ಮುಖ್ಯಮಂತ್ರಿಯಾಗಲು ಸಿದ್ಧ: ಯಡಿಯೂರಪ್ಪ

ಬೆಳ್ತಂಗಡಿ,ಡಿ.18:ಪಕ್ಷ ಅವಕಾಶ ನೀಡಿದರೆ ಜವಾಬ್ದಾರಿ ವಹಿಸಿ ಕೊಳ್ಳಲು ಸಿದ್ಧನಿದ್ದೇನೆ.ಈ ಹಿಂದೆ ಪಕ್ಷ ಹೇಳಿದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಈಗ ಯಾವ ಜವಾಬ್ದಾರಿ ನೀಡಿದರೂ ಅದನ್ನು ವಹಿಸಿ ಕೊಂಡು ಪಕ್ಷವನ್ನು ಬಲಿಷ್ಠಗೊಳಿ ಸುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಈ ವಿಚಾರಗಳನ್ನು ಹಂಚಿಕೊಂಡರು. ದಿಲ್ಲಿಗೆ ತೆರಳಿ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಹಾಗೂ ಇತರ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ.ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ತಾನು ಬದ್ಧವಾಗಿರುತ್ತೇನೆ ಎಂದು ಯಡಿಯೂರಪ್ಪ ನುಡಿದರು.ಸಂಸದರ ದಿಲ್ಲಿ ಭೇಟಿಯ ಬಗ್ಗೆ ಪ್ರಶ್ನಿಸಿದಾಗ, ರಾಜ್ಯದ ಸಂಸದರು ಪಕ್ಷದ ಹಿರಿಯ ಮುಖಂಡರ ಬಳಿ ತಮ್ಮ ಭಾವನೆಗಳನ್ನ ಹಂಚಿ ಕೊಂಡಿದ್ದಾರೆ. ಅದರಲ್ಲಿ ವಿಶೇಷವೇನೂ ಇಲ್ಲ ಎಂದವರು ಹೇಳಿದರು. ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯವನ್ನು ಮಾಡುತ್ತಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನಗಳು ಲಭಿಸಲಿವೆ. ಸಂಸತ್ತಿನಲ್ಲಿ 22ಕ್ಕೂ ಹೆಚ್ಚು ಸ್ಥಾನಗಳನ್ನು ಅದು ಗೆಲ್ಲಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಡಿ.ವಿ. ಗೆಲುವು ಖಚಿತ: ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಗೆಲುವು ಖಚಿತ ಎಂದ ಯಡಿಯೂರಪ್ಪ, ಈ ಬಗ್ಗೆ ಪಕ್ಷದ ಎಲ್ಲ ಶಾಸಕರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಮುಖ್ಯಮಂತ್ರಿಯ ಆಯ್ಕೆ ಅವಿರೋಧವಾಗಿ ನಡೆಯ ಬೇಕಾಗಿತ್ತು. ಆದರೆ ಕಾಂಗ್ರೆಸಿಗರು ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಬೆಂಬಲ ಗಳಿಸುವ ನಿಟ್ಟಿನಲ್ಲಿ ಜನತಾದಳದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ವಿವರಿಸಿದರು.
ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವಿಲ್ಲ:ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಯಡಿಯೂರಪ್ಪ, ಬಿಜೆಪಿ ತಾನು ಕಟ್ಟಿ ಬೆಳೆಸಿದ ಪಕ್ಷ. ಅದನ್ನು ಬಿಟ್ಟು ಎಲ್ಲಿಯೂ ಹೋಗಲಾರೆ ಎಂದರು. ಎನ್.ಸಿ.ಪಿ. ರಾಜ್ಯಕ್ಕೆ ಬರುತ್ತಿರುವ ಬಗ್ಗೆ ಹಲವು ಊಹಾಪೋಹಗಳು ಕೇಳಿ ಬರುತ್ತಿವೆ. ಈ ಬಗ್ಗೆ ತನಗೆ ಯಾವುದೇ ಮಾಹಿತಿಯಿಲ್ಲ ಎಂದವರು ಹೇಳಿದರು.ಶ್ರೀರಾಮುಲು ಪ್ರತ್ಯೇಕ ಪಕ್ಷ ಕಟ್ಟುವುದಾಗಿ ಹೇಳುತ್ತಿದ್ದಾರೆ. ಆದರೆ ಬಳ್ಳಾರಿಯ ಶಾಸಕರೆಲ್ಲರೂ ಬಿಜೆಪಿಯೊಂದಿಗಿದ್ದಾರೆ. ಶ್ರೀರಾಮುಲು ಅವರೊಂದಿಗೆ ಮಾತುಕತೆ ನಡೆಸಿ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಯಬೇಕಾಗಿದೆಯೆಂದು ಯಡಿಯೂರಪ್ಪ ಅಭಿಪ್ರಾಯಿಸಿದರು.
ಯಡಿಯೂರಪ್ಪನವರೊಂದಿಗೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಭಾರತಿ ಶೆಟ್ಟಿ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.ಯಡಿಯೂರಪ್ಪ, ಶ್ರೀಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಮಂಗಳೂರಿಗೆ ಹಿಂದಿರುಗಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವಿವಾರ ಬೆಳಗ್ಗೆ ಪೊಳಲಿ ಶ್ರೀ ರಾಜ ರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುವುದಕ್ಕಾಗಿ ಬೆಂಗಳೂರಿನಿಂದ ಆಗಮಿಸಿದ್ದ ಅವರು, ವಿಮಾನ ನಿಲ್ದಾಣದಿಂದ ನೇರವಾಗಿ ಶ್ರೀ ಕ್ಷೇತ್ರ ಪೊಳಲಿಗೆ ಬಂದು ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ತಾರಾನಾಥ ಶೆಟ್ಟಿ ಉಳಿಪಾಡಿ ಗುತ್ತು, ಸ್ಥಳೀಯ ಬಿಜೆಪಿ ನಾಯಕ ವೆಂಕಟೇಶ ನಾವಡ ಮೊದಲಾದವರು ಮಾಜಿ ಮುಖ್ಯಮಂತ್ರಿಯನ್ನು ಕ್ಷೇತ್ರಕ್ಕೆ ಬರಮಾಡಿಕೊಂಡರು. ಸಚಿವೆ ಶೋಬಾ ಕರಂದ್ಲಾಜೆ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ವಿಧಾನಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಭಾರತೀ ಶೆಟ್ಟಿ ಜೊತೆಗಿದ್ದರು
Please follow and like us:
error