ಕೊಪ್ಪಳ ಜಿಲ್ಲೆಯ ೧೨ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ.

ಕೊಪ್ಪಳ ಏ. ೦೨ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದ ೧೨
ಚಾಲಕರಿಗೆ ಅಪಘಾತ ರಹಿತ ಉತ್ತಮ ಚಾಲನೆಗಾಗಿ ಕೊಡಮಾಡುವ ಮುಖ್ಯಮಂತ್ರಿಗಳ ಚಿನ್ನದ ಪದಕ
ಪ್ರಶಸ್ತಿ ಲಭಿಸಿದೆ.
     ಕೊಪ್ಪಳ ವಿಭಾಗದಲ್ಲಿ ೨೦೦೮ ನೇ ಸಾಲಿನಿಂದ ೨೦೧೫ ನೇ
ಸಾಲಿನವರೆಗೆ ಅಪಘಾತ ರಹಿತ ಸೇವೆ ಸಲ್ಲಿಸಿದ ವಾಹನ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ
ಪದಕ ಲಭಿಸಿದ್ದು, ಕಳೆದ ಮಾ. ೨೩ ರಂದು ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ
ಸಂಬಂಧಿಸಿದ ಚಾಲಕರಿಗೆ ಪದಕ ಪ್ರದಾನ ಮಾಡಲಾಯಿತು.  ಕೊಪ್ಪಳ ಜಿಲ್ಲೆಯ ಎಸ್.ಬಿ. ಅಳವಂಡಿ,
ಗುರುಪಾದಪ್ಪ, ಎಮ್.ಎಸ್. ಮಳಗಿ, ಸಿದ್ದಪ್ಪ, ಅಬ್ದುಲ್ ರೆಹಮಾನ್, ಶರಣಪ್ಪ, ವಿ.ಎ.
ಅಗಡಿ, ಮುರ್ತುಜಾಖಾನ್, ಎ.ಎಮ್. ನೂರಬಾಷ, ಸಂಗನಬಸಪ್ಪ, ಮಲ್ಲಿಕಾರ್ಜುನ, ಸಿದ್ದಪ್ಪ
ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.  ಕೊಪ್ಪಳ
ವಿಭಾಗೀಯ ನಿಯಂತ್ರಣಾಧಿಕಾರಿ ಬಿ. ಬೋರಯ್ಯ ಅವರು ಚಾಲಕರಿಗೆ ಚಿನ್ನದ ಪದಕ, ಪ್ರಶಸ್ತಿ
ಪತ್ರದ ಜೊತೆಗೆ  ನಗದು ಪುರಸ್ಕಾರವಾಗಿ ೫ ಸಾವಿರ ರೂ.ಗಳನ್ನು ನೀಡಿ ಗೌರವಿಸಿದರು. 
ವಿಭಾಗೀಯ ಸಂಚಾರ ಅಧಿಕಾರಿ ದೇವಾನಂದ ಬಿರಾದಾರ, ಕಾರ್ಮಿಕ ಕಲ್ಯಾಣಾಧಿಕಾರಿ ಕರೇಗೌಡ,
ಸಹಾಯಕ ಸಂಚಾರ ವ್ಯವಸ್ಥಾಪಕಿ ಪುಷ್ಪಲತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error