You are here
Home > Koppal News > ಬೆಳೆ ಹಾನಿ ಪರಿಹಾರ : ಸರ್ವೆ ಅಂತಿಮ ವರದಿ ನಂತರ ವಿಶೇಷ ಪ್ಯಾಕೇಜ್ ಬಗ್ಗೆ ನಿರ್ಧಾರ- ಸಿಎಂ

ಬೆಳೆ ಹಾನಿ ಪರಿಹಾರ : ಸರ್ವೆ ಅಂತಿಮ ವರದಿ ನಂತರ ವಿಶೇಷ ಪ್ಯಾಕೇಜ್ ಬಗ್ಗೆ ನಿರ್ಧಾರ- ಸಿಎಂ

ಕೊಪ್ಪಳ,   : ಕಳೆದ ಏ. ೧೨ ರಿಂದ ೧೫ ರವರೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ  ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಉಂಟಾಗಿರುವ ಬೆಳೆ ಹಾನಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಸರ್ವೆ ಅಂತಿಮ ವರದಿ ಬಂದ ನಂತರ ವಿಶೇಷ ಪ್ಯಾಕೇಜ್ ನೀಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
  ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಉಂಟಾದ ಭತ್ತ, ತೋಟಗಾರಿಕೆ ಬೆಳೆ ಹಾನಿ ಕುರಿತಂತೆ ಶುಕ್ರವಾರದಂದು ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಗಂಗಾವತಿಯ ಎಪಿಎಂಸಿ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
  ಕಳೆದ ಐದಾರು ದಿನಗಳಲ್ಲಿ ಆಲಿಕಲ್ಲು ಸಹಿತ ಸುರಿದ ಅಕಾಲಿಕ ಭಾರಿ ಮಳೆಯಿಂದಾಗಿ ಕೊಪ್ಪಳ, ಬಳ್ಳಾರಿ, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಯಲ್ಲಿ ಬೆಳೆ ಹಾನಿ ಅಲ್ಲದೆ ಜೀವ ಹಾನಿ ಉಂಟಾಗಿದೆ.  ಅದರಲ್ಲೂ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ಭತ್ತದ ಬೆಳೆ ಹೆಚ್ಚು ಹಾನಿಗೀಡಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.  ಗಂಗಾವತಿ, ಸಿಂಧನೂರು, ಮಾನ್ವಿ ಹಾಗೂ ಶಿರಗುಪ್ಪ ತಾಲೂಕುಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ವೀಕ್ಷಣೆ ಮಾಡಲಾಗಿದೆ.  ಅಲ್ಲದೆ ಇಲ್ಲಿನ ಬಸಾಪಟ್ಟಣ, ವಡ್ಡರಹಟ್ಟಿ, ಶ್ರೀರಾಮನಗರ ಗ್ರಾಮಗಳ ಹಾನಿಗೊಳಗಾದ ಭತ್ತದ ಗದ್ದೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.  ಅಧಿಕಾರಿಗಳು ಸದ್ಯ ನೀಡಿರುವ ವರದಿಯಂತೆ ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಒಟ್ಟಾರೆ ೫೬೧೧೨ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದ್ದರೆ, ೧೪೫೦ ಹೆ. ತೋಟಗಾರಿಕೆ ಹಾನಿ ಉಂಟಾಗಿದೆ.  ೧೪ ಜೀವ ಹಾನಿ ಸಂಭವಿಸಿದ್ದು, ೭೦ ಜಾನುವಾರುಗಳು ಸಾವನ್ನಪ್ಪಿವೆ.  ೭೭೪ ಮನೆಗಳಿಗೆ ಹಾನಿಯಾಗಿದೆ.  ಕೃಷಿ ಬೆಳೆಯ ಪೈಕಿ ಭತ್ತದ ಬೆಳೆ ಹೆಚ್ಚು ನಷ್ಟವಾಗಿದ್ದು, ತೋಟಗಾರಿಕೆಯಲ್ಲಿ ದ್ರಾಕ್ಷಿ, ಮಾವು, ಕಬ್ಬು ಬೆಳೆಗಳು ಹಾಳಾಗಿವೆ.  ಜೀವ ಹಾನಿಗೆ ಈ ಹಿಂದೆ ೧. ೫ ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು ಇದೀಗ ಪರಿಹಾರ ಮೊತ್ತವನ್ನು ೪ ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.  ಬೆಳೆ ಹಾನಿಗೆ ಸಂಬಂಧಿಸಿದಂತೆ ಪ್ರತಿ ಹೆಕ್ಟೇರ್‌ಗೆ ೯ ಸಾವಿರ ರೂ. ಪರಿಹಾರ ನೀಡಲಾಗುತ್ತಿತ್ತು.  ನೂತನ ಮಾರ್ಗಸೂಚಿಯನ್ವಯ ಇದನ್ನು ೧೩೫೦೦ ರೂ.ಗೆ ಹೆಚ್ಚಿಸಲಾಗಿದೆ.  ಅದೇ ರೀತಿ ತೋಟಗಾರಿಕೆ ಬೆಳೆಗೆ ೧೨ ಸಾವಿರ ರೂ. ನಿಂದ ೧೮ ಸಾವಿರ ರೂ. ಗೆ ಪರಿಹಾರ ಮೊತ್ತ ಏರಿಕೆಯಾಗಿದೆ.  ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸರ್ವೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಸರ್ವೆ ಕಾರ್ಯವನ್ನು ಸಮರ್ಪಕವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.  ರೈತರು ಬೆಳೆ ಹಾನಿಗೆ ಪ್ರತಿ ಎಕರೆಗೆ ೨೫ ಸಾವಿರ ರೂ. ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದಾರೆ.  ಇನ್ನು ೨-೩ ದಿನಗಳ ಒಳಗಾಗಿ ಸರ್ವೆ ಕಾರ್ಯದ ಅಂತಿಮ ವರದಿ ಬರಲಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಗಮನದಲ್ಲಿಟ್ಟುಕೊಂಡು, ಬೆಳೆ ಹಾನಿಗೆ ಪರಿಹಾರ ವಿತರಣೆ ಕುರಿತಂತೆ ವಿಶೇಷ ಪ್ಯಾಕೇಜ್ ನೀಡುವ ಕುರಿತು ಅಥವಾ ಹೆಚ್ಚಿನ ಪರಿಹಾರ ನೀಡುವ ಕುರಿತು ಸೂಕ್ತ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ.  ಗುತ್ತಿಗೆ ಆಧಾರದಲ್ಲಿ ಬೇಸಾಯ ಮಾಡಿ, ಭಾರಿ ಮಳೆಯಿಂದ ನಷ್ಟ ಅನುಭವಿಸಿರುವ ರೈತರನ್ನೂ ಸಹ ಪರಿಹಾರ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.  ಜೀವ ಹಾನಿ ಹಾಗೂ ಮನೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ವಿತರಣೆ ಕಾರ್ಯವನ್ನು ತಕ್ಷಣವೇ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
  ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ, ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ, ಸಂಸದ ಸಂಗಣ್ಣ ಕರಡಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ್, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಂಪನಗೌಡ ಬಾದರ್ಲಿ, ಎನ್.ಎಸ್. ಭೋಸರಾಜ್, ಪ್ರತಾಪಗೌಡ ಪಾಟೀಲ್, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜು ನಾಗಪ್ಪ, ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಎಸ್‌ಪಿ ಡಾ. ಪಿ. ರಾಜಾ, ರಾಯಚೂರು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೇರಿದಂತೆ ಹಲವು ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
  ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಗಾವತಿ ತಾಲೂಕಿನ ಬಸಾಪಟ್ಟಣ, ಹೊಸಕೇರಾ, ಶ್ರೀರಾಮನಗರ ಮೊದಲಾದ ಗ್ರಾಮಗಳಲ್ಲಿ ಭತ್ತದ ಬೆಳೆ ಹಾನಿಯಾದ ಬಗ್ಗೆ ಕ್ಷೇತ್ರಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Top