ಸೆ.೨೧ ರಿಂದ ಜಿಲ್ಲೆಯಲ್ಲಿ ರಿಯಾಯಿತಿ ದರದಲ್ಲಿ ಬೀಜ ವಿತರಣೆ.

ಕೊಪ್ಪಳ, ಸೆ.೧೯ (ಕ ವಾ) ಕೃಷಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಹಿಂಗಾರು-ಬೇಸಿಗೆ ಹಂಗಾಮಿನ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಕಾರ್ಯಕ್ರಮ  ಕೊಪ್ಪಳ ಜಿಲ್ಲೆಯಲ್ಲಿ ಸೆ.೨೧ ರಿಂದ  ಪ್ರಾರಂಭಗೊಳ್ಳಲಿದೆ ಎಂದು ಜಂಟಿಕೃಷಿ ನಿರ್ದೇಶಕ ರಾಮದಾಸ್ ಅವರು ತಿಳಿಸಿದ್ದಾರೆ.
     ಪ್ರಸಕ್ತ ಸಾಲಿನ ಸೆಪ್ಟಂಬರ್ ತಿಂಗಳ ೧೮ ರ ಅಂತ್ಯಕ್ಕೆ ಜಿಲ್ಲೆಯ ವಾಡಿಕೆ ಮಳೆ ೭೦.೬೦ ಮೀ.ಮೀ. ಗೆ ವಾಸ್ತವಿಕವಾಗಿ ೧೭೧.೩೦ ಮೀ.ಮೀ. ನಷ್ಟು ಉತ್ತಮ ಮಳೆಯಾಗಿದ್ದು, ರೈತ ಭಾಂದವರು ಬಿತ್ತನೆ ಪೂರ್ವ ಭೂಮಿ ಸಿದ್ಧತೆಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.  ವಿಫಲಗೊಂಡ ಮುಂಗಾರು ಹಂಗಾಮಿನಿಂದಾಗಿ ಹೆಚ್ಚಿನ ಕೃಷಿ ಕ್ಷೇತ್ರದಲ್ಲಿ ಹಿಂಗಾರು ಬಿತ್ತನೆಯಾಗುವ ಸಾಧ್ಯತೆ ಇರುತ್ತದೆ. ಜಿಲ್ಲೆಯ ಒಟ್ಟು ಹಿಂಗಾರು ಪ್ರದೇಶ ೧,೫೫,೨೦೦ ಹೆಕ್ಟರ್ ಇದ್ದು, ಈ ವರ್ಷ ಮುಂಗಾರು ಹಂಗಾಮು ವಿಫಲವಾಗಿರುವುದರಿಂದ  ಮುಂಗಾರಿನಲ್ಲಿ ಬಿತ್ತನೆಯಾಗದೆ ಉಳಿದ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಆವರಿಸಿಕೊಳ್ಳಲಿದೆ. ಅಲ್ಲದೆ, ಪ್ರಸಕ್ತ ಹಿಂಗಾರಿನಲ್ಲಿ ೧,೮೩,೨೦೦ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ನೀರಿಕ್ಷಿಸಲಾಗಿದೆ. ಈ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಕೃಷಿ ಇಲಾಖೆಯು ಬಿತ್ತನೆ ಬೀಜಗಳ ಬೇಡಿಕೆಯನ್ನು ಪರಿಷ್ಕರಿಸಿಕೊಂಡಿದ್ದು, ಒಟ್ಟು ೨೩,೬೫೦ ಕ್ವಿಂಟಲ್ ಬಿತ್ತನೆ ಬೀಜದ ಅವಶ್ಯಕತೆ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬೇಡಿಕೆಗನುಗುಣವಾಗಿ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜವನ್ನು ದಾಸ್ತಾನು ಮಾಡಲಾಗಿದೆ. ಹಿಂಗಾರು-ಬೇಸಿಗೆ ರಿಯಾಯಿತಿ ದರದ ಬೀಜ ವಿತರಣೆ ಕಾರ್ಯಕ್ರಮ ಸೆ.೨೧ ರಂದು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ಪ್ರಾರಂಭಗೊಳ್ಳಲಿದ್ದು, ರೈತ ಬಾಂಧವರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
     ಈ ಕಾರ್ಯಕ್ರಮದಡಿ ಸಾರ್ವಜನಿಕ ತಳಿಯ ಹಿಂಗಾರಿ ಜೋಳ, ಮೆಕ್ಕೆಜೋಳ, ಗೋಧಿ. ಕಡಲೆ (ಸಾರ್ವಜನಿಕ ತಳಿ, ಕೆಎಸ್‌ಎಸ್‌ಸಿ, ಎನ್‌ಎಸ್‌ಸಿ & ಕೆಓಎಫ್). ಸಂಕರಣ ತಳಿಯ ಸೂರ್ಯಕಾಂತಿ ಬಿತ್ತನೆ ಬೀಜಗಳನ್ನು ರಿಯಾಯಿತಿ  ದರದಲ್ಲಿ ನೀಡಲಾಗುವುದು. ಎಲ್ಲಾ ವರ್ಗದ ರೈತರಿಗೆ ಗರಿಷ್ಟ ೨ ಹೆಕ್ಟರ್ ಅಥವಾ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಬಿತ್ತನೆ ಬೀಜ ವಿತರಿಸಲಾಗುವುದು. ಬೀಜ ಪಡೆಯಲಿಚ್ಛಿಸುವ ರೈತ ಬಾಂಧವರು ಕಂದಾಯ ಇಲಾಖೆಯಿಂದ ಪೂರೈಕೆಯಾದ ಭಾವಚಿತ್ರ ಹೊಂದಿರುವ ಕೃಷಿ ಪಾಸ್ ಪುಸ್ತಕ ಅಥವಾ ಹಿಡುವಳಿ ಪತ್ರ ಅಥವಾ ಭಾವಚಿತ್ರವಿರುವ ಗುರುತಿನ ಚೀಟಿ ಒದಗಿಸಿ ಬೀಜ ಪಡೆಯಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ರಾಮದಾಸ್ ಅವರು ತಿಳಿಸಿದ್ದಾರೆ.

Please follow and like us:
error