ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸ್ವಾತಂತ್ರ್ಯ ಸಂಗ್ರಾಮ ನೆನಪಿಸುವ ಸ್ಮಾರಕ ನಿರ್ಮಾಣವಾಗಲಿ

ಕೊಪ್ಪಳ, ಅ.೦೩ : ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ಬ್ರಿಟೀಷರೊಂದಿಗೆ ಕೆಚ್ಚೆದೆಯಿಂದ ಹೋರಾಡಿ ವೀರಮರಣ ಅಪ್ಪಿದ ಸ್ವಾತಂತ್ರ್ಯ ಸೇನಾನಿ ವೀರ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ರಾಜ್ಯ ಸರಕಾರ ನಂದಗಡದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನೆನಪಿಸುವ ಭವ್ಯ ಸ್ಮಾರಕ ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದು ಶಿಕ್ಷಕ ಸಾಹಿತಿ ಬಸವರಾಜ ಕೊಂಡಗುರಿ ಹೇಳಿದ್ದಾರೆ.
ಕನಕ ಸಾಂಸ್ಕೃತಿಕ ಪರಿಷತ್ತು ಕೊಪ್ಪಳ ಇವರ ವತಿಯಿಂದ ನಗರದ ದಿಡ್ಡಿಕೇರಿ ಓಣಿಯ ಶಂಕ್ರಪ್ಪ ಮತ್ತು ಲಕ್ಷ್ಮೀದೇವಿ ದಂಪತಿಗಳ ಬನಶಂಕರಿ ನಿಲಯದಲ್ಲಿ ಏರ್ಪಡಿಸಿದ್ದ ಮನೆ ಮನೆಯಲ್ಲಿ ಹಾಲುಮತ ಸಂಸ್ಕೃತಿ ದರ್ಶನ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಸಂಗೊಳ್ಳಿ ರಾಯಣ್ಣ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಕಿತ್ತೂರು ಸಂಸ್ಥಾನದಲ್ಲಿ ವಾಲೀಕಾರ ಸೇವೆಯಲ್ಲಿದ್ದ ರಾಯಣ್ಣ ೧೭೯೬ರ ಆಗಷ್ಟ ೧೫ ರಂದು ಹಾಲುಮತ ಧರ್ಮದ ಭರಮಣ್ಣ ಕೆಂಚಮ್ಮ ದಂಪತಿಗಳ ಉದರದಲ್ಲಿ ಜನಿಸಿದರು. ಹಿಂದೆ ಜನರಿಗೆ ಗಿಡಮೂಲಿಕೆಗಳಿಂದ ಔಷಧೋಪಚಾರ ಮಾಡಿ ಗುಣಪಡಿಸುತ್ತಿದ್ದ ರಾಘಣ್ಣ ರಾಯಣ್ಣನ ಅಜ್ಜ. ರೋಗವಾಸಿ ಮಾಡುವ ಇವರಿಗೆ ರೋಗಣ್ಣವರ್ ಎಂದು ಮನೆತನದ ಹೆಸರಾಯಿತು. ವಾಲೀಕಾರ ಸೇವೆ ಸಲ್ಲಿಸುತ್ತಿದ್ದ ರಾಯಣ್ಣನ ಮನೆತನಕ್ಕೆ ಕಿತ್ತೂರು ಸಂಸ್ಥಾನ ೩೫ ಎಕರೆ ರಕ್ತಮಾನ್ಯದಹೊಲ ಇನಾಂ ಭೂಮಿ ನೀಡಿತ್ತು. ಕಿತ್ತ್ತೂರು ಸಂಸ್ಥಾನದ ಮೇಲೆ ಬ್ರಿಟೀಷರು ೧೮೨೪ರಲ್ಲಿ ದಂಡೆತ್ತಿ ಬಂದಾಗ ಬ್ರಿಟೀಷ್ ಸೈನ್ಯಾಧಿಕಾರಿ ಕ್ಯಾಪ್ಟನ್ ಥ್ಯಾಕರೆಯನ್ನು ಕೊಂದ ಕೀರ್ತಿ ಕಿತ್ತೂರು ಸೈನಿಕರಿಗೆ ಸಲ್ಲುತ್ತದೆ. ಸ್ಥಳೀಯರ ಸಹಕಾರ ಹಾಗೂ ವಿವಿಧ ಸಂಸ್ಥಾನಗಳ ಸೈನಿಕ ನೆರವು ಕೋರಿದ ರಾಯಣ್ಣ, ಬ್ರಿಟೀಷರ ವಿರುದ್ಧ ದೇಶದಲ್ಲಿಯೇ ಮೊದಲಬಾರಿಗೆ ಗೆರಿಲ್ಲಾ ಮಾದರಿಯ ಯುದ್ಧ ಜಾರಿಗೆ ತಂದನು. ಬ್ರಿಟೀಷರ ಕುತಂತ್ರದಿಂದ ಚೆನ್ನಾಮಾಜಿ ಸೆರೆಯಾದರು. ಅದೇರೀತಿ ರಾಯಣ್ಣನನ್ನು ಸೆರೆ

ಹಿಡಿಯಲಾಯಿತು. ರಾಯಣ್ಣನ ಇಚ್ಛೆಯಂತೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ೧೮೩೧ರ ಜನೆವರಿ ೨೬ ರಂದು ನೇಣುಗಂಬಕ್ಕೆ ಏರಿಸಲಾಯಿತು. ರಾಯಣ್ಣನ ಜೀವನ ದೇಶಭಿಮಾನಿಗಳಿಗೆ ಜೀವನೋತ್ಸಾಹವಾಗಿದೆ. ಮುಂದಿನ ಪೀಳಿಗೆಗೆ ರಾಯಣ್ಣನ ಸ್ವಾತಂತ್ರ್ಯ ಸಂಗ್ರಾಮ ನೆನಪಿಸುವ ಸ್ಮಾರಕ ಭವನವನ್ನು ನಂದಗಡದಲ್ಲಿ ಸರಕಾರ ಸ್ಥಾಪಿಸುವ ಅಗತ್ಯವಿದೆ ಎಂದು ಬಸವರಾಜ ಕೊಂಡಗುರಿ ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಡಿ. ಮಲ್ಲಣ್ಣ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ  ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಗೃಹರಕ್ಷಕ ದಳದ ವಿಶಿಷ್ಟ ಸೇವೆಗೆ ಮುಖ್ಯಂತ್ರಿ ಪದಕ ಪಡೆದ ಬಿ.ಎಫ್. ಬೀರನಾಯಕ, ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ, ಎಪಿಎಂಸಿ ಅಧ್ಯಕ್ಷ ಡಿ. ಮಲ್ಲಣ್ಣ, ಶಿಕ್ಷಕ ಬಸವರಾಜ ಕೊಂಡಗುರಿ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೈತ ಮುಖಂಡ ಮುದುಕಪ್ಪ ಕೈರೊಟ್ಟಿ, ಗುತ್ತಿಗೆದಾರ ಸೋಮಪ್ಪ ಧನಕರ, ಜಿಲ್ಲಾ ಕನಕದಳ ಸೇವಾ ಸಮಿತಿ ಅಧ್ಯಕ್ಷ ಕರಿಯಣ್ಣ ಬೇವಿನಹಳ್ಳಿ, ಗವಿಸಿದ್ಧಪ್ಪ ಡೊಳ್ಳಿನ, ಶಿವಾನಂದ ಯಲ್ಲಮನವರ, ಪಂಪಣ್ಣ ಮೇಟಿ, ಹನುಮಂತಪ್ಪ ಶೆಟ್ಟೆಪ್ಪನವರ ಕುಕನೂರ, ಗವಿಸಿದ್ಧಪ್ಪ ಸಿಂಧನೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರ. ದ. ಗುತ್ತಿಗೆದಾರ ಶಂಕ್ರಪ್ಪ ಸಂಜೀವಪ್ಪ ಗುಡದಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕೆಂಡದ ಮಠದ ಸ್ವಾಮೀಜಿ ವೇ.ಮೂ. ಪಂಚಯ್ಯ ಗುರುವಿನ ಸಾನಿಧ್ಯ ವಹಿಸಿದ್ದರು. ಕೊಪ್ಪಳದ ನಾಗಮ್ಮ ಮೂಗಿನ ತಂಡದಿಂದ ಡೊಳ್ಳಿನ ಹಾಡುಗಳು ಜರುಗಿದವು.
ಪ್ರಾರಂಭದಲ್ಲಿ ವೀರಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು ಸ್ವಾಗತಿಸಿದರು. ಕನಕ ಸಾಂಸ್ಕೃತಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕಿ ಅರುಣಾ ನರೇಂದ್ರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಹನುಂತಪ್ಪ ಅಂಡಿಗಿ ವಂದಿಸಿದರು.
Please follow and like us:
error