ಕಾಯಕಕೆ ಕರ ಮುಗಿದು – ರಮೇಶ್ ಗಬ್ಬೂರ

ಮುಸುಕು ಜಾರಿಸೆ ಮೋಡ ತುಸು ಇಣುಕಿ ನೋಡುತಾ 
ಕಸ ಹೊಡೆಯೇ ಬರುವಾನು ಅಂಗಾಳಕೆ, ರವಿಯಂತೆ
ಹಸಿದೊಡಲು ಅಂಬರದಿ ಪುರಕಾರ್ಮಿಕ
ಪೊರಕೆ ಕೈಯಲ್ಲಿ ಹಿಡಿದು ಹರಕೆ ಅಂಗಳಕ್ಕೊತ್ತು
ನೆರವಾಗಿ ನೀ ಬರುವೇ ಗುಡಿಸೋದಕ, ನನ್ನಣ್ಣ
ತರವಲ್ಲ ನಿನ ಬಾಳು ಮರಿಯೋದಕ
ಕೊಳಚೆಗಿಳಿವಾ ಜೀವ ಕಳಚಿ ಮುಟ್ಟುವ ಭಾವ
ಬಳುಕ್ಯಾಡಿ ಹೊಲಸಾ ತೆಗೆವಾವ, ನನ್ನಣ್ಣ
ಮಲ್ಲೀಗಿ ಮನಿಮುಂದ ಹೊದಿಸಾವ
ಬಳಿಯಾಲು ಆಗಸಕೆ ಹೊಳೆದಾವು ಚುಕ್ಕಿಗಳು
ಇಳೆಯೆಲ್ಲ ಸಂಭ್ರಮವು ತುಳುಕ್ಯಾಡಿ, ದಿನದಿನ
ಕೊಳಚೆಯಲಿ ನಿನ ಬದುಕು ಚೆಲ್ಯಾಡಿ
ಮೈಯೆಲ್ಲ ಸರಿಯಿಲ್ಲ ಕೈಯೆಲ್ಲ ಕಸಬರಿಗೆ
ಬಾಯಲ್ಲಿ ಬರಿನೀರು ಹರಿಸಾವ, ನನ್ನಣ್ಣ
ಕಾಯದಲಿ ಕಮರೀ ಹೋಗಾವ
ಬೀದಿಗುಡಿಸುವ ಜೀವ ಹಾದಿಯಲ್ಲಿನ ಬದುಕು
ಬೇಧವಿಲ್ಲದೆ ಬೆವರ ಸುರಿಸ್ಯಾನೆ, ನನ್ನಣ್ಣ
ಮುದುರಿ ತಾ ಮುಖ ಮುಚ್ಚಿ ಅಳುತಾನೆ
ಹಬ್ಬ ಮನೆಯೊಳಗಿಲ್ಲ ಒಬ್ಬಟ್ಟು ಊಟಿಲ್ಲ
ಹುಬ್ಬೀನ ನಗುವಿಲ್ಲ ಉಪವಾಸ, ತಂಗಾಳು
ತಬ್ಬಿ ತಂಗಳು ತಿಂದು ಪ್ರತಿದಿವಸ
ನಿನ ಪಾದದಾ ಧೂಳು ನನ ಮೈಗೆ ಶ್ರೀಗಂಧ
ನಿನ ಕಾಲಿಗತ್ತೀದ ಆ ಕೆಸರು, ಗೊಜ್ಜಲು
ನಾನುಣುವ ಅಂಬಾಲಿಯಾಗಿ ಮೊಸರು
Please follow and like us:
error