ಆನೆಗೊಂದಿ ಉತ್ಸವಕ್ಕೆ ಕ್ಷಣಗಣನೆ: ಗತವೈಭವ ನೆನಪಿಸುವ ಮುಖ್ಯ ವೇದಿಕೆ

ಕೊಪ್ಪಳ ಏ  ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರುಕಳಿಸುವ ರೀತಿಯಲ್ಲಿ ಆನೆಗೊಂದಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಉತ್ಸವ ಪ್ರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.  
  ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಎನಿಸಿಕೊಂಡಿರುವ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಏ. ೧೧ ಮತ್ತು ೧೨ ರಂದು ಆನೆಗೊಂದಿ ಉತ್ಸವ ಆಚರಣೆಯ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ಗ್ರಾಮದ ರಂಗನಾಥಸ್ವಾಮಿ ಜಾತ್ರೋತ್ಸವವು ಗ್ರಾಮಸ್ಥರ ಸಂತಸವನ್ನು ಇಮ್ಮಡಿಗೊಳಿಸಿದೆ.  ಆನೆಗೊಂದಿ ಉತ್ಸವಕ್ಕಾಗಿ ಗ್ರಾಮದ ಹೊರವಲಯದಲ್ಲಿ ಭವ್ಯ ವೇದಿಕೆ ಸಿದ್ಧಗೊಂಡಿದ್ದು, ಮುಖ್ಯ ವೇದಿಕೆಗೆ ಶ್ರೀಕೃಷ್ಣದೇವರಾಯ ವೇದಿಕೆ ಎಂದು ಹೆಸರಿಡಲಾಗಿದೆ.  ವೇದಿಕೆಯನ್ನು ಆನೆಗೊಂದಿ ಕೋಟೆಯ ಮುಖ್ಯದ್ವಾರದ ಪ್ರತಿರೂಪದಿಂದ ಅಲಂಕರಿಸಲಾಗಿದ್ದು, ವೇದಿಕೆಯ ಹಿಂಭಾಗದಲ್ಲಿನ ಪ್ರಕೃತಿ ನಿರ್ಮಿತ ಬಂಡೆ, ಕಲ್ಲು-ಗುಡ್ಡ ವೇದಿಕೆಯ ಸರಳ ಸೌಂದರ್ಯವನ್ನು ಆಕರ್ಷಕಗೊಳಿಸಿದೆ.  ವೇದಿಕೆ ಹಿಂಭಾಗದ ಕಲ್ಲು-ಬಂಡೆಗಳಿಗೆ ವರ್ಣಮಯ ದೀಪಾಲಂಕಾರಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.  ವೇದಿಕೆಯ ಪಕ್ಕದಲ್ಲಿಯೇ ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಸಿದ್ದತೆ ಅಂತಿಮ ಹಂತ ತಲುಪಿದೆ.  ಶ್ರೀಕೃಷ್ಣದೇವರಾಯ ವೇದಿಕೆಯ ಮುಂಭಾಗದಲ್ಲಿ ಗಣ್ಯರು, ಮಾಧ್ಯಮದವರು, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಈಗಾಗಲೆ ಪೂರ್ಣಗೊಳಿಸಲಾಗಿದೆ.  ಮುಖ್ಯ ವೇದಿಕೆಯ ಬಲಭಾಗದಲ್ಲಿ ವಸ್ತುಪ್ರದರ್ಶನ ಮಳಿಗೆಯನ್ನು ತೆರೆಯಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಹ ಮಳಿಗೆಗಳ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದೆ.  ವೇದಿಕೆ ಪ್ರವೇಶ ಆವರಣದ ಮೈದಾನದಲ್ಲಿ ಕುಸ್ತಿ ಪಂದ್ಯಗಳು ಸೇರಿದಂತೆ ವಿವಿಧ ಕ್ರೀಡಾಕೂಟಕ್ಕೆ ಮೈದಾನವನ್ನು ಸಿದ್ಧಪಡಿಸಲಾಗಿದ್ದು, ಏ. ೧೨ ರಂದು ಕ್ರೀಡಾಕೂಟಗಳು ಪ್ರಾರಂಭವಾಗಲಿದೆ.  
  ಆನೆಗೊಂದಿ ಗ್ರಾಮದ ಶಾಲಾ ಆವರಣದಲ್ಲಿ ಉತ್ಸವದ ಅಂಗವಾಗಿ ಸಮಾನಾಂತರ ವೇದಿಕೆಯನ್ನು ನಿರ್ಮಿಸಲಾಗಿದ್ದು, ಇದಕ್ಕೆ ವಿದ್ಯಾರಣ್ಯ ವೇದಿಕೆ ಎಂದು ಹೆಸರಿಡಲಾಗಿದೆ.  ಆನೆಗೊಂದಿ ಉತ್ಸವವನ್ನು ಈ ಬಾರಿ ಜನೋತ್ಸವವನ್ನಾಗಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಎಲ್ಲ ವ್ಯವಸ್ಥೆ ಕೈಗೊಂಡಿದ್ದು, ಎಲ್ಲ ಸಾರ್ವಜನಿಕರು ಉತ್ಸವಕ್ಕೆ ಆಗಮಿಸಿ, ಉತ್ಸವದ ರಸದೌತಣ ಸವಿಯಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮನವಿ ಮಾಡಿಕೊಂಡಿದ್ದಾರೆ.

Related posts

Leave a Comment