ಕೊಪ್ಪಳ ಉಪಚುನಾವಣೆ : ಸಂಗಣ್ಣ ಕರಡಿ ಅವರಿಗೆ ಗೆಲುವು

ಕೊಪ್ಪಳ ಸೆ. : ಕೊಪ್ಪಳ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಅವರು ಸದ್ಯ ನಡೆದ ಉಪಚುನಾವಣೆಯಲ್ಲಿ ೧೨೪೮೮ ಮತಗಳ ಅಂತರದಿಂದ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ.
  ಮತ ಎಣಿಕೆ ಸಿಬ್ಬಂದಿಗಳಲ್ಲಿ ಅತ್ಯುತ್ಸಾಹ, ಪೊಲೀಸ್ ಬಿಗಿ ಬಂದೋಬಸ್ತ್, ಸಾರ್ವಜನಿಕರು ಹಾಗೂ ಅಭ್ಯರ್ಥಿಗಳಲ್ಲಿ ತೀವ್ರ ಕುತೂಹಲ, ವಿಜೇತ ಅಭ್ಯರ್ಥಿಯ ಮುಖದಲ್ಲಿ ಗೆಲುವಿನ ನಗೆ, ಬಿ.ಜೆ.ಪಿ. ಕಾರ್ಯಕರ್ತರಲ್ಲಿ ವಿಜಯೋತ್ಸಾಹ ಇವು ಮತ ಎಣಿಕೆ ಕೇಂದ್ರವಾದ ಶ್ರೀ ಗವಿಸಿದ್ದೇಶ್ವರ ಮಹಾ ವಿದ್ಯಾಲಯ ಆವರಣದಲ್ಲಿ ಸೆ. ೨೯ ರಂದು ಕಂಡು ಬಂದ ಪ್ರಮುಖ ದೃಶ್ಯಾವಳಿಗಳು.  ಸೆ. ೨೯ ರಂದು ಗುರುವಾರ ಬೆಳಿಗ್ಗೆ ೮ ಗಂಟೆಗೆ ಪ್ರಾರಂಭಗೊಂಡ ಮತ ಎಣಿಕೆ ಕಾರ್ಯ ಮಧ್ಯಾಹ್ನ ೧೨ ಗಂಟೆಗೆ ಪೂರ್ಣಗೊಂಡಿತು. ಫಲಿತಾಂಶವನ್ನು ಪ್ರಕಟಿಸಿದ ಕೊಪ್ಪಳ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಅಭ್ಯರ್ಥಿ ಕೆ. ಬಸವರಾಜ ಹಿಟ್ನಾಳ್ ಅವರಿಗಿಂತ ೧೨೪೮೮ ಹೆಚ್ಚು ಮತಗಳನ್ನು ಪಡೆದು ವಿಜೇತರಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು.
  ಒಟ್ಟು ೧೫ ಸುತ್ತಿನ ಮತಗಳ ಎಣಿಕೆ ಕಾರ್ಯಕ್ಕೆ ಎರಡು ಕೊಠಡಿಗಳಲ್ಲಿ ತಲಾ ೦೭ ಟೇಬಲ್‌ಗಳಂತೆ ೧೪ ಟೇಬಲ್‌ಗಳ ವ್ಯವಸ್ಥೆಗೊಳಿಸಲಾಗಿತ್ತು.  ಪ್ರತಿ ಟೇಬಲ್‌ಗೂ ವಿಡಿಯೋ ಕ್ಯಾಮರಾ ಹಾಗೂ ಟಿ.ವಿ. ಅಳವಡಿಸಲಾಗಿತ್ತು. ಮತ ಎಣಿಕೆ ಕಾರ್ಯ ಬೆಳಿಗ್ಗೆ ೮ ಗಂಟೆಗೆ ಪ್ರಾರಂಭಗೊಂಡ ನಂತರ ಮೊದಲ ಸುತ್ತಿನಲ್ಲೆ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರು ಜೆ.ಡಿ.ಎಸ್. ಅಭ್ಯರ್ಥಿ ಪ್ರದೀಪ್‌ಗೌಡ ಮಾಲಿಪಾಟೀಲ್ ಅವರಿಗಿಂತ ೨೫೫೦ ಹೆಚ್ಚು ಮತಗಳನ್ನು ಪಡೆದಿದ್ದರು, ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಹಿಟ್ನಾಳ್ ಅವರು ಮೂರನೆ ಸ್ಥಾನದಲ್ಲಿದ್ದರು.  ಎರಡನೆ ಸುತ್ತಿನಲ್ಲೂ ಒಟ್ಟು ೨೬೯೩ ಮತಗಳ ಮುನ್ನಡೆ ಕಾಯ್ದುಕೊಂಡು ಬಂದ ಸಂಗಣ್ಣ ಕರಡಿ ಅವರು ನಂತರ ಮೂರನೆ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಹಿಟ್ನಾಳ್ ಅವರಿಗಿಂತ ೫೨೫೫ ಹೆಚ್ಚು ಮತಗಳ ಮುನ್ನಡೆ ಪಡೆದರು, ಅದೇ ರೀತಿ ನಾಲ್ಕನೆ ಸುತ್ತಿನಲ್ಲಿ- ೬೧೨೪, ಐದನೇ ಸುತ್ತಿನಲ್ಲಿ- ೬೬೨೭, ಆರನೆ ಸುತ್ತಿನಲ್ಲಿ- ೭೩೦೫, ಏಳನೆ ಸುತ್ತಿನಲ್ಲಿ- ೮೦೩೮, ಎಂಟನೆ ಸುತ್ತಿನಲ್ಲಿ- ೧೦೨೯೧, ಒಂಭತ್ತನೆ ಸುತ್ತಿನಲ್ಲಿ- ೧೧೩೭೩, ಹತ್ತನೆ ಸುತ್ತಿನಲ್ಲಿ- ೧೨೪೧೯, ಹನ್ನೊಂದನೆ ಸುತ್ತಿನಲ್ಲಿ- ೧೨೫೪೩, ಹನ್ನೆರಡನೆ ಸುತ್ತಿನಲ್ಲಿ- ೧೩೩೩೦ ಮತಗಳ ಮುನ್ನಡೆ ಕಾಯ್ದುಕೊಂಡರು, ಆದರೆ ಹದಿಮೂರನೆ ಸುತ್ತಿನ ಮತ ಎಣಿಕೆ ಪೂರ್ಣಗೊಂಡ ನಂತರ ಮುನ್ನಡೆಯ ಪ್ರಮಾಣ ೧೨೪೫೪ ಮತಗಳಾಯಿತು.  ಹದಿನಾಲ್ಕನೆ ಸುತ್ತಿನಲ್ಲಿ ೧೨೨೪೫ ಮತಗಳ ಅಂತರವನ್ನು ಕಾಯ್ದುಕೊಂಡ ಸಂಗಣ್ಣ ಕರಡಿ ಅವರು ಕೊನೆಯ ಅಂದರೆ ಹದಿನೈದನೆ ಸುತ್ತಿನ ಮತ ಎಣಿಕೆ ಪೂರ್ಣಗೊಂಡ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಕೆ. ಬಸವರಾಜ ಹಿಟ್ನಾಳ್ ಅವರಿಗಿಂತ ೧೨೪೮೮ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಅಭ್ಯರ್ಥಿಗಳು ಪಡೆದ ಒಟ್ಟು ಮತಗಳು : ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಅವರು ೬೦೪೦೫ ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಕೆ. ಬಸವರಾಜ ಹಿಟ್ನಾಳ್- ೪೭೯೧೭, ಜೆ.ಡಿ.ಎಸ್. ಅಭ್ಯರ್ಥಿ ಪ್ರದೀಪಗೌಡ ಮಾಲಿಪಾಟೀಲ- ೨೦೭೧೯ ಮತಗಳನ್ನು ಪಡೆದರು, ನಂತರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿ ಶರಣಗೌಡ ನೀಲನಗೌಡ ಪಾಟೀಲ್- ೮೨೨, ಪಕ್ಷೇತರ ಅಭ್ಯರ್ಥಿಗಳಾದ ಸಂಗಮೇಶ್ ಹಿರೇಮಠ- ೧೨೫೨, ಸಣ್ಣ ಮೌಲಾಸಾಬ್- ೭೧೬, ವಿಠ್ಠಪ್ಪ ಗೋರಂಟ್ಲಿ- ೬೬೨, ಬಸವರಾಜ ಶಂಕರಪ್ಪ ಕರಡಿ- ೫೦೮, ಕರಾಟೆ ಮೌನೇಶ್- ೩೪೬, ನಿರ್ಮಲ ಮಲ್ಲಿಕಾರ್ಜುನ ಹಡಪದ- ೨೭೨, ರಾಮುಲು- ೨೫೮, ಮನ್ಸೂರ್ ಬಾಷಾ- ೨೫೧, ಯಮನೂರಪ್ಪ ಮರಿಯಪ್ಪ ಪುಂಡಗೌಡರ- ೨೪೮ ಹಾಗೂ ಹೆಚ್.ಎಮ್. ಎಹೆಸಾನುಲ್ಲ ಪಟೇಲ್ ಅವರು ೨೪೪ ಮತಗಳನ್ನು ಪಡೆದಿದ್ದಾರೆ.  ರಾಜ್ಯಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ಕೊಪ್ಪಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರು ಜಯಗಳಿಸಿದ್ದು, ಕಾಂಗ್ರೆಸ್‌ನ ಬಸವರಾಜ ಹಿಟ್ನಾಳ್ ಅವರು ಎರಡನೆ ಸ್ಥಾನ ಪಡೆದರು, ಜೆ.ಡಿ.ಎಸ್. ಅಭ್ಯರ್ಥಿ ಪ್ರದೀಪಗೌಡ ಮಾಲಿಪಾಟೀಲ್ ಅವರು ಮೂರನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. 
ಸಂಗಣ್ಣ ಕರಡಿ ಅವರ ಸಂಕ್ಷಿಪ್ತ ಪರಿಚಯ : ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ನೂತನ ಶಾಸಕರಾಗಿ ಆಯ್ಕೆಗೊಂಡ ಬಿ.ಜೆ.ಪಿ. ಅಭ್ಯರ್ಥಿ ಸಂಗಣ್ಣ ಕರಡಿ ಅವರ ಸಂಕ್ಷಿಪ್ತ ಪರಿಚಯ ಇಂತಿದೆ.  ಸಂಗಣ್ಣ ಕರಡಿ ಅವರ ತಂದೆ ಹೆಸರು ಅಮರಪ್ಪ ಕರಡಿ, ಜನ್ಮ ದಿನಾಂಕ- ೦೮-೦೫-೧೯೫೦,  ವಿದ್ಯಾಭ್ಯಾಸ- ಎಸ್.ಎಸ್.ಎಲ್.ಸಿ.,  ಜಾತಿ- ಹಿಂದೂ ಲಿಂಗಾಯತ (ಪಂಚಮಸಾಲಿ), ಸದ್ಯ ಕೊಪ್ಪಳದಲ್ಲಿ ವಾಸ.
  ಸಂಗಣ್ಣ ಕರಡಿ ಅವರು  ೧೯೭೭ ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದು, ೧೯೮೩ ರಿಂದ ೧೯೮೮ ರವರೆಗೆ ಜಿಲ್ಲಾ ಪಂಚಾಯತಿಯ ಇರಕಲ್ಲಗಡ ಕ್ಷೇತ್ರದಿಂದ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.  ೧೯೯೦ ರಿಂದ ೧೯೯೩ ರವರೆಗೆ ಕೊಪ್ಪಳ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾಗಿದ್ದರು.  ೧೯೯೪ ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು, ನಂತರ ಜನತಾದಳ ಪಕ್ಷವನ್ನು ಸೇರ್ಪಡೆಗೊಂಡಿದ್ದರು.  ೧೯೯೯ ರಲ್ಲಿ ಎರಡನೆ ಬಾರಿಗೆ ಶಾಸಕರಾಗಿ ಜೆ.ಡಿ.ಯು. ಪಕ್ಷದಿಂದ ಆಯ್ಕೆಯಾಗಿದ್ದರು.  ೨೦೦೪ ರಲ್ಲಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಯಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.  ೨೦೦೬ ರಲ್ಲಿ ಜನತಾದಳ (ಜಾತ್ಯಾತೀತ) ಪಕ್ಷಕ್ಕೆ ಸೇರ್ಪಡೆಗೊಂಡು ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷರಾಗಿ ನೇಮಕಗೊಂಡಿದ್ದರು.  ೨೦೦೮ ರಲ್ಲಿ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಯಾಗಿ ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೂರನೆ ಬಾರಿಗೆ ಶಾಸಕರಾಗಿ ಆಯ್ಕೆಯಾದರು.  ೨೦೧೧ ರ ಮಾರ್ಚ್ ೦೩ ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿ.ಜೆ.ಪಿ. ಪಕ್ಷಕ್ಕೆ ಸೇರ್ಪಡೆಗೊಂಡರು, ಅಲ್ಲದೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ನೇಮಕಗೊಂಡರು.  ಇದೀಗ ೨೦೧೧ ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾಲ್ಕನೆ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. 
    ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಗೊಂಡ ಸಂಗಣ್ಣ ಕರಡಿ ಅವರು ಕ್ಷೇತ್ರದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿ ಎಂಬ ಆಶಯವನ್ನು ಕೊಪ್ಪಳ ಕ್ಷೇತ್ರದ ಜನತೆ ಹೊಂದಿದ್ದಾರೆ.
Please follow and like us:
error