ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಿಸಬೇಕು- ಕೆ.ಹೆಚ್. ಕಾಕನೂರ

ಕೊಪ್ಪಳ ಸೆ. ೦೫ : ಇಂದಿನ ದಿನಮಾನಗಳಲ್ಲಿ ಮನುಷ್ಯರಲ್ಲಿ ಮಾನವೀಯ ಮೌಲ್ಯದ ಕೊರತೆ ಕಂಡುಬರುತ್ತಿದ್ದು, ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಕಲಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವುದು ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ ಅವರು ಶಿಕ್ಷಕರಿಗೆ ಕರೆನೀಡಿದರು.
  ಕುಷ್ಟಗಿಯ ಶ್ರೀ ರೇಣುಕಾಚಾರ್ಯ ಮಂಗಲ ಭವನದಲ್ಲಿ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
  ಸರ್ಕಾರ ಎಲ್ಲಾ ಇಲಾಖೆಗಳಿಗಿಂತಲೂ ಶಿಕ್ಷಣ ಇಲಾಖೆಗೆ ಹೆಚ್ಚಿನ ಮಹತ್ವ ನೀಡಿದೆ.  ಅಲ್ಲದೆ ಅನುದಾನದಲ್ಲಿಯೂ ಶಿಕ್ಷಣ ಇಲಾಖೆಗೆ ಸಿಂಹಪಾಲು ಮೀಸಲಿರಿಸಲಾಗುತ್ತದೆ.  ಸಮಾಜದಲ್ಲಿ ಶಿಕ್ಷಕರಿಗೆ ಗೌರವಯುತ ಸ್ಥಾನಮಾನ ನೀಡಲಾಗಿದ್ದು, ಮುಂದಿನ ಪೀಳಿಗೆಯ ಉತ್ತಮ ಭವಿಷ್ಯ ಶಿಕ್ಷಕರ ಕೈಯಲ್ಲಿದೆ.  ಮಕ್ಕಳ ಗುಣಮಟ್ಟವನ್ನು ಅಗತ್ಯಕ್ಕೆ ತಕ್ಕಂತೆ ತಿದ್ದಿ, ತೀಡುವಂತಹ ಮಹತ್ವದ ಜವಾಬ್ದಾರಿಯ ಜೊತೆಗೆ ಸಶಕ್ತ ಸಮಾಜ, ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಮಹತ್ತರ ಹೊಣೆ ಶಿಕ್ಷಕರ ಮೇಲಿದೆ.   ಶಿಕ್ಷಕರು ವೃತ್ತಿ ಗೌರವ ಕಾಪಾಡಬೇಕು, ವೃತ್ತಿಯಲ್ಲಿ ಸಂತೃಪ್ತ ಮನೋಭಾವ ಹೊಂದುವಂತಾಗಬೇಕು.  ಸೇವೆಯೇ ಮನೋಭಾವನೆಯಾಗಿರಬೇಕು.  ಒಂದು ದೇಶ ಶಿಕ್ಷಣ ಕ್ಷೇತ್ರದಲ್ಲಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದರೆ, ಆ ದೇಶದ ಶಿಕ್ಷಣದ ಗುಣಮಟ್ಟ ಉತ್ತಮವಾಗಿದೆ ಎಂದರ್ಥ.  ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಲವು ಮೂಲಭೂತ ಸಮಸ್ಯೆಗಳು, ಶಿಕ್ಷಕರ ಕೊರತೆ ಮುಂತಾದ ತೊಂದರೆ ಇದೆ.  ಇವುಗಳ ನಡುವೆಯೂ ಉತ್ತಮ ಶಿಕ್ಷಣ ನೀಡಬೇಕಾದ ಅನಿವಾರ್ಯತೆ ನಮಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ ಅವರು ಅಭಿಪ್ರಾಯಪಟ್ಟರು.
  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೇಲಿಂಗಾಚಾರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು, ಶಿಕ್ಷಕರ ವರ್ಗಕ್ಕೆ ಒಂದು ಗೌರವ ಅರ್ಪಿಸಿದಂತೆ.  ಒಬ್ಬ ಆದರ್ಶ ಶಿಕ್ಷಕರಾಗಿದ್ದುಕೊಂಡು, ತಮ್ಮ ಪ್ರತಿಭೆ, ಜ್ಞಾನ, ಮೇಧಾವಿತನದ ಮೂಲಕ ಭಾರತದ ಅತ್ಯುನ್ನತ ಸ್ಥಾನಕ್ಕೇರಿದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಕಾರಣರ್ತರಾದ ಗುರುಗಳನ್ನು ಶಿಕ್ಷಕರ ದಿನಾಚರಣೆ ಸಮಯದಲ್ಲಿ ಸ್ಮರಿಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ.  ಜಾಗತಿಕ ಮಟ್ಟದಲ್ಲಿ ನಮ್ಮ ದೇಶ ಇಂದು ಶಿಕ್ಷಣ, ತಂತ್ರಜ್ಞಾನ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಅಂದರೆ ಅದರಲ್ಲಿ ಶಿಕ್ಷಕರ ಪರಿಶ್ರಮವೂ ಅಡಗಿದೆ.  ದೇಶದಲ್ಲಿ ಶೇ. ೧೦೦ ರಷ್ಟು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕೆನ್ನುವ ಗುರಿಯನ್ನು ಇನ್ನೂ ತಲುಪಲು ಸಾಧ್ಯವಾಗಿಲ್ಲ.  ಶಿಕ್ಷಕರು ತಮ್ಮ ವೃತ್ತಿಯ ಪಾವಿತ್ರತೆ, ಜವಾಬ್ದಾರಿ ಅರಿತುಕೊಂಡು ಕೆಲಸ ಮಾಡಿದಾಗ ಈ ಗುರಿ ತಲುಪಲು ಸಾಧ್ಯ.  ಮಕ್ಕಳಿಗೆ ಪ್ರಾಮಾಣಿಕತೆ, ಪರಿಶ್ರಮ ಕಲಿಸಿದಲ್ಲಿ ದೇಶ ಭ್ರಷ್ಟಾಚಾರ ಮುಕ್ತ ದೇಶವಾಗಿ ಹೊರಹೊಮ್ಮಲಿದೆ.  ಭಾರತದ ಭವಿಷ್ಯ ಶಾಲಾ ಕೊಠಡಿಯಲ್ಲಿ ನಿರ್ಮಾಣವಾಗುತ್ತಿದೆ ಎಂಬ ಅಂಶವನ್ನು ಶಿಕ್ಷಕರು ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
  ವಿಶ್ರಾಂತ ಆಂಗ್ಲ ಭಾಷಾ ಉಪನ್ಯಾಸಕ ಬಿ.ಎಸ್. ದುಂಡರಡ್ಡಿ ಅವರು ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.  ಕಾರ್ಯಕ್ರಮದಲ್ಲಿ ತಹಸಿಲ್ದಾರ್ ವೀರೇಶ್ ಬಿರಾದಾರ್, ಡಯಟ್ ಪ್ರಾಚಾರ್ಯರಾದ ಸುನಂದಮ್ಮ ಮೂಗನೂರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಯರಾಮ ಚೌವ್ಹಾಣ, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗಪ್ಪ ಚಕ್ರಸಾಲಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಚಲುವಾದಿ, ಝಾಕೀರ್ ಹುಸೇನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಭು ಕಿಡದಾಳ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
  ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಹೆಚ್. ಗೋನಾಳ ಸ್ವಾಗತಿಸಿ ವಂದಿಸಿದರು, ಶಿಕ್ಷ ರಾಮಚಂದ್ರ ಬಡಿಗೇರ ಕಾರ್ಯಕ್ರಮ ನಿರೂಪಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಅಲ್ಲದೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಪಡೆದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ, ಹಲವು ನಿವೃತ್ತ ಶಿಕ್ಷಕರಿಗೆ, ಸನ್ಮಾನಿಸಲಾಯಿತು.
Please follow and like us:
error