ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆ

* ಪ್ರಕಾಶ್ ರಾಮಜೋಗಿಹಳ್ಳಿ
ಬೆಂಗಳೂರು, ಸೆ.18: ರಾಜ್ಯ ರಾಜಕಾರಣ ದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಪ್ರತಿಷ್ಠೆಯ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡಿಸಿದೆ.ಇದೇ ಸೆ.26ರಂದು ಮತದಾನ ನಡೆಯಲಿದ್ದು, ಚುನಾವಣೆಗೆ ಕೇವಲ 8ದಿನಗಳಷ್ಟೆ ಬಾಕಿ ಇದೆ. ಈ ಹಿನ್ನೆಲೆ ಯಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷಗಳ ಹಿರಿಯ ಮುಖಂಡರು ಕ್ಷೇತ್ರದಲ್ಲೆ ನೆಲೆಯೂರಿದ್ದು, ಗೆಲುವಿನ ಬೆನ್ನತ್ತಿ ಕ್ಷೇತ್ರದಲ್ಲಿ ಹಗಲು-ರಾತ್ರಿಗಳ ಪರಿವೆಯಿಲ್ಲದೆ ಮತದಾರರ ಮನಗೆಲ್ಲಲು ಬೆವರು ಹರಿಸುತ್ತಿದ್ದಾರೆ.
ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಶಾಸಕ ಕರಡಿ ಸಂಗಣ್ಣ 2011ರ ಮಾರ್ಚ್ 3ರಂದು ಬಿಜೆಪಿಯ ‘ಆಪರೇಷನ್ ಕಮಲಕ್ಕೆ ಬಲಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದ್ದರು. ಈ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯುತ್ತಿದೆ.ಈ ಮಧ್ಯೆ ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಗಾಲಿ ಜನಾರ್ದನ ರೆಡ್ಡಿ ಭ್ರಷ್ಟಾಚಾರ ಮತ್ತು ಅಕ್ರಮ ಗಣಿಗಾರಿಕೆ ಆರೋಪದಿಂದಾಗಿ ಕಾರಾಗೃಹದಲ್ಲಿದ್ದು, ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಲೋಕಾ ಯುಕ್ತ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

 ಅಲ್ಲದೆ, ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಹಗರಣವೊಂದರಲ್ಲಿ ಸಿಲುಕಿದ್ದು, ಬಂಧನ ಭೀತಿಯಲ್ಲಿದ್ದಾರೆ. ಬಿಜೆಪಿ ಭ್ರಷ್ಟತೆಯ ಆರೋಪದಿಂದ ಮಸುಕಾಗಿದ್ದು, ಆಪಾದನೆಗಳಿಂದ ಹೊರ ಬರಲು ಕೊಪ್ಪಳ ಉಪ ಚುನಾವಣೆ ಯಲ್ಲಿ ಗೆಲ್ಲಬೇಕಿದೆ. ಆದುದರಿಂದ ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ‘ಕರಡಿ’ ಗೆಲುವಿಗೆ ಹರಸಾಹಸ ಪಟ್ಟು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಆಂತರಿಕ ಬೇಗುದಿಯಲ್ಲಿರುವ ಕಾಂಗ್ರೆಸ್ ಸರಣಿ ಸೋಲಿನಿಂದ ಕಂಗೆಟ್ಟಿದೆ. ಕೊಪ್ಪಳ ಉಪ ಚುನಾವಣೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಪ್ರತಿಷ್ಠೆಯಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಕ್ಷೇತ್ರದಲ್ಲೆ ಬೀಡುಬಿಟ್ಟಿದ್ದು ತಮ್ಮ ಪಕ್ಷದ ಅಭ್ಯರ್ಥಿ ಕೆ.ಬಸವರಾಜ ಹಿಟ್ನಾಳ್ ಗೆಲುವಿಗೆ ಕಸರತ್ತು ನಡೆಸುತ್ತಿದ್ದಾರೆ.

ಜೆಡಿಎಸ್ ತಮ್ಮ ಕೈವಶದಲ್ಲಿದ್ದ ಕೊಪ್ಪಳ ವಿಧಾನಸಭಾ ಕ್ಷೇತ್ರ ಉಳಿಸಿಕೊಳ್ಳಲು ಹರಸಾಹಸಗೈಯು ತ್ತಿದ್ದು, ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಅಭ್ಯರ್ಥಿ ಪ್ರದೀಪ್‌ಗೌಡರನ್ನು ಕಣಕ್ಕಿಳಿಸಿದ್ದು, ಗೆಲುವಿನ ನಿರೀಕ್ಷೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲೆ ಬೀಡುಬಿಟ್ಟಿದ್ದು ಪ್ರಚಾರಕ್ಕೆ ಇಳಿದಿದ್ದಾರೆ.
ಬಿಜೆಪಿ-ಕಾಂಗ್ರೆಸ್ ಸಮಬಲ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣೆ ಬಹಳ ಹಿಂದಿನಿಂದಲೂ ಕರಡಿ ಸಂಗಣ್ಣ ಮತ್ತು ಬಸವರಾಜ ಹಿಟ್ನಾಳ್ ಮಧ್ಯೆ ಹಣಾಹಣಿಗೆ ಸಾಕ್ಷಿ ಯಾಗಿದೆ. ಒಮ್ಮೆ ಅವರು, ಒಮ್ಮೆ ಇವರು.. ಹೀಗೆ ಸಾಗಿ ಬಂದಿದೆ. ಪ್ರಸ್ತುತ ಉಪ ಚುನಾವಣೆಯೂ ಕೂಡ ಕರಡಿ ಸಂಗಣ್ಣ ಹಾಗೂ ಕೆ.ಬಸವರಾಜ ಹಿಟ್ನಾಳ್ ಮಧ್ಯೆ ತೀವ್ರ ಹಣಾಹಣಿ ಇದೆ. ಆದರೆ, ಜೆಡಿಎಸ್ ಅಭ್ಯರ್ಥಿ ಯಾವುದೇ ರೀತಿಯಲ್ಲಿಯೂ ಹಿಂದೆ ಇಲ್ಲ. ಇಬ್ಬರಿಗೂ ಪೈಪೋಟಿ ನೀಡುವಲ್ಲಿ ಪ್ರದೀಪ್ ಗೌಡ ಸಮರ್ಥರಿದ್ದಾರೆ. ಅಲ್ಲದೆ, ಪ್ರಚಾರದ ಭರಾಟೆಯಲ್ಲಿಯೂ ಮುಂದಿದ್ದಾರೆ.
ಮುಸ್ಲಿಮರು ನಿರ್ಣಾಯಕ: ಕೊಪ್ಪಳ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿದ್ದು, ಮುಸ್ಲಿಮರು ಮತ್ತು ಕುರುಬ ಸಮುದಾಯ ನಿರ್ಣಾ ಯಕ. ಮುಸ್ಲಿಮ್ ಸಮುದಾಯದ ಮತಗಳನ್ನು ಯಾವ ಅಭ್ಯರ್ಥಿ ಗಳಿಸುತ್ತಾರೋ ಅವರು ಖಂಡಿತ ಗೆಲ್ಲುತ್ತಾರೆ ಎಂಬುದು ಕ್ಷೇತ್ರ ವಿಶ್ಲೇಷಕರ ಅಭಿಮತ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಯಾವುದೇ ಅಭ್ಯರ್ಥಿ ಗೆದ್ದರೂ ಅದು ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ. ಆದರೆ, ಕೊಪ್ಪಳ ಉಪ ಚುನಾವಣೆಯ ಫಲಿ ತಾಂಶಕ್ಕೆ ಸೆಪ್ಟಂಬರ್ 29ರವರೆಗೆ ಕಾಯಬೇಕಾಗಿದೆ.
ಕೊಪ್ಪಳ ಉಪಚುನಾವಣೆ
ಒಟ್ಟು ಮತದಾರರು-1,88,196
ಪುರುಷರು-95,467
ಮಹಿಳೆಯರು-92,779
ಮತಗಟ್ಟೆ ವಿವರ
ಕೊಪ್ಪಳ ಉಪ ಚುನಾವಣೆಗೆ ಒಟ್ಟು 210 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಆ ಪೈಕಿ 94 ಅತಿಸೂಕ್ಷ್ಮ, 65 ಸೂಕ್ಷ್ಮ ಹಾಗೂ 51 ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದೆ ಎಂದು ಚುನಾವಣಾಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.

ಮತಗಟ್ಟೆ ಅಧಿಕಾರಿ ಸೇರಿದಂತೆ ಒಟ್ಟು 1050 ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಅವರು ವಿವರ ನೀಡಿದ್ದು, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ

Leave a Reply