ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ: ಚಿಕ್ಕೋಡಿ ಪ್ರಥಮ

 ಮೇ 12:  ರಾಜ್ಯದಲ್ಲಿ ಎಪ್ರಿಲ್ ತಿಂಗಳಿನಲ್ಲಿ ನಡೆದ 2014ನೆ ಸಾಲಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಇಂದು ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಪ್ರಸಕ್ತ ವರ್ಷ ಶೇ.80.19ರಷ್ಟು ಫಲಿತಾಂಶವಾಗಿದ್ದು, ಮಂಡಳಿಯ ಜಾಲ ತಾಣಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಅಲ್ಲದೆ, ಮೇ 13ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿಯೂ ಫಲಿತಾಂಶ ಪ್ರಕಟವಾಗಲಿದೆ ಎಂದರು.
ಪ್ರಸಕ್ತ ವರ್ಷ ಒಟ್ಟು 8 ಲಕ್ಷದ 26 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ (ಶೇ. 91.7), ಪ್ರಥಮ, ಶಿರಸಿ ದ್ವಿತೀಯ ಶೈಕ್ಷಣಿಕ ಜಿಲ್ಲೆ (ಶೇ. 90.73), ಬೆಳಗಾವಿ ಜಿಲ್ಲೆ (ಶೇ.89.91) ತೃತೀಯ ಸ್ಥಾನ ಹಾಗೂ  ಬೀದರ್‌ ಜಿಲ್ಲೆ (ಶೇ. 73.35) ಕೊನೆಯ ಸ್ಥಾನ ಪಡೆದಿದೆ. ಅಲ್ಲದೆ, 17 ಶಾಲೆಗಳು ಶೂನ್ಯ ಫಲಿತಾಂಶವನ್ನು ಪಡೆದಿದೆ. ಈ ಬಾರಿಯೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದರಲ್ಲದೆ, ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಹಾಗೂ ಉತ್ತರ ಪತ್ರಿಕೆ ಪ್ರತಿ ಪಡೆಯಲು ಮೇ 22 ಕೊನೆಯ ದಿನವಾಗಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 28 ಕಡೆಯ ದಿನವಾಗಿದೆ ಎಂದು ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
Please follow and like us:
error