೩೭೧ನೇ ಕಲಂ ಜಾರಿಯಾಗಲು ತೀವ್ರ ಹೋರಾಟ ಅಗತ್ಯ


ಕೊಪ್ಪಳ : ಹೈದ್ರಾಬಾದ್ ಕರ್ನಾಟಕಕ್ಕೆ ೩೭೧ನೇ ಕಲಂ ಅನ್ವಯ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಗೃಹಸಚಿವರು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಅವರು ಇಂದು ವಿಶೇಷ ಸ್ಥಾನಮಾನ ಕೇಳುತ್ತಿರುವವರು ತೆಲಂಗಾಣದಂತೆ ಮುಂದೊಂದು ದಿನ ಪ್ರತ್ಯೇಕ ರಾಜ್ಯ ಕೇಳಬಹುದು ಎಂದು ಅನುಮಾನಿಸುತ್ತಿದ್ದಾರೆ. ಪ್ರಧಾನಿಗಳಿಗೆ ಬೆಟ್ಟಿಯಾದ ಸರ್ವಪಕ್ಷ ನಿಯೋಗವು ಮನವರಿಕೆ ಮಾಡಲು ಪ್ರಯತ್ನಿಸಿದೆ. ಆದರೆ ಇದು ಜಾರಿಯಾಗಲು ತೀವ್ರತೆರನಾದ ಹೋರಾಟ ಅವಶ್ಯಕವಿದೆ ಎಂದು ಸಂಸದ ಶಿವರಾಮೇಗೌಡರು ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೪೯ನೇ ಕವಿಸಮಯದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ೩೭೧ನೇ ಕಲಂ ಜಾರಿಗೊಳಿಸಲು ಸಂಸದರು ತೀವ್ರವಾಗಿ ಪ್ರಯತ್ನಿಸಬೇಕು ಹೋರಾಟಕ್ಕೆ ಕವಿಸಮೂಹದ ಎಲ್ಲರ ಬೆಂಬಲ ಇದೆ ಎನ್ನುವ ಮಾತಿಗೆ ಪ್ರತಿಯಾಗಿ ಮಾತನಾಡಿದ ಸಂಸದರು- ಜನಜಾಗೃತಿ ಜಾಥಾದ ನಂತರ ಇದರ ಬಗ್ಗೆ ಹೆಚ್ಚಿನ ಹೋರಾಟಕ್ಕೆ ಎಲ್ಲರೂ ಸಿದ್ದರಾಗಬೇಕು ಎಂದರು. ಕವಿಸಮಯದಂತಹ ಕಾರ‍್ಯಕ್ರಮದಲ್ಲಿ ಈ ರೀತಿ ಎಲ್ಲರೂ ಸೇರಿ ಮನದಾಳದ ಭಾವನೆಗಳನ್ನು ಹಂಚಿಕೊಳ್ಳುತ್ತಿರುವುದು ಸಂತಸ ನೀಡುವ ವಿಷಯ. ಹಿರಿ ಕಿರಿಯರು ಎಲ್ಲರೂ ಭಾಗವಹಿಸಿ ಕಾರ‍್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
“ಸಮಾನತೆ” ಕವನ ಓದುವುದರ ಮೂಲಕ ಸಂಸದ ಶಿವರಾಮೇಗೌಡರು ಕವಿಗೋಷ್ಠಿಗೆ ಚಾಲನೆ ನೀಡಿದರು. ನಂತರ ಕವಿಗೋಷ್ಠಿಯಲ್ಲಿ ಮಹೇಶ ಬಳ್ಳಾರಿ -ನಿತ್ಯಾನಂದ, ಡಾ.ಮಹಾಂತೇಶ ಮಲ್ಲನಗೌಡರ- ಸೋಲು, ವಿಠ್ಠಪ್ಪ ಗೋರಂಟ್ಲಿ-ಅಣ್ಣಾ ಹಜಾರೆ, ಸಾವಿರದಣ್ಣ, ಶಾಂತಾದೇವಿ ಹಿರೇಮಠ-ಅಣ್ಣಾ ಹಜಾರೆ, ಸುಮತಿ ಹಿರೇಮಠ- ರಾಣಿ ಮಹಲಿನ ಕನಸುಗಳು, ಜಡೆಯಪ್ಪ ಎನ್- ರುಬಾಯಿಗಳು, ಶ್ರೀನಿವಾಸ ಚಿತ್ರಗಾರ- ಮನಕುಲ ಉದ್ದಾರಕ, ಶಿವಪ್ರಸಾದ ಹಾದಿಮನಿ-ಮಕ್ಕಳಿವರೇನಮ್ಮ, ಎ.ಪಿ.ಅಂಗಡಿ- ಆಡಿದೆವು ನಾವು ಕ್ರಿಕೆಟ್, ದಯಾನಂದ ಸಾಳುಂಕೆ- ಆಹ್ವಾನ, ನಿರಾಲಿ, ಅಲ್ಲಮಪ್ರಭು ಬೆಟ್ಟದೂರ-ತಾತನನ್ನು ಉದ್ದೇಶಿಸಿ, ಸಿರಾಜ್ ಬಿಸರಳ್ಳಿ-ಮತ್ತೊಮ್ಮೆ ತೇರು ಎಳೆಯೋಣ, ಪ್ರೇಮಾ – ಯಾವ ನೀತಿ, ಶಾಂತು ಬಡಿಗೇರ- ದಲಿತ ಬೆಳಕು, ಎಸ್.ಎಂ.ಕಂಬಾಳಿಮಠ- ೩೭೧, ಭಾರತಾಂಭೆ, ನಟರಾಜ ಸವಡಿ- ಗಾಳಿ ಸುಳಿಯಲಿ ಕವನಗಳನ್ನು ವಾಚನ ಮಾಡಿದರು. ಕಾರ‍್ಯಕ್ರಮದಲ್ಲಿ ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಶಿವಾನಂದ ಹೊದ್ಲೂರ, ಡಾ.ರೇಣುಕಾ ಕರಿಗಾರ, ಗಾಯಿತ್ರಿ ಭಾವಿಕಟ್ಟಿ ಇನ್ನಿತರರು ಭಾಗವಹಿಸಿದ್ದರು. ಕವಿಗೋಷ್ಠಿಯನ್ನುದ್ದೇಶಿಸಿ ದಯಾನಂದ ಸಾಳುಂಕೆಯವರು ಮಾತನಾಡಿದರು.
ಕವಿಗೋಷ್ಠಿಯ ನಂತರ ಕ್ರಾಂತಿ ಸೂರ್ಯನ ಕಂದೀಲು ಕವನ ಸಂಕಲನದ ವಿಮರ್ಶೆ ಮತ್ತು ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು. ಡಾ.ಮಹಾಂತೇಶ ಮಲ್ಲನಗೌಡರು – ಬಾಬು ಬಿಸರಳ್ಳಿಯವರ ಕವನಗಳು ಹೆಚ್ಚು ಪ್ರಿಯವಾಗಿವೆ ಎಂದರು. ವಿಠ್ಠಪ್ಪ ಗೋರಂಟ್ಲಿಯವರು- ನಟರ ಮಕ್ಕಳು ನಟರಾಗುವುದು ಮತ್ತು ರಾಜಕೀಯ ನಾಯಕರ ಮಕ್ಕಳು ರಾಜಕಾರಣಿಗಳಾಗುವುದು ನಮ್ಮ ಸಾಮಾಜಿಕ ಬದುಕಿನಲ್ಲಿ ಸಹಜ ಆದರೆ ಸಾಹಿತ್ಯದಲ್ಲಿ ಈ ರೀತಿ ಆಗುವುದು ಅಷ್ಟು ಸರಳವಲ್ಲ. ತಂದೆ ಮಗ ಒಟ್ಟಿಗೆ ಪ್ರಕಟಿಸಿರುವ ಕವನ ಸಂಕಲನ ಕನ್ನಡ ಸಾಹಿತ್ಯದಲ್ಲಿಯೇ ಅಪರೂಪದ್ದು. ಅಭಿಪ್ರಾಯ, ಭಾವನೆ ಮತ್ತು ವಿಚಾರಗಳಲ್ಲಿ ಬಾಬುಸಾಬ ಬಿಸರಳ್ಳಿ ಮತ್ತು ಸಿರಾಜ್ ಬಿಸರಳ್ಳಿಯವರ ನೆಲೆಗಟ್ಟು ಪ್ರತ್ಯೇಕವಾಗಿಯೇ ನಿಲ್ಲುತ್ತವೆ. ಬಾಬುಸಾಬ ಬಿಸರಳ್ಳಿಯವರು ತಮ್ಮ ಕಾಲಘಟ್ಟಕ್ಕೆ ರಚಿಸಿದ ಕವನಗಳನ್ನು ನಾವು ಗೌರವಿಸಬೇಕಾಗುತ್ತದೆ. ಸಿರಾಜ್ ಬಿಸರಳ್ಳಿ ಕವನಗಳು ನಿಗಿ ನಿಗಿ ಕೆಂಡದಂತಿವೆ ಎಂದರು.
ಅಲ್ಲಮಪ್ರಭು ಬೆಟ್ಟದೂರು – ಪರಂಪರೆ ಎನ್ನುವುದು ಮುಖ್ಯವಾದದ್ದು ಯಾಕೆಂದರೆ ಬಾಬುಸಾಬ ಬಿಸರಳ್ಳಿಯವರು ವೈಚಾರಿಕ ಪ್ರಜ್ಞೆ ಹೊಂದಿದ್ದರಿಂದ ಅದನ್ನು ನಾವು ಸಿರಾಜ್ ಬಿಸರಳ್ಳಿಯವರ ಕವನಗಳಲ್ಲಿ ಮುಂದುವರೆಯುವುದನ್ನು ಕಾಣುತ್ತೇವೆ. ಬಾಬುಸಾಬ ಬಿಸರಳ್ಳಿಯವರ ಮೇ ಒಂದು ಕವಿತೆ ಬಹಳ ಚೆನ್ನಾಗಿದೆ,ಅರ್ಥಪೂರ್ಣವಾಗಿದೆ. ಕಫನ್, ಎಡಬಲದ ಹಂಗಿನಲ್ಲಿ, ಮತ್ತೊಮ್ಮೆ ತೇರು ಎಳೆಯೋಣ ಕವನಗಳು ಹೊಸ ಅರ್ಥವನ್ನು ನೀಡುತ್ತವೆ. ಬಂಡಾಯದ ಧ್ವನಿ ಇವರ ಕವನಗಳಲ್ಲಿ ತೀವ್ರವಾಗಿ ಮೂಡಿಬಂದಿದೆ. ನನ್ನೂರ ಕೋಗಿಲೆಗಳು ಹಾಡುವುದಿಲ್ಲ ಬಹಳ ಅದ್ಭುತ ವಿಚಾರವನ್ನು ಸಂವಹನಗೊಳಿಸುವ ಶಕ್ತಿ ಇವರ ಕವನಗಳಲ್ಲಿದೆ.ತಂದೆ ಮಕ್ಕಳಿಬ್ಬರ ಆಶಯಗಳು ಒಂದೇ ರೀತಿಯಾಗಿವೆ. ಕಾಲಕ್ಕೆ ತಕ್ಕಂತೆ ಅಭಿವ್ಯಕ್ತಿಯ ರೀತಿ ಬೇರೆಯಾಗಿದೆ ಎಂದರು.
ಮಹಾಂತೇಶ ಕೊತಬಾಳ, ಸುಮತಿ ಹಿರೇಮಠ, ಡಾ.ಗಾಯಿತ್ರಿ ಭಾವಿಕಟ್ಟಿ,ಎನ್.ಜಡೆಯಪ್ಪ, ಶ್ರೀನಿವಾಸ ಚಿತ್ರಗಾರ, ಶಾಂತಾದೇವಿ ಹಿರೇಮಠ,ಶಿವಪ್ರಸಾದ ಹಾದಿಮನಿ, ಶಾಂತು,ಕಂಬಾಳಿಮಠ .ಡಾ.ರೇಣುಕಾ ಇನ್ನಿತರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸ್ವಾಗತವನ್ನು ಮಹೇಶ ಬಳ್ಳಾರಿ ಕೋರಿದರು. ಕಾರ‍್ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.

Please follow and like us:
error