ದೇಶದ ಜನ ಇವರನ್ನು ನಂಬಲು ಸಾಧ್ಯವೇ?

– ಸನತ್‌ಕುಮಾರ ಬೆಳಗಲಿ
ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಮಾಡಲು ಶೇ.98ರಷ್ಟು ಹಿಂದೂಗಳ ವಿರೋಧವಿದೆ. ಎಲ್ಲ ಹಿಂದೂಗಳ ಸಮ್ಮತಿ ಇದಕ್ಕಿದ್ದಿದ್ದರೆ ಬಿಜೆಪಿ ಲೋಕಸಭೆಯ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ದೇಶದ ಅಧಿಕಾರ ಸೂತ್ರವನ್ನು ಹಿಡಿಯುತ್ತಿತ್ತು ಎಂಬುದನ್ನು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮತ್ತು ಪಕ್ಷಾಧ್ಯಕ್ಷ ನಿತೀನ್ ಗಡ್ಕರಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅಂತಲೇ ಬಿಜೆಪಿ ಮುಸ್ಲಿಂ ಮತ್ತು ದಲಿತ ವಿರೋಧಿ ಅಲ್ಲ ಎಂಬ ಸಮಜಾಯಿಷಿಯನ್ನು ಅವರು ಪದೇ ಪದೇ ನೀಡುತ್ತಿದ್ದಾರೆ.ಇತ್ತೀಚೆಗೆ ಸೂರಜ್‌ಕುಂಡದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಮಂಡಲಿಯ ಸಭೆಯಲ್ಲಿ ಕೊನೆಯ ದಿನ ಮಾತನಾಡುತ್ತಿದ್ದ ಅಡ್ವಾಣಿ ಕೊನೆಯ ಕ್ಷಣದಲ್ಲಿ ಆಡಿದ ಮಾತು ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ತಮ್ಮ ಲಿಖಿತ ಭಾಷಣ ವನ್ನು ಮುಗಿಸುವ ಹಂತದಲ್ಲಿ ‘‘ಬಿಜೆಪಿ ಜಾತ್ಯತೀತತೆಗೆ ತನ್ನ ಬದ್ಧತೆಯನ್ನು ಸಾಬೀತು ಪಡಿಸಬೇಕಾಗಿದೆ’’ ಎಂದು ಹೇಳಿಬಿಟ್ಟರು.
ಅಡ್ವಾಣಿ ಹೀಗೆ ಹೇಳಿದ ಒಂದೇ ವಾರದಲ್ಲಿ ಬಿಜೆಪಿ ಅಧ್ಯಕ್ಷ ನಿತೀನ್ ಗಡ್ಕರಿ ಅವರು ತಮ್ಮ ಪಕ್ಷ ಮುಸ್ಲಿಂ ವಿರೋಧಿ ಅಲ್ಲ. ಇದೆಲ್ಲ ಅಪಪ್ರಚಾರ ಎಂದು ಬಿಟ್ಟರು. ಅವಕಾಶ ವಂಚಿತರ ಸಲುವಾಗಿ ಶ್ರಮಿಸಬೇಕು ಎಂದು ಗಡ್ಕರಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಅಡ್ವಾಣಿ ಮತ್ತು ಗಡ್ಕರಿಯವರು ಉದುರಿಸಿದ ಮಾತುಗಳನ್ನು ಮನಃ ಪರಿವರ್ತನೆ ಎಂದು ಭಾವಿಸಿದರೆ ಶತಮೂರ್ಖತನವಾಗುತ್ತದೆ. ಇದು ಮನಪರಿವರ್ತನೆಯಲ್ಲ, ಮತ ಪರಿವರ್ತನೆಗೆ ನಡೆಸಿದ ಮಸಲತ್ತು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತರ, ದಲಿತರ ಓಟುಗಳು ಬೇಕು. ಗೆದ್ದ ನಂತರ ಸರಕಾರ ರಚಿಸಲು ಸಂಯುಕ್ತ ಜನತಾದಳ, ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್‌ನಂಥ ಪಕ್ಷಗಳ ಬೆಂಬಲ ಪಡೆಯಬೇಕು. ಅದಕ್ಕಾಗಿ ಈ ಹೊಸತಂತ್ರ.
90ರ ಶತಕದಲ್ಲಿ ವಿ.ಪಿ.ಸಿಂಗ್ ಸರಕಾರ ಹಿಂದುಳಿದವರ ಏಳಿಗೆಗಾಗಿ ತಂದ ಮಂಡಲ ಆಯೋಗದ ವಿರುದ್ಧ ರಾಮ ಮಂದಿರ ಅಜೆಂಡಾ ಮುಂದೆ ಮಾಡಿ ರಥವೇರಿದ ಹಿಂದುತ್ವದ ಐಕಾನ್ ಅಡ್ವಾಣಿ ಇತ್ತೀಚಿನವರೆಗೆ ಜಾತ್ಯತೀತವನ್ನು ‘ನಕಲಿ’ ಎಂದು ಬಣ್ಣಿಸುತ್ತಿದ್ದರು. ಈಗ ತಾನೆ ನಕಲಿ ಜಾತ್ಯತೀತ ವಾಗಿ ಜಾತ್ಯತೀತತೆಯ ಮುಖವಾಡ ಧರಿಸಲು ಹೊರಟಿದ್ದಾರೆ.ಆದರೆ ಈ ದೇಶದ ಜನ ಇವರನ್ನು ನಂಬಲು ಹೇಗೆ ಸಾಧ್ಯ. ಗಾಂಧಿ ಹತ್ಯೆಯಿಂದ ಗುಜರಾತ್ ಹತ್ಯಾಕಾಂಡದ ವರೆಗೆ ಇವರು ನಡೆದು ಬಂದ ದಾರಿ ರಕ್ತಸಿಕ್ತ ದಾರಿ. ಆ ನೆತ್ತರಿನ ಕಲೆಗಳನ್ನು ಅಷ್ಟು ಸುಲಭವಾಗಿ ಒಂದು ಭಾಷಣದಿಂದ ಅಳಿಸಿ ಹಾಕಲು ಸಾಧ್ಯವಿಲ್ಲ. ಅದು ಅಡ್ವಾಣಿಗೂ ಗೊತ್ತು. ಆದರೆ ಈಗ ಈ ರೀತಿ ಅವರು ಮಾತನಾಡಲೇ ಬೇಕಾಗಿದೆ.
ಒಂದೆಡೆ ಅಡ್ವಾಣಿ ಜಾತ್ಯತೀತತೆ ಬಗ್ಗೆ ಮಾತಾಡುತ್ತಿದ್ದರೆ, ಇನ್ನೊಂದೆಡೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅವರದೇ ಸಂಘ ಪರಿವಾರದ ಕಲ್ಲಡ್ಕ ಪ್ರಭಾಕರ ಭಟ್ಟರು ಅಲ್ಪಸಂಖ್ಯಾತರನ್ನು ದೇಶದಿಂದ ಓಡಿಸಬೇಕೆಂಬ ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಕಳೆದ ಜನವರಿ 22ರಂದು ಉಪ್ಪಿನಂಗಡಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಈ ಭಟ್ಟ ಮಾಡಿದ ಭಾಷಣವನ್ನು ಕೇಳಿದ ಯಾವ ಮುಸಲ್ಮಾನನೂ ಬಿಜೆಪಿಗೆ ಮತ ಹಾಕಲು ಸಾಧ್ಯವಿಲ್ಲ. ಇಂಥ ಭಟ್ಟನ ವಿರುದ್ಧ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಬಿಜೆಪಿ ಸರಕಾರದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅದೇ ಭಟ್ಟನನ್ನು ಠಾಣೆಗೆ ಕರೆದು ಅಭಿನಂದಿಸುತ್ತಾರೆ.
ಕಲ್ಲಡ್ಕ ಭಟ್ಟರ ಭಾಷಣಕ್ಕೆ ಸಂಬಂಧಿಸಿದಂತೆ ಕೊನೆಗೆ ಹೈಕೋರ್ಟ್ ಮಧ್ಯಪ್ರವೇಶ ಮಾಡಿ ಭಾಷಣದ ವಿಡಿಯೋ ಚಿತ್ರಣ ಸಲ್ಲಿಸುವಂತೆ ಆದೇಶಿಸಿದೆ. ಪೊಲೀಸರು ‘ಬಿ’ ರಿಪೋರ್ಟ್ ಸಲ್ಲಿಸಿದ್ದಾರೆಂದು ಹೇಳಿದ ಸರಕಾರಿ ವಕೀಲರನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಥ ವ್ಯಕ್ತಿಗಳಿಂದ (ಕಲ್ಲಡ್ಕ) ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.
ಕಲ್ಲಡ್ಕ ಭಟ್ಟರದು ಒಂದು ಸ್ಥಳೀಯ ಉದಾಹರಣೆ ಮಾತ್ರ. ದೇಶವ್ಯಾಪಿ ಸಂಘ ಪರಿವಾರ ಹಿಂದೂ ಉನ್ಮಾದ ಕೆರಳಿಸಿ ಹಿಂದೂ ಓಟ್ ಬ್ಯಾಂಕ್ ಸೃಷ್ಟಿಸಲು ಅಶಾಂತಿಯನ್ನು ಉಂಟು ಮಾಡುತ್ತಿದೆ. ಇನ್ನೊಂದೆಡೆ ಅಡ್ವಾಣಿ, ಗಡ್ಕರಿ ಮೊಸಳೆ ಕಣ್ಣೀರು ಹಾಕುತ್ತಾರೆ.ಸಂಘಪರಿವಾರದ ಈ ತಂತ್ರ ಹೊಸದೇನಲ್ಲ. ಹಿಂದೆ ರಾಮ ಜನ್ಮ ಭೂಮಿ ಹೆಸರಿನಲ್ಲಿ ಬಾಬರಿ ಮಸೀದಿಯನ್ನು ನಾಶ ಮಾಡಿದಾಗಲೂ ಒಂದೆಡೆ ಹಿಂದೂ ಓಟ್ ಬ್ಯಾಂಕ್ ಸೃಷ್ಟಿಸಲು ಅದು ಯತ್ನಿಸಿತು. ಇನ್ನೊಂದೆಡೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಮುಂದೆ ಮಾಡಿ ಸೆಕ್ಯುಲರ್ ಪಕ್ಷಗಳ ಬೆಂಬಲ ಪಡೆಯಲು ಹರಸಾಹಸ ನಡೆಸಿತು. ಯಾಕೆಂದರೆ ಮಂದಿರ ನಿರ್ಮಾಣ, ರಥಯಾತ್ರೆ ಸಭೆಗಳಲ್ಲಿ ಅಡ್ವಾಣಿ ಎಲ್ಲೂ ಭಾಗವಹಿಸಿರಲಿಲ್ಲ. ಮೇಲ್ನೋಟಕ್ಕೆ ಅವರ ಉದಾರವಾದಿ ವ್ಯಕ್ತಿತ್ವ ಬಿಜೆಪಿ ಎನ್‌ಡಿಎ ಕೂಟದ ನಾಯಕತ್ವ ವಹಿಸಿ ಅಧಿಕಾರಕ್ಕೆ ಬರಲು ಅವಕಾಶ ದೊರಕಿತು.
ಆದರೆ ಈಗ ವಾಜಪೇಯಿಯಂಥ ಒಬ್ಬನೇ ಒಬ್ಬ ನಾಯಕನೂ ಬಿಜೆಪಿಯಲ್ಲಿ ಇಲ್ಲ. ಈಗ ಇರುವವರೆಲ್ಲ ರಥಯಾತ್ರೆಯ ವೀರಾಧಿವೀರರೇ. ಅಡ್ವಾಣಿಯವರನ್ನು ಬಿಟ್ಟರೆ ಮತ್ಯಾರಿದ್ದಾರೆ. ಗಡ್ಕರಿ, ಸುಷ್ಮಾ ಸ್ವರಾಜ್, ಜೇಟ್ಲಿ ಇವರೆಲ್ಲ ಮೈನಿಂಗ್, ಲ್ಯಾಂಡ್ ಮಾಫಿಯಾದ ಫಲಾನುಭವಿಗಳು. ಇನ್ನು ನರೇಂದ್ರ ಮೋದಿ. ಆತನಿಗೆ ನಾಯಕತ್ವ ನೀಡಿದರೆ ಬಿಜೆಪಿ ಇಡಿಯಾಗಿ ಅರಬ್ಬಿ ಸಮುದ್ರದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಂತಾಗುತ್ತದೆ. ಯಾಕೆಂದರೆ ಈಗ ಬಿಜೆಪಿ ಜೊತೆಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶರದ್ ಯಾದವ್ ಇಂಥವರೆಲ್ಲ ದೂರ ಸರಿಯುತ್ತಾರೆ.
ವಾಜಪೇಯಿಯಂಥ ಯಾವ ನಾಯಕನು ಇಲ್ಲದಾಗ ತಾನೆ ಹಾಗಾಗಬೇಕೆಂದು ಸೆಕ್ಯುಲರ್ ಮುಖವಾಡ ಹಾಕಿಕೊಂಡ ಅಡ್ವಾಣಿ ಬಾಯಲ್ಲಿ ಸೌಹಾರ್ದತೆಯ ಮಾತು ಬರುತ್ತಿವೆ. ಆದರೆ ಇದನ್ನು ದೇಶದ ಜನತೆ ನಂಬಬೇಕಾದರೆ ಕೆಲ ವಿಷಯಗಳನ್ನು ತನ್ನ ಕಾರ್ಯ ಸೂಚಿಯಿಂದ ಕೈಬಿಟ್ಟಿರುವುದಾಗಿ ಬಿಜೆಪಿ ಬಹಿರಂಗವಾಗಿ ಹೇಳಬೇಕು. ಅಯೋಧ್ಯ ಮಂದಿರ ವಿವಾದ, ಏಕರೂಪ ನಾಗರಿಕ ಸಂಹಿತೆ, ಗೋಹತ್ಯೆ ನಿಷೇಧ ಇಂಥ ವಿವಾದಾತ್ಮಕ ವಿಷಯಗಳನ್ನು ಕೈಬಿಟ್ಟಿ ರುವುದಾಗಿ ಅದು ಹೇಳಬೇಕಾ ಗುತ್ತದೆ.
ಆದರೆ ಹಾಗೆ ಹೇಳಲು ಬಿಜೆಪಿ ಸಿದ್ಧವಿಲ್ಲ. ಮನಪರಿವರ್ತನೆ ಯಾಗಿದ್ದರೆ ಮಾತ್ರ ಈ ರೀತಿ ಸ್ಪಷ್ಟ ನಿಲುವನ್ನು ಪ್ರಕಟಿಸಲು ಸಾಧ್ಯ ವಾಗುತ್ತದೆ. ಆದರೆ ತನ್ನ ಹಿಂದುತ್ವವಾದಿ ಅಜೆಂಡಾ ಜಾರಿಗೆ ತರಲು ಬಿಜೆಪಿಗೆ ಅಧಿಕಾರಕ್ಕೆ ಬರಬೇಕೆಂದರೆ ಇತರರ ಬೆಂಬಲ ಬೇಕು. ಅದಕ್ಕಾಗಿ ಈ ಹಗಲು ವೇಷ ಹಾಕಿಕೊಂಡಿದೆ.ಜಗತ್ತಿನ ಯಾವುದೇ ಒಂದು ಫ್ಯಾಸಿಸ್ಟ್ ಪಕ್ಷ ಅಷ್ಟು ಸುಲಭವಾಗಿ ತನ್ನ ಕಾರ್ಯಸೂಚಿಯನ್ನು ಬಿಟ್ಟುಕೊಡುವುದಿಲ್ಲ. ಅಧಿಕಾರಕ್ಕೆ ಬರಲು ತಾನೂ ಸಮಾಜವಾದಿ ಎಂದು ಹೇಳಿಕೊಂಡಿದ್ದ ಜರ್ಮನಿಯ ಅಡಾಲ್ಫ್ ಹಿಟ್ಲರ್ ಅಧಿಕಾರ ಬಂದ ನಂತರ ಏನು ಮಾಡಿದ ಎಂಬುದು ಎಲ್ಲರಿಗೂ ಗೊತ್ತಿದೆ.
Please follow and like us:
error