ಎಂಇಎಸ್‌ನಿಂದ ಬೆಳಗಾವಿ ಮೇಯರ್, ಉಪಮೇಯರ್ ಅಮಾನತು

ಕನ್ನಡ ಬಳಕೆ: 
ಬೆಳಗಾವಿ, ಡಿ.15: ಕರ್ನಾಟಕ ಸರಕಾರ ನೀಡಿದ್ದ ನೋಟಿಸ್‌ಗೆ ಕನ್ನಡದಲ್ಲಿ ಉತ್ತರಿಸದರೆಂಬ ಕಾರಣಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್‌ರನ್ನು ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ)ಯಿಂದ ಉಚ್ಚಾಟಿಸಲಾಗಿದೆ ಎಂದು ಎಂಇಎಸ್ ಮುಖಂಡ ಟಿ.ಕೆ.ಪಾಟೀಲ್ ತಿಳಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮಂದಾ ಬಾಳೇಕುಂದ್ರಿ ಹಾಗೂ ಉಪಮೇಯರ್ ರೇಣು ಕಿಲ್ಲೇಕರ್ ಕನ್ನಡ ರಾಜ್ಯೋತ್ಸವದಂದು ಕನ್ನಡ ವಿರೋಧಿ ಧೋರಣೆ ತಳೆದಿದ್ದರಲ್ಲದೇ, ಅಂದು ಕರಾಳ ದಿನವನ್ನು ಆಚರಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಈ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯನ್ನು ಯಾಕೆ ಸೂಪರ್ ಸೀಡ್ ಮಾಡಬಾರದು ಎಂದು ಪ್ರಶ್ನಿಸಿ ಸರಕಾರ ಮೇಯರ್‌ಗೆ ನೋಟಿಸ್ ಜಾರಿ ಮಾಡಿತ್ತು. ಬಳಿಕ ಉಲ್ಟಾ ಹೊಡೆದ ಮೇಯರ್, ‘‘ನಾವು ಒಳ್ಳೆಯ ಕೆಲಸ ಮಾಡಿದ್ದೇವೆ. ನಮ್ಮ ಅಧಿಕಾರ ಕಿತ್ತುಕೊಳ್ಳಬೇಡಿ. ಐದು ವರ್ಷಗಳವರೆಗೆ ಜನಸೇವೆ ಮಾಡುವಂಥ ಅವಕಾಶ ತಪ್ಪಿಸಬೇಡಿ’’ ಎಂದು ಸರಕಾರ ನೀಡಿದ ನೋಟಿಸ್‌ಗೆ 4ಪುಟಗಳ ಉತ್ತರವನ್ನು ಕನ್ನಡದಲ್ಲಿ ಬರೆದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ರವಾನಿಸಿದ್ದರು.
ಇದೀಗ ಎಂಇಎಸ್‌ಗೆ ಅಸಮಾಧಾನ ತಂದಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಇಎಸ್ ಮುಖಂಡ ಟಿ.ಕೆ.ಪಾಟೀಲ್, ಮೇಯರ್ ಮಂದಾ ಬಾಳೇಕುಂದ್ರಿ ಸರಕಾರದ ನೋಟಿಸ್‌ಗೆ ಕನ್ನಡದಲ್ಲಿ ಉತ್ತರ ನೀಡಿ, ಮಾಧ್ಯಮಗಳಿಗೆ ಇಂಗ್ಲಿಷ್ ಪ್ರತಿ ನೀಡುವ ಮೂಲಕ ದ್ವಂದ್ವ ನಿಲುವು ತಳೆದಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೇಯರ್ ಬಾಳೇಕುಂದ್ರಿ ಕನ್ನಡದಲ್ಲಿ ಉತ್ತರ ನೀಡಿರುವುದು ತುಂಬಾ ನೋವು ತಂದಿದೆ. ಹಾಗಾಗಿ ಮೇಯರ್ ಮಂದಾ ಬಾಳೇಕುಂದ್ರಿ ಮತ್ತು ಉಪ ಮೇಯರ್ ರೇಣು ಕಿಲ್ಲೇಕರ್‌ರನ್ನು ಎಂಇಎಸ್‌ನಿಂದ ಉಚ್ಚಾಟಿಸಿದ್ದೇವೆ ಎಂದು ತಿಳಿಸಿದ್ದಾರೆ.
Please follow and like us:
error