fbpx

ನೀರು ಮತ್ತು ನೈರ್ಮಲ್ಯ ಜಾಗೃತಿ ಸಪ್ತಾಹ : ರಾಜ್ಯ ಮಟ್ಟದ ಕಾರ್ಯಕ್ರಮ ಮಾ. ೧೫ ರಂದು ಕೊಪ್ಪಳದಲ್ಲಿ

ಕೊಪ್ಪಳ, ಮಾ.೧೧  : ’ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಜಾಗೃತಿ ಸಪ್ತಾಹ ಆಚರಣೆ ಅಂಗವಾಗಿ ರಾಜ್ಯ ಮಟ್ಟದ ಕಾರ್ಯಕ್ರಮ ಮಾ. ೧೫ ರಂದು ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ಆಯೋಜಿಸಲಾಗಿದ್ದು, ಜಾಗೃತಿ ಸಪ್ತಾಹದ ಯಶಸ್ವಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಜಾಗೃತಿ ಸಪ್ತಾಹ ಆಚರಣೆ ಸಂಬಂಧ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಜಾಗೃತಿ ಸಪ್ತಾಹವನ್ನು  ಮಾ.೧೬ ರಿಂದ ೨೨ ರವರೆಗೆ ರಾಷ್ಟ್ರಾದ್ಯಂತ ಆಚರಿಸಲಾಗುತ್ತಿದೆ.  ಆದರೆ ಮಾ. ೨೧ ಮತ್ತು ೨೨ ರಂದು ಚಂದ್ರಮಾನ ಯುಗಾದಿ ಹಬ್ಬದ ಆಚರಣೆ ಇರುವುದರಿಂದ ಜಾಗೃತಿ ಸಪ್ತಾಹವನ್ನು ಮಾ. ೧೬ ರಿಂದ ೨೪ ರವರೆಗೆ ಆಚರಿಸಲಾಗುವುದು. ಈ ಸಪ್ತಾಹ ಆಚರಣೆಯ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಮಾ. ೧೫ ರಂದು ಕೊಪ್ಪಳ ಜಿಲ್ಲೆಯಲ್ಲಿ ಏರ್ಪಡಿಸಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವರು ಸೇರಿದಂತೆ ಹಲವು ಸಚಿವರು ಪಾಲ್ಗೊಳ್ಳುವ ನಿರೀಕ್ಷೆ ಇದೆ.  ರಾಜ್ಯ ಮಟ್ಟದ ಈ ಕಾರ್ಯಕ್ರಮಕ್ಕೆ ಎಲ್ಲ ಜಿಲ್ಲೆಗಳ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನೆರೆಹೊರೆಯ ಸುಮಾರು ೦೬ ಜಿಲ್ಲೆಗಳ ಜಿಲ್ಲಾ ಪಂಚಾಯತಿಯ ಎಲ್ಲ ಸದಸ್ಯರು ಆಗಮಿಸಲಿದ್ದಾರೆ.  ನೀರು ಮತ್ತು ನೈರ್ಮಲ್ಯ ಜೊತೆಗೆ ಸ್ವಚ್ಛ ಭಾರತ ಅಭಿಯಾನ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಈ ಜಾಗೃತಿ ಸಪ್ತಾಹದ ಉದ್ದೇಶವಾಗಿದೆ. ಸರ್ಕಾರದ ಸೂಚನೆಯಂತೆ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು ಬಳಸುತ್ತಿರುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ, ಕುಡಿಯಲು ಯೋಗ್ಯವಿರುವ ನೀರಿನ ಮೂಲಕ್ಕೆ ಹಸಿರು ಬಣ್ಣದಲ್ಲಿ ಹಾಗೂ ಯೋಗ್ಯವಲ್ಲದ ಅಂದರೆ ಫ್ಲೋರೈಡ್ ಅಥವಾ ಇತರೆ ರಸಾಯನಿಕಯುಕ್ತ ನೀರಿನ ಮೂಲಕ್ಕೆ ಕೆಂಪು ಬಣ್ಣ ಹಚ್ಚಿ, ಗುರುತಿಸುವ ಕಾರ್ಯವನ್ನು ಈ ಸಪ್ತಾಹದ ಒಳಗಾಗಿ ಕೈಗೊಳ್ಳಬೇಕು ಎಂದು ನಗರಸಭೆ, ಪುರಸಭೆಗಳ ಮುಖ್ಯಾಧಿಕಾರಿಗಳು ಹಾಗೂ ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಪಾಲಕ ಅಭಿಯಂತರ ಮನೋಹರ ವಡ್ಡರ್ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು ೬೬೯೧ ನೀರಿನ ಮೂಲವನ್ನು ಗುರುತಿಸಲಾಗಿದ್ದು, ಈ ಪೈಕಿ ೨೩೭ ನೀರಿನ ಮೂಲವನ್ನು ಫ್ಲೋರೈಡ್‌ಯುಕ್ತ ಎಂದು ಗುರುತಿಸಲಾಗಿದೆ.  ಸಪ್ತಾಹ ಸಂದರ್ಭದಲ್ಲಿ ಎಲ್ಲ ನೀರಿನ ಮೂಲದ ಗುಣಮಟ್ಟವನ್ನು ಮತ್ತೊಮ್ಮೆ ಪರಿಶೀಲಿಸಿ ಸರ್ಕಾರದ ಸೂಚನೆಯಂತೆ ಕ್ರಮ ವಹಿಸಲಾಗುವುದು ಎಂದರು.  ನೀರು ಮತ್ತು ನೈರ್ಮಲ್ಯ ಜಾಗೃತಿ ಸಪ್ತಾಹವನ್ನು ಯಶಸ್ವಿಗೊಳಿಸಲು ಎಲ್ಲ ಅಧಿಕಾರಿಗಳು ತಮಗೆ ವಹಿಸಲಾಗುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸೂಚನೆ ನೀಡಿದರು.
  ಜಾಗೃತಿ ಸಪ್ತಾಹದ ರೂಪರೇಷೆ ಕುರಿತು ವಿವರಣೆ ನೀಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು, ನೀರು ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲು ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜು ಮಟ್ಟದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಗುವುದು.  ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರಗಳ ಮೆರವಣಿಗೆ, ತಾಲೂಕು ಮಟ್ಟದಲ್ಲಿ ಮಾಹಿತಿ ಕಾರ್ಯಗಾರ, ಎಲ್ಲ ಜನಪ್ರತಿನಿಧಿಗಳಿಂದ ಮನೆ-ಮನೆಗಳಿಗೆ ಭೇಟಿ ನೀಡಿ ನೀರು, ನೈರ್ಮಲ್ಯದ ಜೊತೆಗೆ ಶೌಚಾಲಯದ ಮಹತ್ವ ಕುರಿತು ಅರಿವು ಮೂಡಿಸುವುದು, ಕಾರ್ಯಕ್ರಮಗಳಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಸ್ವ-ಸಹಾಯ ಸಂಘಗಳ ಸದಸ್ಯರು, ಸ್ವಚ್ಛತಾ ದೂತರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗುವುದು, ಶುದ್ಧ ಹಾಗೂ ಕಲುಷಿತ ನೀರಿನ ಬಗ್ಗೆ ಅರಿವು ಮೂಡಿಸುವುದು, ಸ್ವ-ಸಹಾಯ ಸಂಘಗಳ ಸಮ್ಮೇಳನ ಆಯೋಜಿಸುವುದು, ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಮಾರಂಭಗಳನ್ನು ಆಯೋಜಿಸುವುದು ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.
  ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಮಾತನಾಡಿ, ನೀರು ಮತ್ತು ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಸಪ್ತಾಹ ಸಂದರ್ಭದಲ್ಲಿ ನಗರ, ಪಟ್ಟಣ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿ, ಸಪ್ತಾಹದ ಯಶಸ್ವಿಗೆ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರುಗಳಾದ ವಿಜಯಲಕ್ಷ್ಮಿ ರಾಮಕೃಷ್ಣ, ಜನಾರ್ಧನ ಹುಲಿಗಿ, ಅರವಿಂದಗೌಡ ಪಾಟೀಲ್, ಅನ್ನಪೂರ್ಣ ಕಂದಕೂರಪ್ಪ, ರಾಮಣ್ಣ ಸಾಲಭಾವಿ, ವನಿತಾ ಗಡಾದ, ಪರಸಪ್ಪ ಕತ್ತಿ, ಹನುಮವ್ವ ಚೌಡ್ಕಿ, ಉಮಾ ಮುತ್ತಾಳ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
Please follow and like us:
error

Leave a Reply

error: Content is protected !!