You are here
Home > Koppal News > ಹನುಮಮಾಲಾ ಕಾರ್ಯಕ್ರಮ ಗಂಗಾವತಿಯಲ್ಲಿ ಬನಾಯೇಂಗೆ ಮಂದಿರ್ ಹಾಡು ನಿಷೇಧ.

ಹನುಮಮಾಲಾ ಕಾರ್ಯಕ್ರಮ ಗಂಗಾವತಿಯಲ್ಲಿ ಬನಾಯೇಂಗೆ ಮಂದಿರ್ ಹಾಡು ನಿಷೇಧ.

ಕೊಪ್ಪಳ, ಡಿ.೨೨, (ಕ ವಾ)  ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಡಿ.೨೩ ರಂದು ನಡೆಯಲಿರುವ ಹನುಮಮಾಲಾ ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಪಾಲನೆಯ ಸಲುವಾಗಿ ಗಂಗಾವತಿ ನಗರದಲ್ಲಿ ಡಿ.೨೩ ರಂದು ‘ಬನಾಯೇಂಗೆ ಮಂದಿರ್’ ಎಂಬ ಹಾಡನ್ನು ಸಾರ್ವಜನಿಕವಾಗಿ ಹಾಡದಂತೆ ಮತ್ತು ಆಡಿಯೋ ಅಥವಾ ವಿಡಿಯೋ ರೂಪದಲ್ಲಿ ಬಿತ್ತರಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.      ವೀರಾಂಜನೇಯ ಸ್ಮರಣೆ ಸಲುವಾಗಿ ಹನುಮಮಾಲಾ ಧಾರಣೆ ಮಾಡಿದ ೧೬ ಜಿಲ್ಲೆಗಳ ಸುಮಾರು ೩ ರಿಂದ ೪ ಸಾವಿರ ಜನರು ಡಿ.೨೩ ರಂದು ಗಂಗಾವತಿ ನಗರದ ಮೂಲಕ ಕಿಷ್ಕಿಂದಾದಲ್ಲಿನ ಆಂಜನೇಯ ಬೆಟ್ಟಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಅಂದು ಬೆಳಿಗ್ಗೆ ೦೮ ಗಂಟೆಗೆ ಬಹಿರಂಗ ಸಭೆ ಹಾಗೂ ಮಾಲಾಧಾರಿಗಳ ಮೆರವಣಿಗೆ ನಡೆಯಲಿದೆ.  ಹನುಮಮಾಲಾ ಕಾರ್ಯಕ್ರಮ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಕಾನೂನು ಸುವ್ಯವಸ್ಥೆ, ಶಾಂತಿಪಾಲನೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ ಕಲಂ ೩೫ (೧)(ಇ) ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಡಿ.೨೨ ರಂದು ರಾತ್ರಿ ೧೨ ಗಂಟೆಯಿಂದ ಡಿ.೨೩ ರ ರಾತ್ರಿ ೧೨ ಗಂಟೆಯವರೆಗೆ ‘ಬನಾಯೇಂಗೆ ಮಂದಿರ್’ ಎಂಬ ಹಾಡನ್ನು ಸಾರ್ವಜನಿಕವಾಗಿ ಹಾಡದಂತೆ ಮತ್ತು ಆಡಿಯೋ, ವೀಡಿಯೋ ರೂಪದಲ್ಲಿ ಬಿತ್ತರಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ. 

Leave a Reply

Top