fbpx

ಯುವಶಕ್ತಿಯ ಸದ್ಬಳಕೆಗೆ ಕೊಪ್ಪಳ ನೆಹರು ಯುವ ಕೇಂದ್ರ ಸಜ್ಜು

 ಗ್ರಾಮೀಣ ಯುವಜನರನ್ನು ಯುವಕ ಸಂಘ/ಯುವತಿ ಮಂಡಳಿ ಮತ್ತು ಮಹಿಳಾ ಮಂಡಳಿಗಾಗಿ ಸಂಘಟಿಸಿ ಅವರನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸುವುದು, ಅವರಲ್ಲಿ ಜೀವನ ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಸಂವರ್ಧನೆಗೊಳಿಸಿ, ಅವರು ನವಭಾರತದ ಜವಾಬ್ದಾರಿಯುತ ನಾಗರೀಕರಾಗುವಂತೆ ಮಾಡುವಂತಹ ಸದುದ್ದೇಶ್ವನ್ನಿಟ್ಟುಕೊಂಡು ನೆಹರು ಯುವಕೇಂದ್ರ ಇದೀಗ ನೆಹರು ಯುವ ಕೇಂದ್ರ ಕೊಪ್ಪಳ ಜಿಲ್ಲೆಯಲ್ಲಿಯೂ ಕಚೇರಿಯನ್ನು ಪ್ರಾರಂಭಿಸಿ, ತನ್ನ ಕಾರ್ಯಚಟುವಟಿಕೆಯನ್ನು ಜಾಗೃತಗೊಳಿಸಿದೆ. 
 ಭಾರತವು ತನ್ನ ಭೌಗೋಳಿಕ ವೈಶಾಲ್ಯತೆ, ವಿಭಿನ್ನ ಭಾಷೆ, ಸಂಸ್ಕೃತಿ, ಕಲೆ, ಜಾತಿ-ಮತಗಳ ನಡುವೆ ಸಮನ್ವಯತೆಯನ್ನು ಸಾಧಿಸಿದ ಒಂದು ಅಪರೂಪದ ದೇಶ, ತನ್ನ ಪ್ರಜಾಪ್ರಭುತ್ವದ ಯಶಸ್ಸಿನಿಂದ ಜಗತ್ತನ್ನೇ ನಿಬ್ಬೆರಗಾಗಿಸಿದ ನಾಡು. ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಾಧನೆಯಂತೂ ಅದ್ವಿತೀಯ. ಇಂತಹ ಹತ್ತುಹಲವು ವಿಶೇಷ ಗುಣಗಳನ್ನು ಹೊಂದಿರುವ ಈ ಸುಂದರ ನಾಡಿನ ೧೩-೩೫ ವಯೋಮಾನದ ಯುವಜನರ ಪ್ರಮಾಣವಂತೂ ಸರಿ-ಸುಮಾರು ಶೇಕಡಾ ೪೦.  ನೆಹರು ಯುವ ಕೇಂದ್ರವು ನಾಡಿನ ಬಹುಸಂಖ್ಯಾತ ಯುವಜನರನ್ನು ಅವರ ಮತ್ತು ಸಮಾಜದ ಪ್ರಗತಿಗಾಗಿ ಸನ್ನದ್ದಗೊಳಿಸುವ ಸಲುವಾಗಿ ತನ್ನ ಸ್ವಾತಂತ್ರೋತ್ಸವದ ಬೆಳ್ಳಿ ಹಬ್ಬದ ಶುಭ ಸಂದರ್ಭ ಅಂದರೆ ೧೯೭೨ ರಲ್ಲಿ ಸ್ಥಾಪನೆಗೊಂಡಿತು. ನಂತರದ ವರ್ಷಗಳಲ್ಲಿ ಕೇಂದ್ರದ ಕಾರ್ಯಕ್ರಮಗಳು ಹಾಗೂ ಆಡಳಿತದಲ್ಲಿ ಸ್ವಾಯತ್ತತೆ ಮತ್ತು ಹೊಸತನವನ್ನು ತರುವ ಸಲುವಾಗಿ, ಸರ್ಕಾರವು ಒಂದು ಸ್ವಾಯತ್ತ ಸಂಸ್ಥೆಯಾಗಿ ರೂಪಿಸಿತಲ್ಲದೆ, ಸಂಘಗಳ ನೋಂದಣಿ ಕಾಯ್ದೆ-೧೮೬೦ ಅಡಿಯಲ್ಲಿ ನೆಹರು ಯುವ ಕೇಂದ್ರ ಸಂಘಟನೆಯೆಂದು ನೋಂದಾಯಿಸಿತು. 
ನೆಹರು ಯುವ ಕೇಂದ್ರ ಸಂಘಟನೆಯ ಉದ್ದೇಶಗಳು : ಗ್ರಾಮೀಣ ಯುವಜನರನ್ನು ಯುವಕ ಸಂಘ/ಯುವತಿ ಮಂಡಳಿ ಮತ್ತು ಮಹಿಳಾ ಮಂಡಳಿಗಾಗಿ ಸಂಘಟಿಸಿ ಅವರನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸುವುದು, ಅವರಲ್ಲಿ ಜೀವನ ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಸಂವರ್ಧನೆಗೊಳಿಸಿ, ಅವರು ನವಭಾರತದ ಜವಾಬ್ದಾರಿಯುತ ನಾಗರೀಕರಾಗುವಂತೆ ಮಾಡುವುದು, ಅವರು ಜಾತಿ, ಮತ, ಭಾಷೆ, ಪ್ರದೇಶ, ಲಿಂಗ ಅಥವಾ ಸಂಕುಚಿತತೆಯಿಂದ ಹೊರಬಂದು ಸಮಾಜದ ನಿರ್ಮಾಣ, ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರಾಭಿವೃದ್ದಿ ಪ್ರಕ್ರಿಯೆಯಲ್ಲಿ  ತೊಡಗುವಂತೆ ಮಾಡುವುದು, ಅವರು ಜೀವನ ನಿರ್ವಹಣೆ ಮತ್ತು ಸಂಪನ್ಮೂಲ ಕ್ರೋಢೀಕರಣದಲ್ಲಿ ಪರಿಪೂರ್ಣವಾಗುವಂತೆ ಮಾಡುವುದು, ಜಿಲ್ಲಾ ನೆಹರು ಯುವ ಕೇಂದ್ರಗಳ ಮೂಲಕವಾಗಿ ಅವರು ರಾಷ್ಟ್ರೀಯ ಕಾರ್ಯಕ್ರಮಗಳಾದ ಉದ್ಯೋಗ, ಆದಾಯ ಸೃಷ್ಟಿ, ಸಾಕ್ಷರತೆ, ಕುಟುಂಬ ಕಲ್ಯಾಣ ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನೆರವಾಗುವುದು, ಯುವತಿಯರು ಮತ್ತು ಮಹಿಳೆಯರಿಗೆ ಶಿಕ್ಷಣ, ಉತ್ತಮ ಆರೋಗ್ಯ ಸೇವೆ ಹಾಗೂ ಆದಾಯೋತ್ಪನ್ನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಅವರ ಜೀವನ ಸ್ಥಿತಿಯನ್ನು ಸುಧಾರಿಸುವುದು, ಅವರು ಕೋಮು ಸೌಹಾರ್ದತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಈ ಪ್ರಮುಖ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುವ ಸದುದ್ದೇಶವನ್ನು ನೆಹರು ಯುವಕೇಂದ್ರ ಹೊಂದಿದೆ.
ಆಡಳಿತ ವ್ಯವಸ್ಥೆ : ನೆಹರು ಯುವ ಕೇಂದ್ರ ಸಂಘಟನೆಯು ತನ್ನ ಕೇಂದ್ರ ಕಛೇರಿಯನ್ನು ದೆಹಲಿಯಲ್ಲಿ ಹೊಂದಿದ್ದು, ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಸಚಿವರು ಆಡಳಿತ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ಇವರಿಗೆ ಸಹಾಯಕರಾಗಿ ಯುವಕ್ಷೇತ್ರದಲ್ಲಿ ಉನ್ನತ ಸೇವೆಗೈದ ಇಬ್ಬರು ಉಪಾಧ್ಯಕ್ಷರುಗಳು ಮತ್ತು ೧೧ ಸದಸ್ಯರುಗಳಿದ್ದು, ದೈನಂದಿನ ಆಡಳಿತ ಜವಾಬ್ದಾರಿಯನ್ನು ಮಹಾನಿರ್ದೇಶಕರು ನಿರ್ವಹಿಸುತ್ತಾರೆ. ಪ್ರತಿ ರಾಜ್ಯಗಳು ವಲಯ ಕಛೇರಿಗಳನ್ನು ಹೊಂದಿದ್ದು, ತನ್ನ ವ್ಯಾಪ್ತಿಯ ಜಿಲ್ಲೆಗಳ ಕೇಂದ್ರಗಳ ಮೇಲ್ವಿಚಾರಣೆಯನ್ನು ಈ ಕಛೇರಿಗಳು ನಿರ್ವಹಿಸುತ್ತವೆ. ಇಲ್ಲಿ ಸಂಬಂಧಿಸಿದ ಆಯಾಯ ರಾಜ್ಯಗಳ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಯುವ ಕಾರ್ಯಕ್ರಮಗಳ ಸಲಹಾ ಸಮಿತಿಯು ಅಸ್ತಿತ್ವದಲ್ಲಿದ್ದು, ಇದು ರಾಜ್ಯ ಮಟ್ಟದ ಯುವ ಕಾರ್ಯಕ್ರಮಗಳಿಗೆ ತನ್ನ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡುತ್ತದೆ.  ಪ್ರತಿ ಜಿಲ್ಲೆಗಳು ತನ್ನ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿಯನ್ನು ಹೊಂದಿದ್ದು, ಇದು ತ್ರೈಮಾಸಿಕವಾಗಿ ಸಭೆ ಸೇರಿ, ಅನುಷ್ಠಾನ ಮಾಡಿದ ಕಾರ್ಯಕ್ರಮಗಳು ಮುಂದಿನ ಯೋಜನೆಗಳು ಹಾಗೂ ವಿಶೇಷ ಕಾರ್ಯಕ್ರಮಗಳ ಕುರಿತು ಚರ್ಚಿಸಲಿದೆ. ಈ ಮೂರು ಹಂತದ ವ್ಯವಸ್ಥೆಯಿಂದಾಗಿ ದೇಶದೆಲ್ಲೆಡೆ ಯುವ ಚಟುವಟಿಕೆಗಳು ಸಾಧ್ಯಂತವಾಗಿ ಜರುಗುತ್ತಲಿವೆ. ಯುವಜನರ ಸರ್ವತೋಮುಖ ಅಭಿವೃದ್ದಿಗೆ ಪೂರಕವಾದ ಅಂಶಗಳಾದ ವ್ಯಕ್ತಿತ್ವ ವಿಕಾಸ, ಮುಂದಾಳತ್ವ, ಭಾಷಣ ಕಲೆ, ಸಮುದಾಯ ಸಂಘಟನೆ, ಕಲೆ-ಸಂಸ್ಕೃತಿಯ ವಿಕಾಸ, ಪರಿಸರ ಸಂರಕ್ಷಣೆ, ಆರೋಗ್ಯ, ಅಂತರ್ಜಲ ಸಂರಕ್ಷಣೆ, ಶಿಕ್ಷಣ, ಗ್ರಾಮೀಣ ಕ್ರೀಡೆಗಳು ಹಾಗೂ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳುವಂತೆ ತಯಾರುಮಾಡುವ ಪ್ರಮುಖ ಸವಾಲನ್ನು ನೆಹರು ಯುವ ಕೇಂದ್ರಗಳು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಲಿವೆ.
ರಾಷ್ಟ್ರೀಯ ಯುವ ಪಡೆಯ ಸ್ವಯಂ ಸೇವಕರು : ನೆಹರು ಯುವ ಕೇಂದ್ರಗಳ ಕಾರ್ಯಕ್ರಮಗಳನ್ನು ತಳಮಟ್ಟದಲ್ಲಿ ಅನುಷ್ಠಾನ ಮಾಡುವಲ್ಲಿ ಸಹಾಯಮಾಡಲು ರಾಷ್ಟ್ರೀಯ ಯುವ ಪಡೆ ಎಂಬ ಯೋಜನೆಯನ್ನು ಭಾರತ ಸರ್ಕಾರವು ರೂಪಿಸಿದ್ದು, ಕನಿಷ್ಠ ಪಿ.ಯು.ಸಿ ಶಿಕ್ಷಣವನ್ನು ಮುಗಿಸಿರುವ ಯುವಜನರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿಯನ್ನು ನೀಡುವುದರೊಂದಿಗೆ ಅವರು ಗ್ರಾಮ ಮಟ್ಟದಲ್ಲಿ ಯುವಸಂಘಗಳ ಬಲವರ್ಧನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಶ್ರಮಿಸುತ್ತಾರೆ. ಪ್ರಸ್ತುತ, ದೇಶದಲ್ಲಿ ೧೨ ಸಾವಿರ ಸ್ವಯಂ ಸೇವಕರು ಇಂತಹ ಕಾರ್ಯದಲ್ಲಿ ತೊಡಗಿದ್ದು ಕರ್ನಾಟಕದಲ್ಲಿ ೩೬೪ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ.  ನೆಹರು ಯುವ ಕೇಂದ್ರ ಸಂಘಟನೆಯ ಆಶಯದಂತೆ ನಾಡಿನ ಎಲ್ಲಾ ಗ್ರಾಮಗಳಲ್ಲಿ ಒಂದು ಯುವ ಸಂಘ ಮತ್ತು ಒಂದು ಮಹಿಳಾ ಮಂಡಳಿಯು ಇರಬೇಕೆನ್ನುವ ಆಶಯಕ್ಕೆ ಪೂರಕವಾಗಿ ಜಿಲ್ಲಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಅವಿರತ ಪ್ರಯತ್ನವು ಸಾಗಿದೆ. ಪ್ರಸ್ತುತ ದೇಶದ ೬೨೩ ಜಿಲ್ಲೆಗಳ ವ್ಯಾಪ್ತಿಯಲ್ಲಿ ೧.೨೫ ಲಕ್ಷ ಕ್ರಿಯಾಶೀಲ ಯುವ ಮಂಡಳಿಗಳು ಗ್ರಾಮೀಣ ಮಟ್ಟದಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.
ವೃತ್ತಿ ತರಬೇತಿ ಕಾರ್ಯಕ್ರಮಗಳು : ಸಚಿವಾಲಯವು, ನೆಹರು ಯುವ ಕೇಂದ್ರಗಳ ಯುವ ಜನರಿಗೆ ಎನ್.ಸಿ.ವಿ.ಟಿ. ಮಾದರಿಯಲ್ಲಿ ವೃತ್ತಿ ತರಬೇತಿ ನೀಡುವುದರೊಂದಿಗೆ ಅವರಿಗೆ ಸ್ವಯಂ-ಉದ್ಯೋಗ ದೊರಕಿಸುವ ಸಲುವಾಗಿ ತರಬೇತಿಗಳನ್ನು ಸಂಘಟಿಸುತ್ತಿದ್ದು, ೨೦೧೧-೧೨ನೇ ಸಾಲಿನಲ್ಲಿ ಸಹ ರಾಜ್ಯದ ಬೀದರ, ಮೈಸೂರು, ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳ ಆಯ್ದ ೪೦೦ ಯುವಜನರಿಗೆ ಸ್ಪೀಲ್ ಫ್ರಾಬ್ರಿಕೇಶನ್, ಬೇಸಿಕ್ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್, ಗಾರ್ಮೆಂಟ್ ಡಿಸೈನಿಂಗ್, ಡೀಸಲ್ ಮೆಕ್ಯಾನಿಸಂ, ರೆಫ್ರಿಜರೇಶನ ಮತ್ತು ಏರ್‌ಕಂಡಿಷನಿಂಗ್ ರಿಪೇರಿ, ಗಣಕಯಂತ್ರ ಮತ್ತು ಸೌಂದರ್ಯ ವರ್ಧನೆಯಲ್ಲಿ ಗರಿಷ್ಠ ೪೫ ದಿನಗಳ ಅವಧಿಯ ತರಬೇತಿಯನ್ನು ನೀಡಿರುತ್ತವೆ.
ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮಗಳು : ಮಹಿಳೆಯರು ತಮ್ಮ ಕೌಶಲ್ಯಗಳನ್ನು ಬಲಗೊಳಿಸಿಕೊಂಡು, ಇವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕವಾಗಿ ಪ್ಗರತಿಯ ಹಾದಿಯಲ್ಲಿ ನಡೆಯುವ ನಿಟ್ಟಿನಲ್ಲಿ ಸಹಾಯಕವಾಗಲು ಯುವ ಕೇಂದ್ರಗಳು ತರಬೇತಿಯನ್ನು ನೀಡುತ್ತಿವೆ. ಕಳೆದ ಸಾಲಿನಲ್ಲಿ ರಾಜ್ಯದ ಹಾಸನ, ಬೆಂಗಳೂರು ಗ್ರಾಮಾಂತರ, ಧಾರವಾಡ, ಕೊಡಗು, ಬೆಳಗಾವಿ, ಕೋಲಾರ, ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಗಳ ೫೪ ಕೇಂದ್ರಗಳ ಮೂಲಕವಾಗಿ ೧,೧೬೦ ಮಹಿಳೆಯರಿಗೆ ವಿವಿಧ ಪ್ರಕಾರದ ಅಲ್ಪಾವಧಿ ಮತ್ತು ದೀರ್ಘಾವಧಿಯ ತರಬೇತಿಗಳನ್ನು ನೀಡಲಾಗಿದೆ. 
   ಕೌಶಲ್ಯಾಭಿವೃದ್ದಿ ಮತ್ತು ಜೀವನಾವಶ್ಯಕ ಸಂಪನ್ಮೂಲಗಳ ಸಂಗ್ರಹಣೆ ಎಂಬ ಧ್ಯೇಯದೊಂದಿಗೆ ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಗೊಳ್ಳುವ ಕಾರ್ಯಕ್ರಮಗಳ ವಿವಿರಗಳು ಕೆಳಗಿನಂತಿದ್ದು, ಈಗಾಗಲೇ ಜಿಲ್ಲಾ ಕೇಂದ್ರಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿವೆ.
ಯುವ ಸಂಘಗಳನ್ನು ಬಲವರ್ಧನೆಗೊಳಿಸುವ ಆಂದೋಲನ, ಜಿಲ್ಲಾ ಯುವ ಸಂಘಗಳ ಪ್ರಶಸ್ತಿಗಳು, ಯುವ/ಮಹಿಳಾ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ, ಜಿಲ್ಲಾ ಯುವ ಕೃತಿ ಕಾರ್ಯಕ್ರಮ, ಬೃಹತ್ ನಗರಗಳ ವ್ಯಾಪ್ತಿಯಲ್ಲಿ ಯುವಜನರ ಪ್ರೋತ್ಸಾಹ, ಸಾಂಸ್ಥಿಕ ಬಲವರ್ಧನಾ ಕೇಂದ್ರಗಳು, ನಾಗರೀಕ ಜಾಗೃತಿ ತರಬೇತಿ, ಯೋಗ ಮತ್ತು ದೇಹ-ದಕ್ಷತೆಯ ತರಬೇತಿಗಳು, ಕರಕುಶಲ ಮತ್ತು ಜಾನಪದ ಕಲಾಮೇಳಗಳು, ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮಗಳು, ಅಲ್ಪಾವಧಿ, ದೀರ್ಘಾವಧಿ, ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿಯ ಸಭೆಗಳು, ಜೀವನ ನಿರ್ವಹಣಾ ಕೌಶಲ್ಯಗಳು ಮತ್ತು ಸಂಘರ್ಷ ನಿರ್ವಹಣೆಯ ತರಬೇತಿಗಳು, ಜಿಲ್ಲಾ ಮಾದರಿ ಯುವ ಸಂಘಗಳ ಯೋಜನೆ, ಯುವ ಸಂಘಗಳ ವಿನಿಮಯ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ತಾಲೂಕು/ಜಿಲ್ಲಾ ಮಟ್ಟ, ಜಿಲ್ಲಾ ಯುವಜನ ಸಮಾವೇಶ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಹತ್ವದ ದಿನಗಳ ಆಚರಣೆ, ರಾಜ್ಯಮಟ್ಟದ ಕಾರ್ಯಕ್ರಮಗಳು: ಯುವ ಜನ ಕಲಾಮೇಳ, ಯುವ ಕೃತಿ, ಸಾಂಸ್ಕೃತಿಕ ಕಲಾಮೇಳ, ಯುವಜನ ಸಮಾವೇಶ, ರಾಜ್ಯ ಯುವ ಸಂಘ ಪ್ರಶಸ್ತಿ, ರಾಷ್ಟ್ರೀಯ ಯುವ ದಿನ ಮತ್ತು ಸಪ್ತಾಹದ ಆಚರಣೆಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.  ಇಂತಹ ಕಾರ್ಯಕ್ರಮಗಳ ಜೊತೆಗೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾಗೂ ಇತರೆ ಇಲಾಖೆಗಳು ಅನುಷ್ಠಾನಗೊಳಿಸುವ ಕಾರ್ಯಕ್ರಮಗಳಿಗೆ ಯುವ ಜನರನ್ನು ಕ್ರೋಢೀಕರಿಸುವ ಮಹತ್ವದ ಕಾರ್ಯವನ್ನು ಜಿಲ್ಲಾ ನೆಹರು ಯುವ ಕೇಂದ್ರಗಳು ನಿರ್ವಹಿಸುತ್ತಿದ್ದು ಲಕ್ಷಾಂತರ ಸಂಖ್ಯೆಯ ಯುವ ಮುಖಂಡರುಗಳನ್ನು ತಯಾರುಗೊಳಿಸಿ ಸಮಾಜದ ಮುಂಚೂಣಿಗೆ ಕರೆತಂದಿವೆ.
 ನೆಹರು ಯುವಕೇಂದ್ರ ಕೊಪ್ಪಳ ಜಿಲ್ಲೆಯಲ್ಲಿಯೂ ತನ್ನ ಕಾರ್ಯಚಟುವಟಿಕೆಯನ್ನು ಆರಂಭಿಸಿದ್ದು, ಈ ಮೂಲಕ ಜಿಲ್ಲೆಯ ಯುವ ಶಕ್ತಿಯನ್ನು ಸತ್ಕಾರ್‍ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನವಾಗಲಿ ಎಂಬುದು ಎಲ್ಲರ ಆಶಯವಾಗಿದೆ.
                                                 –             ತುಕಾರಾಂ ರಾವ್ ಬಿ.ವಿ. ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ.
Please follow and like us:
error

Leave a Reply

error: Content is protected !!