ಫೆ. ೨೩, ೨೪ ರಂದು ಅದ್ಧೂರಿ ಕನಕಗಿರಿ ಉತ್ಸವ : ದರ್ಶನ್, ಸುದೀಪ್ ಭಾಗಿ – ಶಿವರಾಜ್ ತಂಗಡಗಿ

ಐತಿಹಾಸಿಕ ವಿಜಯನಗರ ಸಾಮ್ರಾಜ್ಯ ವೈಭವವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಕನಕಗಿರಿ ಉತ್ಸವವನ್ನು ಇದೇ ಪೆ. ೨೩, ೨೪ ರಂದು ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುವುದು.  ಕನ್ನಡ ಚಿತ್ರರಂಗದ ದರ್ಶನ್, ಸುದೀಪ್, ಐಂದ್ರಿತಾ ರೈ, ಹರ್ಷಿಕಾ ಪೂಣಚ್ಚ  ಸೇರಿದಂತೆ ಖ್ಯಾತ ನಟ-ನಟಿಯರು ಪಾಲ್ಗೊಂಡು, ಉತ್ಸವವಕ್ಕೆ ಹೆಚ್ಚು ಮೆರಗು ತರಲಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.

  ಕನಕಗಿರಿ ಉತ್ಸವ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕನಕಗಿರಿ ಉತ್ಸವವನ್ನು ಕಳೆದ ವರ್ಷ ಆಚರಿಸಬೇಕಾಗಿತ್ತು.  ಆದರೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಕಾರಣ ಆಚರಿಸಲು ಸಾಧ್ಯವಾಗಲಿಲ್ಲ.  ಈ ಬಾರಿ ಕನಕಗಿರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು.  ಫೆ. ೨೩ ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ.  ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಉಮಾಶ್ರಿ ಅವರು ಈಗಾಗಲೆ ಉತ್ಸವಕ್ಕೆ ಆಗಮಿಸುವುದು ಖಚಿತವಾಗಿದೆ.  ಉಳಿದಂತೆ ಎಲ್ಲ ಸಚಿವರನ್ನೂ ಉತ್ಸವಕ್ಕೆ ಆಹ್ವಾನಿಸಲಾಗುವುದು.  ಕನಕಗಿರಿ ಉತ್ಸವದ ವೇದಿಕೆಗೆ ’ಉಡಚಪ್ಪ ನಾಯಕ ವೇದಿಕೆ’ ಎಂಬುದಾಗಿ ಹೆಸರಿಡಲು ನಿರ್ಧರಿಸಲಾಗಿದೆ.  ಉತ್ಸವವನ್ನು ಜನೋತ್ಸವವನ್ನಾಗಿಸುವ ನಿಟ್ಟಿನಲ್ಲಿ ಕೃಷಿ ಉತ್ಸವ, ಕ್ರೀಡಾಕೂಟಗಳು, ರಂಗೋಲಿ ಸ್ಪರ್ಧೆ, ವಿಜೃಂಭಣೆಯ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆ, ವಸ್ತುಪ್ರದರ್ಶನ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.  ಉತ್ಸವ ಆಚರಣೆಗೆ ಸರ್ಕಾರ ಈಗಾಗಲೆ ೩೦ ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ಇನ್ನೂ ೨೫ ಲಕ್ಷ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಿದೆ.  ಅಲ್ಲದೆ   ಪ್ರವಾಸೋದ್ಯಮ ಇಲಾಖೆ ೨೫ ಲಕ್ಷ ರೂ. ಅನುದಾನ ಒದಗಿಸುವ ನಿರೀಕ್ಷೆ ಇದೆ.  ಉತ್ಸವವನ್ನು ಯಶಸ್ವಿಯಾಗಿ ಆಚರಿಸಲು ಸ್ವಾಗತ ಸಮಿತಿ, ವೇದಿಕೆ, ಸಾಂಸ್ಕೃತಿಕ, ವಸತಿ, ಆರೋಗ್ಯ, ಸಾರಿಗೆ, ಮಾಧ್ಯಮ ಸೇರಿದಂತೆ ಒಟ್ಟು ೧೭ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಕಾಲಾವಕಾಶ ಕಡಿಮೆ ಇರುವುದರಿಂದ ಆಯಾ ಸಮಿತಿಯವರಿಗೆ ವಹಿಸಲಾಗುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸೂಚನೆ ನೀಡಲಾಗಿದೆ.  ಕ್ರೀಡಾಕೂಟಗಳನ್ನು ಉತ್ಸವಕ್ಕೂ ಮುನ್ನಾ ದಿನಗಳಾದ ಫೆ. ೨೧ ಮತ್ತು ೨೨ ರಂದು ಆಯೋಜಿಸುವ ಬಗ್ಗೆ ಯೋಜಿಸಲಾಗಿದೆ.  ಕ್ರೀಡಾಕೂಟದಲ್ಲಿ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾಟಗಳನ್ನು ಹೊನಲು-ಬೆಳಕಿನಲ್ಲಿ ನಡೆಸಲು ಅನುಕೂಲವಾಗುವಂತೆ ಫ್ಲಡ್ ಲೈಟ್ಸ್ ವ್ಯವಸ್ಥೆ ಕೈಗೊಳ್ಳಲಾಗುವುದು.  ವಾಲಿಬಾಲ್, ಕಬಡ್ಡಿ, ಕುಸ್ತಿ ಸ್ಪರ್ಧೆಗಳಿಗೆ ವಿವಿಧ ರಾಜ್ಯಗಳಿಂದ ಉತ್ತಮ ತಂಡಗಳನ್ನು ಕರೆಯಿಸಲಾಗುವುದು.  ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಕೈಗೊಳ್ಳಲಾಗುವುದು.  ಉತ್ಸವಕ್ಕೆ ಖ್ಯಾತ ನಟ-ನಟಿಯರ ಜೊತೆಗೆ ರಾಷ್ಟ್ರ ಮಟ್ಟದ ಉತ್ತಮ ಕಲಾವಿದರನ್ನು ಕರೆಯಿಸಿ, ಒಳ್ಳಯೆ ಸಾಂಸ್ಕೃತಿಕ ಕಾರ್ಯಕ್ರಮ ನೀಡುವುದರ ಜೊತೆಗೆ ಸ್ಥಳೀಯ ಉತ್ತಮ ಕಲಾವಿದರಿಗೂ ಆದ್ಯತೆ ನೀಡಲಾಗುವುದು.  ಉತ್ಸವದ ಅಂಗವಾಗಿ ಕೃಷಿ ಮೇಳ, ತೋಟಗಾರಿಕೆ ಇಲಾಖೆಯಿಂದ ಆಕರ್ಷಕ ಫಲಪುಷ್ಪ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗುವುದು.  ಕನಕಗಿರಿಗೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಂದ, ಅಲ್ಲದೆ ಸುತ್ತಮುತ್ತಲ ಗ್ರಾಮಗಳಿಗೆ ವಿಶೇಷ ಬಸ್ ವ್ಯವಸ್ಥೆ ಕೈಗೊಳ್ಳಲಾಗುವುದು.  ಒಟ್ಟಾರೆಯಾಗಿ ಈ ಬಾರಿಯ ಕನಕಗಿರಿ ಉತ್ಸವ ಜನೋತ್ಸವವಾಗಿ ಎಲ್ಲ ಜನರೂ ಇದರಲ್ಲಿ ಪಾಲ್ಗೊಳ್ಳುವಂತಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
  ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಅಲ್ಲದೆ ಸಾರ್ವಜನಿಕರು ಭಾಗವಹಿಸಿ, ಉತ್ಸವದ ಯಶಸ್ವಿಗೆ ಉಪಯುಕ್ತ ಸಲಹೆ ಸೂಚನೆ ನೀಡಿದರು.
Please follow and like us:
error