ಕಸಾಪಕ್ಕೆ ಜ್ಯಾತ್ಯಾತೀತವಾಗಿ ಗೋನಾಳ ಆಯ್ಕೆ- ಮಲ್ಲನಗೌಡರ.

ಕೊಪ್ಪಳ ಜ. ೨೨. ಮುಂಬರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ಕಸಾಪವನ್ನು ಕಟ್ಟಿ ಬೆಳೆಸಲು ಜ್ಯಾತ್ಯಾತೀತವಾಗಿರುವ ಸಂಘಟಕ, ಪತ್ರಕರ್ತ, ಪ್ರಕಾಶಕ ಜಿ. ಎಸ್. ಗೋನಾಳರನ್ನು ಆಯ್ಕೆ ಮಾಡಿ ಎಂದು ಸಾಹಿತಿ ಮಹಾಂತೇಶ ಮಲ್ಲನಗೌಡರ ಹೇಳಿದರು.
    ಅವರು ನಗರದಲ್ಲಿ ಇಂದು ನಡೆಸಿದ ಚುನಾವಣಾ ತಯಾರಿ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಗೋನಾಳ ಹಲವು ವರ್ಷಗಳಿಂದ ಕಸಾಪ ತಾಲೂಕ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು, ತಮ್ಮ ವಿಶಾಲ ಪ್ರಕಾಶನದಿಂದ ತಮ್ಮ ೪ ಕೃತಿಗಳನ್ನು ಸೇರಿಸಿದಂತೆ ಒಟ್ಟು ೨೦ ಕೃತಿಗಳನ್ನು ಪ್ರಕಟಿಸಿದ್ದು, ಎರಡು ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಜೊತೆಗೆ ಹತ್ತಾರು ಕಾರ್ಯಕ್ರಮ ಸಂಘಟಿಸಿದ್ದಾರೆ. ಅವರ ಆಯ್ಕೆ ಸೂಕ್ತವಾಗಿದೆ, ಜಿಲ್ಲೆಯ ಎಲ್ಲಾ ಹಿರಿಯ ಕಿರಿಯ ಸಾಹಿತಿಗಳ ಒಲವು ಈ ಬಾರಿ ಗೋನಾಳರ ಮೇಲಿದೆ ಎಂದರು.
    ಮಾಜಿ ಕಸಾಪ ತಾಲೂಕ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಸದ್ಯ ಸುಮಾರು ಆರು ಸಾವಿರದಷ್ಟು ಆಜೀವ ಸದಸ್ಯರು ಮತದಾನ ಹಕ್ಕು ಹೊಂದಿದ್ದು, ಇದೂವರೆಗೆ ಅವರನ್ನು ಯಾವುದೇ ಕಾರ್ಯಕ್ರಮಗಳಿಗೂ ಕರೆಯದೇ ನಿರ್ಲಕ್ಷಿಸಲಾಗಿದೆ, ಮೊದಲು ಅವರನ್ನು ಸಂಘಟಿಸಲಾಗುವದು. ಕಸಾಪ ಈಗ ಬಣ ರಾಜಕೀಯವಾಗಿದ್ದು, ಅದನ್ನು ಮೀರಿ ಈ ಬಾರಿ ಚುನಾವಣೆ ನಡೆಯಲಿದೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಸಾಪ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಮಾದರಿ ಮಾಡುವ ಕನಸಿಗೆ ಸದಸ್ಯರು ಅವಕಾಶ ಮಾಡಿಕೊಡುವ ಭರವಸೆ ಇದ್ದು ಗೆಲುವು ನಿಶ್ಚಿತ ಎಂದರು.
    ಅಭ್ಯರ್ಥಿ ಜಿ. ಎಸ್. ಗೋನಾಳ ಮಾತನಾಡಿ, ಎಲ್ಲಾ ಜಾತಿ ಜನಾಂಗದವರು, ಪ್ರಗತಿಪರರು ತಮ್ಮನ್ನು ಬೆಂಬಲಿಸಿ ಮಾತನಾಡಿದ್ದಾರೆ, ಸಾಧ್ಯವಾದಷ್ಟು ಸದಸ್ಯರನ್ನು ನೇರವಾಗಿ ಕಂಡು ಮತಯಾಚಿಸುವೆ, ಆದರೂ ಎಲ್ಲರನ್ನು ಮುಟ್ಟಲು ಆಗುವದಿಲ್ಲ ಆಗ ನಮ್ಮ ಪರವಾಗಿ ನಿಂತಿರುವ ಸರ್ವರ ಬೆಂಬಲದಿಂದ
ಆಯ್ಕೆಯಾಗುವ ಭರವಸೆ ಸಂಪೂರ್ಣವಾಗಿ ಇದೆ, ನಿಜವಾದ ಸೇವೆ ಮಾಡಲು ಒಂದು ಅವಕಾಶ ಮಾಡಿಕೊಡಿ ಎಂದರು.
ಕನ್ನಡಪರ ಹೋರಾಟಗಾರ ಶಿವಾನಂದ ಹೊದ್ಲೂರ ಮಾತನಾಡಿ, ನಾಡುನುಡಿ ಸೇವೆ ಮಾಡುತ್ತಿರುವ ಗೋನಾಳರಿಗೆ ನಮ್ಮ ಪೂರ್ಣ ಬೆಂಬಲವಿದೆ, ಜಿಲ್ಲೆಯ ಎಲ್ಲಾ ಭಾಗದ ಸಾಹಿತ್ಯ ಪರಿಷತ್ ಸದಸ್ಯರು ಬೆಂಬಲಿಸುತ್ತಿದ್ದಾರೆ ಎಂದರು. ಹೆಚ್.ಎಸ್.ಹರೀಶ್, ನಿಂಗಪ್ಪ ದೊಡ್ಡಮನಿ, ಹನುಮಂತ ಹಳ್ಳಿಕೇರಿ, ಮೈಲೈಕ್ ಜಿಲಾನ್ ಕಿಲ್ಲೇದಾರ, ಪ್ರಕಾಶಗೌಡ ಪಾಟೀಲ, ಪೀರಸಾಭ್ ಬೆಳಗಟ್ಟಿ ಮುಂತಾದವರು ಇದ್ದರು.
೯ ಕೇಂದ್ರಗಳಲ್ಲಿ ಜಿಲ್ಲೆಯ ಮತದಾನ ನಡೆಯಲಿದ್ದು, ೨೫ರಂದು ಮತ್ತೊಮ್ಮೆ ನಾಮಪತ್ರವನ್ನು ಹಿರಿಯರ ನೇತೃತ್ವದಲ್ಲಿ ಸಲ್ಲಿಸಿ ಪೂರ್ಣ ಪ್ರಮಾಣದ ಪ್ರಚಾರ ಕಾರ್ಯ ಆರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜೋಡಪ್ಪ ಯತ್ನಟ್ಟಿ ಸ್ವಾಗತಿಸಿದರು, ಮಂಜುನಾಥ ಜಿ. ಗೊಂಡಬಾಳ ನಿರೂಪಿಸಿದರು, ಪತ್ರಕರ್ತ ಸಾಧಿಕ ಅಲಿ ವಂದಿಸಿದರು.

Please follow and like us:
error