಸಿ. ಗೋವಿಂದರೆಡ್ಡಿ

 ಗ್ರಾಮೀಣ ಜನರ ಪ್ರೋತ್ಸಾಹದಿಂದಾಗಿ ನಾಟಕ ಕಲೆ ಇನ್ನೂ ಜೀವಂತವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಅಭಿಪ್ರಾಯಪಟ್ಟರು.
  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ‘ಗ್ರಾಮೀಣ ನಾಟಕೋತ್ಸವ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಟಿ.ವಿ. ಮಾಧ್ಯಮಗಳ ಹೊಡೆತಕ್ಕೆ ಸಿಲುಕಿ ನಲುಗಿರುವ ನಾಟಕ ಕಲೆ ಇಂದಿಗೂ ಜೀವಂತವಾಗಿದೆ ಎಂದರೆ, ಇದಕ್ಕೆ ಗ್ರಾಮೀಣ ಪ್ರದೇಶದ ಜನರ ಪ್ರೋತ್ಸಾಹ ಹಾಗೂ ಆಸಕ್ತಿಯೇ ಕಾರಣವಾಗಿದೆ.  ಈ ದಿಸೆಯಲ್ಲಿ ನಾಟಕ ಕಲೆಯನ್ನು ಉಳಿಸಿ, ಬೆಳೆಸಲು, ಕನ್ನಡ ಮತ್ತು ಸಂಸ್ಕೃತಿ, ಗ್ರಾಮೀಣ ನಾಟಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ನಾಟಕ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಹೇಳಿದರು.
  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಮಾತನಾಡಿ, ಭಾರತದ ದೇಶದ ಇತಿಹಾಸವನ್ನು ಅವಲೋಕಿಸಿದಾಗ, ನಾಟಕ ಕಲೆಗಳು ಅನೇಕ ಹಂತಗಳಲ್ಲಿ ಮಹತ್ವವನವನು ಪಡೆದುಕೊಂಡಿವೆ.  ನಾಟಕ ಕಲೆ ಕಾಲಘಟ್ಟಕ್ಕೆ ಅನುಗುಣವಾಗಿ ಬದಲಾವಣೆಯಾಗುತ್ತಿದ್ದು, ಪೌರಾಣಿಕ, ಐತಿಹಾಸಿಕ ನಾಟಕಗಳೇ ಹೆಚ್ಚಾಗಿದ್ದ, ಪರಿಸ್ಥಿತಿ ಜನರ ಅಭಿರುಚಿಗೆ ತಕ್ಕಂತೆ ಪರಿಷ್ಕೃತಗೊಂಡು, ಸಾಮಾಜಿಕ ನಾಟಕಗಳು ಹೆಚ್ಚು, ಹೆಚ್ಚು ಜನಪ್ರಿಯಗೊಂಡವು.  ದಕ್ಷಿಣ ಕನ್ನಡ ಪ್ರದೇಶದ ಯಕ್ಷಗಾನ ಕಲೆ ಈಗಿನ ದಿನಮಾನಕ್ಕೆ ತಕ್ಕಂತೆ ಬದಲಾವಣೆಗೊಂಡು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ.  ಅದೇ ರೀತಿ ಉತ್ತರ ಕರ್ನಾಟಕದ ಪ್ರಸಿದ್ಧ ಕಲೆಯಾಗಿರುವ ಬಯಲಾಟವನ್ನೂ ಸಹ ಜನರ ಅಭಿರುಚಿಗೆ ತಕ್ಕಂತೆ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿ, ಪ್ರಸ್ತುತಪಡಿಸುವ ಕಾರ್ಯಕ್ಕೆ ಚಾಲನೆ ನೀಡುವುದು ಅಗತ್ಯವಾಗಿದೆ.  ಇತ್ತೀಚಿನ ದಿನಮಾನಗಳಲ್ಲಿ ಪೌರಾಣಿಕ ನಾಟಕ ಏರ್ಪಡಿಸುವುದು ಹೆಚ್ಚು ವೆಚ್ಚದಾಯವಾಗಿದ್ದರೂ, ಗ್ರಾಮೀಣರ ಅಭಿರುಚಿ, ಪೌರಾಣಿಕ ನಾಟಕಗಳಿಗೇ ಹೆಚ್ಚು ಆಕರ್ಷಿತಗೊಳ್ಳುತ್ತಿವೆ.  ವಿದ್ಯುನ್ಮಾನ ಮಾಧ್ಯಮಗಳಿಂದ ನಾಟಕ ಕಲೆ ನಶಿಸುವ ಹಂತ ತಲುಪಿದ್ದರೂ, ಕಲಾಪ್ರಿಯರು, ಕಲಾವಿದರು, ನಾಟಕ ಕಲೆಯನ್ನು ಪ್ರಸ್ತುತ ಕಾಲಕ್ಕೂ ಉಳಿಸಿ, ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದುವ ಅವಕಾಶವನ್ನು ಮುಕ್ತವಾಗಿರಿಸಲು ಸಹಾಯಕವಾಗಿವೆ.  ಕಲಾವಿದರ ಕಲಾತ್ಮಕತೆಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಯತ್ನ ಪ್ರಶಂಸೆಗೆ ಅರ್ಹವಾಗಿದೆ ಎಂದರು.
  ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಮೇಶ್ ವೈದ್ಯ ಸಮಾರಂಭದ ಅಧ್ಯಕ್ಷೆ ವಹಿಸಿದ್ದರು.  ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಕಾರ್ಯಕ್ರಮ ಕುರಿತು ಮಾತನಾಡಿದರು.  ಕಲಾವಿದ ಅಶ್ವಥ್ ದೇಸಾಯಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಸೌಭಾಗ್ಯ ಸ್ವಾಗತಿಸಿದರು, ಸಿ.ವಿ. ಜಡಿಯವರ್ ಅವರು ಕಾರ್ಯಕ್ರಮ ನಿರೂಪಿಸಿ

ವಂದಿಸಿದರು.  ‘ಗ್ರಾಮೀಣ ನಾಟಕೋತ್ಸವ’ ಅಂಗವಾಗಿ ಕೊಪ್ಪಳ ತಾಲೂಕಾ ರಂಗ ಕಲಾವಿದರ ಸಂಘದವರಿಂದ ವಿಜಯನಗರದ ವೀರನಾಯಕ (ಎಚ್ಚಮನಾಯಕ) ಐತಿಹಾಸಿಕ ನಾಟಕ ಪ್ರದರ್ಶನಗೊಂಡಿತು.  ಏ. ೧೬ ರಂದು ಸಂಜೆ ೬-೩೦ ಗಂಟೆಗೆ ಇದೇ ವೇದಿಕೆಯಲ್ಲಿ ಬಳ್ಳಾರಿಯ ಮಯೂರ ಕಲಾ ಸಂಘದಿಂದ ‘ಅನುಬಂಧವೋ? ಅಣುಬಂಧವೋ? ಹಾಗೂ ಗದಗ ಜಿಲ್ಲೆ ಮುಂಡರಗಿಯ ಹವ್ಯಾಸಿ ಕಲಾವೃಂದ ದವರಿಂದ ‘ರಕ್ತರಾತ್ರಿ’ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.

Leave a Reply