ಉದ್ಯೋಗಖಾತ್ರಿ : ಹೆಚ್ಚುವರಿ ಪಾವತಿಸಿದ ಹಣ ಹಿಂದಕ್ಕೆ ಪಡೆಯಿರಿ- ಜ್ಯೋತಿ ಬಿಲ್ಗಾರ್

ಕೊಪ್ಪಳ ಡಿ.  : ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ ಪಾವತಿಸಿರುವ ಹಣವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಹಿಂಪಡೆಯಲು ಅಗತ್ಯ ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕರ್ನಾಟಕ ಅಭಿವೃದ್ಧಿ ಅಂಶಗಳ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಉದ್ಯೋಗಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ನಡೆಸಿರುವ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಥರ್ಡ್ ಪಾರ್ಟಿ ಇನ್ಸ್‌ಪೆಕ್ಷನ್ ನಡೆಸಲು ಕ್ರಮ ಕೈಗೊಳ್ಳಲಾಗಿದೆ.  ಥರ್ಡ್ ಪಾರ್ಟಿ ಇನ್ಸ್‌ಪೆಕ್ಷನ್ ವರದಿಯ ಆಧಾರದಂತೆ ಹೆಚ್ಚುವರಿ ಹಣ ಪಾವತಿಸಿರುವುದಕ್ಕೆ ಸಂಬಂಧಿಸಿದಂತೆ, ಅಂತಹ ಅಧಿಕಾರಿಗಳಿಂದ ಹೆಚ್ಚುವರಿ ಮೊತ್ತ ಹಿಂಪಡೆಯಲು ಅಗತ್ಯ ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ ಅವರಿಗೆ ಸೂಚನೆ ನೀಡಿದರು.  ಜಿಲ್ಲೆಯಲ್ಲಿ ಸದ್ಯ ಬರ ಪರಿಸ್ಥಿತಿ ಇದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.  ಆದ್ದರಿಂದ ರಾಜೀವ್‌ಗಾಂಧಿ ಸಬ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಬಹು ಗ್ರಾಮಗಳ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಪಿ.ಎ. ಭಜಂತ್ರಿ ಅವರಿಗೆ ತಿಳಿಸಿದರು.  ಸಭೆಗೆ ತಡವಾಗಿ ಆಗಮಿಸಿದ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಶೋಕಾಸ್ ನೋಟೀಸ್ ನೀಡುವಂತೆ ಸೂಚನೆ ನೀಡಲಾಯಿತು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ  ತುಳಸಿ ಮದ್ದಿನೇನಿ ಅವರು ಮಾತನಾಡಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದುಕೊರತೆ ಅರ್ಜಿಗಳ ವಿಲೇವಾರಿ ಬಗ್ಗೆ ಜಿಲ್ಲಾಡಳಿತ ಪ್ರತ್ಯೇಕ ಸಾಫ್ಟ್‌ವೇರ್ ಅಳವಡಿಸಲು ಕ್ರಮ ಕೈಗೊಂಡಿದ್ದು, ಯಾವುದೇ ಇಲಾಖೆ ಬಗ್ಗೆ ಸಾರ್ವಜನಿಕರ ಅರ್ಜಿಗಳ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳ ಮೊಬೈಲ್‌ಗಳಿಗೆ ಎಸ್‌ಎಂಎಸ್ ಸಂದೇಶ ರವಾನೆಯಾಗಲಿದೆ.  ಅಲ್ಲದೆ ಇದಕ್ಕೆ ಸಂಬಂಧಪಟ್ಟಂತೆ ತಂತ್ರಾಂಶದಲ್ಲಿ ದೂರು ದಾಖಲುಗೊಂಡು, ಆ ಅರ್ಜಿ ವಿಲೇವಾರಿಯಾಗುವವರೆಗೂ ಅಂತರ್ಜಾಲದಲ್ಲಿ ಅದು ಪೆಂಡಿಂಗ್ ಇರುವ ಬಗ್ಗೆ ಸೂಚನೆ ನೀಡಲಿದೆ.  ಅಧಿಕಾರಿಗಳು ಸಾರ್ವಜನಿಕರ ದೂರು ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲೇಬಾಕಾಗುತ್ತದೆ.  ಇಲ್ಲವಾದಲ್ಲಿ ಅಂತಹವರ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೫ ಲಕ್ಷ : ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿನ ಕುಡಿಯುವ ನೀರು ತೊಂದರೆ ನಿವಾರಿಸಲು ಕೈಪಂಪು ದುರಸ್ತಿ, ಕೊಳವೆಬಾವಿ ರೀ ಡ್ರಿಲ್ಲಿಂಗ್, ಪೈಪ್‌ಲೈನ್ ವಿಸ್ತರಣೆ ಮುಂತಾದ ಕಾರ್ಯಗಳಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ೫ ಲಕ್ಷ ರೂ.ಗಳಂತೆ ಜಿಲ್ಲೆಗೆ ಒಟ್ಟು ೫೦ ಲಕ್ಷ ರೂ.ಗಳ ಹಣ ಬಿಡುಗಡೆ ಮಾಡಲಾಗಿದೆ.  ಅಲ್ಲದೆ ಜಿಲ್ಲೆಯಲ್ಲಿನ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ಎಲ್ಲಾ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಥರ್ಡ್ ಪಾರ್ಟಿ ಇನ್ಸ್‌ಪೆಕ್ಷನ್ ನಡೆಸಲು ನಿರ್ಧರಿಸಲಾಗಿದೆ.  ಇವರ ವರದಿಯ ಆಧಾರದ ಮೇರೆಗೆ ಮಾತ್ರ ಬಿಲ್ ಪಾವತಿ ಮಾಡಲಾಗುವುದು.  ಜಿಲ್ಲೆಯಲ್ಲಿ ಸದ್ಯ ಯಾವುದೇ ಭಾಗದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯ ಬಗ್ಗೆ ವರದಿ ಬಂದಿಲ್ಲ.  ಮೇವು ಸಂಗ್ರಹಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಶಿಕ್ಷಕರಿಂದ ಹಣ ವಸೂಲಿಗೆ ಕಠಿಣ ಕ್ರಮ : ಜಿಲ್ಲೆಯ ಶಿಕ್ಷಕರ ಸೇವಾ ವಿವರಗಳನ್ನು ಹೆಚ್‌ಆರ್‌ಎಂಎಸ್ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಪ್ರತಿ ಶಿಕ್ಷಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿದ್ದು, ಯಾವುದೇ ಶಿಕ್ಷಕರು ಇದಕ್ಕಾಗಿ ಹಣ ಪಾವತಿಸಬಾರದು.  ಶಿಕ್ಷಕರ ಸೇವಾ ವಿವರಗಳನ್ನು ಕಡ್ಡಾಯವಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೆಚ್‌ಆರ್‌ಎಂಎಸ್ ತಂತ್ರಾಂಶದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕು.  ಇಂಟರ್‌ನೆಟ್ ಸೌಲಭ್ಯ ಇಲ್ಲದೆ ಇರುವವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಎನ್‌ಐಸಿ (ರಾಷ್ಟ್ರೀಯ ವಿಜ್ಞಾನ ಸೂಚನಾ ಕೇಂದ್ರ) ಕಚೇರಿಯಲ್ಲಿ ಹೆಚ್‌ಆರ್‌ಎಂಎಸ್ ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯವನ್ನು ಮಾಡಿಕೊಳ್ಳಬಹುದಾಗಿದೆ.  ಒಂದು ವೇಳೆ ಶಿಕ್ಷಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುವ ಬಗ್ಗೆ ಪದೇ ಪದೇ ದೂರುಗಳು ಬಂದಲ್ಲಿ ಸಂಬಂಧಪಟ್ಟ ಶಿಕ್ಷಣ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉದ್ಘಾಟನೆಗೆ ಕಾಯಬೇಡಿ : ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಶ್ರೀರಾಮನಗರ, ಉಳೇನೂರು ಮತ್ತು ೭ ಗ್ರಾಮಗಳು, ಕಾರಟಗಿ ಮತ್ತು ೨೭ ಗ್ರಾಮಗಳು ಮುಂತಾದ ಯೋಜನೆಗಳನ್ನು ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  ಈ ಪೈಕಿ ಶ್ರೀರಾಮನಗರ, ಉಳೇನೂರ ಮತ್ತು ೭ ಗ್ರಾಮಗಳ ಕುಡಿಯುವ ನೀರು ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಯಷ್ಟೆ ಬಾಕಿ ಉಳಿದಿದೆ ಎಂದು ಪಂಚಾಯರ್ ರಾಜ್ ಇಂಜಿನಿಯರಿಂಗ್ ವಿಭಾಗದ ಗಂಗಾವತಿ ಎಇಇ ಪಾಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಯದೆ, ಜನರಿಗೆ ಮೊದಲು ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.  ಕಾರಟಗಿ ಮತ್ತು ೨೭ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿದ್ದು, ಜನವರಿ ೨೬ ರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ, ಜನರಿಗೆ ನೀರು ಸರಬರಾಜು ಮಾಡುವಂತೆ ಸೂಚನೆ ನೀಡಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ, ಉಪಕಾರ್ಯದರ್ಶಿ ಅನ್ನದಾನಯ್ಯ, ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error