ಹೆಚ್‌ಐವಿ ಪಾಸಿಟೀವ್ ಸುಳ್ಳು ವರದಿ : ಪರಿಹಾರ ನೀಡಲು ಗ್ರಾಹಕರ ವೇದಿಕೆ ಆದೇಶ

ರಕ್ತ ಪರೀಕ್ಷಾ ವರದಿಯಲ್ಲಿ ಹೆಚ್‌ಐವಿ ಪಾಸಿಟೀವ್ ಎಂದು ಸುಳ್ಳು ವರದಿ ನೀಡಿದ್ದಕ್ಕಾಗಿ ಗಂಗಾವತಿಯ ವಿಕಾಸ ಡಯಾಗ್ನೋಸ್ಟಿಕ್ ಸೆಂಟರ್ ಅವರು ೫೦೦೦ ರೂ. ಗಳ ಪರಿಹಾರವನ್ನು ದೂರುದಾರರಿಗೆ ನೀಡುವಂತೆ ಕೊಪ್ಪಳ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.

  ಗಂಗಾವತಿಯ ಮೌನೇಶ್ ಎಂಬುವವರು ಅದೇ ನಗರದ ವಿಕಾಸ ಡಯಾಗ್ನೋಸ್ಟಿಕ್ ಸೆಂಟರ್‌ನ ವಿಶ್ವನಾಥ ಅವರಲ್ಲಿಗೆ ತೆರಳಿ ಕಳೆದ ಮಾ. ೧೧ ರಂದು ರಕ್ತ ಪರೀಕ್ಷೆ ಮಾಡಿಸಿದಾಗ, ಹೆಚ್‌ಐವಿ ಪಾಸಿಟೀವ್ ಎಂದು ವಿಶ್ವನಾಥ ಅವರು ಮೌನೇಶ್‌ಗೆ ವರದಿ ನೀಡಿದರು.  ಈ ಕುರಿತು ಅನುಮಾನ ಬಂದ ಮೌನೇಶ್ ಮಾ. ೧೩ ರಂದು ಗಂಗಾವತಿ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಕೇಂದ್ರದಲ್ಲಿ ಮತ್ತೊಮ್ಮೆ ರಕ್ತ ಪರೀಕ್ಷೆ ಮಾಡಿಸಿದಾಗ, ಹೆಚ್‌ಐವಿ ನೆಗೆಟೀವ್ ಎಂಬುದಾಗಿ ವರದಿ ಬಂದಿದೆ.  ಅಲ್ಲದೆ ಗಂಗಾವತಿಯ ಚಂದ್ರಶೇಖರ ಸ್ವಾಮಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿಯೂ ರಕ್ತ ಪರೀಕ್ಷೆ ಮಾಡಿಸಿದ್ದು, ಅಲ್ಲಿಯೂ ನೆಗೆಟೀವ್ ಎಂದೇ ವರದಿ ಬಂದಿದೆ.  ವಿಕಾಸ ಡಯಾಗ್ನೋಸ್ಟಿಕ್ ಸೆಂಟರ್ ಅವರು ಹೆಚ್‌ಐವಿ ಪಾಸಿಟೀವ್ ಎಂಬುದಾಗಿ ಸುಳ್ಳು ವರದಿ ನೀಡಿದ್ದರಿಂದ ತನ್ನ ಮರ್ಯಾದೆ ಮತ್ತು ಘನತೆಗೆ ಧಕ್ಕೆ ಉಂಟಾಗಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದರು.  ಆದರೆ ಈ ಇಲಾಖೆಗಳಿಂದ ಯಾವುದೇ ಕ್ರಮ ಆಗದ ಹಿನ್ನೆಲೆಯಲ್ಲಿ, ಸುಳ್ಳು ವರದಿ ನೀಡಿದ್ದು ಸೇವಾ ನ್ಯೂನತೆ ಎಂದು ಪರಿಗಣಿಸಿ, ೧೮. ೧೦ ಲಕ್ಷ ರೂ.ಗಳ ಪರಿಹಾರ ದೊರಕಿಸುವಂತೆ ಮೌನೇಶ್ ಕೊಪ್ಪಳದ ಗ್ರಾಹಕರ ವೇದಿಕೆಯ ಮೊರೆ ಹೋದರು.
  ಪ್ರಕರಣದ ವಿಚಾರಣೆಗಾಗಿ ಸಮನ್ಸ್ ಪಡೆದು ವೇದಿಕೆಗೆ ಹಾಜರಾದ ವಿಕಾಸ ಡಯಾಗ್ನೋಸ್ಟಿಕ್ ಸೆಂಟರ್ ಪರ ವಕೀಲರು, ಮೌನೇಶ್ ಅವರಿಗೆ ಅದೇ ದಿನದಂದು ಹೆಚ್‌ಐವಿ ನೆಗೆಟೀವ್ ಎಂಬ ವರದಿಯನ್ನು ನೀಡಿದ್ದರೂ, ಅದನ್ನು ಮರೆಮಾಚಿ, ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದಾರೆ ಎಂಬುದಾಗಿ ಆಕ್ಷೇಪಣೆ ಸಲ್ಲಿಸಿದರು.  ವಿಚಾರಣೆ ನಡೆಸಿದ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ, ಪ್ರಭಾರಿ ಸದಸ್ಯ ಆರ್. ಬಂಡಾಚಾರ್ ಅವರು, ಹೆಚ್‌ಐವಿ ನೆಗೆಟೀವ್ ವರದಿಯನ್ನು ದೂರುದಾರರಿಗೆ ನೀಡಿರುವ ಬಗ್ಗೆ ಸಾಬೀತು ಪಡಿಸಲು ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ.  ಸುಳ್ಳು ವರದಿ ನೀಡಿದ್ದನ್ನು ಸೇವಾ ನ್ಯೂನತೆ ಎಂಬುದಾಗಿ ಪರಿಗಣಿಸಿ, ಮೌನೇಶ್ ಅವರಿಗೆ ೫ ಸಾವಿರ ರೂ.ಗಳ ಪರಿಹಾರವನ್ನು ಶೇ. ೧೦ ಬಡ್ಡಿಯೊಂದಿಗೆ ಹಾಗೂ ಪ್ರಕರಣದ ಖರ್ಚು ೩ ಸಾವಿರ ರೂ.ಗಳನ್ನು ೨೦೧೫ ರ ಫೆ. ೨೮ ರ ಒಳಗಾಗಿ ವಿಕಾಸ ಡಯಾಗ್ನೋಸ್ಟಿಕ್ ಸೆಂಟರ್ ಅವರು ಪಾವತಿಸಬೇಕು ಎಂಬುದಾಗಿ ಕೊಪ್ಪಳ ಗ್ರಾಹಕರ ವೇದಿಕೆ ಆದೇಶ ನೀಡಿದೆ.

Leave a Reply