ಟೋಪಿವಾಲಾ ಚಿತ್ರ ವಿಮರ್ಶೆ

ಕಪ್ಪುಹಣದ ಕಳ್ಳರ ಕತೆ : ಉಪ್ಪಿದಾದಾ ಔರ್ ಚಾಲೀಸ್ ಚೋರ್
    ಸೂಪರ್ ಸಿನಿಮಾ ನಂತರ ರಿಯಲ್ ಸ್ಟಾರ್ ಉಪೇಂದ್ರ ಕಥೆ ಹೆಣೆದ ಸಿನಿಮಾ ಟೋಪಿವಾಲಾ. ಮೊದಲರ್ಧ ರಂಗಾಯಣ ರಘು ಹಾಗೂ ಉಪೇಂದ್ರ ಆವರ ಕಾಮಿಡಿ ಟ್ರ್ಯಾಕ್‌ನಲ್ಲಿ ಸಾಗುತ್ತದೆ. ಉಳಿದರ್ಧ ಕತೆಯಲ್ಲಿ ಗಂಭೀರತೆ ಕಾಣದಿದ್ದರೂ ನೋಡಿಸಿಕೊಂಡು ಹೋಗುವ ಉಪ್ಪಿ ಕ್ವಾಲಿಟಿ ಉಳಿಸಿಕೊಂಡಿದೆ.
    ಬಸಾಕ್ ಖದೀಮರ ಕುಟುಂಬದ ಕುಡಿ. ಪಕ್ಕಾ ಕಿಲಾಡಿ. ಗೊತ್ತಿರದ ವಿದ್ಯೆಗಳೇ ಇಲ್ಲ ಎನ್ನುವಷ್ಟು ಖತರ್‌ನಾಕ್ ಕಳ್ಳ. ಸಿನಿಮಾದ ಆರ್ಧ ಭಾಗ ಮೈಂಡ್ ಗೇಮ್‌ನಲ್ಲಿ ಮುಗಿದು ಹೋಗುತ್ತದೆ. ಮೈಂಡ್ ಗೇಮ್‌ಗೆ ಕಾಮಿಡಿ ಟಚ್ ನೀಡಿರುವುದರಿಂದ ರಂಗಾಯಣ ರಘು ಫುಲ್ ಮಿಂಚಿಂಗ್. ಮೊದಲ ದೃಶ್ಯವೇ ಡಿಫರೆಂಟ್ ಆಗಿ ಮೂಡಿಬಂದಿದ್ದು ಪ್ರೇಕ್ಷಕರು, “ಇದೇನಪಾ ಪೊಲೀಸರು ಕಳ್ಳರನ್ನ ಚೇಸ್ ಮಾಡುವುದನ್ನ ನೋಡಿದೀವಿ. ಅದರೆ ಇಲ್ಲಿ ಕಳ್ಳರೇ ಪೋಲೀಸರನ್ನ ಚೇಸ್ ಮಾಡ್ತಿದಾರೆ” ಆನ್ಸುತ್ತೆ. ಹುಡುಗಿಯರನ್ನ ಪೋಲಿಗಳು ಚುಡಾಯಿಸುವುದು ಗೊತ್ತು. ಆದರೆ ಟೋಪಿವಾಲಾದಲ್ಲಿ ಪೋಲೀಸರೇ ಪೋಲಿಗಳಾಗುತ್ತಾರೆ. ಚಿತ್ರದ ಮೊದಲ ಹತ್ತು ನಿಮಿಷ ಇಂಥ ಸನ್ನಿವೇಶಗಳಲ್ಲೇ ಕಳೆದು ಹೋಗುತ್ತದೆ. ಪೋಲೀಸ್ ವೇಷದ ಕಳ್ಳರ, ಕಳ್ಳರ ವೇಷದ ಪೊಲೀಸರ ಗುಟ್ಟು ಬಯಲಾಗುತ್ತಿದ್ದಂತೆ ಥೇಟ್ ಕಾಮಿಡಿ ಸಿನಿಮಾ ದಾರಿಗೆ ಬರುತ್ತೆ ಕಥೆಯ ಟ್ರ್ಯಾಕ್. 
     ಪ್ರಮುಖ ರಾಜಕಾರಣಿಯೊಬ್ಬರು “ಕೃಷ್ಣ”ನ ಭಕ್ತರು. ಸ್ವಿಸ್ ಬ್ಯಾಂಕ್‌ನಲ್ಲಿ ಇಟ್ಟಿರುವ ಕಪ್ಪುಹಣದ ಕೋಡ್ ವರ್ಡ್ ಗೊತ್ತಿರುವ ರಾಜಕಾರಣಿ ಭಿಕ್ಷುಕನೊಬ್ಬನಿಗೆ ಕೋಡ್ ಹೇಳಿ ಸಾಯುತ್ತಾನೆ. ಇಲ್ಲಿಂದ ಕಥೆ ತೆರೆಯುತ್ತಾ ಹೋಗುತ್ತೆ. ರಾಜಕಾರಣಿಯ ಮಗ ಕೋಡ್ ವರ್ಡ ತಿಳಿದುಕೊಳ್ಳಲು ಭಿಕ್ಷುಕನಿಗೆ ರಾಜ ಮರ್ಯಾದೆ ಕೊಡುತ್ತಲೆ ಗುಪ್ತ ಸಂಕೇತ ಬಾಯಿ ಬಿಡಿಸಲು ಪಡುವ ಪಾಡೇ ಸಿನಿಮಾದ ಕತೆ. 
     ರಾಜ್ಯದ ರಾಜಕಾರಣಿಗಳು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿರುವ ಕಪ್ಪು ಹಣವನ್ನು ಲೆಕ್ಕ ಮಾಡಲಾಗದು. ೧ ರ ಮುಂದೆ ಸುಮಾರು ೫೦ ಸೊನ್ನೆ ಸೇರಿಸಿದರೆ ಆಗುವಷ್ಟು ಭಾರತದ ಹಣ ಸ್ವಿಸ್ ಬ್ಯಾಂಕಿನಲ್ಲಿದೆ ಎಂಬುದನ್ನು ಉಪ್ಪಿ ಹೇಳಿದ್ದಾರೆ. ಅ ಹಣ ಭಾರತದಲ್ಲಿ ಇದ್ದಿದ್ದರೆ ಎಂಬುದನ್ನು ಟೈಟಲ್ ಕಾರ್ಡ್ ತೋರಿಸುವದರ ಜೊತೆಗೆ ಕನ್ನಡ ಸಿನಿಮಾಗಳು ಯಾವ ರೇಂಜ್‌ಗೆ ಇರುತ್ತಿದ್ದವು ಎಂಬುದನ್ನು ಕರಾಟೆ ಕಿಂಗ್ ಶಂಕರ್‌ನಾಗ್ ಧ್ವನಿ ಹೇಳುತ್ತಾ ಹೋಗುತ್ತದೆ.
      ಶೋಲೆ ಸಿನಿಮಾದ ಗಬ್ಬರ್‌ಸಿಂಗ್‌ನ ಸರ್ಕಾರದ ಪ್ರತಿಕೃತಿಯಾಗಿ ರವಿಶಂಕರ ಕೂಡಾ ಈ ಸಿನಿಮಾದಲ್ಲಿ ಕಾಮಿಡಿ ಮಾಡಿರುವುದು ವಿಶೇಷ. ನಟ ಬಿರಾದಾರ್‌ಗೆ ಟೋಪಿವಾಲಾದಲ್ಲಿ ಫುಲ್ ಸ್ಕೋಪ್. ಉಪೇಂದ್ರರಷ್ಟೇ ಮಿಂಚಿರುವುದು ರಂಗಾಯಣ ರಘು. ಕೈ ಕಳೆದುಕೊಂಡ ಲೋಕಾಯುಕ್ತನಾಗಿ ಅಚ್ಯುತ್‌ರಾವ್ ಮೆಚ್ಚುಗೆ ಗಳಿಸುತ್ತಾರೆ. ನಾಯಕಿ ಭಾವನಾ ಯಾಕೆ ಸರಕಾರ ಗುಂಪು ಸೇರಿದ್ದಳು. ಅಕೆಯ ಹಿನ್ನೆಲೆ ಏನು ಎಂಬುದನ್ನು ಸೇರಿಸಿದ್ದರೆ ನಾಯಕಿಯ ಪಾತ್ರಕ್ಕೆ ತೂಕ ಇರುತ್ತಿತ್ತು. ಭಾವನಾ ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಕನ್ವರ್‌ಲಾಲ್ ಪಾತ್ರಧಾರಿ ಗಮನ ಸೆಳೆಯುತ್ತಾರೆ. 
      ಚಿತ್ರದ ಅಲ್ಲಲ್ಲಿ ಉಪೇಂದ್ರ ತಮ್ಮ ಹಳೇಯ ಸಿನಿಮಾದ ಡೈಲಾಗ್‌ಗಳನ್ನು ರಿಪೀಟ್ ಮಾಡಿದ್ದಾರೆ. ಸ್ವಯಂ ಹೊಗಳಿಕೆಯ ಮೂಲಕ ವಿಜೃಂಭಿಸಲು ಹೋಗಿರುವ ಉಪೇಂದ್ರ ತಮ್ಮ ಅಭಿಮಾನಿಗಳಿಗೆ ಬಿಟ್ಟರೆ ಉಳಿದ ಪ್ರೇಕ್ಷಕರಿಗೆ ಸ್ವಲ್ಪ ಓವರ್ ಆಯ್ತು ಆನ್ಸಲ್ವಾ ಎಂದು ಪ್ರಶ್ನಿಸಬೇಕು ಎನ್ನುವ ಹಾಗೆ ಕಾಣುತ್ತಾರೆ. 
      ಗುಲ್ಜಾರ್‌ಖಾನ್ ಸಿನಿಮಾಗೆ ಸಲ್ಮಾನ್‌ಖಾನ್ ರೇಟ್ ಕೇಳಿದ್ರೆ ಹೇಂಗೆ, ಮುತ್ತಿನಂಥ ಹೆಂಡತಿ ಸಿನಿಮಾದ ಮಾಲಾಶ್ರೀ ಅಗ್ತಿಯಾ ಅನ್ಕೋಂಡ್ರೆ ದುರ್ಗಿ, ಚಾಮುಂಡಿ ಸಿನಿಮಾದ ಮಾಲಾಶ್ರೀ ಆಗಿಬಿಟ್ಯಲ್ಲ, ಅಣ್ಣಾವ್ರ ಪಿಕ್ಚರ್‌ನ್ನ ಐಶ್ವರ್ಯ ರ` ಜೊತೆ ನೋಡದಂಗಾಯ್ತು ಎನ್ನುವ ಡೈಲಾಗ್‌ಗಳು ಕಚಗುಳಿ ಇಡುತ್ತವೆ. ಅಲ್ಲಲ್ಲಿ ಕಾಶಿನಾಥ ಸಿನಿಮಾ ಥರಾ ಡಬ್ಬಲ್ ಮೀನಿಂಗ್ ಡೈಲಾಗ್‌ಗಳು ಕಿವಿಗೆ ಬೀಳುತ್ತವೆ. ನಿರ್ದೇಶನದ ಜೊತೆಗೆ ಸಂಭಾಷಣೆ ಬರೆದಿರುವ ಶ್ರೀನಿ ಲೇಖನಿ ಇನ್ನೊಂಚೂರು ಹರಿತವಾಗಬೇಕಿತ್ತು. ನಿರ್ದೇಶನ ಪರವಾಗಿಲ್ಲ. ಹರಿಕೃಷ್ಣ ಬತ್ತಳಿಕೆಯಿಂದ ಬಂದಿರುವ ನಾಲ್ಕು ಹಾಡುಗಳಲ್ಲಿ ಸೂಪರ್ ಸಿನಿಮಾದ ರಿಪೀಟ್ ಹಾಡು ನೋಡುವಂತೆಯೂ ಕೇಳುವಂತೆಯೂ ಇದ್ದರೆ ಇನ್ನೆರಡು ಹಾಡುಗಳು ನೋಡುವಂತೆ ಇವೆ. ಶ್ರೀಶ ಕೂಡುವಳ್ಳಿ ಕ್ಯಾಮರಾ ವರ್ಕ್ ಓಕೆ.   
      ಸ್ವಿಸ್ ಬ್ಯಾಂಕಿನಲ್ಲಿನ ಹಣ ಪಡೆಯಲು ತನಗೆ ಗೊತ್ತಿದ್ದ ಕೋಡ್ ವರ್ಡ್‌ನ್ನು ಭಿಕ್ಷುಕ ಯಾರಿಗೆ ಹೇಳುತ್ತಾನೆ. ಆ ಹಣ ಯಾರ ಪಾಲಾಗುತ್ತೆ. ಈ ಟೋಪಿವಾಲಾ ಯಾರು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಥೇಟರ್‌ಗೆ ಹೋಗಿ ಬನ್ನಿ. ಇಲ್ಲದಿದ್ದರೆ ನಿಮಗೆ ತಲೆ ಇಲ್ಲ ಎಂದು ಉಪೇಂದ್ರ ಹೇಳಿದ್ದಾರೆ.
-ಚಿತ್ರಪ್ರಿಯ ಸಂಭ್ರಮ್. 
Please follow and like us:
error