`ನಾಗರಿಕ ಸಂಕಲ್ಪ ಪತ್ರ’

 ನುಡಿದಂತೆ ನಡೆಯಲಿ-ಜನರ ಒತ್ತಾಸೆ
 ಕೊಪ್ಪಳ: ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಹಾಗೂ ಅವರಿಂದಲೂ ಜವಾಬ್ದಾರಿಯುತ ಸ್ಪಂದನೆ ನಿರೀಕ್ಷಿಸಿ ನಗರಸಭೆಯು `ನಾಗರಿಕ ಸಂಕಲ್ಪ ಪತ್ರ` (ಸಿಟಿಜನ್ಸ್ ಚಾರ್ಟರ್) ಪ್ರಕಟಿಸಿದೆ.
`ಸ್ಮಾರ್ಟ್` ತತ್ವದಡಿ ಈ `ನಾಗರಿಕ ಸಂಕಲ್ಪ ಪತ್ರ`ವನ್ನು ರೂಪಿಸಿ, ಜಾರಿಗೊಳಿಸಲಾಗುತ್ತಿದೆ ಎಂದು ನಗರಸಭೆ ಹೇಳಿಕೊಂಡಿದೆ. ಸ್ಮಾರ್ಟ್- ಸರಳ, ನೈತಿಕ, ಉತ್ತರದಾಯಿತ್ವ, ಜವಾಬ್ದಾರಿ ಹಾಗೂ ಪಾರದರ್ಶಕತೆ ಎಂಬ ತತ್ವದಡಿ ಸಿದ್ಧಗೊಂಡಿರುವ ನಾಗರಿಕ ಸಂಕಲ್ಪ ಪತ್ರದಲ್ಲಿ, ನಗರಸಭೆಯಿಂದ ನಗರದ ಜನತೆಗೆ ಒದಗಿಸಲಾಗುವ ಸೇವೆಗಳು ಹಾಗೂ ನಾಗರಿಕರ ಜವಾಬ್ದಾರಿಗಳನ್ನು ಪಟ್ಟಿ ಮಾಡಲಾಗಿದೆ.
ಆದರೆ, ನಗರಸಭೆಯ ಈಗಿನ ಕಾರ್ಯ ವೈಖರಿಯನ್ನು ಗಮನಿಸಿದರೆ ಹಾಗೂ ನಗರದಲ್ಲಿ ಜನತೆ ಅನುಭವಿಸುತ್ತಿರುವ ಬವಣೆಯನ್ನು ನೋಡಿದರೆ ಈ `ನಾಗರಿಕ ಸಂಕಲ್ಪ ಪತ್ರ`ದಲ್ಲಿ ಉಲ್ಲೇಖಿಸಿರುವ ತತ್ವಗಳಂತೆ ಆಡಳಿತ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತದೆ. 
`ನಾಗರಿಕ ಸಂಕಲ್ಪ ಪತ್ರ`ದಲ್ಲಿ ಹೇಳಿರುವಂತೆ ಸ್ವಚ್ಛ ಹಾಗೂ ಹಸಿರುಭರಿತ ನಗರವನ್ನು ನಿರ್ಮಾಣ ಮಾಡಲು ನಗರಸಭೆ ಕಠಿಣ ಶ್ರಮ ವಹಿಸುತ್ತಿದೆ ಎಂದು ಘೋಷಿಸಲಾಗಿದೆ. ಆದರೆ, ನಗರದಲ್ಲಿ ತುಂಬಿ ತುಳುಕುತ್ತಿರುವ ಕಸದ ತೊಟ್ಟಿಗಳು, ತುಂಬಿ ಹರಿಯುತ್ತಿರುವ ಚರಂಡಿಗಳು, ರಸ್ತೆಯಲ್ಲಿ ಓಡಾಡಲೂ ಭಯ ಹುಟ್ಟಿಸುವ ಧೂಳು, ನಿರ್ಭಯವಾಗಿ ಓಡಾಡುವ ಹಂದಿಗಳನ್ನು ನೋಡಿದರೆ ಸ್ವಚ್ಛ ಪರಿಸರ ಎಲ್ಲಿದೆ ಎಂದೇ ಕೇಳಬೇಕಾಗುತ್ತದೆ.
ನಗರದ ಮೂಲಕ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಬಿಡಾಡಿ ದನಗಳು ಓಡಾಡುವುದು ಮಾತ್ರವಲ್ಲ, ರಸ್ತೆ ಮೇಲೆಯೇ ವಿಶ್ರಾಂತಿ ಪಡೆಯುತ್ತವೆ. ನಗರಸಭೆಯಿಂದ ಕೇವಲ 100 ಮೀ. ದೂರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆ ಬಳಿ, ಅದೂ ಹೆದ್ದಾರಿ ಮೇಲೆಯೇ ದನಗಳು ಮಲಗಿದ್ದರೂ ನಗರಸಭೆ ಕ್ರಮ ಕೈಗೊಳ್ಳಲಿಲ್ಲ!
ನಗರದಲ್ಲಿ ಉದ್ಯಾನವನ ಹಾಗೂ ಆಟದ ಮೈದಾನ ನಿರ್ಮಿಸುವುದು ಎಂಬುದಾಗಿಯೂ `ನಾಗರಿಕ ಸಂಕಲ್ಪ ಪತ್ರ`ದಲ್ಲಿ ಹೇಳಲಾಗಿದೆ. ಆದರೆ, ಲೋಕೋಪಯೋಗಿ ಇಲಾಖೆ ಕಚೇರಿ ಪಕ್ಕದಲ್ಲಿರುವ ಕಾವ್ಯಾನಂದ ಉದ್ಯಾನವನ ಬಿಟ್ಟರೆ ನಗರದಲ್ಲಿ ಉತ್ತಮವಾದ ಉದ್ಯಾನವನ ಇಲ್ಲ. ಇರುವ ಈ ಕಾವ್ಯಾನಂದ ಉದ್ಯಾನವನದಲ್ಲಿ ಹಗಲು ದೀಪ ಹಚ್ಚಿ ಹುಡುಕಿದರೂ ಹಿಡಿ ಹುಲ್ಲು ಸಿಗುವುದಿಲ್ಲ. ಉದ್ಯಾನವನದ ಹಿಂಭಾಗದಲ್ಲಿ ಮಕ್ಕಳು ಆಟವಾಡಲು ಕೆಲವು ಸಾಧನಗಳನ್ನು ಅಳವಡಿಸಲಾಗಿದೆ. ಆದರೆ, ಯಾವವೂ ಸುಸ್ಥಿತಿಯಲ್ಲಿ ಇಲ್ಲ. 
ಮಕ್ಕಳನ್ನು ಕರೆದಕೊಂಡು ಸಂಜೆ ವೇಳೆ ವಿಹಾರ ಮಾಡಿ ಒಂದಿಷ್ಟು ಮನಸ್ಸು ಹಗುರ ಮಾಡಿಕೊಳ್ಳಲು ಬಯಸುವ ನಾಗರಿಕರಿಗೆ ಒಂದು ಉತ್ತಮ ಉದ್ಯಾನವನವೂ ಇಲ್ಲ, ಇತ್ತ ಆಟವಾಡಲು ಒಳ್ಳೆಯ ಮೈದಾನವೂ ಇಲ್ಲ. 
ಸಾರ್ವಜನಿಕ ಮೂತ್ರಿ ಹಾಗೂ ಶೌಚಾಲಯಗಳ ದೈನಂದಿನ ನಿರ್ವಹಣೆ ಎಂಬುದಾಗಿಯೂ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ನಗರದಲ್ಲಿರುವ ಸಾರ್ವಜನಿಕ ಮೂತ್ರಿಗಳು ಹಾಗೂ ಶೌಚಾಲಯಗಳನ್ನು ನೋಡಿದರೆ ಅವುಗಳ ನಿರ್ವಹಣೆ ಎಷ್ಟು ತಿಂಗಳು ಇಲ್ಲವೇ ಎಷ್ಟು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ ಎಂಬ ಅನುಮಾನ ಕಾಡದೇ ಇರದು.ಕೃಪೆ: ಪ್ರಜಾವಾಣಿ
Please follow and like us:
error

Related posts

Leave a Comment