ಉರ್ದು ಭಾಷಾ ಕಲಿಕೆಗಾಗಿ ಅಂಚೆ ತೆರಪಿನ ಶಿಕ್ಷಣ ಪ್ರಾರಂಭಿಸುವಂತೆ ಕರ್ನಾಟಕ ಉರ್ದು ಅಕಾಡೆಮಿಗೆ ಮುಖ್ಯಮಂತ್ರಿ ಸಲಹೆ

ಬೆಂಗಳೂರು, : ಭಾರತೀಯ ಭಾಷೆಗಳಲ್ಲೊಂದಾದ ಉರ್ದು ಭಾಷಾ ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಲು ಅಂಚೆ ತೆರಪಿನ ಶಿಕ್ಷಣವನ್ನು ಪ್ರಾರಂಭಿಸುವಂತೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಕರ್ನಾಟಕ ಉರ್ದು ಅಕಾಡೆಮಿಗೆ ಸಲಹೆ ಮಾಡಿದರು.

ಕರ್ನಾಟಕ ಉರ್ದು ಅಕಾಡೆಮಿಯು ನಗರದಲ್ಲಿ ಬುಧವಾರ ಆಯೋಜಿಸಿದ್ದ 2010 ರಿಂದ 2013 ನೇ ಸಾಲಿನ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಅಭಿವ್ಯಕ್ತಿಗೆ ಅತ್ಯಂತ ಪರಿಣಾಮಕಾರಿ ಭಾಷೆ ಎನಿಸಿರುವ ಉರ್ದು ಭಾಷೆ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ. ಆದರೆ, ಉರ್ದು ಭಾಷೆಯನ್ನು ಓದುವ ಸಾಮಥ್ರ್ಯ ಇರುವವರ ಸಂಖ್ಯೆ ಕಡಿಮೆ ಇದೆ. ಅಷ್ಟೇ ಅಲ್ಲ ! ಉರ್ದು ಭಾಷೆಯಲ್ಲಿ ಬರೆಯುವ ಸಾಮಥ್ರ್ಯ ಇರುವವರ ಸಂಖ್ಯೆ ಇನ್ನೂ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಭಾಷೆಯನ್ನು ಕಲಿಯುವ ಹಾಗೂ ಕಲಿಸುವ ವಾತಾವರಣ ನಿರ್ಮಿಸುವುದು ಅಗತ್ಯವಿದೆ ಎಂದು   ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
ಜಾತ್ಯಾತೀತ ನೆಲೆಗಟ್ಟಿನ ಉರ್ದು ಭಾಷೆಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಹಿತ ನುಡಿದ ಶ್ರೀ ಸಿದ್ದರಾಮಯ್ಯ ಅವರು ಎಲ್ಲಾ ಭಾಷೆಗಳನ್ನೂ ಗೌರವಿಸುವಲ್ಲಿ ಹಾಗೂ ಬೆಳೆಸುವಲ್ಲಿ ತಮ್ಮ ಸರ್ಕಾರ ಪ್ರೋತ್ಸಾಹಿಸಲಿದೆ. ರಾಷ್ಟ್ರದ ಎಲ್ಲಾ ಭಾಷೆಗಳೂ ಬೆಳೆಯಬೇಕು ಎಂಬುದು ಸರ್ಕಾರದ ಸದಾಶಯ ಎಂದರು.
ನಾಲ್ಕು ವರ್ಷಗಳ ಪ್ರಶಸ್ತಿಗಳನ್ನು ಏಕಕಾಲಕ್ಕೆ ನೀಡುವ ಬದಲು ಮುಂಬರುವÀ ವರ್ಷಗಳಲ್ಲಿ ಆಯಾ ಸಾಲಿನ ಪ್ರಶಸ್ತಿಗಳನ್ನು ಆಯಾ ಸಾಲಿನಲ್ಲೇ ನೀಡುವಂತೆ ಮುಖ್ಯಮಂತ್ರಿ ಕರ್ನಾಟಕ ಉರ್ದು ಅಕಾಡೆಮಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೆ, ವರ್ಷವಾರು ಪ್ರಶಸ್ತಿ ಪ್ರಕಟಿಸಿದಲ್ಲಿ ಅವುಗಳನ್ನು ಪ್ರದಾನ ಮಾಡಲು ತಾವೇ ಖುದ್ದು ಹಾಜರಾಗುವುದಾಗಿ ತಿಳಿಸಿದರು.
ಈ ಮುನ್ನ ಮಾತನಾಡಿದ ಪೌರಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ  ಖಮರುಲ್ ಇಸ್ಲಾಂ ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಆಶಿಸಿದರು.
ಮೂಲ ಸೌಲಭ್ಯ ಅಭಿವೃದ್ಧಿ ಮತ್ತು ಹಜ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ  ಆರ್. ರೋಷನ್ ಬೇಗ್ ಅವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷರಾದ ಡಾ ಫೌಜಿಯ ಚೌಧರಿ ಅವರೂ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಉರ್ದು ಸಾಹಿತ್ಯ, ಕಾವ್ಯ, ಪತ್ರಿಕೋದ್ಯಮ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಕೊಡುಗೆ ಸಲ್ಲಿಸಿದ 20 ಗಣ್ಯರಿಗೆ ಅಕಾಡೆಮಿಯ ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಿದರು.
Please follow and like us:
error