ಪ್ರಾಮಾಣಿಕತೆ ಇರುವಲ್ಲಿ, ಅಕ್ರಮಗಳಿಗೆ ನೆಲೆಯಿಲ್ಲ- ಡಿ.ಕೆ. ರವಿ

ಎಲ್ಲಿಯವರೆಗೆ ಅಧಿಕಾರಿಗಳು ಪ್ರಾಮಾಣಿಕರಾಗಿರುತ್ತಾರೆಯೋ, ಅಲ್ಲಿಯವರೆಗೆ ಆ ಕಚೇರಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ನಡೆಯಲು ಸಾಧ್ಯವಿಲ್ಲ ಎಂದು ಕೊಪ್ಪಳ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಡಿ.ಕೆ. ರವಿ ಅವರು ಅಭಿಪ್ರಾಯಪಟ್ಟರು.
  ಕೊಪ್ಪಳ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರು ಕೋಲಾರ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡ ಕಾರಣ, ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಆತ್ಮೀಯ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
  ಅಧಿಕಾರಿಗಳು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಲ್ಲಿ, ಅಂತಹವರನ್ನು ಸಮಾಜ ಗೌರವದಿಂದ ಕಾಣುತ್ತದೆ.  ಪ್ರಾಮಾಣಿಕತೆ ಇರುವೆಡೆ, ಅಕ್ರಮ ಮತ್ತು ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ.  ಅಧಿಕಾರಿಗಳು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಕಾರ್ಯ ನಿರ್ವಹಿಸಿದರೆ, ಅದರ ಪರಿಣಾಮ ಇಡೀ ಜಿಲ್ಲೆಯ ಅಭಿವೃದ್ಧಿಯ ಮೇಲೆ ಆಗುತ್ತದೆ.  ಕೇವಲ ಬದುಕು ಸಾಗಿಸಲು ಅನೇಕ ಉದ್ಯೋಗಗಳು ಇವೆ.  ಆದರೆ ಸಾರ್ವಜನಿಕ ಸೇವೆಯನ್ನೇ ಧ್ಯೇಯವಾಗಿಟ್ಟುಕೊಂಡವರಿಗೆ, ಸರ್ಕಾರಿ ಸೇವೆ ಒಂದು ಉತ್ತಮ ಉದ್ಯೋಗ ಕ್ಷೇತ್ರವಾಗಿದೆ.  ಸರ್ಕಾರಿ ಸೇವೆಯಲ್ಲಿ, ಅನೇಕ ಬಡ ಜನರಿಗೆ ಬದುಕು ಕಟ್ಟಿಕೊಡಲು ಸಾಧ್ಯವಿದೆ.  ಸರ್ಕಾರದ ಯಾವುದೇ ಯೋಜನೆಗಳನ್ನು ಅರ್ಹರಿಗೆ ತಲುಪಿಸಿದಲ್ಲಿ, ಮತ್ತು ನಾವು ಸರ್ಕಾರದಿಂದ ಪಡೆಯುವ ವೇತನಕ್ಕೆ ಸರಿಯಾಗಿ ಸಮರ್ಪಕ ಕಾರ್ಯ ನಿರ್ವಹಿಸಿದಲ್ಲಿ ಮಾತ್ರ ಸರ್ಕಾರಿ ಸೇವೆಗೆ ಉತ್ತಮ ನ್ಯಾಯ ದೊರಕಿಸಿದಂತಾಗುತ್ತದೆ.  ಪ್ರತಿಯೊಬ್ಬರಿಗೂ ದೇಶಕ್ಕೆ ಯಾವುದಾದರೂ ಒಂದು ಉತ್ತಮ ಕೊಡುಗೆ ನೀಡುವಂತಹ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ಸೇವೆ ಸಾರ್ಥಕವಾಗಲಿದೆ.  ಕೊಪ್ಪಳದಂತಹ ಹಿಂದುಳಿದ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೆಂದೇ ಭಾವಿಸಿದ್ದೇನೆ.  ಇರುವಷ್ಟು ಅವಧಿಯಲ್ಲಿ ಉತ್ತಮ ಸೇವೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಡಿ.ಕೆ. ರವಿ ಅವರು ಹೇಳಿದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಮಾತನಾಡಿ, ಕೊಪ್ಪಳ ಜಿಲ್ಲಾ ಪಂಚಾಯತಿಗೆ ಡಿ.ಕೆ. ರವಿ ಅವರು ಒಬ್ಬ ಯುವ ಹಾಗೂ ದಕ್ಷ ಅಧಿಕಾರಿಯಾಗಿ ನೇತೃತ್ವ ವಹಿಸಿಕೊಂಡ ನಂತರ ಜಿ.ಪಂ. ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ.  ಮುಖ್ಯವಾಗಿ ಹಳಿ ತಪ್ಪಿದ್ದ ಉದ್ಯೋಗಖಾತ್ರಿ ಯೋಜನೆಗೆ ಒಂದು ಹೊಸ ಆಯಾಮವನ್ನು ನೀಡುವ ಮೂಲಕ, ಸಣ್ಣ, ಅತಿ ಸಣ್ಣ ರೈತರು, ಪ.ಜಾತಿ, ಪ.ಪಂಗಡದವರ ಅಭ್ಯುದಯಕ್ಕೆ ದಾರಿಯನ್ನು ಕಂಡುಕೊಟ್ಟರು.  ಇವರು ಹಾಕಿಕೊಟ್ಟ ಮಾರ್ಗದಲ್ಲಿ ಜಿಲ್ಲೆಯಲ್ಲಿ ತೋಟಗಾರಿಕೆ ಇನ್ನಷ್ಟು ಪ್ರಗತಿ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.  ಗ್ರಾಮ ಪಂಚಾಯತಿ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಡಿ.ಕೆ. ರವಿ ಅವರು ಹೆಚ್ಚಿನ ಆದ್ಯತೆ ನೀಡಿದರು.  ಇವರ ಸೇವೆ ಕೊಪ್ಪಳ ಜಿಲ್ಲೆಗೆ ಇನ್ನಷ್ಟು ಅಗತ್ಯವಿತ್ತು ಎಂಬುದಾಗಿ ನುಡಿದರು.
  ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಶೇಖರ್, ಗದಗ ಜಿಲ್ಲೆಗೆ ವರ್ಗಾವಣೆಗೊಂಡಿರುವ ಟಿ.ಪಿ. ದಂಡಿಗದಾಸರ್, ಜಲಾನಯನ ಅಧಿಕಾರಿ ಮಲ್ಲಿಕಾರ್ಜುನ ಮುಂತಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.  ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಸಹಾಯಕ ಆಯುಕ್ತ ಮಂಜುನಾಥ್, ಪ್ರಭಾರಿ ಮುಖ್ಯ ಲೆಕ್ಕಾಧಿಕಾರಿ ವಿಠ್ಠಲ್, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. 

Leave a Reply