ನೀರಿನ ಮಿತ ಬಳಕೆ ಹಾಗೂ ಸಂರಕ್ಷಣೆ ಎಲ್ಲರ ಕರ್ತವ್ಯ- ಕೃಷ್ಣ ಉದಪುಡಿ

  ಭಾರತ ದೇಶದಲ್ಲಿ ಜನಸಂಖ್ಯೆಯ ಹೆಚ್ಚಳದಿಂದಾಗಿ, ವ್ಯಕ್ತಿ ಆಧಾರಿತ ನೀರಿನ ಲಭ್ಯತೆ ಪ್ರಮಾಣ ಕಡಿಮೆಯಾಗುತ್ತಿದ್ದು, ನೀರಿನ ಮಿತ ಬಳಕೆ ಹಾಗೂ ಸಂರಕ್ಷಣೆ ಕುರಿತಂತೆ ಎಲ್ಲರೂ ಜವಾಬ್ದಾರಿಯುತ ಪಾತ್ರ ನಿರ್ವಹಿಸಬೇಕಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.
  ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಜಲಸಂಪನ್ಮೂಲ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ’ಹಮಾರ ಜಲ್-ಹಮಾರ ಜೀವನ್’ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಭಾರತ ದೇಶದಲ್ಲಿ ತೀವ್ರವಾಗಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ನೀರಿನ ಸಂಪನ್ಮೂಲ ಲಭ್ಯತೆ ಪ್ರಮಾಣ ಹೆಚ್ಚಾಗುತ್ತಿಲ್ಲ.  ವ್ಯಕ್ತಿ ಆಧಾರಿತ ನೀರಿನ ಲಭ್ಯತೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.  ಮಳೆ ಪ್ರಮಾಣ ಹವಾಮಾನಕ್ಕೆ ಅನುಗುಣವಾಗಿ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುವುದರಿಂದ, ಒಂದೆಡೆ ಅತಿವೃಷ್ಟಿಯಾದರೆ, ಇನ್ನೊಂದೆಡೆ ಅನಾವೃಷ್ಠಿಯಾಗುತ್ತದೆ.  ಮಳೆಯ ಪ್ರಮಾಣದಲ್ಲಿ ಕುಸಿತ, ನಗರೀಕರಣ, ಅಂತರ್ಜಲ ಬಳಕೆ ಪ್ರಮಾಣ ಹೆಚ್ಚಳ, ಕೆರೆ ಕಟ್ಟೆಗಳ ಕಣ್ಮರೆಯಿಂದಾಗಿ ಅಂತರ್ಜಲ ಕೆಳಮಟ್ಟಕ್ಕೆ ಕುಸಿಯುತ್ತಿದೆ.  ಬಯಲು ಪ್ರದೇಶಗಳಲ್ಲಂತೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಕಂಡುಬರುವುದು ಸಹಜವಾಗಿದೆ.  ಭೂ ಮೇಲ್ಮೈಯಲ್ಲಿ ಇರುವ ನೀರನ್ನು ವ್ಯರ್ಥವಾಗಿ ಪೋಲು ಮಾಡದೆ, ಹಿತ-ಮಿತವಾಗಿ ಬಳಸಿಕೊಳ್ಳಬೇಕು.  ಮಳೆ ನೀರು ವ್ಯರ್ಥವಾಗದಂತೆ ವ್ಯವಸ್ಥಿತವಾಗಿ ಸಂಗ್ರಹಿಸಿ, ಕುಡಿಯುವ ನೀರನ್ನಾಗಿ ಬಳಸಿಕೊಳ್ಳಬಹುದಾದ ಮಳೆ ನೀರು ಕೊಯ್ಲು ಇಂದಿನ ಪ್ರಮುಖ ಅಗತ್ಯಗಳಲ್ಲೊಂದಾಗಿದೆ.  ಮುಂದಿನ ೨೦ ವರ್ಷದ ವೇಳೆಗೆ ಇರಬಹುದಾದ ಜನಸಂಖ್ಯೆ ಹಾಗೂ ನೀರಿನ ಬೇಡಿಕೆ ಮತ್ತು ಪೂರೈಕೆ ಪ್ರಮಾಣಕ್ಕೆ ಅನುಗುಣವಾಗಿ, ನೀರಿನ ಸಂಪನ್ಮೂಲ ಸಂಗ್ರಹಣೆಗೆ ಅಗತ್ಯ ಕ್ರಮಗಳನ್ನು ಈಗಿನಿಂದಲೆ ಕೈಗೊಳ್ಳುವುದು ಅಗತ್ಯವಾಗಿದೆ.  ನೀರಿನ ಮಿತ ಬಳಕೆ ಮತ್ತು ಸಂರಕ್ಷಣೆ ಕುರಿತಂತೆ ಎಲ್ಲ ಜಿಲ್ಲೆಗಳಲ್ಲಿ ಜನಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.
  ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಚಿತ್ರದುರ್ಗದ ಅಂತರ್ಜಲ ಮತ್ತು ಮಳೆ ನೀರು ಕೊಯ್ಲು ತಜ್ಞ ಎನ್. ದೇವರಾಜ ರೆಡ್ಡಿ ಅವರು ವಿಶೇಷ ಉಪನ್ಯಾಸ ನೀಡಿ, ಜಲಸಂಪತ್ತು ಅತಿ ಹೆಚ್ಚು ಇರುವ ರಾಷ್ಟ್ರಗಳ ಪೈಕಿ ಭಾರತ ದೇಶ ಎರಡನೆ ಸ್ಥಾನದಲ್ಲಿದ್ದರೆ, ದಕ್ಷಿಣ ಅಮೆರಿಕಾ ಮೊದಲ ಸ್ಥಾನದಲ್ಲಿದೆ.  ವಿಫಲವಾಗುವ ಕೊಳವೆ ಬಾವಿಗಳನ್ನು ಕಲ್ಲು ಮಣ್ಣಿನಿಂದ ಸಂಪೂರ್ಣ ಮುಚ್ಚುವ ಬದಲಿಗೆ ವೈಜ್ಞಾನಿಕವಾಗಿ ಇಂಗು ಗುಂಡಿಗಳನ್ನಾಗಿ ಪರಿವರ್ತಿಸುವುದು ಸೂಕ್ತ.  ನಮ್ಮ ಪೂರ್ವಜರು ಬಾವಿ, ಕೆರೆ, ಕಟ್ಟೆಗಳನ್ನು ಹೇರಳವಾಗಿ ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು.  ಆದರೆ ಇಂದಿನ ದಿನಗಳಲ್ಲಿ ಅಂತರ್ಜಲ ಬಳಕೆಗೆ ಮಾತ್ರ ಆದ್ಯತೆ ನೀಡಲಾಗುತ್ತಿದ್ದು, ಅಂತರ್ಜಲ ವೃದ್ಧಿಗೆ ಯಾವುದೇ ಕ್ರಮ ಆಗುತ್ತಿಲ್ಲ ಎಂದರು.
  ಮುನಿರಾಬಾದ್‌ನ ತುಂಗಭದ್ರಾ ನೀರಾವರಿ ಕೇಂದ್ರ ವಲಯದ ಮುಖ್ಯ ಅಭಿಯಂತರ ಮಲ್ಲಿಕಾರ್ಜುನ ಬಿ. ಗುಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.  ಅಯ್ಯಪ್ಪ ಎಂ. ಮಾಸಗಿ ಅವರು ಜಲಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.  ಜಿಲ್ಲಾಧಿಕಾರಿ ಆರ್.ಆರ್. ಜನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Please follow and like us:
error