ಬೇಸಿಗೆ ನೀರಿನ ಸಮಸ್ಯೆ ನಿವಾರಣೆಗೆ ಸಹಾಯವಾಣಿ, ಸಂಚಾರಿ ದುರಸ್ತಿ ಘಟಕ ಪ್ರಾರಂಭಿಸಿ- ಶಿವರಾಜ್ ತಂಗಡಗಿ

 : ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ತೊಂದರೆ ನಿವಾರಣೆಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಾರ್ವಜನಿಕರಿಗಾಗಿ ಸಹಾಯವಾಣಿ ಪ್ರಾರಂಭಿಸಬೇಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಕೊಳವೆ ಬಾವಿ ಅಥವಾ ಕೈಪಂಪುಗಳ ದುರಸ್ತಿಗಾಗಿ ಸಂಚಾರಿ ದುರಸ್ತಿ ಘಟಕ ಪ್ರಾರಂಭಿಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಬೇಸಿಗೆ ಕಾಲದಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಿಲ್ಲೆಯ ನಗರ, ಪಟ್ಟಣ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.  ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ.  ಸಮಸ್ಯಾತ್ಮಕ ಗ್ರಾಮಗಳಿಗೆ ಕುಡಿಯುವ ನೀರಿನ ಸಮರ್ಪಕ ಪೂರೈಕೆ ನಿಟ್ಟಿನಲ್ಲಿ ಬೋರ್‌ವೆಲ್, ಹೈಡ್ರಾಫಾಕ್ಚರಿಂಗ್, ಪೈಪ್‌ಲೈನ್ ವಿಸ್ತರಣೆ, ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿದಂತೆ ಯಾವುದೇ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗಾಗಿ ಕಾಯದೆ ಕೂಡಲೆ ಕಾಮಗಾರಿ ಪ್ರಾರಂಭಿಸಬೇಕು.  ಆದರೆ ಕಾಮಗಾರಿ ಅನುಷ್ಠಾನದಲ್ಲಿ ಪಾರದರ್ಶಕತೆ, ಗುಣಮಟ್ಟದ್ದಾಗಿದ್ದು, ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುವಂತಿರಬೇಕು.  ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ತೊಂದರೆಗೆ ಸ್ಪಂದಿಸಲು ಅನುಕೂಲವಾಗುವಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕೂಡಲೆ ಸಹಾಯವಾಣಿ ಪ್ರಾರಂಭಿಸಬೇಕು.  ಸಹಾಯವಾಣಿಗೆ ಬರುವ ಕರೆಗಳಿಗೆ ಸ್ಪಂದಿಸಿ, ಕೂಡಲೆ ಸಮಸ್ಯೆ ಪರಿಹಾರ ಆಗಬೇಕು.  ಗ್ರಾಮೀಣ ಪ್ರದೇಶಗಳಲ್ಲಿನ ಕೊಳವೆ ಬಾವಿ ಅಥವಾ ಕೈಪಂಪುಗಳ ತ್ವರಿತ ದುರಸ್ತಿಗಾಗಿ ಪ್ರತಿ ತಾಲೂಕಿಗೆ ಒಂದರಂತೆ, ಅಗತ್ಯ ಸಲಕರಣೆ, ಸಿಬ್ಬಂದಿ ಸಹಿತ ಸಂಚಾರಿ ದುರಸ್ತಿ ಘಟಕ ವಾಹನ ವ್ಯವಸ್ಥೆ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಇದಕ್ಕಾಗಿ ಬಾಡಿಗೆ ಆಧಾರಿತ ವಾಹನವನ್ನು ಬಳಸಬೇಕು.  ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಿಸುವ ಗ್ರಾಮಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಯೋಜನೆಗಳತ್ತ ಆದ್ಯತೆ ನೀಡಬೇಕು.  ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಇದ್ದಲ್ಲಿ, ಕೂಡಲೆ ಮಾಹಿತಿ ಸಲ್ಲಿಸುವಂತೆ ಎಲ್ಲ ಪಿಡಿಓ ಗಳಿಗೆ ಸೂಚನೆ ನೀಡಬೇಕು ಎಂದು ಸಚಿವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಬೇಸಿಗೆಯಲ್ಲಿನ ನೀರು ಸಮಸ್ಯೆ ನಿರ್ವಹಣೆ ನಿಟ್ಟಿನಲ್ಲಿ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳಿಗೆ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ ಹಾಗೂ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಅವರನ್ನು ಹಾಗೂ ಕೊಪ್ಪಳ ಮತ್ತು ಗಂಗಾವತಿ ತಾಲೂಕುಗಳಿಗೆ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಮತ್ತು ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರನ್ನು ಮೇಲುಸ್ತುವಾರಿ ಅಧಿಕಾರಿಗಳನ್ನಾಗಿ ನೇಮಕ ಮಾಡಿದ ಸಚಿವರು, ಪ್ರತಿ ವಾರ ಅಥವಾ ಹದಿನೈದು ದಿನಕ್ಕೊಮ್ಮೆ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮೇಲುಸ್ತುವಾರಿ ಅಧಿಕಾರಿಗಳು ಸಭೆ ನಡೆಸಿ, ಪರಿಸ್ಥಿತಿಯ ಪರಾಮರ್ಶೆ ನಡೆಸಬೇಕು.  ಅಲ್ಲದೆ ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು.  ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಯೋಜನೆಗಳಿಗೆ ಅನುಮೋದನೆ ಮತ್ತು ಅಗತ್ಯ ಅನುದಾನ ಬಿಡುಗಡೆ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
  ಪ್ರತಿ ತಾಲೂಕುವಾರು ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಕೊಪ್ಪಳ ಜಿಲ್ಲಾ ಕೇಂದ್ರದ ಕೆಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ತೊಂದರೆ ಇರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.  ಪೈಪ್‌ಲೈನ್ ಸೋರಿಕೆ ತಡೆಗಟ್ಟುವುದು, ಇರುವಂತಹ ಬೋರ್‌ವೆಲ್‌ಗಳ ನೀರನ್ನು ಬಳಸಿ, ಪ್ರಮುಖ ಪೈಪ್‌ಲೈನ್‌ಗಳ ಮೂಲಕ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಕೊಪ್ಪಳ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.  ಕುಷ್ಟಗಿ ತಾಲೂಕಿನ ನಿಲೋಗಲ್, ಬಿಳೆಕಲ್, ಡೊಣ್ಣೆಗುಡ್ಡ ಗ್ರಾಮ, ಯಲಬುರ್ಗಾ ತಾಲೂಕಿನಲ್ಲಿ ಮಾಳೆಕೊಪ್ಪ, ಮುರಡಿ, ಸಿದ್ನೆಕೊಪ್ಪ, ಚಿಕ್ಕಮ್ಯಾಗೇರಿ, ಮಾರನಾಳ ಗ್ರಾಮ.  ಗಂಗಾವತಿ ತಾಲೂಕಿನ ವಿಟ್ಲಾಪುರ, ಬಂಡ್ರಾಳ, ಆಗೋಲಿ, ಉಡುಮಕಲ್ ಗ್ರಾಮಗಳಲ್ಲಿ ನೀರಿನ ತೊಂದರೆ ಇದೆ, ವಾರದೊಳಗೆ ಸಮಸ್ಯೆ ಪರಿಹಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧಪಟ್ಟ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಗೆ ವಿವರಿಸಿದರು.
  ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಸೇರಿದಂತೆ ಎಲ್ಲ ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸಭೆ, ಪುರಸಭೆಗಳ ಮುಖ್ಯಾಧಿಕಾರಿಗಳು, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್‌ಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Comment