ಎರಡನೆ ಸ್ವಾತಂತ್ರ ಸಂಗ್ರಾಮದ ಆರಂಭ: ಹಝಾರೆ

ಹೊಸದಿಲ್ಲಿ, ಆ.16: ತನ್ನ ಬಂಧನವನ್ನು ‘ಎರಡನೆ ಸ್ವಾತಂತ್ರ ಸಂಗ್ರಾಮದ ಆರಂಭ’ವೆಂದು ಇಂದಿಲ್ಲಿ ಬಣ್ಣಿಸಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ, ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಸಡಿಲಾಗಲು ಬಿಡದಂತೆ ಹಾಗೂ ‘ಜೈಲ್ ಭರೊ’ ಚಳವಳಿ ನಡೆಸುವಂತೆ ಜನತೆಗೆ ಕರೆ ನೀಡಿದ್ದಾರೆ. ತಮ್ಮ ವಿರುದ್ಧದ ಪೊಲೀಸ್ ಕಾರ್ಯಾಚರಣೆಯನ್ನು ‘ತುರ್ತು ಪರಿಸ್ಥಿತಿಯ ಮರುಕಳಿಕೆ’ಯೆಂದು ಅಣ್ಣಾ ಬಳಗ ವ್ಯಾಖ್ಯಾನಿಸಿದೆ. ‘‘ನನ್ನ ಪ್ರೀತಿಯ ದೇಶವಾಸಿಗಳೇ, ಎರಡನೆಯ ಸ್ವಾತಂತ್ರ ಸಂಗ್ರಾಮ ಆರಂಭವಾಗಿದೆ. ಈಗ ನಾನು ಬಂಧಿಸಲ್ಪಟ್ಟಿದ್ದೇನೆ. ಆದರೆ, ನನ್ನ ಬಂಧನದೊಂದಿಗೆ ಈ ಚಳವಳಿ ನಿಲ್ಲಬಹುದೇ? ಇಲ್ಲ. ಎಂದಿಗೂ ಇಲ್ಲ. ಹಾಗಗಲು ಬಿಡಬೇಡಿ’’ ಎಂದು ಹಝಾರೆ ಧ್ವನಿ ಮುದ್ರಿತ ಸಂದೇಶವೊಂದರಲ್ಲಿ ಕರೆ ನೀಡಿದ್ದಾರೆ.
ದಿಲ್ಲಿಯ ಜಯಪ್ರಕಾಶ್ ನಾರಾಯಣ್ ಉದ್ಯಾನವನದಲ್ಲಿಂದು ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಆರಂಭಿಸಲು ಯೋಚಿಸಿದ್ದ ಅವರು, ಭ್ರಷ್ಟಾಚಾರದ ವಿರುದ್ಧ ದೇಶವ್ಯಾಪಿ ಚಳವಳಿಯ ಅಂಗವಾಗಿ ಸ್ವಯಂ ಬಂಧನಕ್ಕೊಳಗಾಗಿ ಜೈಲಿಗೆ ಹೋಗುವಂತೆ ಜನರನ್ನು ವಿನಂತಿಸಿದ್ದಾರೆ. ಭಾರತದ ಬಂದಿಖಾನೆಗಳಲ್ಲಿ ಇನ್ನಷ್ಟು ಜನರನ್ನು ಇರಿಸಲು ಸ್ಥಳಾವಕಾಶವಿಲ್ಲದಂತೆ ಮಾಡುವ ಸಮಯ ಬಂದಿದೆ ಎಂದಿರುವ ಹಝಾರೆ, ಜನರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ‘‘ನಾನು ನನ್ನ ಸಹ ದೇಶವಾಸಿಗಳಿಗೆ ಇನ್ನೊಮ್ಮೆ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಶಾಂತಿಯನ್ನು ಕಾಪಾಡಲೇ ಬೇಕು. ಹಿಂಸೆಗೆ ಅವಕಾಶ ನೀಡಬಾರದು. ಕೋಟ್ಯಂತರ ಜನರು ಈ ಚಳವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಎರಡನೆ ಹಂತದ ನಾಯಕರು ಚಳವಳಿಯನ್ನು ಮುಂದುವರಿಸಲು ನಿಂತಿದ್ದಾರೆ. ನಿಮ್ಮನ್ನು ಮುಂದುವರಿಸುವವರು ಅನೇಕರಿದ್ದಾರೆ. ಈ ಹೋರಾಟ ಮುಂದುವರಿಯಲಿದೆ’’ ಎಂಬ ಸಂದೇಶವನ್ನು ಹಝಾರೆ ನೀಡಿದ್ದಾರೆ.
‘‘ಅಧಿಕೃತವಾಗಿ ಘೋಷಣೆಯಾಗದೆಯೇ ತುರ್ತು ಪರಿಸ್ಥಿತಿ ಮರುಕಳಿಸಿದೆ. ಅಣ್ಣಾ ಯಾವ ಅಪರಾಧ ಮಾಡಿದ್ದಾರೆ? ನಾವು ಒಗ್ಗಟ್ಟಾಗದಿದ್ದಲ್ಲಿ ಭ್ರಷ್ಟಾಚಾರವನ್ನು ರಕ್ಷಿಸುವ ದುರ್ಬಲ ಲೋಕಪಾಲ ಮಸೂದೆಯನ್ನು ನಮ್ಮ ಮೇಲೆ ಹೇರಲಾಗುತ್ತದೆ. ಈಗ ನಮಗೆ ಪರಿಹಾರ ಬೇಕು, ಉದ್ದೇಶದ ಕುರಿತ ಹೇಳಿಕೆಗಳಲ್ಲ’’ ಎಂದು ಹಝಾರೆ ಬಳಗದ ಕಿರಣ್ ಬೇಡಿ ಹೇಳಿದ್ದಾರೆ.
ಕೇಜ್ರಿವಾಲ್, ಕಿರಣ್ ಬೇಡಿ, ಪ್ರಶಾಂತ್ ಭೂಷಣ್, ಮನೀಶ್ ಸಿಸೋಡಿಯಾ, ಅರವಿಂದ ಗೌಡ್, ಪಿ.ವಿ. ರಾಜಗೋಪಾಲ್, ಶಾಂತಿಭೂಷಣ್ ಹಾಗೂ ಅಖಿಲ್ ಗೊಗೋಯಿಯವರಂತಹ ನಾಯಕರು ಚಳವಳಿಯ ನೇತೃತ್ವ ವಹಿಸಲಿದ್ದಾರೆಂದು ಹಝಾರೆ ತಿಳಿಸಿದ್ದಾರೆ.
ಪೊಲೀಸರು ಶಾಂತಿಯುತ ಪ್ರತಿಭಟನೆಯನ್ನು ದಮನಿಸುವುದರ ಹಿಂದೆ ‘ಬೇರೆ ಯಾರೋ’ ಇದ್ದಾರೆಂದು ಬೇಡಿ ಆರೋಪಿಸಿದ್ದಾರೆ. ಇದನ್ನು ದಿಲ್ಲಿ ಪೊಲೀಸರು ಮಾಡಿಲ್ಲ. ಇದರ ಹಿಂದೆ ಬೇರೆ ಯಾರೋ ಇದ್ದಾರೆ. ಇಂತಹ ಶಾಂತಿಯುತ ಪ್ರತಿಭಟನೆಗಳನ್ನು ನಿಭಾಯಿಸಲು ದಿಲ್ಲಿ ಪೊಲೀಸರು ಶಕ್ತರಾಗಿದ್ದಾರೆ ಎಂದ ಅವರು, ಹಝಾರೆ, ತನ್ನ ಅಪರಾಧದ ಬಗ್ಗೆ ದಿಲ್ಲಿ ಪೊಲೀಸರನ್ನು ಕೇಳಿದಾಗ ತಾವು ಆದೇಶ ಪಾಲಿಸುತ್ತಿದ್ದೇವೆಂದು ಅವರು ತಿಳಿಸಿದರೆಂದು ದನಿಗೂಡಿಸಿದ್ದಾರೆ. ವಶಪಡಿಸಿಕೊಳ್ಳುವುದು ಹಾಗೂ ಬಂಧಿಸುವುದರ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲವೆಂದು ಹಝಾರೆಯವರನ್ನು ‘ವಶ’ ಪಡಿಸಿಕೊಂಡಿರುವ ಕುರಿತು ಬೇಡಿ ಪ್ರತಿಕ್ರಿಯಿಸಿದ್ದಾರೆ.
‘‘ವಶ ಪಡಿಸಿಕೊಳ್ಳುವುದಕ್ಕೂ ಬಂಧಿಸುವುದಕ್ಕೂ ವ್ಯತ್ಯಾಸವೇನಿದೆ? ಯಾವುದೂ ಇಲ್ಲ. ನಿಮ್ಮನ್ನು ವಶಪಡಿಸಿಕೊಳ್ಳಲಾಗಿದೆಯೆಂದರೆ ತಾತ್ಕಾಲಿಕವಾಗಿ ಬಂಧಿಸಲಾಗಿದೆ ಹಾಗೂ ಯಾವಾಗ ನಿಮ್ಮ ಸ್ವಾತಂತ್ರವನ್ನು ತಡೆಯಲಾಯಿತೋ ಆಗ ಬಂಧಿಸಲಾಗಿದೆಯೆಂದು ಅರ್ಥ ಎಂದವರು ವಿವರಿಸಿದ್ದಾರೆ.

ಜೈಲಿಂದ ಹೊರಬರಲು ಹಝಾರೆ ನಕಾರ

ಹೊಸದಿಲ್ಲಿ, ಆ.16: ಪುನಃ ಬಂಧನಕ್ಕೊಳಗಾಗುವ ಭೀತಿಯನ್ನು ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾಹಝಾರೆ ಮಂಗಳವಾರ ಬಂದಿಖಾನೆಯಿಂದ ಹೊರಬರಲು ನಿರಾಕರಿಸಿದ್ದಾರೆ. ಅಣ್ಣಾ ಹಝಾರೆ ಹಾಗೂ ಬೆಂಬಲಿಗರ ಬಂಧನದಿಂದ ತೀವ್ರ ಏಕಾಂಗಿಯಾಗಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕೊನೆಗೂ ಮೆತ್ತಗಾಗಿದ್ದು, ಹಝಾರೆ ಮತ್ತವರ 7 ಮಂದಿ ಬೆಂಬಲಿಗರನ್ನು ಇಂದು ರಾತ್ರಿ 9:30ರೊಳಗೆ ಬಿಡುಗಡೆಗೊಳಿಸಲು ನಿರ್ಧರಿಸಿತ್ತು.
ದಿಲ್ಲಿ ಪೊಲೀಸರು ಹಝಾರೆ ಹಾಗೂ ಬೆಂಬಲಿಗರ ಬಿಡುಗಡೆಗಾಗಿ ತಿಹಾರ್ ಬಂದಿಖಾನೆಗೆ ವಾರೆಂಟೊಂದನ್ನು ಕಳುಹಿಸಿದ್ದರು. ಆದರೆ, ಜಯಪ್ರಕಾಶ್ ನಾರಾಯಣ್ ಉದ್ಯಾನವನದಲ್ಲಿ ನಿರಶನ ನಡೆಸಲು ಸರಕಾರ ಅನುಮತಿ ನೀಡುವ ಹೊರತು ತಾನು ತಿಹಾರ್ ಬಂದಿಖಾನೆಯಿಂದ ಹೊರಬರಲು ಹಝಾರೆ ನಿರಾಕರಿಸಿದ್ದಾರೆಂದು ಬಂದಿಖಾನೆಯ ಮೂಲಗಳು ತಿಳಿಸಿವೆ. ಹಝಾರೆಯವರ ಬಿಡುಗಡೆಗೆ ಆಗ್ರಹಿಸಿ ಸ್ವಯಂ ಬಂಧನಕ್ಕೊಳಗಾದ 15 ಸಾವಿರಕ್ಕು ಹೆಚ್ಚು ಮಂದಿಯನ್ನೂ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.
ಹಝಾರೆಯವರನ್ನು ಬಂಧನದಲ್ಲಿರಿಸುವುದರಿಂದ ಅನಗತ್ಯ ಕಾನೂನು-ಸುವ್ಯವಸ್ಥೆ ಸಮಸ್ಯೆ ತಲೆದೋರಬಹುದೆಂಬ ಭೀತಿಯಿಂದ ಸರಕಾರವು ಅವರ ಬಿಡುಗಡೆಗೆ ನಿರ್ಧರಿಸಿದೆಯೆಂದು ಮೂಲಗಳು ತಿಳಿಸಿವೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕಾಂಗ್ರೆಸ್‌ನ ಪ್ರಧಾನಕಾರ್ಯದರ್ಶಿ ರಾಹುಲ್ ಗಾಂಧಿಯವರನ್ನು ಇಂದು ಸಂಜೆ ಭೇಟಿಯಾದ ಬಳಿಕ ಹಝಾರೆಯವರ ಬಿಡುಗಡೆಯ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ರಾಹುಲ್, ಅಣ್ಣಾ ಬಂಧನಕ್ಕೆ ಅಸಮಾಧಾನ ವ್ಯಕ್ತಪಡಿಸಿದರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಹಝಾರೆಯವರ ಬೆಂಬಲಿಗರಾದ ಕಿರಣ್ ಬೇಡಿ ಹಾಗೂ ಶಾಂತಿಭೂಷಣ್‌ರನ್ನು ದಿಲ್ಲಿ ಪೊಲೀಸರು ಸಂಜೆಯೇ ಬಿಡುಗಡೆಗೊಳಿಸಿದ್ದಾರೆ

Leave a Reply