You are here
Home > Koppal News > ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ದ್ರೋಹ’ ಶಾಸಕ ಶ್ರೀರಾಮುಲು

ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ದ್ರೋಹ’ ಶಾಸಕ ಶ್ರೀರಾಮುಲು

ಯಲಬುರ್ಗಾ: ಸರ್ಕಾರವಾಗಲಿ, ವಿರೋಧ ಪಕ್ಷದವರಾಗಲಿ ಉ. ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ. ಈಚೆಗೆ ತಾವು `ಉತ್ತರಕ್ಕಾಗಿ ಉಪವಾಸ` ಕೈಗೊಂಡ್ದ್ದಿದಾಗ ಸೌಜನ್ಯಕ್ಕಾದರೂ ಬಿಜೆಪಿ ಸರ್ಕಾರ ಸ್ಪಂದಿಸದೆ ಈ ಭಾಗದ ಜನತೆಗೆ ದ್ರೋಹ ಮಾಡಿದೆ ಎಂದು ಶಾಸಕ ಶ್ರೀರಾಮುಲು ಟೀಕಿಸಿದರು.
ತಾಲ್ಲೂಕಿನ ವಣಗೇರಿ ಗ್ರಾಮದ ಬೆಲ್ಲದ್ ಅಸೋಸಿಯೇಟ್ ಭಾನುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಯಲಬುರ್ಗಾ ಅತ್ಯಂತ ಹಿಂದುಳಿದ ತಾಲ್ಲೂಕು ಹಾಗೂ ಬರ ಪೀಡಿತ ಪ್ರದೇಶ ಎಂದು ಗೊತ್ತಿದ್ದರೂ ಸರ್ಕಾರ ಬರ ನಿರ್ವಹಣೆಗೆ ಮುಂದಾಗಿಲ್ಲ` ಎಂದರು.
`ಗುಳೆ ಹೋಗುತ್ತಿರುವುದು, ಕುಡಿಯುವ ನೀರಿನ ಕೊರತೆ ಹಾಗೂ ಇತರ ಸಮಸ್ಯೆಗಳಿಂದ ಜನತೆ ತತ್ತರಿಸುತ್ತಿದ್ದರೂ ಸರ್ಕಾರ ಮಾತ್ರ ಕಣ್ಮುಚ್ಚಿದೆ. ಮುಂದಿನ ದಿನಗಳಲ್ಲಿ ಜನತೆ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು` ಎಂದು ಹೇಳಿದರು.
ಸಾಮೂಹಿಕ ವಿವಾಹ ಕಾರ್ಯ ಸಾಮಾಜಿಕ ಪರಿವರ್ತನೆಯ ಒಂದು ಹಂತ. ಆಗಾಗ ಆಯೋಜನೆಗೊಳ್ಳುವ ಇಂತಹ ವಿವಾಹಗಳಿಂದ ಜನರಲ್ಲಿ ಜಾಗೃತಿ ಉಂಟಾಗುತ್ತದೆ. ಹೊಂದಾಣಿಕೆ ಜೀವನ, ಮಿತ ಸಂತಾನಕ್ಕೆ ಆದ್ಯತೆ, ಮಕ್ಕಳಿಗೆ ಶಿಕ್ಷಣ ಹೀಗೆ ಅನೇಕ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಒಳ್ಳೆಯ ಸಂಸಾರ ನಡೆಸಬೇಕು ಎಂದು ಅವರು ಸಲಹೆ ನೀಡಿದರು. 
ಕಾರ್ಯಕ್ರಮದಲ್ಲಿ 131ಜೋಡಿ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ,  ಶ್ರೀಪಾದಪ್ಪ ಮಾತನಾಡಿದರು. ಗಣ್ಯರಾದ ಅಮೃತಪ್ಪ ದೇಸಾಯಿ, ನವೀನ ಗುಳಗಣ್ಣವರ, ರಾಮಣ್ಣ ಮಾಡ್ಲಗೇರಿ, ಅಮರಗುಂಡಪ್ಪ ಮೇಟಿ, ಅಮರೇಗೌಡ ಬಯ್ಯಾಪೂರ ಹಾಗೂ ಅನೇಕರು ಹಾಜರಿದ್ದರು. 
ಯುನಿಸೆಫ್‌ನ ಕಲ್ಲಪ್ಪ ತಳವಾರ, ಹಾಗೂ ಸಿಡಿಪಿಒ ಎಸ್.ಟಿ. ಚಿತಾಳೆ ಭೇಟಿ ನೀಡಿ ಮಧುಮಕ್ಕಳ ವಯಸ್ಸು ಹಾಗೂ ದಾಖಲೆಗಳನ್ನು ಪರಿಶೀಲಿಸಿದರು  ಪ್ರಜಾವಾಣಿ ವಾರ್ತೆ

Leave a Reply

Top