ದುಡಿಮೆಗೆ ಮಕ್ಕಳನ್ನು ಬಳಸುವವರಿಗೆ ಕಠಿಣ ಶಿಕ್ಷೆ – ಡಿ.ಬಿ. ಸಿಂಧೆ

  ಪಾಲಕರು ಅಥವಾ ಪೋಷಕರು ತಮ್ಮ ಮಕ್ಕಳನ್ನು ಬಡತನ, ಇತ್ಯಾದಿ ಕುಂಟುನೆಪ ಹೇಳಿಕೊಂಡು ದುಡಿಮೆಗೆ ಹಚ್ಚುವುದು ಸರಿಯಲ್ಲ.  ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸರ್ಕಾರ ಸೂಕ್ತ ಕಾನೂನು ಜಾರಿಗೊಳಿಸಿದ್ದು, ಕಾನೂನು ಗೌರವಿಸಬೇಕಾದ್ದು ಎಲ್ಲರ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ  ಡಿ.ಬಿ. ಸಿಂಧೆ ಅವರು ಹೇಳಿದರು.
  ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ಆವರಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
  ಸಮಾಜದಲ್ಲಿ ೧೪ ವರ್ಷದೊಳಗಿನ ಮಕ್ಕಳನ್ನು ಯಾವುದೇ ರೀತಿಯ ಕೆಲಸಕ್ಕೆ ಹಚ್ಚುವುದು ಅಪರಾಧವಾಗಿದೆ. ಸರ್ಕಾರಿ ಅಧಿಕಾರಿಗಳು ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ, ಅವರನ್ನು ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಸೂಕ್ತ  ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿಕೊಳ್ಳಬೇಕು.  ತಪ್ಪಿತಸ್ಥರ ವಿರುದ್ಧ ಸಾಕ್ಷ್ಯಾಧಾರಗಳು ಪೂರಕವಾಗಿದ್ದಲ್ಲಿ ಅಂತಹವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷೆಗೆ ಗುರಿಪಡಿಸಲಾಗುವುದು.  ಕೊಪ್ಪಳ ಜಿಲ್ಲೆಯನ್ನು ಬಾಲಕಾರ್ಮಿಕ ರಹಿತ ಜಿಲ್ಲೆಯಾಗಿ, ಒಂದು ಮಾದರಿ ಜಿಲ್ಲೆಯನ್ನಾಗಿಸಲು ಎಲ್ಲ ಅಧಿಕಾರಿಗಳು ಶ್ರಮಿಸಬೇಕು.  ಪಾಲಕರೂ ಸಹ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿಸುವ ನಿಟ್ಟಿನಲ್ಲಿ ಕೆಲಸಕ್ಕೆ ತೊಡಗಿಸದೆ, ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಬಿ. ಸಿಂಧೆ ಅವರು ಕರೆ ನೀಡಿದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಎಲ್ಲ ವರ್ಗದ ಜನರಿಗೂ ಉತ್ತಮ ಶಿಕ್ಷಣ ದೊರಕಬೇಕು, ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸರ್ಕಾರ ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಗೊಳಿಸಿದ್ದು, ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ.  ಖಾಸಗಿ ಶಾಲೆಗಳ ಶಿಕ್ಷಕರಿಗಿಂತಲೂ ಸರ್ಕಾರಿ ಶಾಲೆಗಳ ಶಿಕ್ಷಕರಲ್ಲಿ ಉತ್ತಮ ಪ್ರತಿಭೆ ಇದೆ.  ಆದರೆ ಶಿಕ್ಷಕರಾಗಿ ನೇಮಕಗೊಂಡ ನಂತರ ಬೋಧನೆ ವೃತ್ತಿಗಿಂತ, ಇತರೆ ಕ್ಷೇತ್ರಗಳಿಗೆ ಅವರು ಹೆಚ್ಚಿನ ಗಮನ ನೀಡುತ್ತಿದ್ದಾರೆ.  ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣ ಮಟ್ಟವನ್ನು ಪ್ರಶ್ನಿಸುವಂತಾಗಿದೆ.  ಮೈಬಗ್ಗಿ, ಕಷ್ಟಪಟ್ಟು ದುಡಿಯದ ಸೋಮಾರಿ ಪಾಲಕರು, ಪೋಷಕರು ಮಾತ್ರ ತಮ್ಮ ಮಕ್ಕಳನ್ನು ದುಡಿಮೆಗೆ ಕಳುಹಿಸುತ್ತಾರೆ.  ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು ೧೧೫೦ ಬಾಲಕಾರ್ಮಿಕ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಣ ನೀಡಿ, ಅವರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡಲಾಗಿದೆ.  ಅಲ್ಲದೆ ಜಿಲ್ಲೆಯಲ್ಲಿ ೨೧ ಬಾಲಕಾರ್ಮಿಕ ಪುನರ್ವಸತಿಯ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಬಾಲಕಾರ್ಮಿಕ ಯೋಜನಾ ಸಂಘ, ಯುನಿಸೆಫ್, ಮಕ್ಕಳ ರಕ್ಷಣಾ ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರ ಫಲವಾಗಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕ್ಷೇತ್ರದಲ್ಲಿ ಜಿಲ್ಲೆಗೆ ಪ್ರಶಸ್ತಿ ಬಂದಿದೆ.  ಎಲ್ಲ ಮಕ್ಕಳು ಶಿಕ್ಷಣದ ಹಕ್ಕು ಹೊಂದಿದ್ದಾರೆ.  ಪಾಲಕರು ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸಬಾರದು.  ಮಕ್ಕಳನ್ನು ದುಡಿಸಿಕೊಳ್ಳುತ್ತಿರುವುದು, ಅಥವಾ ಬಾಲ್ಯ ವಿವಾಹ ಜರುಗುತ್ತಿರುವ ಬಗ್ಗೆ ಗಮನಕ್ಕೆ ಬಂದಲ್ಲಿ ಕೂಡಲೆ ಸಾರ್ವಜನಿಕರು ೧೦೯೮ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು.  ಮಕ್ಕಳ ರಕ್ಷಣಾ ಘಟಕ ಕೂಡಲೆ ಧಾವಿಸಿ, ಇಂತಹ ಮಕ್ಕಳ ರಕ್ಷಣೆಗೆ ಮುಂದಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎರಡನೆ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಲ್.ಬಿ. ಜಂಬಗಿ ಅವರು ಮಾತನಾಡಿ, ಮಕ್ಕಳು ಆಡುವ ವಯಸ್ಸಿನಲ್ಲಿ ಆಡಬೇಕು, ಓದುವ ವಯಸ್ಸಿನಲ್ಲಿ ಓದಬೇಕು.  ಇದು ಸೃಷ್ಟಿಯ ನಿಯಮ,  ಆದರೆ ಕೆಲವರು ಇದಕ್ಕೆ ವಿರುದ್ಧವಾಗಿ ಮಕ್ಕಳನ್ನು ದುಡಿಮೆಗೆ ಹಚ್ಚುವುದರ ಮೂಲಕ ಅಂತಹ ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳುವುದು ಸರಿಯಲ್ಲ. ಬಾಲಕಾರ್ಮಿಕ ಪದ್ಧತಿಯ ತೀವ್ರತೆ ಹಾಗೂ ದುಷ್ಪರಿಣಾಮಗಳ ಬಗ್ಗೆ ಮಾಧ್ಯಮಗಳು ಉತ್ತಮವಾಗಿ ವರದಿ ಮಾಡುತ್ತಿದ್ದು, ಇನ್ನಾದರೂ ಜನರಲ್ಲಿ ಜಾಗೃತಿ ಮೂಡಬೇಕಾಗಿದೆ.  ಕಾನೂನು ಸೇವಾ ಪ್ರಾಧಿಕಾರವೂ ಸಹ ಶೋಷಿತ ವರ್ಗದವರಿಗೆ ಉಚಿತ ಕಾನೂನು ಸೇವೆ ಒದಗಿಸುವ ಕಾರ್ಯ ಮಾಡುತ್ತಿದೆ ಎಂದರು.
  ಜಿಲ್ಲಾ ಬಾಲನ್ಯಾಯ ಮಂಡಳಿಯ ಅಧ್ಯಕ್ಷರಾಗಿರುವ ಸಿವಿಲ್ ಜಡ್ಜ್ ಕೆ. ಶಿವರಾಮ್ ಅವರು ಮಾತನಾಡಿ,   ಮಾನವ ಸಂಪನ್ಮೂಲ ದೇಶದ ಅಮೂಲ್ಯ ಸಂಪತ್ತು.  ಆದರೆ ಮಕ್ಕಳನ್ನು ಬಾಲ್ಯಾವಸ್ಥೆಯಲ್ಲಿಯೇ ದುಡಿಮೆಗೆ ಕಳುಹಿಸುವುದರ ಮೂಲಕ, ಭವಿಷ್ಯದ ಉತ್ತಮ ಮಾನವ ಸಂಪನ್ಮೂಲಕ್ಕೆ ಹಾನಿಯುಂಟಾಗುತ್ತಿದೆ.  ಮುಂದುವರಿದ ರಾಷ್ಟ್ರಗಳಲ್ಲಿನ ಸ್ಥಿತಿ-ಗತಿಗಳನ್ನು ಗಮನಿಸಿದಾಗ, ಆ ದೇಶಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಬುದ್ದಿವಂತರನ್ನಾಗಿಸಲು ಆದ್ಯತೆ ನೀಡುತ್ತಿವೆ.  ಇದಕ್ಕೆ ಆ ದೇಶಗಳ ಪಾಲಕರು, ಪೋಷಕರು ಸಹಕರಿಸುತ್ತಿದ್ದಾರೆ.  ನಮ್ಮ ದೇಶದಲ್ಲಿಯೂ ಸಹ ಮಕ್ಕಳ ಶಿಕ್ಷಣಕ್ಕೆ ಸರ್ಕಾರಗಳು ಹೆಚ್ಚಿನ ಆದ್ಯತೆ, ಪ್ರಾಮುಖ್ಯತೆ ನೀಡುತ್ತಿದ್ದರೂ, ಪಾಲಕರು, ಸಾರ್ವಜನಿಕರ ಸಹಕಾರ ಸರ್ಕಾರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ.  ಬಾಲಕಾರ್ಮಿಕರು ಇಂದಿಗೂ ಕಂಡುಬರುತ್ತಿರುವುದು ಇದಕ್ಕೆ ನಿದರ್ಶನವಾಗಿದೆ ಎಂದರು.
   ಡಿವೈಎಸ್‌ಪಿ ವಿಜಯ್ ಡಂಬಳ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎ.ವಿ. ಕಣವಿ, ಡಿಡಿಪಿಐ ಮಂಟೇಲಿಂಗಾಚಾರ್ ಕಾರ್ಯಕ್ರಮ ಕುರಿತು ಮಾತನಾಡಿದರು. ಸಿವಿಲ್ ಜಡ್ಜ್ ಕಾವೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ತ್ರಿಶಲಾ ಅಪ್ಪಣ್ಣವರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಜಶೇಖರ ಎಂ., ಕಾರ್ಮಿಕ ನಿರೀಕ್ಷಕ ಬಸಯ್ಯ ಎನ್. ಅಂಗಡಿ, ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಯೂನಿಸೆಫ್‌ನ ತರಬೇತಿ ಸಂಯೋಜಕ ಹರೀಶ್ ಜೋಗಿ ಪ್ರಾರಂಭದಲ್ಲಿ ಸ್ವಾಗತಿಸಿದರು, ಹಿರಿಯ ವಕೀಲ ಎಸ್. ರುದ್ರಯ್ಯ ಕಾರ್ಯಕ್ರಮ ನಿರೂಪಿಸಿದರು.  
  ಇದೇ ಸಂದರ್ಭದಲ್ಲಿ ಕುಷ್ಟಗಿಯ ಕಲಾವಿದ ಶರಣಪ್ಪ ವಡಿಗೇರಿ, ಕೊಪ್ಪಳದ ವೈ.ಬಿ. ಜೂಡಿ ಸಂಗಡಿಗರಿಂದ ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮ ಕುರಿತು ಜಾಗೃತಿ ಗೀತೆ ಹಾಡಿದರು.  ಬಾಲಕಾರ್ಮಿಕ ಪದ್ಧತಿಯಿಂದ ವಿಮುಕ್ತಿ ಹೊಂದಿ, ಶಿಕ್ಷಣದ ವಾಹಿನಿಗೆ ಸೇರಿದ ಮಕ್ಕಳಿಗೆ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದಿಂದ ನೋಟ್‌ಬುಕ್ ಮತ್ತು ಕಂಪಾಸ್ ವಿತರಿಸಲಾಯಿತು.  ಗಂಗಾವತಿ ತಾಲೂಕು ಕಾರ್ಮಿಕ ನಿರೀಕ್ಷಕಿ ಭುವನೇಶ್ವರಿ ಕೋಟಿಮಠ ಅವರು ಬಾಲಕಾರ್ಮಿಕರ ಕಾಯ್ದೆ ಹಾಗೂ ಪುನರ್ ವಸತಿ ಮತ್ತು ಶಿಕ್ಷಣ ವಿಷಯ ಕುರಿತು, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ತರಬೇತಿ ಸಂಯೋಜಕ ಹರೀಶ್ ಜೋಗಿ- ಜಿಲ್ಲಾ ಮಕ್ಕಳ ಹಕ್ಕು ಮತ್ತು ರಕ್ಷಣೆ.  ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ- ಬಾಲಕಾರ್ಮಿಕರ ಬಗ್ಗೆ ಸರ್ಕಾರದ ಯೋಜನೆ ಹಾಗೂ ಉಪಯೋಗ.  ಮತ್ತು ಬಾಲನ್ಯಾಯ ಮಂಡಳಿ ಸದಸ್ಯೆ ಸಾವಿತ್ರಿ ಮುಜುಂದಾರ್- ಜಿಲ್ಲೆಯಲ್ಲಿ ಮಕ್ಕಳ ಸ್ಥಿತಿಗತಿ ಕುರಿತು ವಿಶೇಷ ಉಪನ್ಯಾಸ ನೀಡಿದರು
Please follow and like us:
error