fbpx

ಖಾತೆಗಾಗಿ ಕ್ಯಾತೆ: ಮುಗಿಯದ ಕಿತ್ತಾಟ

ಬೆಂಗಳೂರು, ಜು.13: ರಾಜ್ಯ ಬಿಜೆಪಿಯಲ್ಲಿನ ಎಲ್ಲ ಗೊಂದಲಗಳಿಗೆ ಪರಿಹಾರವೆಂಬಂತೆ, ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹಿತ ಸಂಪುಟ ಸಹೋದ್ಯೋಗಿಗಳು ಆತ್ಮವಿಶ್ವಾಸದಿಂದ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೆ ಖಾತೆಗಾಗಿ ಕಿತ್ತಾಟ ನಡೆದಿರುವುದು ಮತ್ತೊಂದು ಪ್ರಹಸನಕ್ಕೆ ಎಡೆ ಮಾಡಿಕೊಟ್ಟಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಡಿ.ವಿ. ಸದಾನಂದ ಗೌಡ ಬಣಗಳ ಸಚಿವರು ತಮಗೆ ಇಂತಹ ಖಾತೆಯನ್ನೆ ನೀಡಬೇಕು ಎಂದು ಪಟ್ಟು ಹಿಡಿದಿರು ವುದು ಪಕ್ಷದ ವರಿಷ್ಠರು ಹಾಗೂ ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ತೀವ್ರ ತಲೆ ನೋವಾಗಿ ಪರಿಣಮಿಸಿದೆ. ಯಡಿಯೂರಪ್ಪ ಹಾಗೂ ಸದಾನಂದ ಗೌಡರ ಬೆಂಬಲಿಗರು, ಗೃಹ, ಆರೋಗ್ಯ, ಸಾರಿಗೆ, ಇಂಧನ, ಗ್ರಾಮೀಣಾಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಸೇರಿದಂತೆ ಮಹತ್ವದ ಖಾತೆಗಳಿಗಾಗಿ ಪಟ್ಟು ಹಿಡಿದಿದ್ದು, ಸಚಿವ ಸಂಪುಟ ಅನಾಯಾಸವಾಗಿ ಅಸ್ತಿತ್ವಕ್ಕೆ ಬಂದಿದ್ದರೂ, ಖಾತೆಗಳ ಹಂಚಿಕೆ ಕಷ್ಟಕರವಾಗಿದೆ ಎಂದು ಮೂಲಗಳು ತಿಳಿಸಿವೆ.
ಖಾತೆ ಹಂಚಿಕೆಗಾಗಿ ಸಂಪುಟ ಸಹೋದ್ಯೋಗಿಗಳು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೊಟೇಲ್‌ನಲ್ಲಿ ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿಗಳಾದ ಈಶ್ವರಪ್ಪ, ಆರ್. ಅಶೋಕ್, ಮಾಜಿ ಸಿಎಂಗಳಾದ ಯಡಿಯೂರಪ್ಪ, ಸದಾನಂದಗೌಡ ಸೇರಿದಂತೆ ಪಕ್ಷದ ವರಿಷ್ಠರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದೆ. ಗೃಹ ಹಾಗೂ ಸಾರಿಗೆ ಖಾತೆ ನಿರ್ವಹಿಸುತ್ತಿದ್ದ ಆರ್.ಅಶೋಕ್ ಸಾರಿಗೆ ಖಾತೆಯಲ್ಲೆ ತನ್ನನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದ್ದು, ಈಶ್ವರಪ್ಪ ಗೃಹ ಖಾತೆಗೆ ಪಟ್ಟು ಹಿಡಿದಿದ್ದಾರೆ.
ಸಚಿವರಾದ ರೇಣುಕಾಚಾರ್ಯ, ವರ್ತೂರು ಪ್ರಕಾಶ್, ರಾಜೂಗೌಡ, ಬಾಲಚಂದ್ರ ಜಾರಕಿಹೊಳಿ ಸಹಿತ ಹಲವು ಸಚಿವರು ಪ್ರಮುಖ ಖಾತೆಗಳನ್ನು ನೀಡಬೇಕು ಎಂದು ಕೋರಿದ್ದಾರೆ.ಈ ಮಧ್ಯೆಯೇ ಸಚಿವ ಸ್ಥಾನಾಕಾಂಕ್ಷಿಗಳು ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ರಾಜೀನಾಮೆಗೆ ಮುಂದಾಗಿದ್ದು, ಯಡಿಯೂರಪ್ಪ ಆಪ್ತ ಶಾಸಕರು ಪ್ರತ್ಯೇಕ ಸಭೆಯನ್ನು ಕೂಡ ನಡೆಸಿದ್ದಾರೆ. ಬಳ್ಳಾರಿಯ ಗಣಿಧಣಿ ಕರುಣಾಕರ ರೆಡ್ಡಿ ಸಚಿವ ಸ್ಥಾನ ನೀಡಿಲ್ಲ ಎಂದು ಬಿಜೆಪಿ ವಿರುದ್ಧ ಗುಟುರು ಹಾಕಿದ್ದಾರೆ.
ಬಲಗೈ ಪಂಗಡಕ್ಕೆ ಅನ್ಯಾಯ: ಪರಿಶಿಷ್ಟ ಜಾತಿಯ ಭೋವಿ ಹಾಗೂ ಎಡಗೈ ಸಮುದಾಯಕ್ಕೆ ಸಂಪುಟದಲ್ಲಿ ಆದ್ಯತೆ ನೀಡಿದ್ದು, ಬಲಗೈ ಜನಾಂಗಕ್ಕೆ ಬಿಜೆಪಿಯಿಂದ ಅನ್ಯಾಯ ಮಾಡಲಾಗಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.ಈ ಮಧ್ಯೆಯೇ ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿರುವುದು ಬಿಜೆಪಿಯಲ್ಲಿ ಅಸಮಾಧಾನ ಮತ್ತಷ್ಟು ಹೆಚ್ಚಾಗಿದೆ. ಮೇಲ್ಕಂಡ ಎಲ್ಲ ಗೊಂದಲಗಳನ್ನು ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಗೆ ಪರಿಹರಿಸಿ ಕೊಳ್ಳಲಿದ್ದಾರೆಂಬುದು ಯಕ್ಷಪ್ರಶ್ನೆಯಾಗಿದೆ.
Please follow and like us:
error

Leave a Reply

error: Content is protected !!