ಡಾ. ಮಹಾಂತೇಶ ಮಲ್ಲನಗೌಡರ ಕಾವ್ಯದಲ್ಲಿ ವೈಚಾರಿಕ ಪ್ರಜ್ಞೆ ಅಡಗಿದೆ – ಡಾ. ವಿಠ್ಠಲರಾವ್ ಗಾಯಕವಾಡ.

ಕೊಪ್ಪಳ-03-  ಡಾ. ಮಹಾಂತೇಶ ಮಲ್ಲನಗೌಡರ ಕಾವ್ಯದಲ್ಲಿ ದಲಿತ ಪ್ರಜ್ಞೆ, ವೈಚಾರಿಕತೆ, ಮಾನವೀಯತೆ, ಜೀವನ ಧರ್ಮವಿದೆ. ಇವರ ಕಾವ್ಯದಲ್ಲಿ ನವೋದಯ ಕವಿಗಳಾದ ಕುವೆಂಪು, ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ, ಚಂಪಾ, ಸಿದ್ದಲಿಂಗಯ್ಯ, ಇಂಗ್ಲೀಷ ಕವಿಗಳಾದ ವಿಲಿಯಂ ವರ್ಡ್ಸ್ ವರ್ತ್, ಶೆಲ್ಲಿಯವರ ಪ್ರೇರಣೆಗಳಿವೆ. ನಿರ್ಲಿಪ್ತವಾದ ಸಂತ ಪ್ರಜ್ಞೆಯ ಧ್ವನಿಯಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ       ಡಾ. ವಿಠ್ಠಲರಾವ್ ಗಾಯಕವಾಡ ಹೇಳಿದರು.  ಅವರು ರವಿವಾರ ಕೊಪ್ಪಳದ ಗವಿಶ್ರೀ ನಗರದ ಮಲ್ಲಿಗೆ ನಿಲಯದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಡಾ. ಮಹಾಂತೇಶ ಮಲ್ಲನಗೌಡರ ಸಮಗ್ರ ಕಾವ್ಯ ಸಂಕಲನ ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಿತ ೨೭ನೇ ಕೃತಿ ‘ಕಾಡಿನ ಹೂ’ ಬಿಡುಗೊಳಿಸಿ ಮಾತನಾಡಿದರು.  ಅವರು ಮುಂದುವರೆದು ಮಾತನಾಡುತ್ತಾ, ಸಂಸ್ಕೃತಿ ಭಾಷೆ, ಸಾಹಿತ್ಯ ಇವು ವಿಶ್ವಾತೀತವಾದ ಶಬ್ದಗಳು, ಮನುಷ್ಯ ತಾನು ಇತರ ಪ್ರಾಣಿಗಳಿಗಿಂತ ಭಿನ್ನ ಎಂದು ಭಾವಿಸಿ, ಆಲೋಚಿಸಿ ಜೀವನ ವ್ಯವಸ್ಥೆಯನ್ನು ವಿಶಿಷ್ಟವಾಗಿ ರೂಪಿಸಿಕೊಂಡನು. ಸಾಂಸ್ಕೃತಿಕ ಮೌಲ್ಯದ ಸ್ವರೂಪದಲ್ಲಿ ಆತ ಕಾಲಾತೀತವಾಗಿ ಆಲೋಚಿಸಿ ಜೀವನವನ್ನು ಕುರಿತು ಗಂಭೀರವಾಗಿ ಅಭಿವ್ಯಕ್ತಿಸಲು ಆರಂಭಿಸಿದಂದು ಕಲೆ, ಸಾಹಿತ್ಯ ಮತ್ತು ಸಂಗೀತಗಳು ಹುಟ್ಟಿಕೊಂಡವು. ಕಲೆ ರೂಪಬ್ರಹ್ಮ, ಸಾಹಿತ್ಯ ಅಕ್ಷರಬ್ರಹ್ಮ, ಸಂಗೀತ ನಾದಬ್ರಹ್ಮ ಈ ಮೂಲಕ ಮನುಷ್ಯನ ಜೀವನವನ್ನು ಆನಂದಾನುಭವದಲ್ಲಿ ಕಂಡರಿಸಿದ್ದು ಗಮನಾರ್ಹ. ಕಾವ್ಯ ರಾಮಾಯಣದಿಂದ ಹಿಡಿದು ಇಂದಿನವರೆಗೂ ಅತ್ಯಂತ ಗಂಭೀರವಾದ, ಧ್ವನಿಪೂರ್ಣವಾದ ಮತ್ತು ಆಲೋಚನಾ ಪ್ರಕ್ರಿಯೆಯನ್ನು ರೂಪಿಸುವ ಪ್ರಕಾರವಾಗಿದೆ. ಕನ್ನಡದಲ್ಲಿ ಆದಿಕವಿ ಪಂಪನಿಂದ ಹಿಡಿದು, ಇಂದಿನವರೆಗೂ ಕಾವ್ಯ ಅತ್ಯಂತ ಮುಖ್ಯವಾದ ಕಾರ್ಯವನ್ನು ನಿರ್ವಹಿಸಿದೆ. ಸಂವೇಧನೆ, ಭಾವನೆ, ಧ್ವನಿ ಮತ್ತು ಉದ್ದೇಶಗಳ ವಿಶಿಷ್ಟ ರಚನೆಯಾಗಿರುವ ಕಾವ್ಯ ಎಲ್ಲಾ ಕಾಲಕ್ಕೂ ಅತ್ಯಂತ ಗಂಭೀರವಾಗಿಯೇ ಪ್ರತಿಕ್ರಿಯಿಸುತ್ತಾ ಬಂದಿದೆ. ನವೋದಯ ಪ್ರಗತಿಶೀಲ, ನವ್ಯ ಮತ್ತು ದಲಿತ ಬಂಡಾಯ ಕಾವ್ಯಗಳು ಓದುಗರಲ್ಲಿ ಗಂಭೀರ ಭಾವವನ್ನು ಹುಟ್ಟುಹಾಕಿವೆ. ಕಾವ್ಯವನ್ನು ರಸಾನಂದದ ಆಯಾಮದಿಂದ ಅಧ್ಯಯನ ಮಾಡಬೇಕು. ಈ ಹಿನ್ನೆಲೆಯಲ್ಲಿ ಡಾ. ಮಹಾಂತೇಶ ಮಲ್ಲನಗೌಡರ ಕಾಡಿನ ಹೂ ಎಂಬ ಕವನ ಸಂಕಲನ ಹೊಸಗನ್ನಡ ಸಾಹಿತ್ಯದ ಎಲ್ಲಾ ಘಟ್ಟಗಳಿಂದಲೂ ಪ್ರಭಾವಿತಗೊಂಡು ರಚಿತವಾಗಿದೆ. ಪ್ರೇಮಗೀತೆಗಳು, ನಾಡಗೀತೆಗಳು, ಕನ್ನಡ ಪ್ರೇಮ, ದೇಶ ಪ್ರೇಮ, ವೈಜ್ಞಾನಿಕ, ವೈಚಾರಿಕ ಮತ್ತು ಮಾನವೀಯ ಧರ್ಮದ ನೆಲೆಯಿಂದ ಸೂಕ್ಷ್ಮವಾಗಿ ರಚನೆಗೊಂಡಿವೆ.
    ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಸಾಹಿತಿ ಡಾ.ಕೆ.ಬಿ.ಬ್ಯಾಳಿ ಅವರು ಮಾತನಾಡುತ್ತಾ, ಇಂದು ಪ್ರೇಮವೇ ಕಾಣೆಯಾಗಿದೆ. ನಾವು ಕ್ರೌರ್ಯವನ್ನೇ ಕುಡಿದು ಬದುಕುತ್ತಿರುವುದು ದುರಂತ ಎಂದರು.
    ಹಿರಿಯ ಸಾಹಿತಿಗಳಾದ ಡಾ. ವಿ.ಬಿ.ರಡ್ಡೆರ ಮಾತನಾಡುತ್ತ, ಡಾ. ಮಹಾಂತೇಶ ಲ್ಲನಗೌಡರು ವೃತ್ತಿಯಿಂದ ನಿವೃತ್ತರಾಗಿದ್ದರೂ ಪ್ರವೃತ್ತಿಯಿಂದ ಮಾತ್ರ ನಿವೃತ್ತರಾಗಿಲ್ಲ ಇವರು ಸಂವೇದನಾಶೀಲ ಕವಿಯಾಗಿದ್ದು, ಸಮಕಾಲೀನ ವಾಸ್ತವ ಅರ್ಥಮಾಡಿಕೊಂಡು ಕಾವ್ಯ ಬರೆದಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿಯ ಸ್ವಾಮಿ ರಾಮಾನಂದತೀರ್ಥ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಡಾ. ವಸಂತ ಕುಷ್ಟಗಿ ಮಾತನಾಡುತ್ತ, ಡಾ. ಮಹಾಂತೇಶ ಮಲ್ಲನಗೌಡರ ‘ಕಾಡಿನ ಹೂ’ ಘಮಘಮಿಸುವ ಪರಿಮಳದ ಉದ್ಯಾನದಂತಿದೆ. ಇವರ ಕಾವ್ಯದಲ್ಲಿ ತತ್ವಜ್ಞಾನವಿದೆ. ಜೀವನದ ಕಥೆ ಇದೆ. ಇವರ ಕವಿತೆಗಳು ಸಮಕಾಲೀನವಾಗಿ ಮಹತ್ವದವುಗಳಾಗಿದ್ದು, ದಾರ್ಶನಿಕವಾಗಿ ಅಭಿವ್ಯಕ್ತಗೊಂಡಿವೆ ಎಂದರು.
    ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಎ.ಪಿ.ಎಂ.ಸಿ. ಅಧ್ಯಕ್ಷರಾದ ಹನುಮರಡ್ಡಿ ಹಂಗನಕಟ್ಟಿ, ವರ್ತಕರಾದ ಪ್ರಭು ಹೆಬ್ಬಾಳ, ನಗರಸಭಾ ಮಾಜಿ ಸದಸ್ಯರಾದ ಈರಣ್ಣ ಹಂಚಿನಾಳ, ವೈದ್ಯರಾದ ಡಾ. ಮಲ್ಲಿಕಾರ್ಜುನ ರಾಂಪೂರ, ಸಿಂಡಿಕೇಟ ಮಾಜಿ ಸದಸ್ಯರಾದ ಇಂದಿರಾ ಬಾವಿಕಟ್ಟಿ, ಹಿರಿಯರಾದ ಸಿದ್ದಲಿಂಗಪ್ಪ ಇಂದರಗಿ, ಕಾಶಿನಾಥರಡ್ಡಿ ಆವಾಜಿ, ಕೊಟ್ರಗೌಡ ಹುರಕಡ್ಲಿ, ಎಸ್.ಎ.ನಿಂಗೋಜಿ, ಜಯರಾಜ ಬೂಸದ, ಜಿ.ಎಸ್.ಗೋನಾಳ, ಶಿವಾನಂದ ಹೊದ್ಲೂರ,  ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಸವರಾಜ ಆಕಳವಾಡಿ, ಹಿರಿಯ ಸಾಹಿತಿ ಡಾ. ಪಾರ್ವತಿ ಪೂಜಾರ, ಡಾ.ಹನುಮಾಕ್ಷಿ ಗೋಗಿ, ವಿರಂಚಿ ಕಲಾ ಬಳಗದ ಅಧ್ಯಕ್ಷರಾದ ಈಶ್ವರ ಹತ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಎಸ್.ಪಾಟೀಲ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎಸ್.ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು.
    ವಾಯ್.ಬಿ.ಜೂಡಿ ಪ್ರಾರ್ಥಿಸಿದರು. ಜಿ.ಎನ್.ಹಳ್ಳಿ, ಮುನಿರಾಜು ಎ.ಈ.ನಿರೂಪಿಸಿದರು. ಡಾ. ಮಹಾಂತೇಶ ಮಲ್ಲನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಕೇಶ ಕಾಂಬ್ಳೇಕರ ಸ್ವಾಗತಿಸಿದರು. ಕಲ್ಲನಗೌಡ ಮಾಲಿಪಾಟೀಲ ವಂದಿಸಿದರು.

Please follow and like us:
error