ಜಾತೀಯತೆ, ಮತೀಯತೆ, ಮಠೀಯತೆಗಳಿಂದ ಮುಕ್ತಿ ಎಂದು?

– ಸುರೇಶ್ ಭಟ್, ಬಾಕ್ರಬೈಲ್
ಹಿಂದೂ ಸಮಾಜದಲ್ಲಿ ಕಾವಿಧಾರಿ ಗಳ ಬಗ್ಗೆ ಅಪಾರ ನಂಬಿಕೆ ಮತ್ತು ಗೌರವ ಇಟ್ಟುಕೊಂಡವರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ಇದನ್ನು ಚೆನ್ನಾಗಿ ಅರಿತಿರುವ ದುಷ್ಟ ಶಕ್ತಿಗಳು ಈ ದೌರ್ಬಲ್ಯವನ್ನು ತಮ್ಮದೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಳಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿವೆ. ಪರಿಣಾಮ ವಾಗಿ, ಒಂದು ತಟಸ್ಥ ಸ್ಥಾನದಿಂದ ಅವಲೋಕಿಸಿ ದಾಗ, ಸಮಾಜ ದಿನೇದಿನೇ ಅವನತಿಯತ್ತ ಸಾಗುತ್ತಿರುವುದನ್ನು ಕಾಣಬಹುದು. ಹೇಗೆ ಮತ್ತು ಏಕೆ ಎಂಬ ವಿಷಯಕ್ಕೆ ಆ ಮೇಲೆ ಬರೋಣ. ಅದಕ್ಕಿಂತ ಮೊದಲು ಇಡೀ ರಾಜ್ಯದ ಗಮನ ಸೆಳೆದಿರುವಂತಹ ಇತ್ತೀಚಿನ ಮಹಿಳಾ ಅತ್ಯಾಚಾರ ಪ್ರಕರಣವೊಂದರ ಕೆಲವು ಅಂಶಗಳತ್ತ ದೃಷ್ಟಿ ಹರಿಸೋಣ. ಈ ಪ್ರೇಮಲತಾ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ಇರುವವರು ರಾಮಚಂದ್ರಾಪುರ ಎಂಬ ಮೇಲ್ಜಾತಿಗಳ ಮಠದ ಕಾವಿಧಾರಿ ಸ್ವಾಮಿ ರಾಘವೇಶ್ವರ. ನಾವೆಲ್ಲರೂ ಗಮನಿಸಿರುವ ಹಾಗೆ ಈ ಪ್ರಕರಣ ಚಿತ್ರವಿಚಿತ್ರ ತಿರುವುಗಳನ್ನು ಪಡೆದುಕೊಂಡು ಬಹಳ ನಯವಾಗಿ, ನಾಜೂಕಾಗಿ, ಕುಂಟುತ್ತಾ ಸಾಗುತ್ತಿದೆ. ಸ್ವಾಮಿ ಕಡೆಯಿಂದ ಹೆಜ್ಜೆ ಹೆಜ್ಜೆಗೂ ಅರ್ಜಿ, ಮೇಲರ್ಜಿಗಳು ಸಲ್ಲಿಕೆಯಾಗುತ್ತಲೇ ಇವೆ. ಇವೆಲ್ಲವನ್ನು ಕಂಡ ಜನರಿಗೆ ಕಾನೂನು ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬಗಳನ್ನು ಸೃಷ್ಟಿಸಲಾಗುತ್ತಿದೆಯೇ ಎಂದು ಅನಿಸಿರುವುದರಲ್ಲಿ ಆಶ್ಚರ್ಯ ವೇನು ಬಂತು. ಸಂಬಂಧಪಟ್ಟ ಕಾಯಿದೆ ಪ್ರಕಾರ ಎಫ್‌ಐಆರ್ ದಾಖಲಿಸಿ 90 ದಿನಗಳೊಳಗಾಗಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆಯಾಗಬೇಕು ಮತ್ತು ಇದಾದ 60 ದಿನಗಳೊಳಗಾಗಿ ನ್ಯಾಯಾಲಯದ ವಿಚಾರಣೆ ಮುಗಿಯಬೇಕು. ಇಲ್ಲಿ ತನ್ನ ಮೇಲಿನ ಎಫ್‌ಐಆರ್ ರದ್ದುಗೊಳಿಸಬೇಕೆಂದು ಕೋರಿ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೇ ಹಲವು ತಿಂಗಳುಗಳ ಕಾಲ ಮುಂದುವರಿಯಿತು. ಇಂತಹ ಒಂದು ಸಂಪೂರ್ಣ ಅಸಮರ್ಥನೀಯವಾದ ಕೋರಿಕೆಯ ವಿಚಾರಣೆಯ ಸಂದರ್ಭದಲ್ಲಿ ಒಬ್ಬರಾದ ಮೇಲೆ ಇನ್ನೊಬ್ಬರಂತೆ ಹೈಕೋರ್ಟಿನ ಐವರು ನ್ಯಾಯಮೂರ್ತಿಗಳು ಹಿಂದೆ ಸರಿಯು ವಂತಹ ಅಭೂತಪೂರ್ವ ಘಟನೆಗೂ ನಾವು ಸಾಕ್ಷಿಗಳಾದೆವು. ಗುಸುಗುಸು ಸುದ್ದಿಗಳಿಗೆ ಕಾರಣವಾದ ಈ ಘಟನೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನಂತೂ ಕೊಟ್ಟಿಲ್ಲ. ನಿಜ ಹೇಳಬೇಕೆಂದರೆ ಕೆಟ್ಟ ಸಂದೇಶವನ್ನೇ ರವಾನಿಸಿದೆ. ಹಿಂದೆ ಸರಿಯುವ ಹಕ್ಕು ಪ್ರತಿಯೊಬ್ಬ ನ್ಯಾಯಾಧೀಶನಿಗೂ ಇದೆ ಎಂಬುದನ್ನು ಒಪ್ಪುತ್ತಲೇ ಅದರೊಂದಿಗೆ ಮನದಲ್ಲಿ ಮೂಡುವ ಕೆಲವು ಜಿಜ್ಞಾಸೆಗಳನ್ನು ಸಾರ್ವಜನಿಕರ ಮುಂದಿಡುವುದು ಓರ್ವ ಪ್ರಜ್ಞಾವಂತ ನಾಗರಿಕನಾಗಿ ನನ್ನ ಕರ್ತವ್ಯವೆಂದು ಭಾವಿಸಿರುವೆ. ಉದಾಹರಣೆಗೆ ವಿಚಾರಣೆಯ ಮಧ್ಯದಲ್ಲಿ ಹಿಂದೆ ಸರಿಯುವುದು ಎಷ್ಟರ ಮಟ್ಟಿಗೆ ಸರಿ ಮತ್ತು ಅದಕ್ಕಿರುವ ಕಾರಣಗಳೇನು? ಹಿಂದೆ ಸರಿಯುವುದಕ್ಕೆ ಒಂದು ನೀತಿ ಮತ್ತು ಮಿತಿ ಎಂಬುದು ಇಲ್ಲವೇ? ನ್ಯಾಯಾಧೀಶರೂ ಸಮಾಜದ ಅವಿಭಾಜ್ಯ ಅಂಗವೇ ಆಗಿರುವಾಗ ಪ್ರಾಪಂಚಿಕ ವ್ಯವಹಾರಗಳಿಂದ ದೂರವಾಗಿರುವಂತಹ ವಿರಕ್ತ ನ್ಯಾಯಾಧೀಶರಿರುವುದು ಸಾಧ್ಯವೇ? ನಾಡು ತೊರೆದು ಕಾಡಿನಲ್ಲಿ ವಾಸಿಸಲು ಹೊರಟರೂ ಅಲ್ಲೂ ಪ್ರಕೃತಿ ಮತ್ತು ಇತರ ಅರಣ್ಯಜೀವಿಗಳೊಂದಿಗೆ ಸಂಬಂಧವಿರದೆ ಬದುಕಿರಲು ಸಾಧ್ಯವಿಲ್ಲ. ಇದರ ತಾತ್ಪರ್ಯ ಇಷ್ಟೆ. ನ್ಯಾಯಾಧೀಶರಾದವರು ಕರ್ತವ್ಯದ ಸಮಯದಲ್ಲಿ ತಮ್ಮ ನಿಲವುಗಳು, ನಂಬಿಕೆಗಳು, ಕೌಟುಂಬಿಕ ಮತ್ತಿತರ ಸಂಬಂಧಗಳು ಮುಂತಾದುವನ್ನು ಮನಸ್ಸಿನಿಂದ ದೂರ ಮಾಡಬೇಕು. ಈ ಸಂದರ್ಭದಲ್ಲಿ 1960ರ ದಶಕದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನಡೆದ ಪ್ರಕರಣವೊಂದು ತುಂಬಾ ಪ್ರಸ್ತುತವಾಗುತ್ತದೆ. ಅಲ್ಲಿನ ಸರ್ವೋಚ್ಚ ನ್ಯಾಯಾಲಯದಲ್ಲಿ ಅಂದು ಹ್ಯೂಗೊ ಬ್ಲ್ಯಾಕ್ ಎಂಬ ನ್ಯಾಯಾಧೀಶರಿದ್ದರು. ಈತ ಬಾಪ್ಟಿಸ್ಟ್ ಎಂಬ ಕ್ರೈಸ್ತ ಪಂಥವೊಂದರ ನಿಷ್ಠಾವಂತ ಸದಸ್ಯ ಮತ್ತು ರವಿವಾರದ ಧಾರ್ಮಿಕ ತರಗತಿಗಳಲ್ಲಿ ಪಾಠಗಳನ್ನೂ ಮಾಡುತ್ತಿದ್ದವರು. 1962ರಲ್ಲೊಮ್ಮೆ ಹ್ಯೂಗೊ ಬ್ಲ್ಯಾಕ್ ನೇತೃತ್ವದ ಪೀಠದ ಮುಂದೆ ಎಂಗೆಲ್ ವರ್ಸಸ್ ವಿಟಾಲೆ ಎಂಬ ಪ್ರಕರಣ ವಿಚಾರಣೆಗೆ ಬಂದಿತ್ತು. ಅನುದಾನಿತ ಶಾಲೆಗಳಲ್ಲಿ ದೇವರ ಪ್ರಾರ್ಥನೆಗೆ ಅವಕಾಶ ನೀಡುವ ವಿಷಯಕ್ಕೆ ಸಂಬಂಧಪಟ್ಟ ವ್ಯಾಜ್ಯ ಅದಾಗಿತ್ತು. ಅಂತಿಮ ತೀರ್ಪು ಬರೆದ ಹ್ಯೂಗೊ ಬ್ಲ್ಯಾಕ್ ಅನುದಾನಿತ ಶಾಲೆಗಳಲ್ಲಿ ದೇವರ ಪ್ರಾರ್ಥನೆಯನ್ನು ಐಚ್ಛಿಕವಾಗಿ ನಡೆಸುವುದು ಕೂಡ ಸಂವಿಧಾನದ ಉಲ್ಲಂಘನೆ ಎಂದು ಖಡಾಖಂಡಿತವಾಗಿ ಹೇಳಿದ್ದರು. ಇಲ್ಲಿ ಪಾಠ ಏನೆಂದರೆ ನ್ಯಾಯಾಧೀಶರಾದವರ ವೈಯಕ್ತಿಕ ನಿಲುವು, ನಂಬಿಕೆಗಳೇನೇ ಇದ್ದರೂ ಕಪ್ಪುನಿಲುವಂಗಿ ತೊಟ್ಟ ನಂತರ ಯಾವುದೇ ಪ್ರಭಾವ/ಒತ್ತಡಗಳಿಗೆ ಬಲಿಯಾಗದೆ ನಿಷ್ಪಕ್ಷಪಾತವಾಗಿ ತೀರ್ಪು ನೀಡುವುದು ಅವರ ವೃತ್ತಿಧರ್ಮ ಮತ್ತು ಕರ್ತವ್ಯ. ಕಾನೂನಿನ ಮುಂದೆ ಕೆಲವರು ಹೆಚ್ಚು ಸಮಾನರೇ?
ನೇರ ಮತ್ತು ಪರೋಕ್ಷ ಲೌಕಿಕ ಪ್ರಭಾವಗಳು, ಅಲೌಕಿಕದ ಭಯ ಇವೆಲ್ಲ ಯಾವ ರೀತಿಯಲ್ಲಿ ಕೆಲಸ ಮಾಡಬಲ್ಲವು ಎಂಬುದಕ್ಕೆ ರಾಘವೇಶ್ವರ ಪ್ರಕರಣ ಒಂದು ಅತ್ಯುತ್ತಮ ನಿದರ್ಶನ. ಒಂದು ವೇಳೆ ಆರೋಪಿ ತಳವರ್ಗ ಅಥವಾ ತಳಜಾತಿಗಳಿಗೆ ಸೇರಿದ ಓರ್ವ ಸಾಮಾನ್ಯ ವ್ಯಕ್ತಿ ಆಗಿದ್ದಲ್ಲಿ ಪರಿಸ್ಥಿತಿ ಹೇಗಿರುತ್ತಿತ್ತು? ಬಹುಶಃ ಇಷ್ಟರಲ್ಲಾತ ಸೆರೆಮನೆಯಲ್ಲಿ ರಾಗಿ ಬೀಸುತ್ತ ಇರಬೇಕಿತ್ತು. ಸಹಜವಾಗಿಯೇ ಆರೋಪಿಯೊಬ್ಬ ತಾನು ನಿರಪರಾಧಿ, ತಾನೇನೂ ತಪ್ಪು ಮಾಡಿಲ್ಲವೆಂದೇ ಹೇಳಿಕೊಳ್ಳುತ್ತಾನೆ. ಆತ ಏನೇ ಹೇಳಲಿ, ನ್ಯಾಯಾಲಯ ಮಾತ್ರ ವೈದ್ಯಕೀಯ ಪರೀಕ್ಷೆ, ಸಾಕ್ಷಿಗಳ ವಿಚಾರಣೆ ಮುಂತಾದ ವಿವಿಧ ವಿಚಾರಣಾ ಪ್ರಕ್ರಿಯೆಗಳ ಬಳಿಕವೇ ಅಂತಿಮ ತೀರ್ಮಾನಕ್ಕೆ ಬರುತ್ತದೆ. ಕಾವಿಧಾರಿಗಳು ಅತಿಮಾನವರೂ ಅಲ್ಲ, ನೆಲದ ಕಾನೂನಿಗೆ ಅತೀತರೂ ಅಲ್ಲ. ನಮ್ಮನಿಮ್ಮೆಲ್ಲರಂತೆ ಅವರೂ ಸಾಂವಿಧಾನಿಕ ಪ್ರಜಾಪ್ರಭುತ್ವವಾಗಿರುವ ಭಾರತದ ಪ್ರಜೆ ಗಳು. ಹಾಗಾಗಿ ಇತರೆಲ್ಲ ಆರೋಪಿಗಳ ಹಾಗೆ ಕಾವಿಧಾರಿಗಳೂ ವೈದ್ಯಕೀಯ ಪರೀಕ್ಷೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಕಡ್ಡಾಯ ವಾಗಿ ಒಡ್ಡಿಕೊಳ್ಳಲೇಬೇಕಾಗುತ್ತದೆ. ಸಾಮಾನ್ಯ ಆರೋಪಿಗಳ ವಿಷಯದಲ್ಲಿ ಬಾರದ ಹಕ್ಕುಚ್ಯುತಿಯ ಪ್ರಶ್ನೆ ಇಲ್ಲೇಕೆ ಬರಬೇಕು? ಕಾನೂನಿನ ಮುಂದೆ ಕೆಲವರು ಹೆಚ್ಚು ಸಾಮಾನ್ಯರು ಎಂಬ ಭಾವನೆಗೆ ಅವಕಾಶ ಇರಬಾರದಷ್ಟೇ. ಆದುದರಿಂದ ಪೀಠದ ಗೌರವಕ್ಕೆ ಕುಂದು ಎಂಬ ನೆಪವೊಡ್ಡಿ ಕೆಲವು ಪರೀಕ್ಷೆಗಳನ್ನು ನಿರಾಕರಿಸುವ ಅಥವಾ ವಿನಾಯಿತಿ ಪಡೆಯುವ ಪ್ರಶ್ನೆಯೇ ಉದ್ಭವಿಸಬಾರದು. ಅಸಲಿಗೆ ತಾನು ನಿರಪರಾಧಿ ಎಂದಾದರೆ ಎಲ್ಲಾ ವಿಧದ ಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯಾಗಿ ಹೊರಬಂದರೆ ಅದು ಪೀಠದ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂಬ ಸಾಮಾನ್ಯಜ್ಞಾನ ಪೀಠಾಧಿಪತಿಗಳಾದವರಿಗೆ ಇರ ಬೇಕು. ವಾಸ್ತವದಲ್ಲಿ ರಾಘವೇಶ್ವರ ಸ್ವಾಮಿ ವೀರ್ಯ ಪರೀಕ್ಷೆಗೆ ನಿರಾಕರಿಸಿರುವುದು ತೀವ್ರ ಸಂಶಯಕ್ಕೆ ಕಾರಣವಾಗಿರುವುದರ ಜೊತೆಗೆ ಅವರ ವೈಯಕ್ತಿಕ ಗೌರವವನ್ನೂ ಪೀಠದ ಮರ್ಯಾದೆಯನ್ನೂ ಬೀದಿಪಾಲು ಮಾಡಿದೆ. ಈಗಂತೂ ರಕ್ತ ಪರೀಕ್ಷೆಯಿಂದಲೇ ಡಿಎನ್‌ಎ ಮ್ಯಾಚ್ ಆಗುತ್ತಿದೆ ಎಂದು ತಿಳಿದು ಬಂದಿ ರುವುದರಿಂದ ಪ್ರೇಮಲತಾ ಬಟ್ಟೆಯಲ್ಲಿರುವುದು ಸ್ವಾಮಿಯದೇ ವೀರ್ಯ ಎಂದು ಬಹಳ ನಿಖರವಾಗಿ ಸಾಬೀತಾಗಿದೆ. ಹೀಗಾಗಿ ಅಳಿದುಳಿದ ಅಲ್ಪಸ್ವಲ್ಪ ಅನುಮಾನಗಳೂ ದೂರವಾಗಿವೆ. ಈಗ ನ್ಯಾಯಾಂಗ ಪ್ರಕ್ರಿಯೆಯ ಮುಕ್ತಾಯ ಮತ್ತು ತೀರ್ಪು ಪ್ರಕಟಣೆಯ ದಿನವನ್ನು ಎದುರುನೋಡುವುದಷ್ಟೇ ಉಳಿದಿದೆ. ಆತ್ಮಾವಲೋಕನಕ್ಕೆ ಸಕಾಲ
ಈ ಮಠಮಾನ್ಯಗಳು, ಆಶ್ರಮಗಳು ಯಾಕೆ ಬೇಕು, ಅವುಗಳಿಂದ ಆಗಿರುವ/ಆಗುವ ಪ್ರಯೋಜನ ಏನೆಂದು ಆತ್ಮಾವ ಲೋಕನ ಮಾಡಿಕೊಳ್ಳಲು ಇದೊಂದು ಸುಸಂದರ್ಭ ಆಗಬಲ್ಲುದು. ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ವಿದ್ಯಾರ್ಜನೆಗಾಗಿ ಗುರು-ಗುರುಕುಲ, ಸ್ವಾಮಿ-ಮಠ, ಋಷಿ-ಆಶ್ರಮ ಮುಂತಾದವುಗಳನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಇತ್ತು. ಆದರೆ ಇಲ್ಲಿನ ಭಯಾನಕ ಹಾಗೂ ಅಮಾನುಷ ಜಾತಿವ್ಯವಸ್ಥೆ ಶಿಕ್ಷಣವನ್ನು ಮೇಲ್ಜಾತಿಗಳಿಗೆ ಮಾತ್ರ ಸೀಮಿತವಾಗಿಸಿತ್ತು. ತಳಸಮುದಾಯಗಳಿಗೆ ವಿದ್ಯೆಯ ಹಕ್ಕನ್ನು ನಿರಾಕರಿಸಲಾಗಿತ್ತು. ವಸಾಹತುಶಾಹಿ ಬ್ರಿಟಿಷರು ತಮ್ಮ ಅನುಕೂಲಕ್ಕಾಗಿ ಪ್ರಾರಂಭಿಸಿದ ಶಾಲಾ ಶಿಕ್ಷಣ ವ್ಯವಸ್ಥೆ ಸಕಲ ಭಾರತೀಯರಿಗೂ ವಿದ್ಯಾಭ್ಯಾಸದ ಅವಕಾಶವನ್ನು ಒದಗಿಸಿತು. ಬ್ರಿಟಿಷ್ ಆಡಳಿತದ ಕೆಲವು ಧನಾತ್ಮಕ ಅಂಶಗಳಲ್ಲಿ ಇದೂ ಒಂದು ಎಂಬುದನ್ನು ನಾವು ಒಪ್ಪಬೇಕಾಗುತ್ತದೆ. ಶಾಲೆಗಳಿಂದಾಗಿ ಬದಲಾದ ಪರಿಸ್ಥಿತಿಯಲ್ಲಿ ಗುರು, ಗುರುಕುಲ ಇತ್ಯಾದಿಗಳು ಅಪ್ರಸ್ತುತವಾಗಿ ಅವುಗಳ ಜಾಗಕ್ಕೆ ಶಿಕ್ಷಕರು, ಶಿಕ್ಷಣಸಂಸ್ಥೆಗಳು, ಗ್ರಂಥಾಲಯಗಳು ಬಂದುವು. ಇವತ್ತು ಒಂದು ಸ್ವತಂತ್ರ ಪ್ರಜಾತಾಂತ್ರಿಕ ಗಣತಂತ್ರವಾಗಿರುವ ಭಾರತದಲ್ಲಿ ವರ್ಗ, ಜಾತಿ, ಮತಗಳ ಭೇದ ಇಲ್ಲದೆ ಎಲ್ಲರಿಗೂ ವಿದ್ಯಾಭ್ಯಾಸ ಮಾಡಲು ಅವಕಾಶವಿದೆ. (ಖಾಸಗಿಗಳ ಹಾವಳಿ ಬೇರೊಂದು ಸಮಸ್ಯೆ. ಅದರ ಚರ್ಚೆ ಪ್ರತ್ಯೇಕ). ಲೌಕಿಕ ಶಿಕ್ಷಣಕ್ಕೆ ಶಾಲೆಗಳಿದ್ದರೆ ಧಾರ್ಮಿಕ, ಆಧ್ಯಾತ್ಮಿಕ ಶಿಕ್ಷಣ ಬೇಕಾದವರಿಗೆ ವೇದಪಾಠಶಾಲೆ, ಮದ್ರಸ, ಸಂಡೇ ಸ್ಕೂಲ್ ಇತ್ಯಾದಿಗಳಿವೆ. ನಮ್ಮ ದೇಶ ಜಾತ್ಯತೀತತೆಯನ್ನು ಸಾಮಾಜಿಕ ಜನಜೀವನದ ಒಂದು ಪ್ರಧಾನ ಮೌಲ್ಯವನ್ನಾಗಿ ಅಂಗೀಕರಿಸಿದ ಬಳಿಕ ಸ್ವಾಮಿಗಳು, ಮಠಮಾನ್ಯಗಳು, ಆಶ್ರಮಗಳಂಥವು ಅಪ್ರಸ್ತುತವಾಗಬೇಕಿತ್ತು. ತದ್ವಿರುದ್ಧವಾಗಿ ಅವು ಅಪಾರ ಜನಪ್ರಿಯತೆ ಮತ್ತು ರಾಜಕೀಯ ಪ್ರಾಮುಖ್ಯತೆ ಪಡೆದುಕೊಂಡಿರುವುದನ್ನೂ ಅವುಗಳ ಸಂಖ್ಯೆ ಭಾರೀ ವೇಗದಿಂದ ಬೆಳೆಯುತ್ತಿರುವುದನ್ನೂ ಕಾಣುತ್ತಿದ್ದೇವೆ. ಭಾರತದಲ್ಲಿ ಅಮಾಯಕ ಜನರಿಗೆ ಮಖ್‌ಮಲ್ ಟೋಪಿ ಹಾಕುವುದು ಬಹಳ ಸುಲಭವೆಂಬುದನ್ನು ಅರಿತ ಅತಿಜಾಣ ಪ್ಲಂಬರ್, ಎಲೆಕ್ಟ್ರೀಶಿಯನ್, ಮೆಕ್ಯಾನಿಕ್‌ಗಳಂಥವರು ರಾತ್ರಿ ಬೆಳಗಾಗುವುದರೊಳಗೆ ಮಾರುಕಟ್ಟೆಯ ಕಾವಿಬಟ್ಟೆಯಲ್ಲಿ ಸ್ವಾಮಿ, ಸಾಧ್ವಿಗಳಾದ ನಿದರ್ಶನಗಳು ಸಾಕಷ್ಟಿವೆ. ಇಂದು ಹೆಣ್ಣು ಹೊನ್ನು ಮಣ್ಣುಗಳಿಗೆ ದಾಸರಾಗಿ ಅಮಾಯಕ ಆಸ್ತಿಕ ಜನರ ಕಾವಿಭಕ್ತಿ, ಗುರುಶಾಪದ ಭೀತಿ ಮತ್ತು ದೈವಭಯದ ದುರ್ಬಳಕೆ ಮಾಡುವ, ರಾಜಕಾರಣಿಗಳೊಂದಿಗೆ ಒಡನಾಟವಿರುವ, ಶ್ರೀಮಂತ ಉದ್ಯಮಿಗಳ ಬೆಂಬಲವಿರುವ ಪಂಚರಂಗಿ ಕಾವಿಧಾರಿಗಳ ಸಂತತಿ ದೊಡ್ಡದಿದೆ. ಮಠಮಾನ್ಯಗಳು ಆಧ್ಯಾತ್ಮಿಕ, ನೈತಿಕ ಉನ್ನತಿಗೆ ಶ್ರಮಿಸುವುದನ್ನು ಮರೆತು ಮುಗ್ಧ ಜನರನ್ನು ಅಂಧಕಾರದಲ್ಲಿರಿಸಿ, ಅವರ ಧಾರ್ಮಿಕ ನಂಬಿಕೆಗಳನ್ನೇ ತಮ್ಮ ಬಂಡವಾಳವಾಗಿಸಿ ಅವರನ್ನು ಮಾನಸಿಕವಾಗಿ, ಆರ್ಥಿಕವಾಗಿ ಶೋಷಿಸುತ್ತಿರುವುದನ್ನು ಕಾಣಬಹುದು. ಕಪ್ಪುಹಣಕ್ಕೆ ಸುರಕ್ಷಿತ ತಾಣ ಅರಸುವ ಬಂಡವಾಳಿಗರು ಮತ್ತು ಮತಬ್ಯಾಂಕುಗಳ ಬೆಲ್ಲಕ್ಕೆ ಆಕರ್ಷಿತರಾದ ರಾಜಕಾರಣಿಗಳನ್ನು ಆತ್ಮೀಯರನ್ನಾಗಿಸಿ, ಅವರ ಜೊತೆ ನಿಕಟ ಸಂಬಂಧ ಸ್ಥಾಪಿಸಿ, ಎಕರೆಗಟ್ಟಲೆ ಭೂಮಿಯನ್ನು ಕಬಳಿಸಿ, ಶಿಕ್ಷಣ, ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ಲಾಭದ ದಂಧೆಯಲ್ಲಿ ತೊಡಗಿ ಲೆಕ್ಕಪತ್ರಗಳಿಲ್ಲದೆ, ಭೂತೆರಿಗೆ, ಆದಾಯತೆರಿಗೆ ಸಲ್ಲಿಸದೆ ರಾಜಾರೋಷವಾಗಿ ಕೋಟಿಗಟ್ಟಲೆ ಸಂಪತ್ತು ಕಲೆಹಾಕುವ ಮಠ, ಧಾರ್ಮಿಕ ಕೇಂದ್ರ ಮುಂತಾದವುಗಳ ಸಂಖ್ಯೆ ಗಣನೀಯವಾಗಿ ಏರಿದೆ. ಕಳೆಗಿಡಗಳ ಮಾದರಿಯಲ್ಲಿ ತಲೆಯೆತ್ತುತ್ತಿರುವ ಜಾತಿವಾರು ಮಠಗಳನ್ನು ಮುಖ್ಯವಾಗಿ ಮತಗಟ್ಟೆಯ ರಾಜಕಾರಣಕ್ಕೆಂದೇ ಹುಟ್ಟಿಸಿರುವಂತೆ ತೋರುತ್ತದೆ. ಹೀಗೆ ಸಾಂಸ್ಥೀಕರಣಕ್ಕೆ ಒಳಗಾದ ಧರ್ಮ (ಇದು ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ) ದಿಟಕ್ಕೂ ಒಂದು ವಾಣಿಜ್ಯೋದ್ಯಮವಲ್ಲದೆ ಬೇರೇನೂ ಅಲ್ಲ ಎಂಬುದನ್ನು ನಾವು ಅರಿಯಬೇಕು.
ಇಂದು ಸಾಂಸ್ಥೀಕರಣಗೊಂಡ ಧರ್ಮ, ರಾಜಕಾರಣ ಮತ್ತು ಕಾರ್ಪೊ ರೇಟುಗಳು ಒಂದಾಗಿ ಭಾರತದ ಜಾತ್ಯತೀತ ತತ್ವಗಳನ್ನು ಮೂಲೆಗುಂಪಾಗಿ ಸುತ್ತಿರುವ ಅಪಾಯಕಾರಿ ವಿದ್ಯಮಾನ ನಡೆಯುತ್ತಿದೆ. ಬಹುತೇಕ ಮಠಗಳು, ಆಶ್ರಮಗಳು ಮತ್ತಿತರ ಧಾರ್ಮಿಕ ಕೇಂದ್ರಗಳು ಭಾರತವನ್ನೊಂದು ಜಾತೀಯ, ಮತೀಯ ಮತ್ತು ಮಠೀಯ ಹಿಂದೂ ರಾಷ್ಟ್ರವನ್ನಾಗಿಸಲು ಹವಣಿಸುತ್ತಿರುವ ಮೂಲಭೂತವಾದಿ ಶಕ್ತಿಗಳ ಕಪಿಮುಷ್ಟಿಯೊಳಗೆ ಸಿಲುಕಿವೆ. ಜನರ ದೌರ್ಬಲ್ಯಗಳನ್ನು ಮತ್ತು ಮಠಮಂದಿರಗಳ ಅಪಾರ ಸಾಧ್ಯತೆಗಳನ್ನು ಮನಗಂಡ ಈ ದುಷ್ಟ ಶಕ್ತಿಗಳು ಅದನ್ನು ತಮ್ಮ ದುರುದ್ದೇಶಗಳಿಗಾಗಿ ಬಳಸತೊಡಗಿವೆ. ದೇಶಾದ್ಯಂತ ಅಲ್ಲಲ್ಲಿ ನಡೆಯುತ್ತಿರುವ ರಾಮಕಥೆಗಳು, ಗೋ ಅಭಿಯಾನ, ಸಮಾಜೋತ್ಸವ ಮುಂತಾದ ಕಾರ್ಯಕ್ರಮಗಳು ಸಂವಿಧಾನವನ್ನು ಬುಡಮೇಲು ಮಾಡುವ ಒಂದು ವ್ಯವಸ್ಥಿತ ಸಂಚಿನ ಭಾಗವಾಗಿವೆ. ಜನರನ್ನು ಧರ್ಮದ ಅಮಲಿನಲ್ಲಿ ತೇಲಿಸಿ, ಮೌಢ್ಯದ ಕೂಪದಲ್ಲಿ ಇರಿಸಿದರೆ ಅವರಿಂದ ಸಮಾಜದ ನೈಜ ಸಮಸ್ಯೆಗಳಿಗೆ ಸ್ಪಂದಿಸಲು ಹೇಗೆ ತಾನೆ ಸಾಧ್ಯ? ಅಂಥಾ ದೇಶವೊಂದು ಖಂಡಿತಾ ಅಭಿವೃದ್ಧಿಯಾಗದು. ನಿಜ ಹೇಳಬೇಕೆಂದರೆ ಅಂಥಾ ದೇಶಕ್ಕೆ ಉಳಿಗಾಲವಿಲ್ಲ. ಮಧ್ಯಯುಗದ ಐರೋಪ್ಯ ದೇಶಗಳ ಚರಿತ್ರೆಯನ್ನು ಓದಿದರೆ ಸಾಕು, ಈ ಕಟುಸತ್ಯದ ಅರಿವು ತಂತಾನೆ ಆಗುತ್ತದೆ. ಮಧ್ಯಯುಗೀನ ಯುರೋಪಿನ ಹೆಚ್ಚಿನ ದೇಶಗಳಲ್ಲಿ ಅರಸೊತ್ತಿಗೆಗಳೆಲ್ಲ ಚರ್ಚುಗಳ ಪ್ರಬಲ ಹಿಡಿತದಲ್ಲಿದ್ದವು. ಎಲ್ಲೆಡೆ ವ್ಯಾಪಕ ಭ್ರಷ್ಟಾಚಾರ, ದುರಾಚಾರ, ಅನಾಚಾರಗಳು ತಾಂಡವವಾಡುತ್ತಿದ್ದವು. ರಾಜರು, ಧಾರ್ಮಿಕ ನಾಯಕರು, ಸಾಮಂತರು, ಊಳಿಗಮಾನ್ಯ ದೊರೆಗಳು, ಜಮೀನ್ದಾರರು, ಶ್ರೀಮಂತರು ವೈಭವೋಪೇತ ಜೀವನ ನಡೆಸುತ್ತಿದ್ದರೆ ಜನಸಾಮಾನ್ಯರ ಬದುಕು ನಾಯಿಪಾಡಾಗಿತ್ತು. ಅಂತಿಮವಾಗಿ ಒಂದು ಸುಧಾರಣಾವಾದಿ ಜನ ಚಳವಳಿಯ ಫಲವಾಗಿ ಪ್ರಭುತ್ವ ಮತ್ತು ಧರ್ಮಗಳು ಪ್ರತ್ಯೇಕಗೊಂಡವು. ಆಡಳಿತದಲ್ಲಿ ಧರ್ಮದ ಹಸ್ತಕ್ಷೇಪ ಕೊನೆಗೊಂಡಿತು. ಇದರ ನಂತರ ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿಟ್ಟ ಯುರೋಪ್ ಮತ್ತೆಂದೂ ಹಿಂದಿರುಗಿ ನೋಡಲಿಲ್ಲ. ಪರಿಣಾಮವಾಗಿ ವೈಜ್ಞಾನಿಕ, ಸಾಂಸ್ಕೃತಿಕ, ಸಾಮಾಜಿಕ ರಂಗಗಳಲ್ಲಿ ಅದ್ಭುತ ಪ್ರಗತಿ ಸಾಧಿಸಿರುವ ಯುರೋಪ್, ಅಮೆರಿಕಗಳಲ್ಲಿ ಇಂದಿಗೂ ಧರ್ಮವನ್ನು ಆಡಳಿತದಿಂದ ಮಾರು ದೂರ ಇರಿಸಲಾಗಿದೆ ಎಂಬುದನ್ನು ನಾವೆಲ್ಲರೂ ಗಮನಿಸಬೇಕು. ಅದೇ ವೇಳೆ ಧರ್ಮಾಧರಿತ ದೇಶಗಳಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ಬವಣೆಗಳೇನೆಂಬುದನ್ನು ಕೂಡ ಕಣ್ಣಾರೆ ಕಾಣುತ್ತಿದ್ದೇವೆ.
ಭಾರತದಲ್ಲಿ ದೈವಶಾಪ, ಗುರುಶಾಪ ಇತ್ಯಾದಿಗಳ ಭೀತಿಯಿಂದ ದಿಕ್ಕುತೋಚದಾಗಿ ಒದ್ದಾಡುತ್ತಿರುವ ಮುಗ್ಧ ಭಕ್ತಜನ ಯಾವಾಗ ಎಚ್ಚತ್ತುಕೊಳ್ಳುವರೋ ತಿಳಿಯದು. ಸ್ವಾಮಿಗಳು, ಪೀಠಗಳು, ಮಠಗಳು ಮತ್ತು ಅವುಗಳ ಸುತ್ತ ನೆರೆಯುವ ಭಟ್ಟಂಗಿಗಳು ವೈಯಕ್ತಿಕ ಲಾಭಕ್ಕೋಸ್ಕರ ಇದ್ದಾರಷ್ಟೆ ಹೊರತು ದೈವಭಕ್ತಿಯಿಂದ ಖಂಡಿತಾ ಅಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುವುದೆಂದು? ಧರ್ಮ, ರಾಜಕಾರಣ ಮತ್ತು ಕಾರ್ಪೊರೇಟುಗಳ ಅಪವಿತ್ರ ಕೂಡಿಕೆ ಹೇಗೆ ತಮ್ಮನ್ನೆಲ್ಲ ಹಿಂಡಿಹಿಪ್ಪೆಯಾಗಿಸುತ್ತಿದೆ ಎಂಬ ಸತ್ಯವನ್ನು ಮನದಟ್ಟು ಮಾಡಿಕೊಳ್ಳುವುದು ಯಾವಾಗ? ನಿತ್ಯಾನಂದ, ಭೀಮಾನಂದ, ರಾಮಪಾಲ, ಅಮೃತ ಚೈತನ್ಯ, ನಿರ್ಮಲ್ ಬಾಬಾ, ಕಡಪದ ಮುತ್ತಿಕ್ಕುವ ಬಾಬಾ, ರಾಘವೇಶ್ವರ, ರಾಘವೇಂದ್ರ ತೀರ್ಥ, ಶಿವಯೋಗಿ ಶಿವಾಚಾರ್ಯ, ಮೂರುಸಾವಿರ ಮಠ, ಕಾಂಚಿ ಕಾಮಕೋಟಿ ಮಠ, ಆರ್ಟ್ ಆಫ್ ಲಿವಿಂಗ್, ಪತಂಜಲಿ ಪೀಠ ಮುಂತಾದ ನೂರಾರು ಸಾವಿರಾರು ಶೋಷಕರ ಅಸಲಿಯತ್ತನ್ನು ಅರಿಯುವುದು ಯಾವಾಗ? ಕಾವಿ ವೇಷದಲ್ಲಿರುವ ಪ್ರಣವಾನಂದ, ಅಸೀಮಾನಂದ, ಲಕ್ಷ್ಮಣಾನಂದ, ವಾಸುದೇವಾನಂದ, ರಾಜಶೇಖರಾನಂದ, ಆಸಾರಾಂ, ಆದಿತ್ಯನಾಥ, ಸಾಕ್ಷಿ ಮಹಾರಾಜ, ಓಮ್‌ಜೀ, ಪ್ರಾಚೀ, ನಿರಂಜನ್ ಜ್ಯೋತಿ, ಪ್ರಜ್ಞಾಸಿಂಗ್‌ರಂಥವರ ನಿಜ ಬಣ್ಣವನ್ನು ಈಗಾಗಲೇ ಕಂಡಿಲ್ಲವೇ? ಕಾವಿಧಾರಿಗಳೆಲ್ಲ ದೈವಾಂಶಸಂಭೂತರೆಂದು, ನಡೆದಾಡುವ ದೇವರೆಂದು ನಂಬಿಸುವವರಿಂದ ಮತ್ತು ಬಿಂಬಿಸುವವರಿಂದ ದೂರವಾದಷ್ಟೂ ತಮಗೂ ಕ್ಷೇಮ, ತಮ್ಮ ಕುಟುಂಬಗಳಿಗೂ ಕ್ಷೇಮ, ದೇಶಕ್ಕೂ ಕ್ಷೇಮವೆಂಬ ಅರಿವು ಮೂಡುವುದು ಯಾವಾಗ? ಯುರೋಪಿನ ಇತಿಹಾಸದಿಂದ ಪಾಠ ಕಲಿತು ನೈಜ ಜಾತ್ಯ ತೀತತೆಯನ್ನು ಅನುಸರಿಸುವುದೊಂದೆ ಋಜುಮಾರ್ಗ; ಅದೊಂದೆ ನೈಜ ಸರ್ವಾಂಗೀಣ ಪ್ರಗತಿಯ ಮಾರ್ಗ ಎಂಬ ಸತ್ಯದರ್ಶನ ಆಗುವುದು ಯಾವಾಗ? 
Please follow and like us:
error