ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ತೋರಿಸಿಕೊಟ್ಟವರು ಭಗೀರಥರು ಸಚಿವ ಶಿವರಾಜ ತಂಗಡಗಿ.

ಕೊಪ್ಪಳ, ಏ.೨೫ (ಕರ್ನಾಟಕ ವಾರ್ತೆ) : ತನ್ನ ಪೂರ್ವಜರ ಪಾಪ ವಿಮೋಚನೆಗಾಗಿ ಸಾಕ್ಷಾತ್ ದೈವಗಂಗೆಯನ್ನೇ ಶಿವನ ಜಟೆಯಿಂದ ಭೂಮಿಗೆ ತರುವ ಮೂಲಕ ಭಗೀರಥ ಮಹರ್ಷಿಗಳು ಈ ಜಗತ್ತಿನಲ್ಲಿ ಮನುಷ್ಯನಿಂದ ಸಾಧ್ಯವಾಗದ ಕೆಲಸ ಯಾವುದೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ  ಶಿವರಾಜ ಎಸ್. ತಂಗಡಗಿ ಅಭಿಪ್ರಾಯಪಟ್ಟರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಗೀರಥ ವಂಶಜನಾದ ರಾಜ ಸತ್ಯ ಹರಿಶ್ಚಂದ್ರರು ತಮ್ಮ ಜೀವಮಾನವಿಡಿ ಸತ್ಯವನ್ನೇ ಮಾತನಾಡಿ, ಇತರರಿಗೂ ಸತ್ಯ ಮಾತನಾಡಲು ಸ್ಪೂರ್ತಿಯಾದವರು. ಸತ್ಯತ್ವದಿಂದಾಗಿ ಅವರು ಇಂದಿಗೂ ಕೂಡಾ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಇಂಥಹ ಮಹಾನ್ ಪುರುಷರನ್ನು ಈ ನಾಡಿಗೆ ನೀಡಿದ ಭಗೀರಥರು ನಿಜಕ್ಕೂ ಸತ್ಯವಂತರು, ನಿಷ್ಟವಂತರು ಎಂದು ಮಾರ್ಮಿಕವಾಗಿ ನುಡಿದರು.
ಸಮಾಜದ ಏಳಿಗೆಗೆ ಚಿಂತನೆ ಅತ್ಯವಶ್ಯಕವಾಗಿದ್ದು, ಜಯಂತ್ಯೋತ್ಸವಗಳು ಚಿಂತನೆ ನಡೆಸಲು ವೇದಿಕೆಗಳಾಗಿವೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಭಗೀರಥ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಆದೇಶ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ   ಎಂದು ತಿಳಿಸಿದ ಅವರು ಸಮಾಜದ ಯುವಕರು ದುಶ್ಚಟಗಳಿಗೆ ಬಲಿಯಾಗದೇ, ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಸಂಘಟಿತ ಸಮಾಜವನ್ನು ಯಾರಿಂದಲೂ ಒಡೆಯಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.
ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಟೀಕೆ ಮಾಡಲಾಗುತ್ತಿರುವುದು ದುರದೃಷ್ಟಕರ ಸಂಗತಿ. ವಾಸ್ತು ಸತ್ಯ ಮನಗಾಣುವುದು ಸರಕಾರದ ಉದ್ದೇಶವಾಗಿದೆಯೇ ಹೊರತು ಜಾತಿ ಒಡೆಯುವುದಲ್ಲ. ಸೌಲಭ್ಯ ವಂಚಿತ, ತುಳಿತಕ್ಕೊಳಗಾದ  ಸಮಾಜಗಳನ್ನು ಗುರುತಿಸಿ, ಅಭಿವೃದ್ಧಿಗೊಳಿಸುವುದು ಈ ಗಣತಿಯ ಸದುದ್ದೇಶವಾಗಿದ್ದು, ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಸೌಲಭ್ಯ ಹಂಚಿಕೆ ಮಾಡಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಹಕಾರ ಸಂಘಗಳ ಜಂಟಿ ನಿಬಂಧಕರು ಮತ್ತು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಹನುಮಾಕ್ಷಿ ಗೋಗಿ ಮಾತನಾಡಿ, ಪುರಾಣದ ‘ಗಂಗಾವತರಣ’ದಲ್ಲಿ ತಿಳಿಸಿರುವಂತೆ ದೇವಲೋಕದಿಂದ ಗಂಗೆಯನ್ನು ಭೂಮಿಗೆ ತರಿಸಿಕೊಂಡಿದ್ದು ಜಗತ್ತಿನಲ್ಲಿಯೇ ಮನುಷ್ಯನ ಬಹುದೊಡ್ಡ ಪ್ರಯತ್ನವಾಗಿದೆ. ಆದ್ದರಿಂದಲೇ ದೊಡ್ಡ ಪ್ರಯತ್ನಗಳನ್ನು ಇಂದಿಗೂ ನಾವೆಲ್ಲರೂ ಭಗೀರಥ ಪ್ರಯತ್ನ ಎಂದು ಕರೆಯುತ್ತೆವೆ. ಭಗೀರಥ ಸಮಾಜದವರನ್ನು ದೇಶದ ವಿವಿಧ ಭಾಗಗಳಲ್ಲಿ ನೋನಿಯಾ ಲೋನಿಯಾ, ಉಪಗಾರರು, ಉಪ್ಪಾರರು ಎಂಬ ವಿವಿಧ ಹೆಸರುಗಳಿಂದ ಕರೆಯುತ್ತಾರೆ.
ಕರ್ನಾಟಕದಲ್ಲಿ ಸಾಮಾನ್ಯವಾಗಿ ಉಪ್ಪಾರರು ಎಂದು ಕರೆಯಲ್ಪಡುವ ಭಗೀರಥರ ಪ್ರಾಚೀನ ಕಸುಬು ಉಪ್ಪು ತಯಾರಿಸುವುದಾಗಿತ್ತು. ಉಪ್ಪು ತಯಾರಿಸುವುದರಿಂದಲೇ ಉಪ್ಪಾರರು ಎಂದು ಇವರು ಚಿರಪರಿಚಿತರು. ಅದೇ ರೀತಿ ಪ್ರಾಚೀನ ಶಾಸನಗಳಲ್ಲೂ ಕೂಡಾ ಉಬ್ಬಲಿಗ, ಉಪ್ಪಲಿಗ ಎಂಬ ಹೆಸರುಗಳಿಂದ ಉಪ್ಪಾರರನ್ನು ಗುರುತಿಸಲಾಗಿದೆ. ೧೨ನೇ ಶತಮಾನದ ಸಮಾಜ ಸುಧಾರಕರಲ್ಲಿ ಉಪ್ಪಾರರು ಕೂಡಾ ಇದ್ದರು ಎಂಬುದು ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ ಎಂಬ ಗ್ರಂಥದಿಂದ ತಿಳಿದುಬರುತ್ತದೆ ಎಂದು ಅವರು ತಿಳಿಸಿದರು.
ಬ್ರಿಟಿಷರು ಹೆಚ್ಚಿನ ಸುಂಕ ವಿಧಿಸುವ ಮೂಲಕ ಉಪ್ಪಿನ ಮೇಲೆ ನಿಯಂತ್ರಣ ಹೇರಿದರು. ಇದನ್ನು ವಿರೋಧಿಸಿ ಅಂದು ಮಹಾತ್ಮಾ ಗಾಂಧೀಜಿ ಅವರು ಕೂಡಾ ದಂಡಿ ಉಪ್ಪಿನ ಸತ್ಯಾಗ್ರಹ ನಡೆಸಿದ್ದರು ಎಂಬುದನ್ನು ನಾವು ಇಂದು ಸ್ಮರಿಸಬಹುದಾಗಿದೆ. ಲಿಂಗಾಯತರಿಗೆ ಬಸವೇಶ್ವರರು, ಕುರುಬರಿಗೆ ಕನಕದಾಸರು, ಬೇಡರಿಗೆ ವಾಲ್ಮೀಕಿ ಮಹಿರ್ಷಿಗಳು ಹೇಗೋ ಹಾಗೆ ಉಪ್ಪಾರರಿಗೆ ಭಗೀರಥ ಮಹರ್ಷಿಗಳು.
ರಾಜ್ಯದ ಸುಮಾರು ೬ ಕೋಟಿ ಜನಸಂಖ್ಯೆಯಲ್ಲಿ ಉಪ್ಪಾರರು ೪೦ ಲಕ್ಷ ದಷ್ಟಿದ್ದಾರೆ. ರಾಜ್ಯ ಉಪ್ಪಾರ ಸಂಘ ೨೦೦೬ ರಲ್ಲಿ ನಡೆಸಿದ ಗಣತಿಯ ಪ್ರಕಾರ ಜಿಲ್ಲೆಯಲ್ಲಿ ೧೧.೦೬೫ ಉಪ್ಪಾರ ಕುಟುಂಬಗಳು ವಾಸಿಸುತ್ತಿದ್ದು, ಸಮಾಜ ೭೩,೮೫೩ ಜನಸಂಖ್ಯೆ ಹೊಂದಿದೆ. ಸಮಾಜದ ಪುರುಷ ಸಾಕ್ಷರತೆ ಪ್ರಮಾಣ ಶೇಕಡಾ ೪೦ ರಷ್ಟಿದ್ದು, ಮಹಿಳೆಯರ ಸಾಕ್ಷರತೆ ಪ್ರಮಾಣ ಶೇಕಡಾ ೧೫ ರಷ್ಟಿದೆ. ಈಗಾಗಲೇ ರಾಜ್ಯ ಸರಕಾರ ಜಾತಿ ಗಣತಿ ಆರಂಭಿಸಿರುವುದು ಹಿಂದುಳಿದ ಉಪ್ಪಾರ ಸಮಾಜದ ಏಳಿಗೆಗೆ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟ ಅವರು, ಭಗೀರಥ ಜಯಂತಿ ಕಾರ್ಯಕ್ರಮವನ್ನು ಸರಕಾರಿ ಕಾರ್ಯಕ್ರಮವಾಗಿ ಅಚರಿಸಲು ಆದೇಶ ಹೊರಡಿಸಿರುವುದನ್ನು ಸ್ವಾಗತಿಸಿ, ಅಭಿನಂದಿಸಿದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಭಗೀರಥ ಜಯಂತಿ ಕಾರ್ಯಕ್ರಮವನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಆಚರಿಸುತ್ತಿರುವುದು ಸಂತಸ ತಂದಿದೆ. ಇಂದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಶಿಕ್ಷಣ ಅತ್ಯವಶ್ಯಕವಾಗಿದೆ. ಸಮಾಜದ ಜನತೆ ಶಿಕ್ಷಣ ಪಡೆದು ಪ್ರಜ್ಞಾವಂತ ಸಮಾಜ ನಿರ್ಮಾಣ ಮಾಡುವಂಲ್ಲಿ ಶ್ರಮಿಸುವಂತೆ ಶಾಸಕರು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ತಾಲೂಕಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ||ಪಿ.ರಾಜಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಡಿ.ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ|| ಸುರೇಶ್ ಇಟ್ನಾಳ್, ಸಹಾಯಕ ಆಯುಕ್ತ ಪಿ.ಎಸ್.ಮಂಜುನಾಥ, ನಗರಸಭೆ ಆಯುಕ್ತ ರಮೇಶ್ ಪಟ್ಟೇದ್, ಮುಖಂಡರಾದ ಲಕ್ಷ್ಮೀಕಾಂತ, ನಾಗರಾಜ ಚಳ್ಳಳ್ಳಿ, ಮರ್ದಾನಪ್ಪ ಬಿಸರಳ್ಳಿ, ಜಡಿಯಪ್ಪ ಬಂಗಾಳಿ ಹಾಗೂ ಇತರರು ಇದ್ದರು.


Leave a Reply