ಅಕ್ಕಿ ಗಿರಣಿ ಬಂದ್ : ಸರಕಾರ ಮತ್ತು ಮಾಲೀಕರ ಹಠಮಾರಿ ಧೋರಣೆಗೆ ಖಂಡನೆ

ದಿ  ೧೬-೧೨-೨೦೧೩ ರಂದು ಅಕ್ಕಿ ಗಿರಣಿಗಳು ಸ್ಥಗಿತಗೊಳಿಸಲು ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘ ನಿರ್ಧರಿಸಿರುವುದು ಮತ್ತು ಲೇವಿ ವಸೂಲಿಗಾಗಿ ಸರಕಾರಿ ಹಠಮಾರಿ ಧೋರಣೆಯಿಂದ ಲಕ್ಷಾಂತರ ಅಕ್ಕಿ ಗಿರಣಿ ಕಾರ್ಮಿಕರು ಬೀದಿ ಪಾಲಾಗುತ್ತಾರೆಂದು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರಿಯ ಸಮಿತಿಯ ರಾಜ್ಯಾಧ್ಯಕ್ಷರು ಭಾರದ್ವಾಜ   ತಿಳಿಸಿದ್ದಾರೆ.
ಕಳೆದ ಮೂರು (೩) ತಿಂಗಳಿನಿಂದ ಲೇವಿ ಸಂಬಂಧ ಅಕ್ಕಿ ಗಿರಣಿ ಮಾಲೀಕರು ಮತ್ತು ಸರ್ಕಾರ ಅನೇಕ ಬಾರಿ ಸಂಧಾನ ಸಭೆ ನಡೆಸಿದರೂ ರಾಜೀಮಾಡಿಕೊಳ್ಳದಿರುವುದು ಇವರು ಕಾರ್ಮಿಕರಿಗೆ ಬರೆದ ಮರಣ ಶಾಸನವೆಂದಿದ್ದಾರೆ. ಅಕ್ಕಿ ಗಿರಣಿಗಳು ವರ್ಷಕ್ಕೆ ಆರು (೬) ತಿಂಗಳು ನಡೆದರೆ ಇನ್ನುಳಿದ ದಿನಗಳಲ್ಲಿ ಕಾರ್ಮಿಕರು ಗಿರಣಿಗಳನ್ನು ಕಾಯುತ್ತಾ ಕುಳಿತಿರುತ್ತಾರೆ.  ಅಕ್ಕಿ ಗಿರಣಿಗಳಲ್ಲಿ ಕಾರ್ಮಿಕರಿಗೆ ಹಾಜರಿ ಪುಸ್ತಕ, ವೇತನ ಪುಸ್ತಕ ಮತ್ತು ಉದ್ಯೋಗ ಭದ್ರತೆ ಇಲ್ಲದೇ ಶೋಷಣೆ ಮಾಡುತ್ತಿದ್ದಾರೆ. ಇದರ ಬಗ್ಗೆ ಯಾವುದೇ ಕ್ರಮ ಜರುಗಿಸದ ಸರಕಾರ ಮತ್ತು ಮಾಲೀಕ ವರ್ಗ ಈಗ ಲೇವಿ ನೆಪದಲ್ಲಿ ಅವರನ್ನು ಬೀದಿ ಪಾಲು ಮಾಡುತ್ತಿರುವುದು ಅಮಾನವೀಯ ಎಂದಿದ್ದಾರೆ. 
ಸರಕಾರ ಕೂಡಲೇ ಲೇವಿ ಬಗ್ಗೆ ಪರಿಹಾರ ಹುಡುಕಿ ಅಕ್ಕಿ ಗಿರಣಿಗಳು ಕೆಲಸ ಪ್ರಾರಂಭ ಮಾಡುವಂತೆ ಮಾಡಬೇಕು. ಅಕ್ಕಿ ಗಿರಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಆದರೆ ಇವರಿಗೆ ಯಾರೂ ಕಾರ್ಮಿಕ ಗುತ್ತಿಗೆದಾರರು ಇರುವುದಿಲ್ಲ. ದುಡಿದರೇ ಮಾತ್ರ ಕೂಲಿ, ಇಲ್ಲದಿದ್ದರೆ ಇಲ್ಲ.  ಅಸಂಘಟಿತ ಕಾರ್ಮಿಕರು ಹೆಚ್ಚಿರುವ ಅಕ್ಕಿ ಗಿರಣಿ ಕಾರ್ಮಿಕರ ರಕ್ಷಣೆಗೆ ಸರಕಾರ ಮುಂದಾಗಬೇಕು. ಲೇವಿ ಗೊಂದಲ ಬಗೆಹರಿಯುವವರೆಗೆ ಅಸಂಘಟಿತ ಕಾರ್ಮಿಕರಿಗೆ ಸರಕಾರವೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದ ಎ.ಐ.ಸಿ.ಸಿ.ಟಿ.ಯು. ರಾಜ್ಯಾಧ್ಯಕ್ಷ ಶೀಘ್ರವೇ ಬಿಕ್ಕಟ್ಟು ಪರಿಹಾರವಾಗದಿದ್ದಲ್ಲಿ ಅಕ್ಕಿ ಗಿರಣಿ ಕಾರ್ಮಿಕರು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಿದ್ದಾರೆಂದು ಸರಕಾರವನ್ನು ಮತ್ತು ಮಾಲೀಕರನ್ನು ಎಚ್ಚರಿಸಿದ್ದಾರೆ. 

Leave a Reply