ಸಂಭ್ರಮದಿಂದ ಜರುಗಿದ ವಡಕರಾಯ ಹಾಗೂ ರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವ

ಹೊಸಪೇಟೆ: ಭಕ್ತರ ಸಂಭ್ರಮ, ಸಡಗರದೊಂದಿಗೆ ವಡಕರಾಯ ಹಾಗೂ ರಂಗನಾಥಸ್ವಾಮಿ ಸ್ವಾಮಿಯ ಜಾತ್ರಾ ಮಹೋತ್ಸವದ ರಥೋತ್ಸವ ನಗರದ ಮೇನ್ ಬಜಾರಿನಲ್ಲಿ ಈಚೆಗೆ ನಡೆಯಿತು. 
ಅಂದು ಸಂಜೆ ೫ಗಂಟೆಗೆ ಆರಂಭವಾದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಘೋಷಣೆ ಕೂಗಿದರಲ್ಲದೆ, ದೇವಸ್ಥಾನದಿಂದ ಪಾದಗಟ್ಟಿ ಆಂಜನೇಯ ದೇವಸ್ಥಾನದವರೆಗೆ ರಥವನ್ನು ಎಳೆದರು. 
ನಗರ ಸೇರಿದಂತೆ ಬಳ್ಳಾರಿ ಜಿಲ್ಲೆ ಹಾಗೂ ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ಭಕ್ತರು ರಥೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರಲ್ಲದೆ, ಹರ್ಷೋದ್ಘಾರಗಳೊಂದಿಗೆ ರಥದ ಚಕ್ರಗಳಿಗೆ ತೆಂಗಿನ ಕಾಯಿ ಒಡೆದರು. 
ಎರಡು ಗಂಟೆಗಳ ಕಾಲ ನಡೆದ ಈ ರಥೋತ್ಸವದ ಉದ್ದಕ್ಕೂ ಭಕ್ತರು ಭಕ್ತಿ ಭಾವದೊಂದಿಗೆ ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಧನ್ಯತಾ ಭಾವ ಮೆರೆದರು. ರಥೋತ್ಸವದ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳಾದ ಗೊಂಬೆ ಕುಣಿತ, ಡೊಳ್ಳುಕುಣಿತ, ಉರುಮೆ ವಾದ್ಯ, ವೀರಗಾಸೆ, ಕೀಲು ಕುದುರೆ, ಮಹಿಳಾ ವೀರಗಾಸೆ, ಸುಗ್ಗಿ ಕುಣಿತಗಳು ಗಮನ ಸೆಳೆದವು. ಮಹಿಳೆಯರು ಪೂರ್ಣಕುಂಭಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರೆ, ರಸ್ತೆಯ ಇಕ್ಕೆಲಗಳ ದೊಡ್ಡ ದೊಡ್ಡ ಕಟ್ಟಡಗಳ ಮೇಲೆ ನಿಂತಿದ್ದ ಭಕ್ತರು ರಥೋತ್ಸವ ವಿಕ್ಷೀಸಿದರು. 
ಇದಕ್ಕೂ ಮೊದಲು ಅರ್ಚಕರು ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಬೆಳಿಗ್ಗೆ ರಥದ ಎದುರು ‘ರಥಾಂಗ ಹೋಮ’ ನಡೆಸಿದರಲ್ಲದೆ, ವಡಕರಾಯ ಹಾಗೂ ರಂಗನಾಥ ಸ್ವಾಮಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮಡಿತೇರು ಎಳೆದರು. ನಂತರ ರಥದ ಧ್ವಜವನ್ನು ಹರಾಜು ಮಾಡಲಾಯಿತು. ನಂತರ ಮಹಿಳೆಯರು ಸಂಪ್ರದಾಯದಂತೆ ಆರತಿ ಮತ್ತು ನೈವೇದ್ಯ ಸಮರ್ಪಿಸಿದರು. ವಡಕರಾಯ ಹಾಗೂ ರಂಗನಾಥ ಸ್ವಾಮಿ ರಥೋತ್ಸವದಲ್ಲಿ ರಾಜ್ಯ ಸೇರಿದಂತೆ ನೆರೆಯ ಆಂಧ್ರಪ್ರದೇಶದ ಭಕ್ತರು ಪಾಲ್ಗೊಳ್ಳುತ್ತಾರೆ. ಪ್ರತಿವರ್ಷ ಸಾಂಪ್ರದಾಯಿಕವಾಗಿ ಆಚರಿಸುವ ಜಾತ್ರೆಯಲ್ಲಿ ಮಕ್ಕಳು, ಮಹಿಳೆಯರು, ವೃದ್ಧರಾಧಿಯಾಗಿ ಪಾಲ್ಗೊಳ್ಳುತ್ತಾರೆ ಎಂದು ದೇವಸ್ಥಾನದ ಅರ್ಚಕ ಮುರುಳಿಧರ ಭಟ್ ಜೋಶಿ ಹೇಳುತ್ತಾರೆ.  
ಉಚಿತ ಅನ್ನಸಂತರ್ಪಣೆ: ನಗರದಲ್ಲಿ ಸೋಮವಾರ ನಡೆದ ವಡಕರಾಯಸ್ವಾಮಿ ಮತ್ತು ರಂಗನಾಥಸ್ವಾಮಿಯ ಜಾತ್ರೆಯ ವಡಕರಾಯ ಸೌಹಾರ್ದ ವಿವಿಧೋದ್ದೇಶ ಸಹಕಾರಿ ನಿಯಮಿತ ಮತ್ತು ಚಿನ್ನಿ ನಾಗರಾಜ ಶೆಟ್ಟಿ ಇವರ ಸ್ಮರಣಾರ್ಥನ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಜರುಗಿತು. ಈ ಕಾರ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ದತ್ತಿಗಳ ಸಹಾಯಕ ಆಯುಕ್ತ ಎಸ್.ಪಿ.ಬಿ. ಮಹೇಶ, ಬ್ಯಾಂಕಿನ ಅಧ್ಯಕ್ಷ ನರಸಿಂಹಮೂರ್ತಿ (ಅಪ್ಪಣ್ಣ) ಕಾರ್ಯದರ್ಶಿ ಅಪ್ಪಾರಾವ್ ಸಾನಬಾಳ, ಶಾರದಾ ಕುಲಕರ್ಣಿ ಹಾಗೂ ಚಿನ್ನಿ ರಾಮಕುಮಾರ್, ಗೋವಿಂದ ಕುಲಕರ್ಣಿ, ಮಡ್ಡೇರ್ ವೆಂಕಪ್ಪ, ಸಂಜೀವ್, ಎನ್.ಟಿ.ರಾಜು, ಗೋಗಿ ನಾಗರಾಜ್, ಮಡ್ಡೇರ್ ವಿರೂಪಾಕ್ಷಿ, ಶಿವಲಿಂಗ, ರಾಘವೇಂದ್ರ ಹಾಜರಿದ್ದರು. 
Please follow and like us:
error