ಆಲಿಕಲ್ಲು ಮಳೆ : ಹಾನಿಗೀಡಾದ ಪ್ರದೇಶಗಳಿಗೆ ಕಂದಾಯ ಕಾರ್ಯದರ್ಶಿ ಭೇಟಿ

  ಕಳೆದ ವಾರ ಕೊಪ್ಪಳ ಜಿಲ್ಲೆಯಿಂದ ಬಿದ್ದ ಅಕಾಲಿಕ ಆಲಿಕಲ್ಲು ಮಳೆಯಿಂದ ಪ್ರಾಣಹಾನಿ ಹಾಗೂ ಬೆಳೆಹಾನಿ ಉಂಟಾದ ಪ್ರದೇಶಗಳಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
     ರಾಜ್ಯದ ಉತ್ತರಕರ್ನಾಟಕ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಕಳೆದ ವಾರ ಬಿದ್ದ ಆಲಿಕಲ್ಲು ಮಳೆಗೆ ಹಲವಾರು ಜನ-ಜಾನುವಾರು ಪ್ರಾಣಹಾನಿ ಸಂಭವಿಸಿದ್ದಲ್ಲದೆ, ತೋಟಗಾರಿಕೆ ಮತ್ತು ಕೃಷಿ ಬೆಳೆ ಹಾನಿ ಆಗಿದೆ.  ಈ ಹಿನ್ನೆಲೆಯಲ್ಲಿ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಸವರಾಜ್ ಅವರು ತೋಟಗಾರಿಕೆ ನಿರ್ದೇಶಕ ಡಾ. ಡಿ.ಎಲ್. ಮಹೇಶ್ವರ್ ಅವರೊಂದಿಗೆ ಬೆಳಗಾವಿ, ಬಿಜಾಪುರ ಮತ್ತು ಕೊಪ್ಪಳ ಜಿಲ್ಲೆಯ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.  ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಆಲಿಕಲ್ಲು ಮಳೆಯಿಂದ ಹಾನಿಗೊಂಡ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ತೊಂದರೆ ಅನುಭವಿಸಿದ ರೈತರೊಂದಿಗೆ ಸಮಾಲೋಚನೆ ನಡೆಸಿದರು.  ನಂತರ ತರಲಿಕಟ್ಟಿ ಮುಂತಾದ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಿಂದ ಹಾನಿಯಾದ ಪಪ್ಪಾಯ, ಕಲ್ಲಂಗಡಿ, ವಿವಿಧ ತರಕಾರಿ ಬೆಳೆ ಬೆಳೆಯುವ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಸಂಬಂಧಪಟ್ಟ ರೈತರೊಂದಿಗೆ ಸಮಾಲೋಚನೆ ನಡೆಸಿದ  ಕಾರ್ಯದರ್ಶಿಗಳು ಬೆಳೆ ಹಾನಿಗೆ ಶೀಘ್ರ ಪರಿಹಾರ ವಿತರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಈಗಾಗಲೆ ಜನ-ಜಾನುವಾರು ಪ್ರಾಣಹಾನಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಬೆಳೆ ಹಾನಿಗೂ ಸಹ ನಿಯಮಾನುಸಾರ ಸಂತ್ರಸ್ಥ ರೈತರಿಗೆ ಪರಿಹಾರ ದೊರಕಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.  ಪ್ರಕೃತಿ ವಿಕೋಪ ಪರಿಹಾರ ಯೋಜನೆಗೆ ಸರ್ಕಾರ ಈಗಾಗಲೆ ೧. ೫೦ ಕೋಟಿ ರೂ. ಅನುದಾನ ಒದಗಿಸಿದ್ದು, ಪ್ರಕೃತಿ ವಿಕೋಪದ ಪರಿಹಾರ ನೀಡಲು ಚುನಾವಣೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ್ ಅವರು ಹೇಳಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ರಾಜ್ಯ ತೋಟಗಾರಿಕೆ ನಿರ್ದೇಶಕ ಡಾ. ಡಿ.ಎಲ್. ಮಹೇಶ್ವರ, ಸಹಾಯಕ ಆಯುಕ್ತ ಪಿ.ಎಸ್.ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ, ಯಲಬುರ್ಗಾ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್, ಯಲಬುರ್ಗಾ ತಹಸಿಲ್ದಾರ್ ಮಡಿವಾಳರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ಸಂದರ್ಭದಲ್ಲಿ  ಹಾಜರಿದ್ದರು.

Leave a Reply