fbpx

ಆ.೨೦ ರಿಂದ ಕೋಮು ಸೌಹಾರ್ದ ಪಾಕ್ಷಿಕ

ಕೊಪ್ಪಳ,
ಆ.೨೨ (ಕ  ವಾ) ಎಲ್ಲಾ ಧರ್ಮ ಭಾಷೆ ಹಾಗೂ ರಾಜ್ಯಗಳ ಜನರಲ್ಲಿ
ಸೌಹಾರ್ಧತೆಯನ್ನು ಉತ್ತೇಜಿಸಿ, ಎಲ್ಲರಲ್ಲಿಯೂ ಸದ್ಭಾವನೆಯನ್ನು ಮೂಡಿಸಿ,
ಹಿಂಸಾಚಾರವನ್ನು ತ್ಯಜಿಸುವಂತೆ ಮಾಡುವ ನಿಟ್ಟಿನಲ್ಲಿ ಆ.೨೦ ರಿಂದ ಸೆಪ್ಟಂಬರ್.೦೩
ರವರೆಗೆ ಜಿಲ್ಲಾದ್ಯಂತ ಕೋಮು ಸೌಹಾರ್ದ ಪಾಕ್ಷಿಕವನ್ನು ಆಚರಿಸುವಂತೆ ಕೊಪ್ಪಳ ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.
ಆ.೨೯ ರಂದು ತ್ರೈಮಾಸಿಕ ಕೆ.ಡಿ.ಪಿ ಸಭೆ
ಕೊಪ್ಪಳ,
ಆ.೨೨ (ಕ ವಾ): ಕೊಪ್ಪಳ ಜಿಲ್ಲಾ ಪಂಚಾಯಿತಿಯ ೨೦೧೪-೧೫ನೇ ಸಾಲಿನ ೪ನೇ
ತ್ರೈಮಾಸಿಕ ಹಾಗೂ ಪ್ರಸಕ್ತ ಸಾಲಿನ ೧ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಆ.೨೯
ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಜಿಲ್ಲಾ ಪಂಚಾಯತ್‌ನ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ
ಏರ್ಪಡಿಸಲಾಗಿದೆ.
        ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಶಿವರಾಜ್ ಎಸ್. ತಂಗಡಗಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಬಂಧಪಟ್ಟ ಇಲಾಖೆಗಳ
ಮುಖ್ಯಸ್ಥರು ಜನೇವರಿ ೨೦೧೫ ರಿಂದ ಮಾರ್ಚ್ ೨೦೧೫ ರವರೆಗಿನ ಹಾಗೂ ಏಪ್ರಿಲ್ ೨೦೧೫ ರಿಂದ
ಜೂನ್ ೨೦೧೫ ರವರೆಗಿನ ತಮ್ಮ ಇಲಾಖೆಯ ಭೌತಿಕ ಗುರಿ ಮತ್ತು ಸಾಧನೆಗಳ ಪ್ರಗತಿ ವರದಿಗಳನ್ನು
ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಹಾಗೂ ವಿವರವಾದ ಮಾಹಿತಿಯೊಂದಿಗೆ
ಸಮಯಕ್ಕೆ ಸರಿಯಾಗಿ ಸಭೆಗೆ ಖುದ್ದಾಗಿ ಹಾಜರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.

ಆಡಳಿತಾಧಿಕಾರಿಗಳ ನೇಮಕ
ಕೊಪ್ಪಳ
ಆ.೨೨ (ಕ ವಾ) ನೂತನವಾಗಿ ರಚನೆಯಾಗಿರುವ ಕುಷ್ಟಗಿ ತಾಲೂಕಿನ ತಾವರಗೇರಾ
ಪಟ್ಟಣ ಪಂಚಾಯಿತಿಗೆ ಆಡಳಿತಾಧಿಕಾರಿಯನ್ನಾಗಿ ಕುಷ್ಟಗಿ ತಹಶೀಲ್ದಾರ ಇವರನ್ನು ಹಾಗೂ
ಯಲಬುರ್ಗಾ ತಾಲೂಕಿನ ಕುಕನೂರು ಪಟ್ಟಣ ಪಂಚಾಯಿತಿಗೆ ಆಡಳಿತಾಧಿಕಾರಿಯಾಗಿ ಯಲಬುರ್ಗಾ
ತಹಶೀಲ್ದಾರ ಅವರನ್ನು ನೇಮಿಸಿ ಜಿಲ್ಲಾಧಿಕಾರಿ ರಮಣದೀಪ ಚೌದರಿ ಅವರು ಆದೇಶ
ಹೊರಡಿಸಿದ್ದಾರೆ.
         ಗ್ರಾಮ ಪಂಚಾಯತಿಯಾಗಿದ್ದ ತಾವರಗೇರಾ ಹಾಗೂ ಕುಕನೂರು
ಗ್ರಾಮಗಳನ್ನು ಇತ್ತೀಚೆಗೆ ಸರ್ಕಾರ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿದೆ.
ನೂತನವಾಗಿ ರಚನೆಯಾಗಿರುವ ತಾವರಗೇರಾ ಪಟ್ಟಣ ಪಂಚಾಯಿತಿಗೆ ಸರ್ಕಾರದ ಸೂಚನೆಯಂತೆ ಕುಷ್ಟಗಿ
ತಹಶೀಲ್ದಾರ ಅವರನ್ನು ಹಾಗೂ ಕುಕನೂರು ಪಟ್ಟಣ ಪಂಚಾಯತಿಗೆ ಯಲಬುರ್ಗಾ ತಹಶೀಲ್ದಾರ
ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾಧಿಕಾರಿ ರಮಣದೀಪ
ಚೌದರಿ ಅವರು ನೇಮಕ ಮಾಡಿದ್ದಾರೆ.

ಲೋಕಾಯುಕ್ತ ಪ್ರವಾಸ ಕುಂದು, ಕೊರತೆ ದೂರು ಆಹ್ವಾನ.
ಕೊಪ್ಪಳ,
ಆ.೨೨ (ಕ ವಾ) ಕರ್ನಾಟಕ ಲೋಕಾಯುಕ್ತ ರಾಯಚೂರಿನ ಪೋಲಿಸ್ ಅಧೀಕ್ಷಕ
ವಿ.ವಿ.ಕುಂಬಾರ ಆ.೨೪ ರಂದು ಒಂದು ದಿನ ಹಾಗೂ ಕೊಪ್ಪಳದ ಆರಕ್ಷಕ ಉಪಾಧೀಕ್ಷಕ ವೆಂಕನಗೌಡ
ಎನ್.ಪಾಟೀಲ್ ಆ.೨೫ ಮತ್ತು ಆ.೨೬ ರಂದು ಎರಡು ದಿನಗಳ ಕಾಲ ಕೊಪ್ಪಳ ಜಿಲ್ಲಾ ಪ್ರವಾಸ
ಹಮ್ಮಿಕೊಂಡಿದ್ದಾರೆ.
         ಕರ್ನಾಟಕ ಲೋಕಾಯುಕ್ತ ರಾಯಚೂರಿನ ಪೋಲಿಸ್
ಅಧೀಕ್ಷಕ, ವಿ.ವಿ.ಕುಂಬಾರ ಅವರು ಆ.೨೪ ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೦೨
ಗಂಟೆಯವರೆಗೆ ಕೊಪ್ಪಳ ಪ್ರವಾಸಿ ಮಂದಿರದಲ್ಲಿ ಹಾಗೂ ಕರ್ನಾಟಕ ಲೋಕಾಯುಕ್ತ ಕೊಪ್ಪಳದ
ಆರಕ್ಷಕ ಉಪಾಧೀಕ್ಷಕ ವೆಂಕನಗೌಡ ಎನ್.ಪಾಟೀಲ್ ಅವರು ಆ.೨೫ ರಂದು ಬೆಳಿಗ್ಗೆ ೧೧ ಗಂಟೆಗೆ
ಗಂಗಾವತಿಯ ಪ್ರವಾಸಿ ಮಂದಿರದಲ್ಲಿ, ಆ.೨೬ ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೦೧
ಗಂಟೆಯವರೆಗೆ ಕುಷ್ಟಗಿ ಪ್ರವಾಸಿ ಮಂದಿರದಲ್ಲಿ, ಅದೇ ದಿನ ಮಧ್ಯಾಹ್ನ ೦೨ ಗಂಟೆಯಿಂದ ಸಂಜೆ
೦೫ ಗಂಟೆಯವರೆಗೆ ಯಲಬುರ್ಗಾ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆಗಳ
ದೂರುಗಳನ್ನು ಸ್ವೀಕರಿಸಿ, ಅಹವಾಲುಗಳನ್ನು ಆಲಿಸಲಿದ್ದಾರೆ.
        ಸಾರ್ವಜನಿಕರು
ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿಗಳನ್ನು ನೀಡಿ ಸದುಪಯೋಗ ಪಡೆಯಲು ಸಾರ್ವಜನಿಕರಲ್ಲಿ
ಕೋರಲಾಗಿದೆ. ಅಲ್ಲದೇ ದೂರು ಸಲ್ಲಿಸಲು ಬೇಕಾಗುವ ಪ್ರಪತ್ರ ಸಂಖ್ಯೆ ೧ ಮತ್ತು ೨
ಲಭ್ಯವಿದ್ದು ಸ್ಥಳದಲ್ಲಿಯೇ ಪಡೆಯಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆರಕ್ಷಕ
ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಕೊಪ್ಪಳ. ದೂರವಾಣಿ ಸಂಖ್ಯೆ : ೦೮೫೩೯-೨೨೦೨೦೦,
೦೮೫೩೯-೨೨೦೫೩೩ ಗಳಿಗೆ ಸಂಪರ್ಕಿಸಬಹುದಾಗಿದೆ.

ಆ.೨೨ ರಿಂದ ಕಾಮಗಾರಿ ಪರಿವೀಕ್ಷಣೆ.
ಕೊಪ್ಪಳ,
ಆ.೨೨ (ಕ ವಾ): ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಪ್ರಧಾನ ಮಂತ್ರಿ
ಗ್ರಾಮ ಸಡಕ್ ಯೋಜನೆ ಹಂತ-೦೨ ರ ಕಾಮಗಾರಿಗಳನ್ನು ಎನ್.ಕ್ಯೂ.ಎಂ ಚೊಪ್ರಾ ಅಶೋಕ ಕುಮಾರ
ಅವರು ಆ.೨೨ ರಿಂದ ಪರಿವೀಕ್ಷಣೆ ಮಾಡಲಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಕಾರ್ಯನಿರ್ವಾಹಕ ಅಭಿಯಂತರರ ಕಛೇರಿ,
ದೂರವಾಣಿ ಸಂಖ್ಯೆ: ೦೮೫೩೯-೨೩೦೨೬೯ ನ್ನು ಸಂಪರ್ಕಿಸಬಹುದಾಗಿದೆ.

Please follow and like us:
error

Leave a Reply

error: Content is protected !!