ಕವಲು ಕಾದಂಬರಿ ಸಂಪೂರ್ಣ ಅವಾಸ್ತವಿಕ: ಬಾನು ಮುಷ್ತಾಕ್

ಬೆಂಗಳೂರು: ‘ಕೋಮುವಾದ, ಭ್ರಷ್ಟಾಚಾರದಂಥ ದೆವ್ವಗಳು ದೇಶಕ್ಕೇ ಕೊಳ್ಳಿ ಇಡುತ್ತಿವೆ. ಆದ ರೂ ಬುದ್ಧಿಜೀವಿಗಳು ಎಂದು ಕರೆಸಿಕೊಂಡಿರುವ ಸಾಹಿತಿಗಳು ಈ ಬಗ್ಗೆ ಚಕಾರ ಎತ್ತದಿರುವುದು ಆಶ್ಚರ್ಯ. ವೈಯಕ್ತಿಕ ನೆಲೆಯಲ್ಲಾದರೂ ಇಂಥ ಬೆಳವಣಿಗೆಗಳನ್ನು ನಾವು ಖಂಡಿಸಬೇಕು’ ಎಂದು ಲೇಖಕಿ ಬಾನು ಮುಷ್ತಾಕ್ ಪ್ರತಿಪಾದಿಸಿದರು. ಗರದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿ ಪ್ರಶಸ್ತಿಯಾದ ಡಾ.ಬಿ.ಸರೋಜಾದೇವಿ (ಪುತ್ರಿ ಬಿ.ಭುವನೇಶ್ವರಿ ಸ್ಮರಣಾರ್ಥ) ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಅಶಕ್ತರು, ಸಮಾಜದಲ್ಲಿ ಹಿಂದುಳಿದವರ ಪರ ಇರುವ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೆಚ್ಚು ಧ್ವನಿಗಳು ಕೇಳಿಬರುತ್ತವೆಯೇ ಹೊರತು, ಬಲಾಢ್ಯರ ಪರ ಇರುವ ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಯಾರೂ ಪ್ರಸ್ತಾಪ ಮಾಡುವುದೇ ಇಲ್ಲ’ ಎಂದು ಅಭಿಪ್ರಾಯಪಟ್ಟರು.
ಎಸ್.ಎಲ್.ಭೈರಪ್ಪ ಅವರ ಕವಲು ಕಾದಂಬರಿಯ ವಸ್ತುವನ್ನು ಪ್ರಸ್ತಾಪಿಸಿದ ಅವರು, ‘ಕವಲು ಕಾದಂಬರಿಯನ್ನು ಮೌಲ್ಯಮಾಪನ ಮಾಡುವುದಕ್ಕೆ ಕೊಟ್ಟರೆ, ನಾನು 100ಕ್ಕೆ 0 ಅಂಕ ನೀಡು ತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಾದಂಬರಿಕಾರ ಭೈರಪ್ಪನವರು ತಮ್ಮ ಮೊದಲಿನ ಕಾದಂಬರಿಗಳನ್ನು ಬರೆಯುವುದಕ್ಕೆ ಮುಂಚೆ ಕೈಗೊಳ್ಳುತ್ತಿದ್ದ ಸಂಶೋಧನೆಯನ್ನು ನೋಡಿ ನಾನೂ ಅವರಂತೆ ಸಂಶೋಧನೆ ಆಧಾರಿತ ಕೃತಿ ಗಳನ್ನು ಬರೆಯಬೇಕೆಂದುಕೊಂಡಿದ್ದೆ. ಆದರೆ ಕವಲು ಓದಿದಾಗ ಅವರ ಬಗ್ಗೆ ಇದ್ದ ಗೌರವ ಮುಕ್ಕಾಯಿತು. ಆ ಕೃತಿಯು ಪೂರ್ಣ ಅವಾಸ್ತವಿಕವಾಗಿದ್ದು, ಅವರು ‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ’ಯನ್ನು ಅಪಭ್ರಂಶಗೊಳಿಸಿದ್ದಾರೆ’ ಎಂದು ಟೀಕಿಸಿದರು.
‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯು ಮಹಿಳೆಯ ಹಕ್ಕನ್ನು ‘ಮಾನವ ಹಕ್ಕು’ ಎಂದು ಪರಿಗಣಿ ಸಿದೆಯೇ ಹೊರತು, ಭೈರಪ್ಪ ಅವರು ತಮ್ಮ ಕಾದಂಬರಿಯಲ್ಲಿ ಚಿತ್ರಿಸಿದಂತೆ ಕೆಟ್ಟದಾಗಿಲ್ಲ. ಕಾದಂಬರಿಯುದ್ದಕ್ಕೂ ಆ ಕಾಯ್ದೆಯ ಬಗ್ಗೆ ಹೇಳುತ್ತಾ ಹೋಗುವ ಅವರು, ಕಾಯ್ದೆಯ ಮೂಲ ಅರ್ಥವನ್ನೇ ಗ್ರಹಿಸಿಲ್ಲ. ಇತಿಹಾಸದಲ್ಲಿ ಅವರು ಖಳನಾಯಕರಾಗಲಿದ್ದಾರೆ’ ಎಂದರು.
ಹಿರಿಯ ಚಿತ್ರನಟಿ ಡಾ.ಬಿ.ಸರೋಜಾದೇವಿ ಮಾತನಾಡಿ, ಕನ್ನಡ ಚಿತ್ರಗಳನ್ನು ನೋಡುವವರಿಲ್ಲ ಎಂದು ನಿರ್ದೇಶಕರು, ನಿರ್ಮಾಪಕರು, ಪ್ರೇಕ್ಷಕರನ್ನು ಟೀಕಿಸುತ್ತಾರೆ. ಆದರೆ ಕುಟುಂಬ ಸಮೇತ ಕೂತು ನೋಡಲಾರದ ಚಿತ್ರಗಳನ್ನು ತಯಾರಿಸಿದರೆ ಯಾರು ನೋಡುತ್ತಾರೆ ಎಂದು ಪ್ರಶ್ನಿಸಿ ದರು.
ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದರೆ ಇಂದಿಗೂ ಪ್ರೇಕ್ಷಕರು ಸ್ವೀಕರಿಸಲು ತಯಾರಿದ್ದಾರೆ. ಯಾವುದಾದರೂ ಹಳೆಯ ಉತ್ತಮ ಚಿತ್ರಗಳನ್ನು ಟಿವಿಯಲ್ಲಿ ಪ್ರಸಾರ ಮಾಡಿದರೆ ಇಂದಿಗೂ ನೋಡುವವರಿದ್ದಾರೆ ಎಂದು ಅವರು ಪ್ರತಿಪಾದಿಸಿದರು. ‘ತೀರಿ ಹೋದ ಮಹಿಳಾ ನಾಯಕಿಯರ ಸ್ಮರಣಾರ್ಥ ಪ್ರಶಸ್ತಿಗಳನ್ನು ಸರ್ಕಾರವೇ ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ‘ಬಾನು ಮುಷ್ತಾಕ್‌ರವರು ಮಸ್ಲಿಂ ಜನಾಂ ಗದ ಮಹಿಳೆಯರ ಸಮಸ್ಯೆಗಳನ್ನು ಕಲಾತ್ಮಕವಾಗಿ ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದಾರೆ’ ಎಂದರು. ಈ ಪ್ರಶಸ್ತಿಯನ್ನು ಹಾಸನ ಜಿಲ್ಲೆಯ ಜನರಿಗೆ ಅರ್ಪಿಸುವುದಾಗಿ ಅವರು ಪ್ರಕಟಿಸಿದರು. ಪ್ರಶಸ್ತಿ ಯು ರೂ 10,000 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ವಿಧಾನಪರಿಷತ್ ಸದಸ್ಯ ಅಶ್ವತ್ಥನಾರಾಯಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಉಪಸ್ಥಿತರಿದ್ದರು.
ಕೃಪೆ : ಗಲ್ಫ್ ಕನ್ನಡಿಗ
Please follow and like us:
error

Related posts

Leave a Comment