ಜಿಲ್ಲೆಯಲ್ಲಿ ಭಗೀರಥ ಜಯಂತಿ ಯಶಸ್ವಿಗೆ ಮುಂಡರಗಿ ಕರೆ

ಕೊಪ್ಪಳ,ಏ.೨೪: ಸರ್ಕಾರದಿಂದ ಇದೇ ಮೊದಲ ಬಾರಿಗೆ ಆಚರಿಸಲಾಗುತ್ತಿರುವ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಉಪ್ಪಾರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೊಪ್ಪಳ ತಾಲೂಕು ಭಗೀರಥ (ಉಪ್ಪಾರ) ಸಮಾಜದ ಅಧ್ಯಕ್ಷ ಕನಕಪ್ಪ ಮುಂಡರಗಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಗೀರಥ ಜಯಂತಿ ಕಾರ್ಯಕ್ರಮವು ಏ.೨೫ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಅವರು ಉದ್ಘಾಟಿಸುವರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಆಗಮಿಸುವರು. ಕಾರ್ಯಕ್ರಮದಲ್ಲಿ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಪ್ಪಳದ ಮುಖ್ಯ ಆಡಳಿತಾಧಿಕಾರಿ ಹನುಮಾಕ್ಷಿ ಗೋಗಿ ಅವರಿಂದ ವಿಶೇಷ ಉಪನ್ಯಾಸ ಜರುಗಲಿದೆ. ಕಾರ್ಯಕ್ರಮಕ್ಕೂ ಮುನ್ನ ಅಂದು ಬೆಳಿಗ್ಗೆ ೦೮ ಗಂಟೆಗೆ ನಗರದ ಶ್ರೀ ಸಿರಸಪ್ಪಯ್ಯನ ಮಠದಿಂದ ಭಗೀರಥ ಮಹರ್ಷಿಗಳ ಭಾವಚಿತ್ರದ ಮೆರವಣಿಗೆ, ಬಾಜಾ ಭಜಂತ್ರಿ ಸಮೇತ ಮುತ್ತೈದೆಯರ ಕುಂಭ ಕಳಸದೊಂದಿಗೆ ಆರತಿ, ಡೊಳ್ಳುಕುಣಿತ ನಡೆಯಲಿದ್ದು, ಜವಾಹರ ರಸ್ತೆ ಮಾರ್ಗವಾಗಿ ಸಾಹಿತ್ಯ ಭವನ ತಲುಪಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು, ಗುರು-ಹಿರಿಯರು, ಮಹಿಳೆಯರು, ನೌಕರ ವರ್ಗದವರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೊಪ್ಪಳ ತಾಲೂಕು ಭಗೀರಥ (ಉಪ್ಪಾರ) ಸಮಾಜದ ಅಧ್ಯಕ್ಷ ಕನಕಪ್ಪ ಮುಂಡರಗಿ ತಿಳಿಸಿದ್ದಾರೆ.

Related posts

Leave a Comment